Showing posts with label ಬಣ್ಣಗಳ ಹಬ್ಬ. Show all posts
Showing posts with label ಬಣ್ಣಗಳ ಹಬ್ಬ. Show all posts

Sunday, 11 May 2014

Happy ಹೋಳಿ Day : ಭಾಗ ೧

   ಬಣ್ಣಗಳ ಹಬ್ಬ ಹೋಳಿ. ಪ್ರತಿಯೊಂದು ಹಬ್ಬವೂ ತನ್ನದೇ ವೈಶಿಷ್ಟ್ಯಗಳಿಂದ ಜನಮನದ ರಂಗೇರಿಸುವುದುಂಟಾದರೂ ಈ ವಿಷಯದಲ್ಲಿ ಹೋಳಿ ಹಬ್ಬ ಇನ್ನೂ ಒಂದಿನಿತು ಮುಂದೆ ಸಾಗಿ ಜನರ ತನು-ಮನವನ್ನೂ ರಂಗೇರಿಸುತ್ತೆನ್ನಬಹುದು. ಮೈಗಂಟುವ ಬಣ್ಣಗಳಲ್ಲಿ ಲೀನವಾಗುವ ಆಶೆ ಅಷ್ಟೊಂದು ಉತ್ಕಟವಾಗಿಲ್ಲದಿದ್ದರೂ ಬಹಳ ಜನ ಒಂದೆಡೆ ಕಲೆತು ಬಣ್ಣಗಳಿಂದ ಮೈ-ಮನ ತುಂಬಿಕೊಳ್ಳುವುದನ್ನು ನನ್ನ ಕಣ್ತುಂಬಿಕೊಳ್ಳುವ ಬಯಕೆಯೊಂದಂತೂ ಇತ್ತು. ನಿತ್ಯದ ಜಂಜಾಟಗಳನ್ನು ಮರೆತು ಹಬ್ಬದ ಸಡಗರದಿಂದ ಕುಣಿಯುತ್ತಿರುವ ಅಷ್ಟೂ ಜನರಿಂದ ದೂರ ನಿಂತು, ಒಂದು ಸಾಮಾನ್ಯ ದಿನವನ್ನು ಖುಷಿಯ ಬುಗ್ಗೆಯಾಗಿ ಪರಿವರ್ತಿಸುವ ಜನರನ್ನು ನೋಡಿದ ಕಣ್ಣುಗಳು ಮನಸ್ಸಿನಲ್ಲಿ ತುಂಬುವ ಬಣ್ಣಗಳ ಮುಂದೆ ಬಾಕಿ ಎಲ್ಲ ನಿರ್ವರ್ಣ. ನೀರ್ ಬಣ್ಣ.

   ಮೊದಲಿಗೆ ನನ್ನ ರೂಮ್-ಮೇಟ್ಗಳಿಗೆಲ್ಲಾ ಅಲ್ಪ ಸ್ವಲ್ಪ ಬಣ್ಣ ಹಚ್ಚಿ ನಾನೂ ಹಚ್ಚಿಸಿಕೊಂಡು ಹೋಳಿ ಶುಭಾಶಯ ವಿನಿಮಯ ಆದ ಮೇಲೆ ಇಬ್ಬರು ಕಛೇರಿಯ ಸ್ನೇಹಿತರೊಡಗೂಡಿ, ಇನ್ನೂ ಮೂರ್ನಾಲ್ಕು ಜನ ಬಂದು ಸೇರುವ ನಿರೀಕ್ಷೆಯೊಂದಿಗೆ ಕೋಣೆಯಿಂದ ಹೊರಬಿದ್ದೆ. ಸಮೀಪದಲ್ಲಿಯೇ ಇದ್ದ ಶಾಲಾ ಆವರಣವೊಂದರಲ್ಲಿ ಸಾರ್ವಜನಿಕ ಹೋಳಿ ಹಬ್ಬ ಏರ್ಪಡಿಸಲಾಗಿತ್ತು. ಮೊದಲೇ ಸದ್ದು-ಗದ್ದಲ ಹೆಚ್ಚಿರುವ ಮುಂಬಾಯಿ ನಗರಿಯಲ್ಲಿ ಮನೆ ಮನೆಯಲ್ಲೂ ತಮಟೆ ಬಡೆದು ಅದನ್ನ ಇನ್ನೂ ಹೆಚ್ಚಿಸುವುದು ಬೇಡ ಎಂತಲೋ, ಶಹರಿನ ನಿತ್ಯದ ಬಣ್ಣ ಹೋಳಿಯ ರಂಗಿನಿಂದ ಅಳಿಸಿಹೋಗಬಾರದೆಂದೋ ಈ ವ್ಯವಸ್ಥೆ. ತಲಾ ೧೨೫ ರೂಪಾಯಿಯ ಪಾಸುಗಳನ್ನು ಕೊಂಡು ಮೂವರೂ ಒಳನುಗ್ಗಿದೆವು. ಆಯೋಜಕರೇ ಒದಗಿಸಿದ ಬಣ್ಣದ ಪಾಕೀಟುಗಳನ್ನೂ, ಒಂದೊಂದು ಬಟ್ಟೆ ತುಂಡನ್ನೂ ಎತ್ತಿಕೊಂಡು ಮುಂದೆ ನಡೆದೆವು.

   ಧ್ವನಿವರ್ಧಕದಿಂದ ಬರುತ್ತಿದ್ದ ಡ್ಹುಬ್ ಡ್ಹುಬ್ ಎಂಬ ಸದ್ದಿನ ಹಿಂದಿರುತ್ತಿದ್ದ ಎಷ್ಟೋ ಶಬ್ದಗಳು ಸ್ಪಷ್ಟವಾಗಿ ಕೇಳಿಸದೇ ಇದ್ದರೂ, ಅಲ್ಪ ಸ್ವಲ್ಪ ಕೇಳಿದರೂ ಅರ್ಥವಾಗದೇ ಇದ್ದರೂ, ಕೆಲವೊಂದು ಅರ್ಥವಾದರೂ, ಇಷ್ಟು ದಿನ ಬೇರೆ ಬೇರೆ ರಾಗಗಳಲ್ಲಿ ಕೇಳಿದ್ದ ಬಾಲಿವುಡ್ಡಿನ ಹಾಡುಗಳೆಲ್ಲ ಒಂದೇ ತಾಳದವು ಎಂಬ ಹೊಸ ಸತ್ಯವೊಂದರ ಸಾಕ್ಷಾತ್ಕಾರ ನನಗಾಗ ಆಯಿತಾದರೂ, ಇದಾವುದರ ಪರಿವೆಯೇ ಇಲ್ಲದಂತೆ ಕುಣಿಯುತ್ತಿದ್ದ ಜನಗಳ ಮಧ್ಯೆ ನಾನೂ ಹೊಕ್ಕೆ. ಸ್ನೇಹಿತರನ್ನೆಲ್ಲಿ ಬಿಟ್ಟೆ ಎಂಬ ಕಾಳಜಿ ನಿಮಗೆ ಬಂದಿದ್ದೀತು. ಆ ಜನಜಂಗುಳಿಯಲ್ಲಿ ಒಂದಾದ ಅವರ ಮನದಲ್ಲಿ ಹುಟ್ಟಿದ ಕಥೆಯನ್ನು ಕೇಳಿಯೋ, ಕಲ್ಪಿಸಿಯೋ ಬರೆಯುವ ಕಥೆಗಾರ ನಾನಲ್ಲ. ವೀಕ್ಷಕನಾಗಿ ನಿಂತ ನನ್ನ ಪಾಲಿಗೆ ಅಲ್ಲಿ ನೆರೆದ ಅಷ್ಟೂ ಜನ ಒಂದು, ಅವರ ಮಧ್ಯೆ ಇದ್ದೂ ಹೊರಗಿನಿಂದ ನೋಡುತ್ತಿದ್ದ ನಾನೊಂದು.

   ಹೆಣ್ಣು-ಗಂಡೆಂಬ ಲಿಂಗ ತಾರತಮ್ಯ ಇಲ್ಲದೆ, ಬ್ರಾಹ್ಮಣ-ಶೂದ್ರ ಎಂಬ ಜಾತಿ ಭೇದ ಇಲ್ಲದೆ, ಕಪ್ಪು ಜನರ ಬಣ್ಣ ಎಂದೂ ಬದಲಾಗದು, ಬಣ್ಣ ಬದಲಾಗುವುದು ಬಿಳಿಯ ಜನರದ್ದು ಎಂಬ ಎಷ್ಟೋ ಪೋಸ್ಟುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ಜನ ಇಂದು ಅದರ ನೆನಪೂ ಇಲ್ಲದೆ, ಇದ್ದರೂ ಅಂಥ ದೊಡ್ಡ ಮಾತುಗಳನ್ನು ಜನರ ಮುಂದೆ ವ್ಯಕ್ತಪಡಿಸಿದರೆ ಅದನ್ನೆಷ್ಟು ಜನ ಲೈಕ್ ಮಾಡಿಯಾರು, ಎಷ್ಟು ಜನ ಕಾಮೆಂಟ್ ಮಾಡಿಯಾರು ಎಂಬ ಏಕಮಾತ್ರ ಉದ್ದೇಶದಿಂದ ಬರೆದಿದ್ದು ಬೇರಾವ ಭಾವನೆಯೂ ಇರಲಿಲ್ಲ ಎಂದು ತಮ್ಮಲ್ಲೇ ತಪ್ಪೊಪ್ಪಿಕೊಂಡು, ಒಪ್ಪಿಕೊಳ್ಳುವ ಮನಸ್ಸು ಬಾರದವರು ಅದು ಆಫ್ರಿಕಾದ ನೀಗ್ರೋ ಕುರಿತು ಹೇಳಿದ್ದು, ಅಲ್ಲಿ ಹೋಳಿ ಹಬ್ಬ ಆಚರಿಸುವುದಿಲ್ಲ ಎಂಬ ಸಮಝಾಯಿಶಿ ಕೊಟ್ಟುಕೊಂಡು ಅಂತೂ ತಮ್ಮ ಚರ್ಮದ ವರ್ಣ ಭೇದ ಮರೆತು ಹೋಳಿಯ ಖುಷಿಯ ರಂಗನ್ನು ಮೆತ್ತಿ, ಮೆತ್ತಿಸಿಕೊಂಡು, ಆವರಣದ ಬದಿಯಲ್ಲಿ ಎತ್ತರಕ್ಕೆ ಕಟ್ಟಿದ್ದ ಪೈಪುಗಳಿಂದ ಕಾರಂಜಿಯಂತೆ ಚಿಮ್ಮುತ್ತಿದ್ದ ನೀರಿನಡಿಯಲ್ಲಿ ನೆನೆಯುತ್ತಾ ಕಿವಿಗೆ ಹೊಡೆದಂತೆ ಕೇಳುತ್ತಿದ್ದ ಧ್ವನಿವರ್ಧಕದ ಡ್ಹುಬ್ ಡ್ಹುಬ್ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದ ಜನರ ಖುಷಿಯಲ್ಲಿ ನಾನೂ ಒಂದಾದೆ.

   ಅಷ್ಟರಲ್ಲಿ ನನ್ನ ಕೊಠಡಿಮಿತ್ರರು, ಅವರ ಮಿತ್ರರು ಅಲ್ಲೇಜಮಾಯಿಸಿದ್ದರು. ಬೇಕಾಗಿಯೋ, ಬೇಡಾಗಿಯೋ, ನನ್ನ ಸ್ನೇಹಿತವರ್ಗ ಚಿಕ್ಕದಿತ್ತೆಂಬ ಅನಿವಾರ್ಯತೆಯಿಂದಲೋ, ಸ್ವಲ್ಪ ಹೊತ್ತಿನ ಮೊದಲು ಪರಿಚಯವೇ ಇಲ್ಲದ ನನ್ನ ಮುಖಕ್ಕೂ ಬಣ್ಣ ಹಚ್ಚಿ 'ಹ್ಯಾಪಿ ಹೋಳಿ' ಎಂದು ಶುಭ ಹಾರೈಸುವ ಮೂಲಕ 'ಎಂದಿನ ನೀನು ಇಂದು ನೀನಲ್ಲ, ನಿನ್ನ ಬಣ್ಣ ಬದಲಾಯಿಸಿದ್ದೇವೆ' ಎಂದು ಸಾರಿದ ಆ ಗುಂಪಿನಲ್ಲಿ ನಾನೂ ಒಂದಾದೆ.

   ಮಧ್ಯೆ-ಮಧ್ಯೆ ತಲೆ ಮೇಲೆ ಬೀಳುತ್ತಿದ್ದ ನೀರು ಮೈ ತುಂಬಾ ಹರಿದು ಕಾಲಬೆರಳಿನ ತುದಿ ಮುಟ್ಟುವಾಗ ಹಿತವೆನಿಸುತ್ತಿತ್ತು. ಪರ್ವತ ಶಿಖರಗಳಲ್ಲಿ ಹುಟ್ಟಿದ ನದಿ ಸಿಕ್ಕ ಸಿಕ್ಕಲ್ಲಿ ಹರಿದು ಹಲವು ನದಿಗಳೊಂದಾಗಿ ಸೃಷ್ಟಿಯಾದ ಸಾಗರವನ್ನು ಸೇರುವಂತೆ, ಹಲವರ ತಲೆಯ ಮೇಲಿಂದ ಹರಿದು ನೆಲ ತಲುಪಿದ ನೀರನ್ನು ಅದು ಸೇರುತ್ತಿತ್ತು. ವರುಣದೇವನ ಕೃಪೆ ಇಲ್ಲದಿದ್ದರೂ, ಮುಂಬಯಿ ಮಹಾನಗರ ಪಾಲಿಕೆ ಹಾಗೂ ಪಂಪುದೇವನ ದಯೆಯಿಂದ ಮಳೆ ನೃತ್ಯ (Rain Dance) ನಡೆಯಿತು. 'ಹುಯ್ಯೋ ಹುಯ್ಯೋ ಮಳೆರಾಯ'ದಿಂದ 'ಮುಂಗಾರು ಮಳೆಯೇ'ವರೆಗಿನ ಕನ್ನಡ ಗೀತೆಗಳಂತೆ ಯಾವುದೇ ಮಳೆಹಾಡು ಕೇಳಿಬರಲಿಲ್ಲವಾದರೂ, ಇತ್ತೀಚಿಗೆ ಪ್ರಖ್ಯಾತಿಗೊಂಡ 'ಪಾನಿ ಪಾನಿ' ಎಂಬೊಂದು ಗೀತೆ ತುಂಬಾ ಸಲ ಕೇಳಿ ಬಂತು. ಹನಿ ಸಿಂಗ್ ಹಾಡಿದ್ದರಿಂದ ಅದನ್ನೊಂದು ಹನಿಗವನ ಎಂದು ನೀವು ಕರೆದರೂ ನನ್ನ ಆಕ್ಷೇಪವಿಲ್ಲ.

   ಕುಣಿಯುವುದು ನನ್ನ ವೃತ್ತಿ, ಪ್ರವೃತ್ತಿ ಅಲ್ಲವಾದರೂ; ಬರಿದೇ ಮುಡಿಯ ಮೇಲೆ ಸುರಿಯುವ ನೀರ ಕೆಳಗೆ ನಿಂತು, ಅದರ ಮುಂದೆ ನನ್ನ ಆಟವೇನೂ ಸಾಗದು ಎನ್ನುವ ಅರಿವಿದ್ದರೂ ಅದನ್ನು ಮಣ್ಣ ಸೇರಗೊಡುವುದಿಲ್ಲೆಂಬ ಮನದ ಹುಚ್ಚು ಉನ್ಮಾದವೊಂದೇ ಸಾಕು ಸಂತೋಷ ಪಡಲು ಎಂಬ ಸತ್ಯ ನನಗೆ ತಿಳಿದಿದ್ದರೂ; ಅಷ್ಟನ್ನೇ ಮಾಡಿದೆನಾದರೆ ಈಗಾಗಲೇ ಕೂಡಿಕೊಂಡ ಗುಂಪಿನಿಂದ ಒದಗಬಹುದಾಗಿದ್ದ ಪ್ರಶ್ನೆಗಳಿಗೆ ಉತ್ತರಿಸುವುದಕ್ಕಿಂತ ಡ್ಹುಬ್ ಡ್ಹುಬ್ ತಾಳಕ್ಕೆ ಕುಣಿಯುವುದೇ ಒಳಿತೆನ್ನಿಸಿತು. ಸುರಿಯುವ ನೀರು ಒಮ್ಮೆ ನನ್ನ ಮುಖದ ಬಣ್ಣ ತೊಳೆದಷ್ಟು ಹೊತ್ತು ನಾನು ನಾನಾಗಿರುತ್ತಿದ್ದೆ. ಅದು ನಿಂತು ಮತ್ತೆ ಇನ್ನಾರೋ ಮುಖಕ್ಕೆ ಬಣ್ಣ ಹಚ್ಚಿದೊಡನೆ ಅವರೊಂದಿಗೆ ಕುಣಿಯುತ್ತಿದ್ದೆ. ಸುತ್ತಲ್ಲೂ ಬಣ್ಣ ಬಣ್ಣದ ಬಣ್ಣಗಳನ್ನು ಮೆತ್ತಿಕೊಂಡ ತರುಣ ತರುಣಿಯರ ದಂಡೇ ಇದ್ದರೂ, ತುಂತುರು ಹನಿಗಳಿಗೆ ಬಿಸಿಲಿನ ಮೇಲೆ ಪ್ರ್ರೀತಿಯಾಗಿ ಲಜ್ಜೆಯಿಂದ ರಂಗೇರಿ ಸೃಷ್ಟಿಯಾಗುತ್ತಿದ್ದ ಬಿಲ್ಲಿನಾಕಾರದಲ್ಲಿಲ್ಲದ ಕಾಮನಬಿಲ್ಲನ್ನು ನೋಡುತ್ತಾ ನಿಂತೆನಾದರೆ ಸುತ್ತಲ ಶಬ್ದ ಕ್ಷೀಣವಾಗಿ, ಕೇಳುವುದು ನಿಂತು ಹೋಗುತ್ತಿತ್ತು (ಅಷ್ಟು ಹೊತ್ತಿನ ಡ್ಹುಬ್ ಡ್ಹುಬ್ ಸದ್ದಿಗೆ ಕಿವಿ ಹೊಂದಿಕೊಂಡಿದ್ದರಿಂದ ಹಾಗಾಗಿದ್ದು ಎಂದು ನಿಮಗನ್ನಿಸೀತು). ಬಾಕಿ ಎಲ್ಲಾ ಮಬ್ಬಾಗಿ ಬರೀ ಏಳು ಬಣ್ಣಗಳಲ್ಲೇ ದೃಷ್ಟಿ ನೆಟ್ಟು ಹೋಗುತ್ತಿತ್ತು (ಒಂದಿಷ್ಟು ಬಣ್ಣ ಕಣ್ಣು ಹೊಕ್ಕಿದ್ದರಿಂದ ಹಾಗೆ ಕಂಡಿದ್ದು, ಬಾಯಲ್ಲೂ ಒಂದಿಷ್ಟು ಬಣ್ಣದ ನೀರು ಹರಿದಿರುವುದರಿಂದ ಬಣ್ಣ ಬಣ್ಣದ ಮಾತುಗಳು ಇಂದು ಬರುತ್ತಿವೆ ಎಂದು ನಿಮಗೆ ಕಂಡೀತು). 'ಅಷ್ಟು ಜನರ ಮುಂದೆ ನಾನೊಬ್ಬ ಭಾವುಕ ಜೀವಿ ಎಂಬೊಂದು ಸೋಗಿನ ನಾಟಕ ಆಡುತ್ತಿದ್ದೀನಾ ?' ಅಂತೊಂದು ಪ್ರಶ್ನೆ ಮನಸ್ಸಲ್ಲೇ ಮೂಡುತ್ತಿತ್ತಾದರೂ, ಉತ್ತರ ಸ್ಪಷ್ಟವಾಗುತ್ತಿತ್ತು. 'ನಾಟಕವಾದುತ್ತಿದ್ದುದು ನಿಜ. ಸ್ವಲ್ಪ ಹೊತ್ತು ಮೊದಲು, ಇನ್ನು ಸ್ವಲ್ಪ ಹೊತ್ತಿನ ಬಳಿಕ'. ಬಣ್ಣವಿಲ್ಲದ ನೀರು ನನ್ನ ಬಣ್ಣ ಕಳೆಯುತ್ತಿದ್ದಷ್ಟು ಹೊತ್ತು ನಾನು ನಾನೇ, ಮುಂದೆ ಮಂದಿಯ ಮಂದೆಯಲ್ಲಿ ಒಂದು. ಸುರಿಯುತ್ತಿದ್ದ ನೀರು ನಿಂತು ಮತ್ತೆ ಕುಣಿಯತೊಡಗಿದಾಗ ಪಕ್ಕದಲ್ಲಿದ್ದ ಹುಡುಗಿಯೊಂದರ ಸ್ಪರ್ಶವಾಗಿ ಮೈ ಜುಮ್ಮೆನ್ನಿಸಿತ್ತು.

Happy ಹೋಳಿ Day : ಭಾಗ ೨

    ಸದಾ ನಿಸರ್ಗದ ಅಷ್ಟೂ ವರ್ಣಗಳನ್ನು ನೋಡಿ ಮನ ದಣಿಯದಿದ್ದಲ್ಲಿ ತಣಿಯದಿದ್ದಲ್ಲಿ ಯಾವುದಾದರೊಂದು ಪ್ರದೇಶವನ್ನು ತನ್ನ ಪ್ರಖರ ಕಿರಣಗಳಿಂದ ಸುಟ್ಟು ಹೋಳಿಕಾ ದಹನವನ್ನೂ, ಅದರ ಪ್ರತಿಫಲವಾಗಿ ಒದಗುವ ಬೂದಿಯ ಬೂದು ಬಣ್ಣ, ಸುಟ್ಟ ಜಾಗದ ಕರಕಲಿನ ಕರಿ ಬಣ್ಣ, ಸ್ವಲ್ಪ ಶಾಖ ತಗುಲಿದ ಹುಲ್ಲಿನ ಬಂಗಾರದ ಬಣ್ಣಗಳನ್ನು ನೋಡುತ್ತಿದ್ದ ರವಿರಾಯ ಇಂದು ಕೃತಕ ಬಣ್ಣಗಳಿಂದ ಜನ ಬಣ್ಣಗೆಡುವುದನ್ನು ನೋಡಲು ಉತ್ಸುಕನಾಗಿ ಕಾಲವನ್ನು ಬಹುಬೇಗ ಸರಿಸುತ್ತಾ ಮೇಲೇರಿ ಬರುತ್ತಿದ್ದ. ನಿತ್ಯದಂತಾದರೆ ಸೂರ್ಯ ನೆತ್ತಿಯ ಮೇಲೆ ಬಂದಾಗ ಸುಮ್ಮನೆ ನಡೆದು ಹೋದರೂ ಬಳಲಿಕೆಯಾಗುವುದುಂಟು. ಆದರೆ ನೀರಲ್ಲಿ ನೆನೆಯುತ್ತಿದ್ದುದಕ್ಕೋ, ನಾಳೆಯ ದಿನ ಇದೇ ಥರ ಮತ್ತೆ ಕುಣಿಯುವ ಅವಕಾಶ ದಕ್ಕದು ಎಂಬುದು ಎಲ್ಲರಿಗೂ ಗೊತ್ತಿದ್ದುದಕ್ಕೋ ಜನರಲ್ಲಿ ಸುಸ್ತು ಕಾಣಿಸುತ್ತಿರಲಿಲ್ಲ. ಮಧ್ಯೆ ಒಮ್ಮೆ ಹೊರ ಹೋಗಿ ನೀರು ಕುಡಿದೋ, ಇಲ್ಲವೇ ಏನನ್ನಾದರೂ ತಿಂದು ಬಂದು ಮತ್ತೆ ಕುಣಿತ ಮುಂದುವರೆಯುತ್ತಿತ್ತು. ಈ ಮಧ್ಯೆ ನನಗೂ ನನ್ನ ಜೇಬಿನಲ್ಲಿ ಸುಮಾರು ಒಂದೆರೆಡು ಗಂಟೆಗಳಿಂದ ನೀರಲ್ಲಿ ನೆನೆದು ಛಳಿಯಿಂದ ಮುದ್ದೆಯಾಗಿ ಕುಳಿತ ನೂರರ ನೋಟೊಂದರ ನೆನಪಾಯ್ತು. ಇನ್ನೂ ಹೊತ್ತು ಕಳೆದರೆ ಅದರ ಜೀವ ಯಾತಕ್ಕೂ ಉಪಯೋಗ ಬರದೆ ಹೋದೀತು, ಅಲ್ಲದೆ ಹಿಂತಿರುಗುವ ವೇಳೆಗೆ ನನ್ನ ಖುಷಿಯಲ್ಲಿ ಅದರ ಅಸ್ತಿತ್ವವೇ ನಾಶವಾದೀತೆಂದು ತೋರಿ ಅದನ್ನು ಮಾರಾಟ ಮಾಡಲು ನಿಶ್ಚಯಿಸಿದೆ. ಮಾರಿದ್ದಕ್ಕೆ ಒಂದು ಲೀಟರ್ ಸ್ಲೈಸ್ ಹಾಗೂ ಮೂರು ವಡಾ-ಪಾವ್ ನಷ್ಟು ಸಂಪಾದನೆಯಾಯಿತು. ನಮ್ಮ ಗುಂಪಿನ ಬಹುತೇಕ ಎಲ್ಲರ ಹೊಟ್ಟೆಗೂ ತುತ್ತು ವಡಾ-ಪಾವ್ ಹಾಗೂ ಗುಟುಕು ಮಾವಿನ ರಸ ಸೇರಿದಾಗ ಆ ನೋಟಿಗೂ ತನ್ನ ಜೀವನದ ಸಾರ್ಥಕತೆಯ ಅರಿವಾಗಿರಬೇಕು. ಅದರ ಮೇಲೊಂದು ನಗು ಮುಖವನ್ನು ನಾನು ಕಂಡೆ.

    ತಿರುಗಿ ಬಂದು ನೆರೆದ ಜನರಲ್ಲಿ ಒಂದಾದೆ. ಹಾಡುಗಳು ಬದಲಾಗುತ್ತಿದ್ದರೂ ಮುಖ್ಯವಾಹಿನಿಯಲ್ಲಿ ಅದೇ ಡ್ಹುಬ್ ಡ್ಹುಬ್ ಸದ್ದು. ಬಾಕಿ ಯಾವುದೇ ಚಟುವಟಿಕೆಗಳಲ್ಲಿ ವ್ಯತ್ಯಾಸವಿಲ್ಲ. ಲೈಸೆನ್ಸು ಅವಧಿ ವಿಸ್ತರಿಸಿದ್ದರಿಂದಲೋ, ಹಾಡುಗಳ ಸಂಗ್ರಹ ಕಡಿಮೆಯಿದ್ದೋ ಮತ್ತೆ ಸ್ವಲ್ಪ ಹೊತ್ತಿನಲ್ಲಿ ಮೊದಲು ಕೇಳಿದ ಹಾಡುಗಳೇ ಪುನರಾವರ್ತನೆಯಾಗತೊಡಗಿದವು. ಜನರ ಉತ್ಸಾಹಕ್ಕೆ ಇದೇನೂ ಧಕ್ಕೆ ತರಲಿಲ್ಲ. ಇದರ ಪರಿವೆಯೇ ಇಲ್ಲದಂತೆ ಬಣ್ಣಗಳೆರಚಾಟ, ಕುಣಿತ ಅದೇ ಭರದಲ್ಲಿ ಸಾಗುತ್ತಿತ್ತು.

    ಈ ನಡುವೆ ಅದ್ಯಾರಿಗೋ ಬಣ್ಣ ಹಚ್ಚ ಹೊರಟ ಆಕೆಯ ಕೈ ನನಗೆ ತಾಕಿತು. ಇಂಥ ಸಂದರ್ಭದಲ್ಲಿ ಅರಿವಿದ್ದೋ, ಇಲ್ಲದೆಯೋ ಬಣ್ಣ ಹಚ್ಚಿಸಿಕೊಂಡಾತ(ಕೆ) ತಿರುಗಿ ಬಣ್ಣ ಹಚ್ಚುವ ಮಟ್ಟದ ಪ್ರತಿಭಟನೆ ಹಚ್ಚಿದಾತನ(ಕೆಯ) ಪರಿಚಯವಿದ್ದರೂ, ಇಲ್ಲದಿದ್ದರೂ ಆ ದಿನದ ಮಟ್ಟಿಗೆ ಜನರಲ್ಲಿ ಸಂತೋಷ ತರುವುದನ್ನು ಇದುವರೆಗೆ ಕಂಡಿದ್ದರಿಂದ ನಾನೂ ಅದನ್ನೇ ಮಾಡಹೋದೆ. ಇತ್ತೀಚಿನ ದಿನಗಳಲ್ಲಿ ಶೀಘ್ರ ಪ್ರತಿರೋಧ ನನ್ನ ಸ್ವಭಾವವಲ್ಲ. ಎಷ್ಟು ಸಾಧ್ಯವೋ ಅಲ್ಲಿಯವರೆಗೆ ತಾಳ್ಮೆ ವಹಿಸಿಯೇನು. ಎಷ್ಟೇ ಮಳೆ ಸುರಿದರು ಅಲುಗಾಡದ ಗಿರಿಯಂತೆ ಇದ್ದೇನು. ಎಂದು ಗಿರಿ ಪ್ರತಿಸ್ಪಂದಿಸಿತೋ ಅಂದು ಅದರ ನಾಶ, ಕೊಚ್ಚಿ ಬರುವ ನೀರಲ್ಲಿ ತನ್ನನ್ನು ತಾನು ಕಳೆದುಕೊಂಡು ತೊಳೆದು ಹೋದೀತು. ಆದರೆ ಬೆಳಗ್ಗಿನಿಂದ ಆಡುತ್ತಿದ್ದ ನಾಟಕದ ಮತ್ತೊಂದು ಅಂಕ ಇದಾಗಿರುವಾಗ, ಇಷ್ಟರವರೆಗೂ ನಟಿಸಿ ಈಗ ಸುಮ್ಮನಿರಲಾದೀತೆ ? ಬಣ್ಣದ ಪಾಕೆಟ್ಟಿಗೆ ಕೈ ಹಾಕಿ, ಗುಲಾಲು ಮೆತ್ತಿದ ಕೈಯನ್ನು ಅವಳೆಡೆಗೆ ಎತ್ತಿದೆ. ಎತ್ತಿದ ಕೈ ಹಾಗೇ ಇಳಿಸುವ ಮನಸ್ಸಾಗದೆ ಬಣ್ಣ ಹಚ್ಚಿದೆ. ಎಲ್ಲಿ ತಾಗಿತೋ ? ತಿರುಗಿ ನೋಡೋ ಅಷ್ಟು ಚೈತನ್ಯ ಮನಸ್ಸಿನಲ್ಲಿರಲಿಲ್ಲ. ಈಗ ನಾನು ಬಣ್ಣ ಹಚ್ಚಿದುದರ ಹಗೆ ತೀರಿಸಿಕೊಳ್ಳಲು ಆಕೆ ಮತ್ತೆ ಬಣ್ಣ ಹಿಡಿದು ಬಂದಳು. ಈ ಬಾರಿ ನಾನು ಅಲುಗಲಿಲ್ಲ, ಕೊಸರಿಕೊಳ್ಳಲಿಲ್ಲ. ತಪ್ಪು ಮಾಡಿದ ವಿದ್ಯಾರ್ಥಿ ಅದಕ್ಕೆ ಶಿಕ್ಷಕಿ ತನಗೆ ಕೊಡಲಿರುವ ಶಿಕ್ಷೆ ಏನೆಂಬ ಅರಿವಿದ್ದಾಗ ತಲೆ ತಗ್ಗಿಸಿ ಅದಕ್ಕೆ ಸಿದ್ದವಾಗಿ ವಿಧೇಯತೆಯಿಂದ ನಿಲ್ಲುವಂತೆ ನನ್ನನ್ನು ನಾನು ಒಪ್ಪಿಸಿಕೊಂಡೆ. ತಾಗಿದ ಬಣ್ಣ ತೊಳೆಯಲು ಪಂಪುದೇವ ಇದ್ದನಲ್ಲ.!

    ಹೊತ್ತು ಸರಿಯುತ್ತಿತ್ತು. ಲೈಸೆನ್ಸು ಅವಧಿ ಮುಗಿಯುತ್ತಾ ಬಂದಿತ್ತು. ಆದರೇನು, ಜನ ಬಹಳಷ್ಟು ಜಮಾಯಿಸಿದ್ದರಿಂದ, ಎಷ್ಟೇ ದಂಡ ತೆತ್ತು ಇನ್ನೊಂದು ತಾಸು ಕಾರ್ಯಕ್ರಮವನ್ನು ವಿಸ್ತರಿಸಿದರೂ ಆಯೋಜಕರಿಗೆ ನಷ್ಟವಿಲ್ಲ ಎಂದು ತೋರಿದ್ದರಿಂದ, ಕಾವಲಿದ್ದ ಪೋಲೀಸರ lunch ಟೈಮಿನಲ್ಲಿ ಒಂದಿಷ್ಟು ಲಂಚ ತಿನ್ನಿಸಿ ಗಡುವನ್ನು ಇನ್ನೂ ಒಂದು ತಾಸು ವಿಸ್ತರಿಸಿದ್ದಾಯಿತು. ಎಷ್ಟೆಂದರೂ ಲಂಚದ ದಾರಿ ಸಲೀಸು. ದೂರ ಕಡಿಮೆ. ಹೀಗೆ ನಾಳೆಯ ಚಿಂತೆ ಮರೆತು ಇಂದಿಗಾಗಿ ಬಾಳುವವರಿಗೆ ಲಂಚದ ರಾಜ್ಯವೇ ಸೊಗಸು ಹೊರತು ಇಂದು ನಾಳೆಯ ಯೋಚನೆ ಮಾಡಿ, ನಾಳೆ ಬಂದಾಗ ನಾಡಿದ್ದನ್ನು ಯೋಚಿಸುತ್ತಾ ಕುಳಿತು, ಎಂದಾದರೊಂದು ದಿನ ಸಿಗಲಿರುವ ಸುಖದ ಯೋಚನೆಯಲ್ಲಿ ಮುಳುಗಿರುವವರಿಗೆ ಲಂಚ ತುಚ್ಛವಾಗಿ ಕಂಡೀತು.

    ಹೀಗೆ ದೊರೆತ ಹೆಚ್ಚುವರಿ ಅವಧಿಯಲ್ಲಿ ಮೂರ್ನಾಲ್ಕು ಹುಡುಗಿಯರು ವೇದಿಕೆ ಹತ್ತಿ ಕುಣಿಯತೊಡಗಿದ್ದರು. ಕೆಳಗಿದ್ದ ಕೆಲವು ಪುಟ್ಟ ಮಕ್ಕಳನ್ನು ಮೇಲೆ ಹತ್ತಿಸಿ ನೃತ್ಯದಲ್ಲಿ ತೊಡಗಲು ಪ್ರೋತ್ಸಾಹಿಸಲಾಯಿತು. ಕೆಲವರಲ್ಲಿ ಕೆಲವರು ಚೆನ್ನಾಗಿ ಕುಣಿದರು. ಇನ್ನೂ ಕೆಲವರು ಕೆಳಗೆ ತಮ್ಮ ತಂದೆ-ತಾಯಿ ಕುಣಿದು ತೋರಿದುದನ್ನು ಅನುಕರಿಸಿದರು. ಒಂದು ಮಗು ಸುಮಾರು ನಾಲ್ಕು ವರ್ಷ ಪ್ರಾಯವಿದ್ದೀತು; ಏನೆಂದರೂ ಕುಣಿಯಲು ಕೇಳಲಿಲ್ಲ. ಬೆಳಗ್ಗಿನಿಂದ ಆಯೋಜಕರೇ ಒದಗಿಸುತ್ತಿದ್ದ ಬಟ್ಟೆಯ ತುಂಡೊಂದರಿಂದ ಅದಕ್ಕೆ ಸನ್ಮಾನ ಮಾಡಿದರೂ ಅದಕ್ಕೆ ಖುಷಿಯಾಗಲಿಲ್ಲ. ಬದಲು ಅಷ್ಟು ಜನರ ಮುಂದೆ ತನ್ನನ್ನು ಸಣ್ಣ-Man ಆಗಿ ತೋರಿಸಿದುದು ಅದಕ್ಕೆ ಬೇಜಾರು ತರಿಸಿತೇನೋ. ಕುಣಿಯಲು ಪೋಷಕರ ಒತ್ತಾಯ ಹೆಚ್ಚಿದಾಗ ಆ ಮಗುವಿನ ಕಣ್ಣು ಹನಿಗೂಡಿತೇ ಹೊರತು ಕಾಲು ಅಲುಗಲಿಲ್ಲ. ಅಂತೂ ಕೊನೆಗೆ ಆ ಮಗುವಿನ ತಂದೆ ಬಂದು ಅವನನ್ನು ಕೆಳಗಿಳಿಸಿಕೊಂಡರು. ಈಗ ಆ ಮಗುವಿನಲ್ಲಿ ಸುರಿಯುವ ನೀರಿನಲ್ಲಿ ಮನದುಂಬಿ ನೆನೆಯುವ, ಮೇಲಿಂದ ಉದುರುವ ಒಂದೊಂದು ನೀರ ಹನಿಯ ಚಿಟ-ಪಟ ಸದ್ದನ್ನು ಕಿವಿಯೊಳಗೆ ತುಂಬಿಕೊಳ್ಳುವ, ನೆಲದ ಮೇಲೆ ಹರಡಿಕೊಂಡಿದ್ದ ಬಣ್ಣ ಬಣ್ಣದ ನೀರ ಮೇಲೆ ಕುಪ್ಪಳಿಸಿ ಮತ್ತೆ ಮೇಲೆಬ್ಬಿಸುವ ಉತ್ಸಾಹ ತುಂಬಿ ನಿಂತಿತ್ತು. ಬಣ್ಣಗಳ ಭಾರಕ್ಕೋ, ಒಮ್ಮೆ ನೆಲ ಮುಟ್ಟಿದ ನೀರಿಗೆ ಭೂಮಿಯ ಮೇಲೆ ಉಂಟಾದ ಪ್ರೀತಿಯ ಭಾರಕ್ಕೋ ನೀರು ಮೇಲೇರಲಿಲ್ಲ. ಅಪ್ಪ-ಅಮ್ಮನಿಗೆ ಮನಸ್ಸಿಲ್ಲದಿದ್ದರೂ ಹಟ ಮಾಡಿ ಆಡ ಬಂದ ಆ ಮಗುವಿನ ಕಣ್ಣಿಂದ ಬೇಡೆಂದರೂ ಜಿನುಗುತ್ತಿದ್ದ ಹನಿಗಳು ಕೆಳಗಿಳಿಯುವುದು ಇನ್ನೂ ನಿಂತಿರಲಿಲ್ಲ.

    ಸ್ವಲ್ಪ ಹೊತ್ತಲ್ಲಿ ತನ್ನ ಆಶಯಗಳು ಫಲಿಸಿದಂತೆ ಮಗುವಿನ ಮುಖ ಸಂತೋಷದ ಬುಗ್ಗೆಯಾಗಿತ್ತು.ಅಷ್ಟು ಹೊತ್ತು ನನ್ನನ್ನೇ ಮರೆತು, ಮಧ್ಯೆ ನೆನಪಾದರೂ ಮತ್ತೆ ಮರೆತು ಆ ಮಗುವನ್ನೇ ನೋಡುತ್ತಾ ನಿಂತಿದ್ದ ನನಗೆ ಸುರಿಯುವ ನೀರಿನಿಂದ ದೂರ ಸರಿದು ನಿಂತಿದ್ದರ ನೆನಪು ಬಂತು. ತನ್ನ ಸ್ವಭಾವಕ್ಕೆ ಸಲ್ಲದ್ದನ್ನು ಆ ಮಗು ವಿರೋಧಿಸುತ್ತಿದ್ದುದ್ದನ್ನು ಕಂಡಾಗ 'ನಾನೂ ಯಾಕೆ ಹೀಗೆ ಮಾಡಲಿಲ್ಲ ?' ಎಂಬ ಪ್ರಶ್ನೆ ಏಳುತ್ತಿತ್ತು. ಮುಂದೆ ಬರಲಿರುವ ಪ್ರಶ್ನೆಗಳನ್ನು ನೆನೆದಲ್ಲವೇ ಇಷ್ಟು ಹೊತ್ತು ನಾಟಕವಾಡಿದ್ದು. 'ಇದು ನನ್ನ ಸ್ವಭಾವವಲ್ಲ ಎಂದು ಧಿಕ್ಕರಿಸಿದ್ದರೆ ಏನಾಗುತ್ತಿತ್ತು ?' ಎಂದು ಯೋಚಿಸುತ್ತಲೇ ನಾನು ಮತ್ತೆ ನೀರಿನಡಿ ಹೋದೆ. ಸ್ವಲ್ಪ ಹೊತ್ತು ನೀರಲ್ಲಿ ಕುಣಿದು, ದಣಿದು, ಮನ ತಣಿದ ಮಗು ಹೊರಟು ಹೋಗಿತ್ತು. ಮುಂದೆ ಕಾರ್ಯಕ್ರಮ ಮುಗಿಯುವಷ್ಟೂ ಹೊತ್ತು ಆ ಮಗುವನ್ನು ನನ್ನಲ್ಲಿ ಆವಾಹಿಸಿಕೊಂಡವನಂತೆ ನಾನು ನಾನಾಗೇ ಇದ್ದು ಹೊರಬಂದೆ.

    ಹೊರ ಬಂದ ಮೇಲೆ ಎಲ್ಲರಿಗೂ ಇಷ್ಟು ಹೊತ್ತೂ ಪರಿಚಯ ಇಲ್ಲದವರೊಡನೆ ಹೋಳಿ ಆಚರಿಸಿಕೊಂಡ ತಪ್ಪಿನ ಅರಿವಾದಂತಿತ್ತು. ಪ್ರಾಯಶ್ಚಿತ್ತವಾಗಿ ಎಲ್ಲರೂ ತಮ್ಮ ತಮ್ಮ ಹೆಸರು ಹೇಳಿಕೊಂಡು, ನೆನಪಿಗೆ ಫೋಟೋ ಮುಂದೆ ನಗುವಿನ ಮುಖವಾಡ ಧರಿಸಿ ನಿಂತು ಎಲ್ಲರೂ ನಮ್ಮ ನಮ್ಮ ಗೂಡು ಸೇರಿದೆವು. ಸುಮಾರು ನಾಲ್ಕು ತಾಸು ನೆನೆದ ಮೈ ಚೂರು ಒಣಗಿತ್ತು. ಮತ್ತೆ ನೆನೆಯುವ ಮನಸ್ಸಾಗಿ ಸ್ನಾನದ ಮನೆ ಹೊಕ್ಕೆ. ಮತ್ತೆ ಮತ್ತೆ ಸೋಪು ಹಾಕಿ ತಿಕ್ಕಿಕೊಂಡೆ. ನಿತ್ಯದ ಸ್ನಾನದ ಲೆಕ್ಕದಲ್ಲೊಮ್ಮೆ, ಬಣ್ಣ ಬಿಡಲು ಮತ್ತೊಮ್ಮೆ, ಆಕೆಯ ಸ್ಪರ್ಶದ ಬಣ್ಣವನ್ನಳಿಸಲು ಮಗದೊಮ್ಮೆ ಇನ್ನೂ ಏನೇನು ಕಾರಣಗಳಿದ್ದವೋ ನೆನಪಿಗೆ ಬಾರದು. ಎಲ್ಲಾ ಬಣ್ಣಗಳನ್ನು ತೊಳೆದು ಕಳೆದು ಬರುವ ವೇಳೆಗೆ ಆಕೆಯ ಹೆಸರು ಮರೆತರೂ, ಬಣ್ಣ ಮೆತ್ತಿದ ಅವಳ ನೆನಪುಗಳು ಮರೆಯುವ ಮುನ್ನ ಬರೆಯಲು ಕುಳಿತೆ.

ಬಣ್ಣಗಳಲ್ಲಿ ಬಣ್ಣಗೆಟ್ಟ ಮುಖಗಳು

******************************ಮುಗಿಯಿತು******************************