Monday 20 July 2015

ಅಧಿಕ ಪ್ರಸಂಗ

      ಎರಡು ದಿನ ಕಛೇರಿಗೆ ರಜೆ ಹಾಕಿ ಊರಿಗೆ ಹೋದೆನೆಂದರೆ ಶಾಲೆಗೊಮ್ಮೆ ಭೇಟಿ ಕೊಡುವುದುಂಟು. ಆದರದು ನಾನು ಓದಿದ ಶಾಲೆ ಎಂಬ ಒಣ ಅಭಿಮಾನದಿಂದಲ್ಲ; ಬದಲಿಗೆ ಮನೆಯಲ್ಲಿ ಕುಳಿತು ಹೊತ್ತು ಹೋಗದ್ದಕ್ಕೆ. ಏಳು ತರಗತಿಗಳು ಸೇರಿ ಎಪ್ಪತ್ತು ವಿದ್ಯಾರ್ಥಿಗಳಿರುವ ತುಂಬು ಶಾಲೆ ಅದು. ಓದೋ ಮಕ್ಕಳಿಗೆ (ಓದದೇ ಇರುವವರಿಗೂ ಸಹ) ಬಿಸಿಯೂಟ, ಹಾಲು ಭಾಗ್ಯ, ಮೊಟ್ಟೆ ಭಾಗ್ಯವೂ ದೊರೆಯುತ್ತಿರುವ ಕಾರಣ ಪೋಷಕರೂ ಖುಷಿಯಿಂದ ಮಕ್ಕಳನ್ನು ಶಾಲೆಗೆ ಕಲಳಿಸುತ್ತಿದ್ದಾರೆ. ಮತ್ತೊಂದು ವರದಾನವೆಂದರೆ ಅಕ್ಕ ಪಕ್ಕದ ಊರುಗಳಲ್ಲಿ ವಿದ್ಯಾರ್ಥಿಗಳಿಲ್ಲ ಎಂಬ ಕಾರಣಕ್ಕೆ ಹೈಯರ್ ಪ್ರೈಮರಿ ಸ್ಕೂಲುಗಳನ್ನು ಮುಚ್ಚಿದ್ದು. ಇದರ ಜೊತೆಗೆ 'ತಮ್ಮಂತೆ ತಮ್ಮ ಮಕ್ಕಳು ವಿದ್ಯೆ ಕಲಿಯದೆ ಹಾಳಾಗಬಾರದು' ಎಂಬ ಹೆತ್ತವರ ಕಾಳಜಿಯೂ, 'ತಾವು ಜೀವನದಲ್ಲಿ ಕಲಿತ ಪಾಠವನ್ನು ಮುಂದಿನ ತಲೆಮಾರಿಗೆ ತಲುಪಿಸಬೇಕು' ಎನ್ನುವ ಶಾಲಾ ಶಿಕ್ಷಕರ ಕಕ್ಕುಲತೆಯೂ ಸೇರಿದೆ. ಇಂತಿಪ್ಪ ನಮ್ಮೂರ ಶಾಲೆಗೆ ೩ ಜನ ಶಿಕ್ಷಕರು. ಸರದಿಯಂತೆ ಒಬ್ಬೊಬ್ಬರು ಒಂದೊಂದು ದಿನ ಅಡಿಗೆಯ ಉಸ್ತುವಾರಿಯನ್ನು ವಹಿಸಿಕೊಳ್ಳುವರು. ಇವರನ್ನೆಲ್ಲಾ ಒಮ್ಮೆ ಮಾತಾಡಿಸಿ ಬರೋಣವೆಂದು ಅತ್ತ ಹೆಜ್ಜೆ ನೆಟ್ಟೆ.

      ಹಳ್ಳಿಯ ಹಳೆಯ ಸರ್ಕಾರಿ ಶಾಲೆಯಲ್ಲಿ ತರಗತಿಯ ಮಧ್ಯೆ ಹೋಗಿ ಮೇಷ್ಟರನ್ನು ಮಾತನಾಡಿಸಕೂಡದು ಎಂಬ ನಿರ್ಬಂಧವಿಲ್ಲದ್ದರಿಂದ ಕ್ಲಾಸ್ ರೂಂ ಒಂದರತ್ತ ಸುಳಿದೆ. ಕನ್ನಡ ಮೇಷ್ಟ್ರು ಆರನೇ ತರಗತಿಗೆ 'ಸೋದರ ವಾತ್ಸಲ್ಯ' ಅನ್ನೋ ಪಾಠ ಹೇಳ್ತಿದ್ರು. ನಾನು ಹೊರಗಿನಿಂದಲೇ "ನಮಸ್ಕಾರ ಸಾರ್" ಅಂದೆ. ಅವರು ತರಗತಿಯೊಳಗಿಂದಲೇ ಒಮ್ಮೆ ಕಣ್ಣು ಕಿರಿದು ಮಾಡಿ ನೋಡಿ "ಹೋ.. ಬಾಲು. ಬಾರಯ್ಯಾ ಬಾ. ಎಷ್ಟು ಸಮಯ ಆಯ್ತು ಮಾರಾಯ ನಿನ್ನನ್ನು ನೋಡಿ. ಎಲ್ಲಿದ್ದೀ ಈಗ, ಏನು ಮಾಡ್ಕೊಂಡಿದ್ದೀ " ಎನ್ನುವ ಪ್ರಶ್ನೆಗಳ ಮಳೆಯನ್ನೇ ಸುರಿದರು.
       "ಎಷ್ಟು ಸಮಯ ಏನು ಬಂತು ಸಾರ್, ನಾಲ್ಕು ತಿಂಗಳ ಮುಂಚೆ ಆಲ್ವಾ ಬಂದಿದ್ದು. ಈಗ ಬಾಂಬೆಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿದೀನಿ" ಅವರ ಮರೆವನ್ನು ಮರೆಸುವ ಪ್ರಯತ್ನ ಮಾಡಿದೆ. 
      "ಹೋs.. ಇನ್ನೂ ಅಲ್ಲೇ ಇದೀಯಾ"
      "ಮತ್ತಿನ್ನೇನು ಸಾರ್, ನೀವೂ ೧೫ ವರ್ಷದಿಂದ ಇಲ್ವಾ ಇದೇ ಊರಲ್ಲಿ. ನಂದಿನ್ನೂ ಒಂದು ವರ್ಷ ಆಯ್ತು ಅಷ್ಟೆ."
      ಮೇಷ್ಟ್ರು ತಮ್ಮ ಬೊಚ್ಚು ಬಾಯನ್ನೊಮ್ಮೆ ತೆರೆದು ನಕ್ಕು ಬಿಟ್ಟು, ಆ ಸಣ್ಣ ಮಕ್ಕಳ ಮುಂದೆ ನನ್ನ ಮಾನ ಕಳೆಯುವ ಕೆಲಸ ಶುರು ಮಾಡಿದ್ರು.
      "ಇವ್ನು ಬಾಲಚಂದ್ರ ಅಂತ. ಇದೇ ಸ್ಕೂಲಲ್ಲಿ ಓದಿದ್ದು. ನಿಮ್ಮ ಥರಾನೇ ಚಿಕ್ಕ ಚಿಕ್ಕ ಚಡ್ಡಿ ಹಾಕ್ಕೊಂಡು ಬರ್ತಿದ್ದ. ಇವತ್ತು ಸೂಟು ಬೂಟು ಹಾಕೋ ಇಂಜಿನಿಯರ್ರು." ಅನ್ನೋ ಮಾತುಗಳೊಂದಿಗೆ ಮೊದಲ್ಗೊಂಡು ಇನ್ನೂ ಕನಸು ಕಾಣಲು ಕಣ್ತೆರೆಯುತ್ತಿರುವ ಪುಟ್ಟ ಮಕ್ಕಳ ಮುಂದೆ ಗುರಿ ಎಂಬ ಗುಂಡಿ ತೋಡಿ, ಕನಸೆಂಬ ಕೂಸು ಹುಟ್ಟುವ ಮೊದಲೇ ಭ್ರೂಣಹತ್ಯೆಗೈಯುವ ಪ್ರಯತ್ನ ನಡೆಯಿತು. ಇದೇ ರೀತಿ ನಿತ್ಯದತ್ಯಾಚಾರಕ್ಕೆ ಹುಟ್ಟಿದ ಪದವಿಯೇ ಸಾಫ್ಟ್ ವೇರ್ ಇಂಜಿನಿಯರ್ರು ಎಂಬ ಆಲೋಚನೆ ಬಂದಾಗೊಮ್ಮೆ ಮನಸ್ಸು ಕಹಿಯಾಯಿತು. ಮಕ್ಕಳನ್ನು ಅವರ ಪಾಡಿಗೆ ಓದಲು ಬಿಟ್ಟ ಮೇಷ್ಟ್ರು ನನ್ನೊಡನೆ ಮಾತನಾಡಲೆಂದು ಹೊರಬಂದರು. 
      "ಈಗಲೂ 'ಸೋದರ ವಾತ್ಸಲ್ಯ' ಪಾಠ ಹೇಳಬೇಕಾದರೆ ಇಡೀ ರಾಮಾಯಣನೇ ಹೇಳ್ತೀರಾ ಸಾರ್" ನಾನು ಮಾತು ಶುರು ಮಾಡಿದೆ. 
      "ನಾನೇನೋ ಹೇಳ್ತೀನಿ ಕಣೋ ಬಾಲು, ಆದ್ರೆ ಈಗಿನ ಹುಡುಗ್ರು ಕೇಳ್ಬೇಕಲ್ವಾ. ನಿಮ್ಗಾದ್ರೆ ಬೆತ್ತ ಹಿಡಿದಾದ್ರೂ ಹೇಳಿ ಕೊಡ್ತಿದ್ವಿ. ಈಗಿನ ಪರಿಸ್ಥಿತಿ ಹಾಗಿಲ್ಲ. ಇದ್ದ ಬೆತ್ತಗಳೆಲ್ಲಾ ಬಿಸಿಯೂಟದ ಒಲೆಗೆ ಕಟ್ಟಿಗೆಯಾಗಿ ಹೋದ್ವು"
      "ಅದು ಸಹಜ ಆಲ್ವಾ ಸಾರ್. ಮಳೆಗಾಲದಲ್ಲೂ, ಬೇಸಿಗೇಲೂ ಒಂದೇ ಬಿತ್ತನ್ನ ಬಿತ್ತಿದ್ರೆ ಫಲ ಒಂದೇ ಥರ ಕೊಡ್ತದಾ"
      "ಆದರೆ ರಾಮ ಬಾಳಿ ಬದುಕಿದ ರೀತಿ, ಅವನ ಆದರ್ಶಗಳು ಸಾರ್ವಕಾಲಿಕ ಸತ್ಯ ಕಣೋ ಬಾಲು. ಅದರಂತೆ ನಡೆದಲ್ಲಿ ಪ್ರತಿಯೊಬ್ಬನ ಬಾಳೂ ಬೆಳಗುತ್ತೆ."
      "ನಿಮಗೆಲ್ಲೋ ಭ್ರಾಂತು ಸಾರ್. ರಾಮಾಯಣದಲ್ಲಿ ನಾವು ಕಾಣೋದೇನು; ರಾಮ ಉತ್ತಮೋತ್ತಮ, ರಾವಣ ನೀಚಾದಿನೀಚ. ಸದ್ಗುಣಗಳು ದುರ್ಗುಣಗಳನ್ನು ನಾಶ ಮಾಡೋ ಒಂದು ಪ್ರಕ್ರಿಯೆ ಆಲ್ವಾ ಸಾರ್ ರಾಮಾಯಣ. ನೀವೂ ಇಷ್ಟು ವರ್ಷದಿಂದ ರಾಮಾಯಣ ಪಾರಾಯಣ ಮಾಡಿದೀರ, ಈಗ ನೀವು ರಾಮನೋ, ರಾವಣನೋ?"
      ಕಡೆಯ ಪ್ರಶ್ನೆಯಿಂದ ಮೇಷ್ಟ್ರು ಸ್ವಲ್ಪ ಗಲಿಬಿಲಿಗೊಂಡಂತಿತ್ತು. "ಹೀಗೆ ಕೇಳಿದ್ರೆ ಏನಯ್ಯಾ ಹೇಳೋದು; ನಾನು ರಾಮನಲ್ಲದಿದ್ದರೂ ರಾವಣನಂತೂ ಅಲ್ಲ" ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಇತ್ತು ಮೇಷ್ಟ್ರು ಕೊಟ್ಟ ಉತ್ತರ. 
      "ನಿಜ ಸಾರ್. ಇವತ್ತಿನ ಪ್ರಪಂಚದಲ್ಲಿ ರಾಮನಷ್ಟು ಉದಾತ್ತ ವ್ಯಕ್ತಿ ಯಾರೂ ಇಲ್ಲ; ಅದೇ ರೀತಿ ರಾವಣನಷ್ಟು ಉಡಾಳನೂ ಇಲ್ಲ. ಕೇವಲ ಅವರವರ ದೃಷ್ಟಿಯಿಂದಾದರೂ ಅವರವರಿಗೆ ಸತ್ಯ ಇದು. ಇಂತಹ ಮಧ್ಯಮ ಮನಸ್ಥಿತಿಯ ಪಾತ್ರಗಳ ವಿಸ್ತಾರವೇ ಇಲ್ಲ ನಿಮ್ಮ ರಾಮಾಯಣದಲ್ಲಿ. ಹಾಗಾಗಿ ರಾಮಾಯಣ ಅನ್ನೋದು ಕೆಲವೇ ಜನರ ಸೋಲು ಮತ್ತು ಗೆಲುವಿನ ಕಥೆಯಾಗಿದೆಯೇ ಹೊರತು ನಮ್ಮ ನಿಮ್ಮ ಬದುಕಿಗೆ ಹಿಡಿದ ಕನ್ನಡಿಯಾಗಿ ಎಂದೂ ಕಂಡಿಲ್ಲ. ಅಥವಾ ನಮ್ಮ ಹಿರಿಯರು ನಮಗೆ ಕಾಣಿಸಿಲ್ಲ." ನನ್ನ ವಾದ ಮುಂದಿಟ್ಟೆ.
      "ಅಯ್ಯೋ ನಾಸ್ತಿಕ ಮುಂಡೆಮಗನೇ, ರಾಮಾಯಣ ಸುಳ್ಳು ಅಂತ ಏನೋ ನೀನು ಹೇಳೋದು" ಮೇಷ್ಟರಿಗೆ ಸಿಟ್ಟು ಬಂದಿತ್ತು. 
      "ಪ್ರಶ್ನೆ ರಾಮಾಯಣದ ಸತ್ಯಾಸತ್ಯತೆಯದ್ದು ಅಲ್ಲ ಸಾರ್. ಆದರೆ ಎಲ್ಲರಲ್ಲೂ ರಾಮನ ಆದರ್ಶಗಳನ್ನು ಬಿತ್ತುವ ನೆಪದಲ್ಲಿ ಇವತ್ತಿನ ಜನಾಂಗದಲ್ಲಿ ನಾವು ಯಾವ ತರಹದ ದ್ವಂದ್ವವನ್ನು ಹುಟ್ಟಿಸ್ತಿದೀವಿ ಅನ್ನೋದು."
      "ಏನಪ್ಪಾ ನೀನು ಹೇಳ್ತಿರೋದು" ಮೇಷ್ಟರು ಸ್ವಲ್ಪ ಮೆತ್ತಗಾಗಿದ್ದರು. 
      "ರಾಮನ ಬಾಲ್ಯ ಮತ್ತು ಇವತ್ತಿನ ಮಕ್ಕಳ ಬಾಲ್ಯ ಹೋಲಿಸಿ ನೋಡಿ. ರಾಮ ತನ್ನ ಬಾಲ್ಯವನ್ನು ತನ್ನ ಅಪ್ಪ ಅಮ್ಮಂದಿರ ಜೊತೆ ಅರಮನೆಯ ಸುಪ್ಪತ್ತಿಗೆಯಲ್ಲಿ ಕಳೆದ. ಅವನಿಗೆ ಮನೆಯಲ್ಲಿಯೇ ಪಾಠ ಹೇಳಿಕೊಡೋಕೆ ವಸಿಷ್ಠರು. ಲೋಕಜ್ಞಾನವನ್ನು ಕಲಿಸಲು ವಿಶ್ವಾಮಿತ್ರರು. ಇವತ್ತಿನ ಮಕ್ಕಳ ಗತಿ ನೋಡಿ. ಸುಪ್ಪತ್ತಿಗೆ ಇರುವ ಪಟ್ಟಣದ ಮಕ್ಕಳು ತಿಂಗಳು ಆರು ತುಂಬುವುದರೊಳಗೆ ಇನ್ನಾರದೋ ಕೈ ಸೇರಿ ಅಪ್ಪ ಅಮ್ಮನ ಪ್ರೀತಿಯಿಂದ ವಂಚಿತರಾಗುತ್ತವೆ. ಅಪ್ಪ ಅಮ್ಮನ ಜೊತೆ ಬೆಳೆಯುವ ಹಳ್ಳಿ ಮಕ್ಳಿಗೆ ತುತ್ತು ಹಿಟ್ಟಿಗೂ ತತ್ವಾರ. ಅದಕ್ಕೇ ನಿಮ್ಮ ನಳಪಾಕ ತಿನ್ನೋಕೆ ಶಾಲೆಗೆ ಬರ್ತವೆ. ಇನ್ನು ಹಳ್ಳಿ ಮತ್ತು ದಿಲ್ಲಿಗಳೆರಡರಲ್ಲೂ ೧೦೦% ಮಾರ್ಕ್ಸು ತಗೋಳ್ಳೋದೇ ಜ್ಞಾನ ಸಂಪಾದನೆ ಅನ್ನೋ ಭಾವನೆ ಬೆಳೆದುಬಿಟ್ಟಿದೆ."
      "ಹ್ಞೂ.. ಅದು ನಿಜ." 
      "ಮೊನ್ನೆ ಬಾಂಬೆಯಲ್ಲಿ ನಮ್ಮ ಪಕ್ಕದ ಮನೆಯ ಮಗುವಿಗೆ ಇದೇ ರಾಮಾಯಣ ಕಥೆ ಹೇಳ್ತಾ ಇದ್ದೆ. ಆ ನರ್ಸರಿ ಓದೋ ಮಗು ಏನೇನು ಪ್ರಶ್ನೆ ಕೇಳ್ತು ಗೊತ್ತಾ."
      "ಏನು ?"
      "ರಾಮನ ಡ್ಯಾಡಿ ಮಮ್ಮಿ ಆಫೀಸಿಗೆ ಹೋಗ್ತಿರ್ಲಿಲ್ವಾ ಅಂತ ಕೇಳ್ತು. ರಾಜಪ್ರಭುತ್ವದ ಆ ದಿನಗಳಲ್ಲಿ ಜನರ ಸಂಪಾದನೆಯ ಭಾಗವನ್ನು ಕಸ್ಕೊಂಡು ಆಲ್ವಾ ಸಾರ್ ರಾಜರು ಬದುಕ್ತಿದ್ದಿದ್ದು. ಅವ್ರಿಗೆಲ್ಲಾ ಏನು ಆಫೀಸು. ಅದು ಬೇಡ ಅಂತ ಆಲ್ವಾ ಪ್ರಜಾ ಪ್ರಭುತ್ವ ಬಂದಿದ್ದು."
      "ಬಾಲು, ಇವತ್ತಿಗೆ ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವವೂ ಉಳಿದಿಲ್ಲ. ಈಗೇನಿದ್ರೂ ಪಕ್ಷಪ್ರಭುತ್ವ. ಒಬ್ಬೊಬ್ಬ ಮತದಾರನೂ ಒಂದೊಂದು ಪಕ್ಷದ ದಾಸ. ಆ ಮಾತು ಬಿಡು, ಮತ್ತಿನ್ನೇನು ಕೇಳ್ತು ಆ ಮಗು" 
      "ರಾಮನಿಗೆ ಯಾರೂ ಫ್ರೆಂಡ್ಸ್ ಇರ್ಲಿಲ್ವಾ ಅಂಕಲ್ ಅಂತಂದು ತನಗಿರೋ ಫ್ರೆಂಡ್ಸ್ ಗಳ ಹೆಸರನ್ನಷ್ಟೂ ಹೇಳ್ತು"
      "ಗುಹ, ಸುಗ್ರೀವ, ಹನುಮಂತ ಎಲ್ಲಾ ರಾಮನ ಫ಼್ರೆಂಡ್ಸುಗಳೇ ಅಲ್ವೇನೋ. ಹೇಳ್ಲಿಲ್ವಾ ನೀನು ?" ಎಲ್ಲಾ ಪ್ರಶ್ನೆಗಳ ಉತ್ತರ ಸಿಕ್ಕಿತೆನ್ನುವಂತಹ ಖುಷಿಯಲ್ಲಿ ನುಡಿದರು ಮೇಷ್ಟರು. 
      "ಅವಳಿನ್ನೂ ಪುಟ್ಟ ಮಗು ಸಾರ್. ಬಾಲ್ಯದ ಗೆಳೆಯರ ಬಗ್ಗೆ ಕೇಳಿದ್ದು."
      ಮೇಷ್ಟ್ರು ಗಾಢವಾಗಿ ಎನೋ ಯೋಚಿಸುತ್ತಿದ್ದರು. ನಾನು ಮಾತು ಮುಂದುವರೆಸಿದೆ. "ಇನ್ನೂ ಸ್ವಲ್ಪ ದೊಡ್ಡೋರಿಗೆ ಕಥೆ ಹೇಳೋಕೂ ಭಯವಾಗುತ್ತೆ ಸಾರ್. ರಾಮನಿಗೆ ಎಷ್ಟು ಮಾರ್ಕ್ಸ್ ಬಂದಿತ್ತು ; ಅವನ ಫ್ರೆಂಡ್ಸ್ ಗೆ ಎಷ್ಟು ಬಂತು ; ರಾಮ ಫಸ್ಟ್ ಕ್ಲಾಸ್ ಪಾಸು ಮಾಡಿ ಏನೇನೋ ಆದ, ಉಳಿದೋರೆಲ್ಲಾ ಏನಾದ್ರು ; ಅವರಿಗೆಲ್ಲಾ ಯಾವ ಕಾಲೇಜಲ್ಲಿ ಸೀಟು ಸಿಕ್ತು ; ಯಾವ ಕಂಪನಿಯಲ್ಲಿ ಕೆಲಸ ಸಿಕ್ತು ; ಸಂಬಳ ಎಷ್ಟು ; ಆನ್ ಸೈಟ್ ಎಷ್ಟು ಸಲ ಹೋದ ; ಅಂತೆಲ್ಲಾ ಕೇಳಿದ್ರೆ ಏನು ಹೇಳೋದು ಸಾರ್ ?" ನಾನು ಪ್ರಶ್ನಿಸಿದೆ. 
      "ಅಧಿಕ ಪ್ರಸಂಗ ಅನ್ನೋದು." ಮೇಷ್ಟರು ಗುರುಗುಟ್ಟಿದರು.
      ಭಿನ್ನವಾದ ವಾತಾವರಣವನ್ನು ಸೃಷ್ಟಿಸುತ್ತಿರುವವರು ನಾವು. ಮತ್ತೆ ಹಳೆಯ ಬೀಜವನ್ನೇ ಬಿತ್ತುವವರೂ ನಾವು. ಬದಲಾದ ಸನ್ನಿವೇಶದಲ್ಲೂ ಹಿಂದಿನ ಫಲವನ್ನೇ ಅಪೇಕ್ಷಿಸುತ್ತಿರುವುದೂ ನಾವು. ಮೌಲ್ಯಗಳನ್ನು ಒಂದು ಪಠ್ಯವಸ್ತುವಾಗಿ ಸೀಮಿತಗೊಳಿಸಿ, ಅದರಲ್ಲಿ 'ಎ' ಗ್ರೇಡು ಗಳಿಸಿದ ಬಳಿಕವೂ ಆತನಲ್ಲಿ ಮೌಲ್ಯವಿಲ್ಲ ಎಂದು ಜರಿಯುವುದು ಎಷ್ಟು ಸರಿ. ಆತನಲ್ಲಿ ಮೌಲ್ಯಗಳಿಲ್ಲದಿದ್ದಲ್ಲಿ ಸರ್ಟಿಫಿಕೇಟು ಕೊಡುವ ದರ್ದು ಏನಿತ್ತು. ಕೇಳಿದರೆ ಅಧಿಕ ಪ್ರಸಂಗವಾದೇತೇನೋ. ಇಂತಿಪ್ಪ ಯೋಚನಾ ಲಹರಿಯನ್ನು ತುಂಡರಿಸಲು ವಿಜ್ಞಾನದ ಮೇಷ್ಟರು ಬಂದರು. 
      "ಇಂಜಿನಿಯರ್ ಸಾಹೇಬ್ರು, ಯಾವಾಗ ಬಂದ್ರಿ; ನಡೀರಿ ಒಂದು ಟೀ ಕುಡಿದು ಬರುವ" ಮುಖದಲ್ಲಿ ನಗು ತುಂಬಿಕೊಂಡು ನುಡಿದ ಅವರಿಗೆ ಪ್ರತಿಯಾಗಿ "ಹೀಗೆಲ್ಲಾ ಹೇಳಿ ಮರ್ಯಾದೆ ತೆಗೀಬೇಡಿ ಸಾರ್." ಎಂದೆ. 
      "ಮರ್ಯಾದೆ ತೆಗಿಯೋದಲ್ಲ ಕಣೋ ಬಾಲು, ಕೊಡ್ತಿರೋದು; ನಾವೇನಿದ್ರೂ ಈ ಹಳ್ಳಿ ಮನೆಗೆ ಮೇಷ್ಟ್ರು. ನೀನು ಬಾಂಬೆಗೇ ಇಂಜಿನಿಯರ್ರು" ಮತ್ತೆ ನಗೆಯಾಡಿದರು. ಅವರನ್ನು ಮಾತಲ್ಲಿ ಗೆದ್ದವರಿಲ್ಲ. ಇಬ್ಬರೂ ಕನ್ನಡ ಮೇಷ್ಟರಿಗೆ ವಿದಾಯ ಹೇಳಿ ಬಸ್ ಸ್ಟಾಪ್ ಬಳಿಯ ಸಣ್ಣ ಗೂಡಂಗಡಿ ಕಡೆ ನಡೆದೆವು.