Sunday 11 May 2014

ಭಂಡಾರಧಾರ ಪ್ರವಾಸ ಕಥನ..

ಮೊದಲ ಮಾತು..

ಯೋಚನೆ ಹುಟ್ಟಿದ್ದು

 

      ಇಗತ್ ಪುರಿ ಒಂದು ಸುಂದರ ಘಟ್ಟ ಪ್ರದೇಶ, ಒಮ್ಮೆ ಹೋಗಿ ಬಂದರಾದೀತು ಎಂದು ಸಹೋದ್ಯೋಗಿಯೊಬ್ಬರು ಉಸುರಿದರು. 'ಅಂಥದ್ದೇನಿದೆ ಅಲ್ಲಿ?' ಎಂಬ ಕುತೂಹಲದಿಂದ ಇನ್ನೊಂದಿಬ್ಬರು ಗೂಗಲ್ಲಿನಲ್ಲಿ ಹುಡುಕಾಡಿದರು. ಸಮೀಪದಲ್ಲಿಯೇ ಭಂಡಾರಧಾರ ಎಂಬ ಸಹ್ಯಾದ್ರಿಯ ತುಣುಕಿರುವುದಾಗಿಯೂ, ಅದು ಕೋಟೆ ಜಲಪಾತಗಳನ್ನು ಹೊತ್ತು ನಿಂತಿರುವುದಾಗಿಯೂ ತಿಳಿಯಿತು. ಹೊರಡುವುದೆಂದು ಯೋಜನೆ ಸಿದ್ಧವಾಗತೊಡಗಿತು. ಹೋಗುವುದು ಯಾವತ್ತು, ಬರುವವರು ಎಷ್ಟು ಜನ, ಯಾವ ವಾಹನವನ್ನ ಗೊತ್ತುಮಾಡುವುದು, ಎಷ್ಟು ಹೊತ್ತಿಗೆ ಹೊರಡುವುದು ಚರ್ಚೆಗಳು ಶುರುವಾದವು.




ನಾನೂ ಹೋಗಲಾ ?

 

      ಮೇಲಿನ ಅಷ್ಟೂ ಚರ್ಚೆಗಳಲ್ಲಿ ನಾನು ಭಾಗವಹಿಸಿರಲಿಲ್ಲ. ಆದರೆ ಎಲ್ಲಾ ನಡೆದಿದ್ದು ನನ್ನ ಸುತ್ತಲೇ ಆದ್ದರಿಂದ ವಿಷಯವಷ್ಟೂ ತಿಳಿದಿತ್ತು. ಕೋಟೆ, ಜಲಪಾತಗಳನ್ನು ಕಾಣುವ ಆಶೆಯಂತೂ ಇದ್ದೇ ಇತ್ತು. ಆದರೂ ಹಿಂದೆಂದೂ ಎಲ್ಲರೊಂದಿಗೆ ಒಂದಾಗದ ನನಗೆ ಈಗ 'ನಾನೂ ಬರುವೆ' ಎನ್ನಲು ನಾಲಿಗೆ ತಿರುಗಲಿಲ್ಲ. ನನ್ನಿಂದ ಅವರೆಲ್ಲರ ಸಂತೋಷಕ್ಕೆ ಭಂಗ ಬರಬಾರದಷ್ಟೇ. ಮುಂಬಯಿಗೆ ಬಂದ ಪ್ರಾರಂಭದಲ್ಲಿ ಚಲನಚಿತ್ರಕ್ಕೋ, ಇನ್ನೆಲ್ಲೋ ಹೋಗುವಾಗ ಅವರೆಲ್ಲಾ ನನ್ನನ್ನೂ ಕರೆದಿದ್ದೂ ಇದೆ. ಆದರೆ ಮಹಾನಗರಿಯಲ್ಲಿ ಹೊರಗೆ ಕಾಲಿಟ್ಟೊಡನೆ ಒದಗಬಹುದಾದ ಖರ್ಚನ್ನು ನೆನೆದೇ ಬೆಚ್ಚಿ ಅವರೊಂದಿಗೆ ಹೋಗದೆ ಕೂತಿದ್ದೆ. ಜೊತೆಗೆ ಒಂದು ಚಲನಚಿತ್ರಕ್ಕೆ ವ್ಯಯಿಸುವ ದುಡ್ಡಲ್ಲಿ ಒಂದು ಪುಸ್ತಕ ಕೊಳ್ಳಬಹುದು ಎಂಬ ಲೆಕ್ಕಾಚಾರ ಬೇರೆ. ಕಛೇರಿಯಲ್ಲಿಯೂ ಚಹಾಕ್ಕೆ ಕರೆದರೂ ತುಂಬಾ ಸಾರಿ ಏನಾದರೂ ನೆಪವೊಡ್ಡಿ ಹೋಗದೆ ಕುಳಿತಿದ್ದೂ ಇದೆ. ಇದಕ್ಕೆ ಚಹಾ-ಕಾಫಿಗಳ ಚಟ ಅಷ್ಟೊಂದು ಗಾಢವಾಗಿ ಅಂಟಿಲ್ಲದಿರುವುದು ಒಂದು ಕಾರಣವಾದರೆ ಒಂದು ಕಪ್ ಚಹಾಕ್ಕಿಂತಲೂ ಜಾಸ್ತಿ ನಡೆಯುವ ಮಾತುಕತೆಗಳಲ್ಲೂ ನನಗಿರುವ ಅನಾಸಕ್ತಿ ಇನ್ನೊಂದು ಕಾರಣ. ಕೆಲವೇ ಬಾರಿ ಹೋದಾಗಿನ ಅನುಭವದಿಂದ ಅಲ್ಲಿ ಸಾಮಾನ್ಯವಾಗಿ ನಡೆಯುವ ಎಲ್ಲಾ ವಿಷಯಗಳ ಬಗ್ಗೆ ತಿಳಿದೂ ಇದೆ. ಹಾಗಾಗಿ ನಾನೊಂಥರ ಎಲ್ಲರೊಳಗೊಂದಾಗದ ಮಂಕುತಿಮ್ಮನಾಗಿಯೇ ಇಷ್ಟುದಿನ ಕಳೆದೆ. ಇದು ಯಾರ ಮೇಲಿನ ಅಸಮಧಾನದಿಂದಲ್ಲವಾದರೂ ನಾನು ಯಾಕೋ ಹಾಗೇನೇ. ಇಂತಿಪ್ಪ ನನಗೆ ಈಗ ಇವರೆಲ್ಲರೊಂದಿಗೆ ನಾನೂ ಹೋಗಲಾ ಎಂಬ ಯೋಚನೆ ಮೂಡುತ್ತಿತ್ತು.

ಕರೆ ಬಂತು

      'ನೀನೂ ಬರ್ತೀಯಾ ?' ಯಾವತ್ತೂ ಹೊರಡದವ, ಇವತ್ತೂ ಬರಲಾರ ಎಂದುಕೊಂಡು ಸುಮ್ಮನೆ ತಮಾಷೆಗಾಗಿ ಕೇಳಿದ್ದೋ, ಬಂದರೆ ವಾಹನದ ಖರ್ಚು ಪ್ರತಿಯೊಬ್ಬರ ಜೇಬಿಗೆ ಒಂದಿಷ್ಟು ಕಡಿಮೆಯಾದೀತೆಂದು ಕರೆದರೋ, ಇನ್ನೇತಕ್ಕೋ. ಆಗ ಅದೇನೂ ಯೋಚಿಸದೆ 'ಹ್ಞೂ!!' ಎಂದು ಬಿಟ್ಟೆ. ಮೊದಲು ನಾನು ಹೇಳಿದ್ದು ತಮಾಷೆಗೆ ಅಂದುಕೊಂಡರೋ ಏನೋ ಗೊತ್ತಿಲ್ಲ. ಒಂದಿಷ್ಟು ಜನ ಹೊರಡಲು ಸಿಧ್ಧವಾಗಿದ್ದೂ ಆಯ್ತು. ಏನೋ ಒಂದು ಉದ್ವೇಗದಿಂದ 'ಅಸ್ತು' ಎಂದವರಿಗೆ ಮತ್ತೊಂದು ಸುತ್ತು ಯೋಚಿಸಲು ಒಂದಿಷ್ಟು ಸಮಯ ಕೊಟ್ಟು ಸಂಜೆಗೆ ಅವರವರ ನಿರ್ಧಾರ ತಿಳಿಸಲು ಸೂಚಿಸಲಾಯಿತು. ಸಂಜೆಗೆ ಹತ್ತು ಜನ ಹೊರಡಲು ಸಿಧ್ಧರಾದರು. ಅದೇ ಬರುವ ಶನಿವಾರ ಬೆಳಿಗ್ಗೆ ೪.೩೦ಕ್ಕೆ ಮುಂಬಯಿ ಬಿಡುವುದೆಂದೂ, ಪ್ರಯಾಣಕ್ಕೆ Tempo Traveller ಗೊತ್ತು ಮಾಡಿದ್ದೂ ಆಯ್ತು. ಇನ್ನು ಹೋರಡುವುದೊಂದೇ ಬಾಕಿ. ಆ ಕ(ವ್ಯ)ಥೆ ಮುಂದಿನ ಅಧ್ಯಾಯಗಳಲ್ಲಿ.

ಭಂಡಾರಧಾರ ಪ್ರವಾಸ ಕಥನ.. : ಅಧ್ಯಾಯ ೧

ನಾನು, ಫೋನು ಮತ್ತು ನನ್ನ ಮನಸ್ಸು...


      ರಾತ್ರಿ ಪೂರ್ತಿ ಅದೇ ಕನಸು. ಸುತ್ತಲೂ ತುಂಬಿ ನಿಂತ ಹಸಿರು. ಸಹ್ಯಾದ್ರಿಯ ಸಾಲೇ ಇರಬೇಕದು. ಬೇರೆ ಯಾವುದನ್ನೂ ಅಷ್ಟೊಂದು ಮನದುಂಬಿ ನೋಡಿದ ನೆನಪಿಲ್ಲ. ಹಿಂದೊಮ್ಮೆ ನೀಲಗಿರಿಯ ಬೆಟ್ಟಗಳನ್ನು ನೋಡಿದ್ದೆನಾದರೂ ಅದರ ಸ್ಪಷ್ಟ ಚಿತ್ರ ಮನಸ್ಸಿನಲ್ಲಿ ಉಳಿದಿಲ್ಲ. ನಾಳೆ ಹೋಗಲಿರುವುದು ಹೀಗೆಯೇ ಇದ್ದೀತೇ ಎಂದು ಮನಸ್ಸು ಕನಸು ಕಾಣುತ್ತಿತ್ತು. 'ನಾಳೆಯ ಬಗ್ಗೆ ಯೋಚಿಸಬೇಡವೋ ಮರುಳೇ..' ಎಂದು ನಾನು ನನ್ನ ಮನಸ್ಸಿಗೇ ಹೇಳಿಕೊಳ್ಳುವುದುಂಟಾದರೂ, ನಾನು ನನ್ನನ್ನು ಮರೆತು ನಿದ್ರಾಧೀನನಾದಾಗ ನಾಳೆಯ ಕನಸನ್ನು ಕಂಡು ಮಾರನೆಯ ಬೆಳಿಗ್ಗೆ ಎದ್ದೊಡನೆ 'ನಿನ್ನ ಇವತ್ತು ಹೀಗೆ..' ಎಂದೆನ್ನುತ್ತಾ ಮುಗುಳ್ನಗುವ ಮರುಳು ಮನಸ್ಸಿಗೆ ಏನೆನ್ನಲಿ ? 'ನಿನ್ನ ಕನಸುಗಳು ಕೈಗೂಡದಾಗ ಮತ್ತೆ ನೀನೇ ಅನುಭವಿಸುವಿಯಂತೆ, ಇನ್ನೆಂದೂ ನೀನು ಕನಸು ಕಾಣುವ ಯೋಚನೆ ಮಾಡಲಾರೆ' ಎಂದು ಒಂದಿಷ್ಟು ಬೈದು ಸುಮ್ಮನಾದೆನಾದರೆ, 'ಪ್ರತಿ ದಿನ ನಿನ್ನೊಂದಿಗೆ ಮಾತಾಡುತ್ತಿರುವಷ್ಟು ಸಮಯ ನಾನು ಕನಸ ಕಾಣಬಾರದೆಂದೇ ಯೋಚಿಸುತ್ತೇನೆ. ಆದರೆ ನೀನು ದಣಿದು ಮಲಗಿದಾಗ, ನಿದ್ರೆಯನ್ನರಿಯದ ನನ್ನೊಂದಿಗೆ ಮಾತಾಡಲು ಬೇರಾರೂ ಸಿಗದೆ ಕನಸು ಕಾಣುತ್ತಾ ಕೂರುವೆ' ಎನ್ನುವ ಈ ಮರುಳಿಗೆ ಏನೆನ್ನಲಿ.? ಹಾಗಾಗಿಯೇ ಇತ್ತೀಚೆಗೆ ನನ್ನ ಮನಸ್ಸು ಕನಸು ಕಾಣುತ್ತಿರುವುದು ನನಗೆ ತಿಳಿದರೂ ಕೂಡ ಸುಮ್ಮನಾಗುತ್ತೇನೆ. ಅದರ ನಗುವಿನೊಂದಿಗೆ ನಾನೂ ಮುಗುಳ್ನಗುತ್ತೇನೆ. ಈ ನಗುವನ್ನು ಮುರಿಯಲೋ ಎಂಬಂತೆ ನನ್ನ ಫೋನು ರಾಗ ಹಾಡತೊಡಗಿತು. ಇನ್ನು ಅದನ್ನು ಸುಮ್ಮನಾಗಿಸುವ ಕೆಲಸ.

      ಫೋನು ಕೂಗತೊಡಗಿದ್ದು ಪವನ್ ನನ್ನ ಕರೀತಿದಾನೆ ಅಂತ ಹೇಳಲು. ನಾಲ್ಕು ಮುಕ್ಕಾಲರ ಸುಮಾರಿಗೆ ಅವರ ಮನೆಯ ಬಳಿಯಿಂದ ಗಾಡಿ ಹೊರಟಾಗ ಕರೆ ಮಾಡುವುದಾಗಿ ಮೊದಲೇ ಅವನು ತಿಳಿಸಿದ್ದರಿಂದ ಒಮ್ಮೆಲೇ ಗಾಬರಿಯಾಯಿತು. ನನ್ನ ಫೋನು ನಾಲ್ಕು ಗಂಟೆಗೆ ಯಾಕೆ ನನ್ನ ಎಬ್ಬಿಸಲಿಲ್ಲ, ಅಥವಾ ಅದು ಎಬ್ಬಿಸಿದ್ದು ನನಗೆ ಗೊತ್ತೇ ಆಗಲಿಲ್ಲವಾ ಎಂದು ಯೋಚಿಸುತ್ತಿರುವಾಗಲೇ ಪವನ್ ಕರೆ ಮಾಡಿದ್ದೇ ನನ್ನನ್ನು ಎಬ್ಬಿಸಲೆಂದು ತಿಳಿಯಿತು. ಗಂಟೆ ನಾಲ್ಕಾಗುವುದಕ್ಕೆ ಇನ್ನೂ ಐದು ನಿಮಿಷ ಇತ್ತು. 'ಏನೇನೋ ಅನ್ಕೋಬೇಡ, ನನ್ನದೇನೂ ತಪ್ಪಿಲ್ಲ' ಎನ್ನುತ್ತಾ ಫೋನು ನಗುತ್ತಿತ್ತು. ಸರಿ ಎಂದು ಅದನ್ನು ಪಕ್ಕಕ್ಕಿರಿಸಿದ ಎರಡು ನಿಮಿಷದಲ್ಲಿ ಮತ್ತೊಮ್ಮೆ ಕೂಗತೊಡಗಿತು. ಈಗೇನಪ್ಪಾ ಅಂದ್ರೆ ನಾನು ಎದ್ದಿದ್ದು ಅದಕ್ಕೆ ಹೇಳಿರಲಿಲ್ಲ, ಮಾಮೂಲಿಯಾಗಿ ಗಂಟೆ ನಾಲ್ಕಾಯ್ತು ಅಂತ ಹೇಳೋಕೆ ಈ ಆರ್ಭಟ. ಅಂತೂ ಅದನ್ನು ಸುಮ್ಮನಾಗಿಸಿ ಪ್ರಾತರ್ವಿಧಿಗಳನ್ನು ಮುಗಿಸಿ ಅಭಿಷೇಕ್ ನ ಕರೆಗೆ ಕಾಯುತ್ತಾ ಕುಳಿತೆ. ಈ ಮಧ್ಯೆ ನನ್ನ ಫೋನು ಎರಡು ಬಾರಿ ATM ನಿಂದ ದುಡ್ಡು ಬಿಡಿಸಲು ನೆನಪು ಮಾಡಿದ್ದು ಬಿಟ್ಟರೆ ಪೂರ್ಣ ಮೌನಕ್ಕೆ ಶರಣಾಗಿತ್ತು. ಏನೊಂದೂ ಮಾತಾಡದೇ ಇರುವ ನನ್ನ ಫೋನಿನ ಮೇಲೆ ಈಗ ಒಂದಿಷ್ಟು ಅನುಮಾನ ಶುರುವಾಯ್ತು. ದಿನದ 23 ತಾಸುಗಳ ಜೊತೆಗಿದ್ದು, ಹೊತ್ತಿಗೆ ಸರಿಯಾಗಿ ಅದಕ್ಕೆ ಆಹಾರ ಕೊಟ್ಟಿಲ್ಲವಾದರೂ ಸದಾ ನನಗೆ ಸಹಾಯ ಮಾಡುತ್ತಿದ್ದ ಫೋನಿಗಿಂತ ಮುಖವೇ ಕಂಡಿಲ್ಲದ ಡ್ರೈವರ್ ಮಹಾನುಭಾವನ ಸಮಯಪ್ರಜ್ಞೆಯ ಮೇಲೆ ನಂಬಿಕೆ ಇಟ್ಟು ನಾಲ್ಕು ಮುಕ್ಕಾಲಿಗೆ ಕೋಣೆಯಿಂದ ಹೊರಬಿದ್ದೆ.

      ಈಗ ನನ್ನ ಫೋನು ಮತ್ತೊಮ್ಮೆ ATM ಗೆ ಹೋಗಲು ನೆನಪು ಮಾಡಿತು. ಅದರಾಜ್ಞೆಯನ್ನು ಮೀರದೆ ಸಮೀಪದ ಕೆನರಾಬ್ಯಾಂಕ್ ನ ATM ಗೆ ಹೋದೆ. ಅದು ದುಡ್ದನ್ನಂತೂ ಕೊಡಲಿಲ್ಲ ಆದರೆ 'ನಿಮಗೆ ಕಾಸು ಕೊಡಲಾಗದಕ್ಕೆ ವಿಷಾದಿಸುತ್ತೇವೆ' ಅಂತ ಕ್ಷಮೆ ಕೇಳುವುದನ್ನಂತೂ ಮರೆಯಲಿಲ್ಲ. ಮನುಷ್ಯ ತನ್ನಿಂದಾಗದನ್ನೆಲ್ಲಾ ಯಂತ್ರಗಳಿಗೆ ಹೇಳಿಕೊಟ್ಟಿರುವ ರೀತಿ ಕಂಡು ನನಗೆ ನಗು ಬಂತು. ಜೊತೆಗೆ 'ನಿನಗೆ ನಿನ್ನೆಯೇ ಹೇಳಿದ್ನಲ್ಲಾ, ಕೆನರಾ ಬ್ಯಾಂಕ್ ನ ATM ದುಡ್ಡು ಕೊಡಲ್ಲಾಂತ' ಎನ್ನುತ್ತಾ ತನ್ನ ಮಾತುಗಳೆಂದೂ ಸುಳ್ಳಾಗದು ಎಂದು ಬೀಗುತ್ತಿದ್ದ ನನ್ನ ಮನಸ್ಸನ್ನು ಕಂಡು ಪೆಚ್ಚೆನಿಸಿತು. ಅಲ್ಲಿಂದ ಮುಂದಿರುವ ಐಸಿಐಸಿಐ ಬ್ಯಾಂಕ್ ನ ATM ಗೆ ಹೋದೆ. ಇದು ರಶೀದಿಗೆ ಮಾಫಿ ಕೇಳಿತಾದರೂ ದುಡ್ದನ್ನಂತೂ ಕೊಟ್ಟಿತು. ತಿರುಗಿ ಬಂದು ಕೆನರಾ ಬ್ಯಾಂಕ್ ಬಳಿಯ ಮಹಾದ್ವಾರವೊಂದರ ಬಳಿ ಬರಲಿರುವ ಗಾಡಿಗಾಗಿ ಕಾಯುತ್ತಾ ನಿಂತೆ. ಯಂತ್ರಗಳಿಗಿಂತ ಮನುಷ್ಯನನ್ನು ನಂಬಿದ್ದಕ್ಕೆ ನನಗೆ ಸಿಕ್ಕಿದ್ದು ಈ ಕಾಯುವಿಕೆ ಎಂಬ ಬಹುಮಾನ. ಈ ಬಹುಮಾನ ನೋಡಿ ನನ್ನ ಫೋನೂ ನಕ್ಕಿರಬೇಕು, 'ನನ್ನ ಅನುಮಾನಿಸಿದ ಕರ್ಮವನ್ನನುಭವಿಸು' ಎನುತ್ತಿತ್ತೇನೋ, ನನಗಂತೂ ಅದಕ್ಕೆ ಮುಖ ತೋರಿಸಲೂ ಮನ ಬಾರದೆ ಕೈಗದಡಿಯಾರದಲ್ಲೇ ಆಗಾಗ ಸಮಯ ನೋಡುತ್ತಾ ಕುಳಿತೆ.

      ಆದರೆ ಒಂದು ವಿಷ್ಯ ಹೇಳ್ತೀನಿ ಕೇಳಿ, ನೀವು ಸ್ವಸಮರ್ಥನೆ ಎಂದರೂ ಸರಿಯೇ. ನಾನೇನೂ ಸುಖಾ ಸುಮ್ಮನೆ ನನ್ನ ಫೋನನ್ನು ಅನುಮಾನಿಸಿದ್ದಲ್ಲ. ಆದರೆ ಆ ಅನುಮಾನಕ್ಕೆ ಪೂರ್ತಿ ಹೊಣೆ ನನ್ನ ಫೋನೊಂದೇ ಅಲ್ಲ, ನನ್ನ ಬಗ್ಗೆ ತೀರ ಕಾಳಜಿ ವಹಿಸುವ Customer Care ನವರೂ ಹೌದು. ಎಷ್ಟೋ ಸಾರಿ ನನ್ನ ಫೋನು Signal ತೋರಿಸುತ್ತಿದ್ದರೂ ನನ್ನ ಫೋನು Switch Off ಎಂದೋ , ವ್ಯಾಪ್ತಿ ಪ್ರದೇಶದ ಹೊರಗಿದ್ದಾರೆಂದೋ ಸುಳ್ಳು ಹೇಳಿದುದುಂಟು. ಈ ಬಗ್ಗೆ ಸ್ನೇಹಿತರು ನನ್ನಲ್ಲಿ ದೂರಿದಾಗ ನಾನು ಫೋನಿನ ಮುಖ ನೋಡದಿದ್ದರಾದೀತೇ? ಈ ಸಂದರ್ಭಗಳಲ್ಲಿ Customer Care ನವರು ಸುಳ್ಳಾಡಿದ್ದರೂ ನನಗೆ ಅವರ ಮೇಲೇ ಹೆಚ್ಚು ನಂಬಿಕೆ. ಇದಕ್ಕೆ ಮತ್ತೊಂದು ಕಾರಣ ಏನಂದ್ರೆ 'ಫೋನು proxy signal ತೋರಿಸ್ತಿದ್ರೆ' ಅನ್ನುವ ಒಂದು ಅನುಮಾನ ನನ್ನ ಮನಸ್ಸಿಗೆ ಫೋನಿನ ಮೇಲಿರುವುದು.

      ಇಷ್ಟೆಲ್ಲಾ ಆದರೂ ಇನ್ನೂ ನಮ್ಮ ಮೋಟಾರಂತೂ ಬಂದಿಲ್ಲ. ನಾನು ಅಲ್ಲೇ ಸಮೀಪದ ಬೀದಿ ದೀಪವೊಂದರ ಕೆಳಗೆ ಕಾರಂತಜ್ಜನೊಂದಿಗೆ ಹರಟುತ್ತಾ ಕುಳಿತೆ. ಈ ಶತಮಾನದ  ವಿಶ್ವೇಶ್ವರಯ್ಯನಾಗಲಿಲ್ಲವಾದರೂ ಬೇಸರವಾದರೂ ಕಳೆದೀತು ಅಂತ. ತಮ್ಮ ಹುಚ್ಚು ಮನಸ್ಸಿನ ಹತ್ತು ಹಲವಾರು ಮುಖಗಳ ಬಗ್ಗೆ ಅವರು ಹೇಳುತ್ತಾ ಹೋದರು. ನಾನಂತೂ ಕಾಣದ ಅವರ ಜೀವವನ್ನ, ಜೀವನವನ್ನ ಕಣ್ಣಲ್ಲಿ ಸೆರೆಹಿಡಿಯುವ ಮನದಲ್ಲಿ ಅನುಭವಿಸುವ ಪ್ರಯತ್ನದಲ್ಲಿದ್ದೆ. ಕೆಲವೊಂದೆಡೆ ನನ್ನನ್ನು ತಡೆದು 'ಅವರ ಹುಚ್ಚು ಮನಸ್ಸಿನಂತೆಯೇ ಆಲ್ವಾ ನಾನು ?' ಎಂದು ನನ್ನ ಮರುಳು ಮನಸ್ಸು ಕೇಳುತ್ತಿತ್ತು. ಮತ್ತೊಮ್ಮೆ ಅದಕ್ಕೆ ಬಯ್ಯುವ ಮನಸ್ಸಾಗಲಿಲ್ಲ. ನಕ್ಕು ಸುಮ್ಮನಾದೆ.

ಭಂಡಾರಧಾರ ಪ್ರವಾಸ ಕಥನ.. : ಅಧ್ಯಾಯ ೪

ವಿಲ್ಸನ್ ಅಣೆಕಟ್ಟು; ಆರ್ಥರ್ ಸರೋವರ..
      ನೇಸರನು ಮೇಲೆ ಹರಿದು, ಮಂಜು ಸರಿಸುವ ಮೊದಲೇ ಕಸಾರದ ಹಸಿರನ್ನು ಉಸಿರಲ್ಲಿ ತುಂಬಿಕೊಂಡು ಮುನ್ನಡೆದೆವು. ದಾರಿಯುದ್ದಕ್ಕೂ ಬೆಟ್ಟದ ಸಾಲುಗಳನ್ನು ನೋಡುತ್ತಾ ಪಯಣ ಸಾಗಿತು. ಮುಂದಿನ ನಿಲ್ದಾಣ ವಿಲ್ಸನ್ ಅಣೆಕಟ್ಟು. ಮತ್ತೆ ಆರ್ಥರ್ ಸರೋವರ. ಇದು ನಾವು ಅಂದುಕೊಂಡಿದ್ದು. ಹೋಗಿ ನೋಡಿದರೆ ಇವೆರಡೂ ಒಂದೇ ನಾಣ್ಯದ ಎರಡು ಮುಖಗಳು. ಒಂದು ಆಣೆಕಟ್ಟು ಹರಿದು ಬರುವ ನೀರಿಗೆ ಮುಂದೆ ಸಾಗದಂತೆ ಅಡ್ಡ ನಿಂತು, ತನ್ನಲ್ಲಿ ಜಮಾ ಆದ ನೀರಿನಿಂದ ಒಂದಿಷ್ಟು ವಿದ್ಯುತ್ತು ಉತ್ಪಾದನೆಯಾಗಿ, ನಾಲ್ಕಾರು ಕತ್ತಲ ಮನೆಗಳಲ್ಲಿ ಸಂತೋಷವನ್ನು ಬೆಳಗುವುದು ಅಥವಾ ಜಮೆಯಾದ ನೀರು ಕೆಲವು ರೈತರ ಹೊಲಗಳಲ್ಲಿ ಹರಿದು ಕೃಷಿಗೆ ನೆರವಾಗಿ, ಅವರ ಬದುಕಲ್ಲಿ ಖುಷಿಯ ಪೈರು ಬೆಳೆಸುವುದು. ಆದರೆ ಬಹುತೇಕ ಲಾಭ ಒಬ್ಬರಿಗೆ ನಷ್ಟವಾದಾಗ ಮಾತ್ರ ಸಾಧ್ಯ ಅಲ್ಲವೇ? ಇದೇ ರೀತಿ ಆ ಆಣೆಕಟ್ಟು ತನ್ನ ವಿಸ್ತಾರವನ್ನು ಹೆಚ್ಚಿಸಲಿಕ್ಕಾಗಿ ಸುತ್ತಮುತ್ತಲಿನ ತಗ್ಗು ಪ್ರದೇಶಗಳನ್ನು ನುಂಗಿ ಬಿಡುವುದೂ ಉಂಟು. ಎಷ್ಟಾದರೂ ಬಗ್ಗಿದವನಿಗೆ ಒಂದು ಗುದ್ದು ಹೆಚ್ಚು. ಹೀಗೆ ಎದೆಯುಬ್ಬಿಸಿ ನಿಂತ ಆಣೆಕಟ್ಟು ಒಂದಾದರೆ, ಅದರ ಹಿನ್ನೀರೇ ಆರ್ಥರ್ ಸರೋವರ. ಮೊದಲಿಗೆ ಆ ಸರೋವರದಲ್ಲಿ ಕುಣಿಯುತ್ತಿದ್ದ ಅಲೆಗಳನ್ನು ನೋಡಿ ಒಂದು ನದಿಯೇನೋ ಅಂದುಕೊಂಡಿದ್ದೆ. ಆದರೆ ಈಗ ನಿಜ ವಿಷಯ ತಿಳಿದಿರುವುದರಿಂದ ಇನ್ನು ಮುಂದೆ ಅದನ್ನ ಸರೋವರ ಎಂದೇ ಕರೆಯೋಣ.

      ಸುತ್ತಲ ನೋಟ, ಬೀಸಿ ಬರುತ್ತಿದ್ದ ಗಾಳಿ, ತುಂಬಿ ಹರಿಯುತ್ತಿದ್ದ ಸರೋವರ ಎಲ್ಲಾ ಒಂದಾಗಿ ಅಲ್ಲೊಂದು ಸುಂದರ ವಾತಾವರಣ ಸೃಷ್ಟಿಯಾಗಿತ್ತು. ಆದರೆ ಇದರ ಅನುಭವ ನಮ್ಮ ನಂತರ ಬಂದವರಿಗೆ ಅಷ್ಟೊಂದು ಅನುಭವವಾಗಿರಲಿಕ್ಕಿಲ್ಲ. ಯಾಕಂದ್ರೆ ಅದಾಗಲೇ ಅಲ್ಲಿ ನಮ್ಮ ಕಪಿ ಚೇಷ್ಟೆ ಶುರುವಾಗಿತ್ತಷ್ಟೇ. ಈ ವರ್ಷ ಇಷ್ಟರಲ್ಲಾಗಲೇ ಎಲ್ಲೆಡೆ ಮಳೆ ಹೆಚ್ಚಾಗಿದ್ದರೂ ಇಲ್ಲಿಯ ಸರೋವರದಲ್ಲಿ ಅಷ್ಟೊಂದು ನೀರಿರಲಿಲ್ಲ. ಆದರೆ ಜೋರಾಗಿ ಬೀಸಿ ಬರುತ್ತಿದ್ದ ಗಾಳಿಯಿಂದಾಗಿ ಅಲೆಗಳು ಒಂದರ ಬೆನ್ನೇರಿ ಒಂದು ಬರುತ್ತಿದ್ದವು. ಆದರೂ ನಾವು ಅವುಗಳ ಕೆಳಗೆ ನುಗ್ಗುವಷ್ಟು ಎತ್ತರಕ್ಕೇನೂ ಏರಿರಲಿಲ್ಲ ಬಿಡಿ. ಇದರೊಂದಿಗೆ ಅಲ್ಲಿ ನೀರಿಗಿಳಿಯದಂತೆ ನಮ್ಮನ್ನು ತಡೆಯಲೂ ಯಾರೂ ಇರದ್ದರಿಂದ ಉತ್ಸಾಹ ಉತ್ತುಂಗಕ್ಕೇರಿತ್ತು. ಹಾಗೇ ನೀರಿನಲ್ಲಿ ಕಾಲೆಳೆಯುತ್ತಾ ಒಂದೆರಡು ಮಾರು ಸಾಗಿದೆ. ಇನ್ನೂ ಚೂರು ಮುಂದೆ ಅಳತೆಗೋಲು ಮೂರು ಅಡಿ ಎತ್ತರದವರೆಗೂ ನೀರಿದೆ ಎಂದು ಹೇಳುತ್ತಿತ್ತು. ಅದರ ಮುಂದಿದ್ದ ಇನ್ನೊಂದು ಎಷ್ಟು ಹೇಳುತ್ತಿತ್ತು? ಕಾಣಲಿಲ್ಲ, ಕೇಳಲಿಲ್ಲ. ಈ ನಡುವೆ ಜೊತೆಗಿದ್ದ ಅಭಿಷೇಕ್ ಒಂದಿಷ್ಟು ಹೆದರಿಸಿದ. ಮುಂದೆ ಹೋಗಬೇಕೆಂದಿದ್ದ 'ಛತ್ರಿ ಜಲಪಾತ'(Umbrella Falls)ದಲ್ಲಿ ನೀರಿಲ್ಲದಿದ್ದರೆ ಅನ್ನೋ ಅನುಮಾನ ಅದು. ನೀರಿನ ತಾಣಕ್ಕೆ ಬಂದು ಅಡಿಯಿಂದ ಮುಡಿತನಕ ನೆನೆಯದೇ ಹೋದರೆ ಹೋಗಿ ಬಂದ ಖುಷಿಯೇ ಮೂಡದು. ನೀವಿದನ್ನ ಯಾವ ನೆನೆಯುವಿಕೆಯ ಅರ್ಥದಲ್ಲಿ ಕೊಂಡರೂ ಸರಿಯೇ.

      ಇದೇ ಮನಸ್ಸಿಂದ ನೀರಿನಲ್ಲಿ ಎರಡು ಮುಳುಗು ಹಾಕಿ ಎದ್ದೆ. ಇನ್ನೂ ಒಂದಿಷ್ಟು ಹಾಕುತ್ತಿದ್ದೆನೇನೋ.! ಆದರೆ ಅಷ್ಟರಲ್ಲೇ ನನ್ನ ಕೊರಡು ದೇಹಕ್ಕೇನಾದರೂ ಆದರೆ ಎಂಬ ಭಯ ಬಿದ್ದು; ಭಯವಲ್ಲವಂತೆ, ಕಾಳಜಿಯಂತೆ ಅದು. ಮೊದಲಿಗೆ ಆಕೆ care ಎಂದು ಕೂಗಿದ್ದು scare ಎಂದಂತೆ ಕೇಳಿ, ಎರಡೆರಡು ಬಾರಿ ಆಕೆ ಅದನ್ನೇ ಹೇಳಿದರೂ, ನನ್ನ ಕಿವಿಗಳನ್ನು ಎಷ್ಟೇ ಅರಳಿಸಿದರೂ, ಸರಿಯಾಗಿ ಕೇಳಿಸದೇ ಹೋಗಿ, ಕೊನೆಗೆ ಕನ್ನಡದಲ್ಲಿ 'ಕಾಳಜಿ' ಅಂತ ಹೇಳಿದಾಗ ಕಿವಿಗೆ ಕೇಳಿಸಿತು. ಬುದ್ಧಿಗೆ ಅರ್ಥವಾಯ್ತು. ಆ ಕಾಳಜಿಯಿಂದಾಗಿ ನನ್ನ ಸಾಹಸವನ್ನು ನಿಲ್ಲಿಸಬೇಕಾಗಿ ಬಂತು. ನಮ್ಮ ಮನಸ್ಸು ಯಾವುದರಲ್ಲಿ ಖುಷಿ ಕಾಣುತ್ತೆ ಅಂತ ತಿಳಿಯದೆಯೇ, ಒದಗಬಹುದಾದ ಆಪತ್ತಿನ ಬಗ್ಗೆಯೇ ಯೋಚಿಸಿದ್ದೇ ಆದರೆ ಅಲ್ಲಿ ಎಂದೂ ಸಂತೋಷದಿಂದ ಬದುಕುವುದು ಸಾಧ್ಯವಿಲ್ಲ. ಹಾಗಂತ ನನ್ನ ಮರುಳು ಇನ್ನೊಬ್ಬರ ಆತಂಕಕ್ಕೆ ಕಾರಣವಾಗಲೂಬಾರದು. ಈ ಕಾರಣಕ್ಕಾಗಿ ನೀರಿಂದ ಹೆಜ್ಜೆ ಹಿಂದಿಡಬೇಕಾಯ್ತು. ಬಳಿಕ ನೀರಿನಲ್ಲಿ ಕಲ್ಲೆಸೆಯುವ ಸ್ಪರ್ಧೆ ಶುರುವಾಯ್ತು. ಬಹಳ ದೂರ ಯಾರು ಎಸೀತಾರೆ ಅಂತ. ನಾನು ಮಾತ್ರ ಎಸೆಯಲು ಹೋಗಲಿಲ್ಲ. ಎಲ್ಲರೂ ಕಲ್ಲು ಎಸೆದು ಸರೋವರದಲ್ಲಿ ನೀರಿನ ಮಟ್ಟ ಹೆಚ್ಚಾಗಿಬಿಟ್ಟರೆ ಅಂತ.

      ನಾವು ಹೋದಲ್ಲೆಲ್ಲೂ ಕಪಿಗಳ ಹಾವಳಿ ಇರಲಿಲ್ಲ. ಮನಸ್ಸಿನಿಂದ ಮಾನವ ಇಲ್ಲವೇ ಮನುಷ್ಯ ಎಂಬುದಕ್ಕಿಂತಲೂ, ಮಂಗನಿಂದ ಮಾನವ ಎನ್ನುವುದನ್ನ ಗಾಢವಾಗಿ ನಂಬಿರುವ ನಾವೇ ಅವುಗಳ ಪಾತ್ರವನ್ನೂ ವಹಿಸಿದೆವು. ಮರ ಹತ್ತಿ ಕುಳಿತೆವು, ಕೆಮರಾ ನೋಡಿ ಹಲ್ಕಿರಿದೆವು. ನಿಜವಾಗಿ ಕೋತಿಗಳೇನಾದರೂ ಅಲ್ಲಿ ಇದ್ದಿದ್ದೇ ಆದರೆ ನಾಚಿ ಮರೆಗೆ ಸರಿಯುತ್ತಿದ್ದವೇನೋ!?. ಕಡೆಗೆ ನಿಮಗೆಲ್ಲರಿಗೂ ಗೊತ್ತಿರುವಂತೆ, ಇಂದಿನ ಬಹುತೇಕ ಯುವಜನತೆಗೆ ಮಹಾತ್ಮಾ ಗಾಂಧೀಜಿಯವರ ಬಗ್ಗೆ ಎಂಥದೇ ದ್ವೇಷ ಇದ್ದರೂ, ತಪ್ಪಿ ಪ್ರೀತಿಯಿದ್ದರೆ ಅದಕ್ಕಿಂತಲೂ ಸ್ವಲ್ಪ ಹೆಚ್ಚೇ ಪ್ರೀತಿ; ಅವರದ್ದೆಂದು ಕರೆಯಲ್ಪಡುವ ಮೂರು ಮಂಗಗಳ ಮೇಲೆ. ಹಾಗಾಗಿ ಅವುಗಳಂತೆ ಕುಳಿತು ಫೋಟೋಗೆ ಪೋಸು ಕೊಟ್ಟಿದ್ದೂ ಆಯ್ತು. ನಮ್ಮಲ್ಲಿ ಸ್ವಲ್ಪ ಲೆಕ್ಕ ತಪ್ಪಾಗಿರಲೂಬಹುದು. ಹಾಗಾಗಿ ಮೂರಕ್ಕಿಂತಲೂ ಹೆಚ್ಚಿಗೆ ಇದ್ದೆವೋ ಏನೋ. ಕಣ್ಣು ಮುಚ್ಚಿಕೊಂಡಿದ್ದ ಮಂಗಕ್ಕೆ ಹೇಗೂ ಗೊತ್ತಿರಲಿಕ್ಕಿಲ್ಲ. ಫೋಟೋ ತೆಗೆದಾತ ಎಣಿಸುತ್ತಾ ಕೂತಿರಲಿಕ್ಕಿಲ್ಲ. ಉಳಿದವುಗಳು ಕತ್ತು ತಿರುಗಿಸಿ ನೋಡಹೋಗಿ,
ಮರದಿಂದ ಕೆಳಗೆ ಬಿದ್ದು, ಲೆಕ್ಕದಲ್ಲಿ ತಾವೇ ಕಡಿಮೆಯಾದರೆ ಎಂಬ ಭಯದಿಂದಲೇ ಸುಮ್ಮನಿದ್ದವು. ದಿನದ ಬಹುಪಾಲು ಬಾಯಿ ಮುಚ್ಚಿಕೊಂಡೇ ಇದ್ದ ನಾನು, ಇಲ್ಲಿ ಅಧಿಕೃತವಾಗಿ ಬಾಯಿಗೆ ಕೈ ಅಡ್ಡ ಇಟ್ಟುಕೊಂಡು ಕುಳಿತೆ.

      ಒಂದಿಷ್ಟು ಫೋಟೊಗಳನ್ನ ಕ್ಲಿಕ್ಕಿಸಿ ಆದ ಮೇಲೆ ಮುಂದೆ ಸಾಗಿದ್ದು ಜಲಪಾತವನ್ನರಸಿ. ಆ ಕಥೆ ಮುಂದಿನವಾರ.

ಭಂಡಾರಧಾರ ಪ್ರವಾಸ ಕಥನ.. : ಅಧ್ಯಾಯ ೭


ಮರಳಿ ಗೂಡಿಗೆ :

      ಅಬ್ಬಬ್ಬಾ..!!​ ೨ ರೋಟಿ ತಿಂದು ಬರಲು ಇಷ್ಟು ಹೊತ್ತೇ ? ಇವನದೇನು ಬಕಾಸುರನ ಹೊಟ್ಟೆಯೇ ಎಂದು ತಿಳಿಯಬೇಡಿ. ಒಂದು ದಿನದ ಅನುಭವವನ್ನು ನಿಮ್ಮ ಮುಂದಿಡಲು ಸುಮಾರು ೨ ತಿಂಗಳು ಹಿಡಿಯುತ್ತಾ ಬಂತು. ಹೀಗಿರುವಾಗ ಕಳೆದ ವಾರ ಊಟಕ್ಕೆ ಹೋದವ ಈ ವಾರ ಮರಳಿ ಬರುವುದರಲ್ಲೇನು ತಪ್ಪು ? ಆದರೆ ಒಂದು ವಿಚಾರ ಕೇಳಿ, ಬಕಾಸುರನಿಗಾಗಿ ಬಂಡಿ ಭೋಜನ ಕೊಂಡೊಯ್ದುದು ಅವನೊಬ್ಬನೇ ತಿನ್ನುತ್ತಿದ್ದನೋ, ಅವನ ಪರಿವಾರದವರೆಲ್ಲಾ ತಿನ್ನುತ್ತಿದ್ದರೋ ಕಂಡು ಹೇಳಿದವರಿಲ್ಲ. ಆದರೆ ಅವನಿಗೆಂದು ಕೊಂಡೊಯ್ದ ಅಷ್ಟೂ ಭಕ್ಷ್ಯ ಭೋಜ್ಯಗಳನ್ನು ಒಬ್ಬನೇ ತಿಂದ ಭೀಮನ ಹೊಟ್ಟೆಯೇ ದೊಡ್ಡದೇನೋ ಅಂತ ನನ್ನ ಅಭಿಪ್ರಾಯ. ಇನ್ನು ಬಕಾಸುರ ಒಬ್ಬನೇ ತಿನ್ನುತ್ತಿದ್ದ, ಬರೀ ಭಕ್ಷ್ಯ ಭೋಜ್ಯಗಳಷ್ಟೇ ಅಲ್ಲದೆ ಗಾಡಿಗೆ ಕಟ್ಟಿದ ಪಶುಗಳನ್ನೂ, ಗಾಡಿಯನ್ನೊಯ್ದ ಮಾನವನನ್ನೂ ತಿನ್ನುತ್ತಿದ್ದುದರಿಂದ ಅವನದೇ ದೊಡ್ಡ ಹೊಟ್ಟೆ ಎಂದು ನೀವು ಹೇಳಿದರೂ ನನ್ನ ತಕರಾರಿಲ್ಲ. ನಮ್ಮ ನಮ್ಮ ಹೊಟ್ಟೆ ತುಂಬುವಷ್ಟೋ, ಅದಕ್ಕೆ ಸ್ವಲ್ಪ ಕಮ್ಮಿಯೋ (ಆಮೇಲೆ ತಿಂದಿದ್ದು ಹೊರಬರಬಾದೆಂಬ ಮುನ್ನೆಚ್ಚರಿಕೆಯಿಂದ) ತಿಂದು ಅಲ್ಲಿಂದ ಹೊರಟಿದ್ದಾಯ್ತು.

      ಇನ್ನು ಮುಂದೆ ಯಾವುದೇ ನಿಲ್ದಾಣಗಳಿಲ್ಲ. ಬೆಳಿಗ್ಗೆಯ ನಮ್ಮ ಆರಂಭಿಕ ಸ್ಥಾನವೇ ನಮ್ಮ ಗಮ್ಯಸ್ಥಾನವೂ ಆಗಿತ್ತು. ಮತ್ತೆ ಎಲ್ಲ ತಮ್ಮ ತಮ್ಮ ಕಥೆಗಳನ್ನುಸುರುವುದರಲ್ಲಿ ಮಗ್ನರಾದರು. ಬೇಡ ಎಂದರೂ ಕೇಳಿ ಬಂದ ಒಂದೆರಡು ಸಾಲುಗಳಿಂದ ತಿಳಿದುದೇನೆಂದರೆ ಈ ಕಥೆಗಳು ಯಾವುದೇ ಸಿನಿಮಾ ಕಥೆಗಳಿಗೂ ಕಮ್ಮಿಯಿರಲಿಲ್ಲ. 'ಈಗಿನ ಸಿನಿಮಾಗಳಲ್ಲಿ ಕಥೆ ಎಲ್ಲಿರುತ್ತದೆ?' ಅಂತೇನಾದ್ರೂ ನೀವು ಕೇಳಿದ್ರೆ ನನ್ನತ್ರ ಉತ್ತರ ಇಲ್ಲ. ಮುಂದೆ ಮಹಾನಗರಿಯಿಂದ ಹೊರಬೀಳುವುದೆಂದೆಂದು ಖಾತ್ರಿಯಿಲ್ಲದ್ದರಿಂದ ಬಂದ ಸಮಯವನ್ನ ಸದುಪಯೋಗಪಡಿಸಿಕೊಳ್ಳುವ ಸಲುವಾಗಿ ಕಿಟಕಿಯಿಂದ ತಲೆ ಹೊರಹಾಕಿಕೊಂಡು ಕುಳಿತೆ. ಈಗ ನನ್ನ ಕಿವಿಗಳಿಗೆ ಕೇಳುತ್ತಿದ್ದುದು ಗಾಳಿಯದೊಂದೇ ಸದ್ದು.

      ಈಗೀಗ ನಮ್ಮ ರಥದ ಸಾರಥಿಗೂ ಏನೋ ಸ್ಫೂರ್ತಿ ತುಂಬಿದಂತಿತ್ತು. ಬಹಳ ವೇಗವಾಗಿ ಗಾಡಿಯನ್ನೋಡಿಸುತ್ತಿದ್ದ. ಅಷ್ಟೆಯೋ, ಅದಕ್ಕಿಂತಲೂ ಸ್ವಲ್ಪ ಹೆಚ್ಚೋ ವೇಗವಾಗಿ ಬೀಸುವ ಗಾಳಿ. ಬೆಳಿಗ್ಗೆ ನನ್ನ ಮುಂದೆ ಸೋತು ಹೋಗಿದ್ದ ವರುಣ ಈಗ ಮರುತ್ತನನ್ನು ಕಳಿಸಿದ್ದ. ಜೋರಾಗಿ ಬೀಸುವ ಗಾಳಿಗೆ ಕಣ್ಣು ಕಿತ್ತು ಬಂದಂತೆನಿಸಿದರೂ ಎವೆ ಮುಚ್ಚದೆ ಕುಳಿತೆ. ಆದರೂ ಸ್ವಲ್ಪ ಹೊತ್ತಿನಲ್ಲಿ ಸೋಲು ನನ್ನದಾಯ್ತು. ಒಂದು ಕ್ಷಣ ಸುಧಾರಿಸಿಕೊಂಡು ಮತ್ತೆ ಪಂಥ ಒಡ್ಡಿದೆ. ಮತ್ತದೇ ಫಲಿತಾಂಶ. ಹೀಗೆ ನಾಲ್ಕೈದು ಪಂದ್ಯಗಳಾಗಿ, ಅಷ್ಟರಲ್ಲೂ ನಾನು ಸೋತ ಖುಷಿಯಿಂದ ಮರುತ್ತ ಮರಳಿದ. ನಮ್ಮ ಗಾಡಿ ಕೂಡ ನಿಧಾನಗೊಂಡಿತ್ತು. ನಾವು ಮಹಾನಗರಿಯಲ್ಲಿ ಕಾಲಿಟ್ಟಾಯ್ತು ಅಂತ ಬಿಡಿಸಿ ಹೇಳೋದು ಬೇಡ ತಾನೇ!?

      ಈಗ ಮತ್ತೊಮ್ಮೆ ಎಲ್ಲರೊಂದಿಗೆ Dumb Charades ಆಟದಲ್ಲಿ ನಾನೂ ಒಂದಾದೆ. ಸ್ವಲ್ಪ ಹೊತ್ತಿನ ಆಟ ಎಲ್ಲರಿಗೂ ಬೇಜಾರಾಗಿ ಏನೇನೋ ಮಾತುಕತೆಯಲ್ಲಿ ಲೀನರಾದರು. ನಾನು ಪೂರ್ತಿ ದಿನದ ಪುಟಗಳನ್ನು ತಿರುವಿ ಹಾಕುತ್ತಿದ್ದೆ.

ಕೊನೆಯ ಮಾತು (ಬೆನ್ನುಡಿ):

      ಮನಸ್ಸು ದಣಿವರಿಯದಿದ್ದರೂ, ದೇಹ ಅರಿತಿತ್ತು. ೯ : ೧೫ ರ ಸುಮಾರಿಗೆ ಜೆ.ಬಿ.ನಗರ ತಲುಪಿದವನೇ ಕೋಣೆಗೆ ಹೋಗಿ, ಹೊತ್ತೊಯ್ದ ಚೀಲವನ್ನಿಟ್ಟು ರಾತ್ರಿಯ ಊಟಕ್ಕೆ ಎಲ್ಲರನ್ನೂ ಕೂಡಿಕೊಂಡೆ. ಆದಿತ್ಯ, ದಿವಾಯ್ ಇಬ್ಬರಿಗೂ ಮನೆಯಲ್ಲಿ ಊಟ ಕಾಯುತ್ತಿತ್ತಂತೆ, ಅದಕ್ಕೆ ಅವರು ಹೊರಟರು. ನಾನೋ, ಮನೆಗೆ ಬರುವ ಊಟಕ್ಕೆ ಇಂದು ಬರದಿರಲು ಮೊದಲೇ ತಿಳಿಸಿದ್ದೆ. ಎಲ್ಲರೂ ಊಟ ಮುಗಿಸಿ ಅವರವರ ಮನೆ ಕಡೆಗೆ ಸಾಗಿದ್ದಾಯ್ತು.

      ಸಾಮಾನ್ಯವಾಗಿ ಅವರಿವರೊಂದಿಗೆ ಅಷ್ಟಾಗಿ ಬೇರೆಯದಿದ್ದರೂ, ಪ್ರವಾಸಕ್ಕೆ ಆಹ್ವಾನಿಸಿ, ಕರೆದೊಯ್ದ ಎಲ್ಲರಿಗೂ ಮನದಲ್ಲೇ ಧನ್ಯವಾದಗಳನ್ನು ಸಲ್ಲಿಸುತ್ತಾ, ನನ್ನಿಂದ ಎಲ್ಲಾದರೂ ಅವರ ಸಂತೋಷಕ್ಕೆ ಭಂಗ ಬಂದಿದ್ದಲ್ಲಿ ಅವರಲ್ಲಿ ಕೇಳಬೇಕಾದ ಕ್ಷಮೆಯನ್ನ ನನ್ನಲ್ಲೇ ಕೇಳಿಕೊಳ್ಳುತ್ತಾ, ಇಡೀ ದಿನವನ್ನ ಮೆಲುಕು ಹಾಕುತ್ತಾ ಮಲಗಿದೆ. ಬೆಳಿಗ್ಗೆಯಿಂದ ಕಣ್ಣೆವೆ ಮುಚ್ಚಿದ್ದು ತೀರಾ ಕಡಿಮೆ ಎಂಬ ನೆನಪಾಗಿ ಬೇಗನೆ ಮುಚ್ಚಿಕೊಂಡೆ.

      ಈಗ ಮತ್ತೆ ನನ್ನ ಮನಸ್ಸು ಮಾತನ್ನಾಡಲು ಶುರುಮಾಡಿತ್ತು. ಬೆಳಿಗ್ಗೆ ಅದಕ್ಕೆ ಮರುಳೇ ಎಂದು ಬಯ್ದಿದ್ದರ ಸೇಡು ತೀರಿಸಿಕೊಳ್ಳಲು ಕಾದಂತಿತ್ತು. "ನಿನ್ನೆ ರಾತ್ರಿ ಕಂಡ ನನ್ನ ಕನಸು ನನಸಾಯ್ತು, ಈಗಲಾದರೂ ನಾನು ಮರುಳಲ್ಲ; ನೀನೇ ಮರುಳು ಅಂತ ಒಪ್ಪಿಕೋ" ಎಂದು ದಬಾಯಿಸುತ್ತಿತ್ತು. "ನಾನು ಮರುಳಲ್ಲ, ನೀನೇ ಮರುಳು" ಎಂದಂದು ನಸುನಗುತ್ತಾ ನಿದ್ರೆ ಹೋದೆ.

      ಇಷ್ಟರವರೆಗೂ ನಿಮಗೆ ತೋರಿಸದಿದ್ದ ನನ್ನ ಸಹೋದ್ಯೋಗಿಗಳ ಮುಖಗಳು ಇಲ್ಲಿವೆ. ಅವರ ಅಪ್ಪಣೆ ಕೇಳದೆ ಪ್ರಕಟಿಸಿದ್ದು.

ಭಂಡಾರಧಾರ ಹೋಗಿ ಬಂದ ತಂಡ (ಮುಂದಿಂದ ಹಿಂದಕ್ಕೆ.)
ಎಡ ಪಂಕ್ತೀಯರು: ದಿವಾಯ್,ಅಪೂರ್ವಾ,ನಾನು,ಅಭಿಷೇಕ್,ನಿರಂಜನ್
ಬಲ ಪಂಕ್ತೀಯರು:  ರುಚಿಕಾ,   ಆದಿತ್ಯ,   ಪವನ್,    ಮಧು,   ದಿವ್ಯಾ

Happy ಹೋಳಿ Day : ಭಾಗ ೧

   ಬಣ್ಣಗಳ ಹಬ್ಬ ಹೋಳಿ. ಪ್ರತಿಯೊಂದು ಹಬ್ಬವೂ ತನ್ನದೇ ವೈಶಿಷ್ಟ್ಯಗಳಿಂದ ಜನಮನದ ರಂಗೇರಿಸುವುದುಂಟಾದರೂ ಈ ವಿಷಯದಲ್ಲಿ ಹೋಳಿ ಹಬ್ಬ ಇನ್ನೂ ಒಂದಿನಿತು ಮುಂದೆ ಸಾಗಿ ಜನರ ತನು-ಮನವನ್ನೂ ರಂಗೇರಿಸುತ್ತೆನ್ನಬಹುದು. ಮೈಗಂಟುವ ಬಣ್ಣಗಳಲ್ಲಿ ಲೀನವಾಗುವ ಆಶೆ ಅಷ್ಟೊಂದು ಉತ್ಕಟವಾಗಿಲ್ಲದಿದ್ದರೂ ಬಹಳ ಜನ ಒಂದೆಡೆ ಕಲೆತು ಬಣ್ಣಗಳಿಂದ ಮೈ-ಮನ ತುಂಬಿಕೊಳ್ಳುವುದನ್ನು ನನ್ನ ಕಣ್ತುಂಬಿಕೊಳ್ಳುವ ಬಯಕೆಯೊಂದಂತೂ ಇತ್ತು. ನಿತ್ಯದ ಜಂಜಾಟಗಳನ್ನು ಮರೆತು ಹಬ್ಬದ ಸಡಗರದಿಂದ ಕುಣಿಯುತ್ತಿರುವ ಅಷ್ಟೂ ಜನರಿಂದ ದೂರ ನಿಂತು, ಒಂದು ಸಾಮಾನ್ಯ ದಿನವನ್ನು ಖುಷಿಯ ಬುಗ್ಗೆಯಾಗಿ ಪರಿವರ್ತಿಸುವ ಜನರನ್ನು ನೋಡಿದ ಕಣ್ಣುಗಳು ಮನಸ್ಸಿನಲ್ಲಿ ತುಂಬುವ ಬಣ್ಣಗಳ ಮುಂದೆ ಬಾಕಿ ಎಲ್ಲ ನಿರ್ವರ್ಣ. ನೀರ್ ಬಣ್ಣ.

   ಮೊದಲಿಗೆ ನನ್ನ ರೂಮ್-ಮೇಟ್ಗಳಿಗೆಲ್ಲಾ ಅಲ್ಪ ಸ್ವಲ್ಪ ಬಣ್ಣ ಹಚ್ಚಿ ನಾನೂ ಹಚ್ಚಿಸಿಕೊಂಡು ಹೋಳಿ ಶುಭಾಶಯ ವಿನಿಮಯ ಆದ ಮೇಲೆ ಇಬ್ಬರು ಕಛೇರಿಯ ಸ್ನೇಹಿತರೊಡಗೂಡಿ, ಇನ್ನೂ ಮೂರ್ನಾಲ್ಕು ಜನ ಬಂದು ಸೇರುವ ನಿರೀಕ್ಷೆಯೊಂದಿಗೆ ಕೋಣೆಯಿಂದ ಹೊರಬಿದ್ದೆ. ಸಮೀಪದಲ್ಲಿಯೇ ಇದ್ದ ಶಾಲಾ ಆವರಣವೊಂದರಲ್ಲಿ ಸಾರ್ವಜನಿಕ ಹೋಳಿ ಹಬ್ಬ ಏರ್ಪಡಿಸಲಾಗಿತ್ತು. ಮೊದಲೇ ಸದ್ದು-ಗದ್ದಲ ಹೆಚ್ಚಿರುವ ಮುಂಬಾಯಿ ನಗರಿಯಲ್ಲಿ ಮನೆ ಮನೆಯಲ್ಲೂ ತಮಟೆ ಬಡೆದು ಅದನ್ನ ಇನ್ನೂ ಹೆಚ್ಚಿಸುವುದು ಬೇಡ ಎಂತಲೋ, ಶಹರಿನ ನಿತ್ಯದ ಬಣ್ಣ ಹೋಳಿಯ ರಂಗಿನಿಂದ ಅಳಿಸಿಹೋಗಬಾರದೆಂದೋ ಈ ವ್ಯವಸ್ಥೆ. ತಲಾ ೧೨೫ ರೂಪಾಯಿಯ ಪಾಸುಗಳನ್ನು ಕೊಂಡು ಮೂವರೂ ಒಳನುಗ್ಗಿದೆವು. ಆಯೋಜಕರೇ ಒದಗಿಸಿದ ಬಣ್ಣದ ಪಾಕೀಟುಗಳನ್ನೂ, ಒಂದೊಂದು ಬಟ್ಟೆ ತುಂಡನ್ನೂ ಎತ್ತಿಕೊಂಡು ಮುಂದೆ ನಡೆದೆವು.

   ಧ್ವನಿವರ್ಧಕದಿಂದ ಬರುತ್ತಿದ್ದ ಡ್ಹುಬ್ ಡ್ಹುಬ್ ಎಂಬ ಸದ್ದಿನ ಹಿಂದಿರುತ್ತಿದ್ದ ಎಷ್ಟೋ ಶಬ್ದಗಳು ಸ್ಪಷ್ಟವಾಗಿ ಕೇಳಿಸದೇ ಇದ್ದರೂ, ಅಲ್ಪ ಸ್ವಲ್ಪ ಕೇಳಿದರೂ ಅರ್ಥವಾಗದೇ ಇದ್ದರೂ, ಕೆಲವೊಂದು ಅರ್ಥವಾದರೂ, ಇಷ್ಟು ದಿನ ಬೇರೆ ಬೇರೆ ರಾಗಗಳಲ್ಲಿ ಕೇಳಿದ್ದ ಬಾಲಿವುಡ್ಡಿನ ಹಾಡುಗಳೆಲ್ಲ ಒಂದೇ ತಾಳದವು ಎಂಬ ಹೊಸ ಸತ್ಯವೊಂದರ ಸಾಕ್ಷಾತ್ಕಾರ ನನಗಾಗ ಆಯಿತಾದರೂ, ಇದಾವುದರ ಪರಿವೆಯೇ ಇಲ್ಲದಂತೆ ಕುಣಿಯುತ್ತಿದ್ದ ಜನಗಳ ಮಧ್ಯೆ ನಾನೂ ಹೊಕ್ಕೆ. ಸ್ನೇಹಿತರನ್ನೆಲ್ಲಿ ಬಿಟ್ಟೆ ಎಂಬ ಕಾಳಜಿ ನಿಮಗೆ ಬಂದಿದ್ದೀತು. ಆ ಜನಜಂಗುಳಿಯಲ್ಲಿ ಒಂದಾದ ಅವರ ಮನದಲ್ಲಿ ಹುಟ್ಟಿದ ಕಥೆಯನ್ನು ಕೇಳಿಯೋ, ಕಲ್ಪಿಸಿಯೋ ಬರೆಯುವ ಕಥೆಗಾರ ನಾನಲ್ಲ. ವೀಕ್ಷಕನಾಗಿ ನಿಂತ ನನ್ನ ಪಾಲಿಗೆ ಅಲ್ಲಿ ನೆರೆದ ಅಷ್ಟೂ ಜನ ಒಂದು, ಅವರ ಮಧ್ಯೆ ಇದ್ದೂ ಹೊರಗಿನಿಂದ ನೋಡುತ್ತಿದ್ದ ನಾನೊಂದು.

   ಹೆಣ್ಣು-ಗಂಡೆಂಬ ಲಿಂಗ ತಾರತಮ್ಯ ಇಲ್ಲದೆ, ಬ್ರಾಹ್ಮಣ-ಶೂದ್ರ ಎಂಬ ಜಾತಿ ಭೇದ ಇಲ್ಲದೆ, ಕಪ್ಪು ಜನರ ಬಣ್ಣ ಎಂದೂ ಬದಲಾಗದು, ಬಣ್ಣ ಬದಲಾಗುವುದು ಬಿಳಿಯ ಜನರದ್ದು ಎಂಬ ಎಷ್ಟೋ ಪೋಸ್ಟುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ಜನ ಇಂದು ಅದರ ನೆನಪೂ ಇಲ್ಲದೆ, ಇದ್ದರೂ ಅಂಥ ದೊಡ್ಡ ಮಾತುಗಳನ್ನು ಜನರ ಮುಂದೆ ವ್ಯಕ್ತಪಡಿಸಿದರೆ ಅದನ್ನೆಷ್ಟು ಜನ ಲೈಕ್ ಮಾಡಿಯಾರು, ಎಷ್ಟು ಜನ ಕಾಮೆಂಟ್ ಮಾಡಿಯಾರು ಎಂಬ ಏಕಮಾತ್ರ ಉದ್ದೇಶದಿಂದ ಬರೆದಿದ್ದು ಬೇರಾವ ಭಾವನೆಯೂ ಇರಲಿಲ್ಲ ಎಂದು ತಮ್ಮಲ್ಲೇ ತಪ್ಪೊಪ್ಪಿಕೊಂಡು, ಒಪ್ಪಿಕೊಳ್ಳುವ ಮನಸ್ಸು ಬಾರದವರು ಅದು ಆಫ್ರಿಕಾದ ನೀಗ್ರೋ ಕುರಿತು ಹೇಳಿದ್ದು, ಅಲ್ಲಿ ಹೋಳಿ ಹಬ್ಬ ಆಚರಿಸುವುದಿಲ್ಲ ಎಂಬ ಸಮಝಾಯಿಶಿ ಕೊಟ್ಟುಕೊಂಡು ಅಂತೂ ತಮ್ಮ ಚರ್ಮದ ವರ್ಣ ಭೇದ ಮರೆತು ಹೋಳಿಯ ಖುಷಿಯ ರಂಗನ್ನು ಮೆತ್ತಿ, ಮೆತ್ತಿಸಿಕೊಂಡು, ಆವರಣದ ಬದಿಯಲ್ಲಿ ಎತ್ತರಕ್ಕೆ ಕಟ್ಟಿದ್ದ ಪೈಪುಗಳಿಂದ ಕಾರಂಜಿಯಂತೆ ಚಿಮ್ಮುತ್ತಿದ್ದ ನೀರಿನಡಿಯಲ್ಲಿ ನೆನೆಯುತ್ತಾ ಕಿವಿಗೆ ಹೊಡೆದಂತೆ ಕೇಳುತ್ತಿದ್ದ ಧ್ವನಿವರ್ಧಕದ ಡ್ಹುಬ್ ಡ್ಹುಬ್ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದ ಜನರ ಖುಷಿಯಲ್ಲಿ ನಾನೂ ಒಂದಾದೆ.

   ಅಷ್ಟರಲ್ಲಿ ನನ್ನ ಕೊಠಡಿಮಿತ್ರರು, ಅವರ ಮಿತ್ರರು ಅಲ್ಲೇಜಮಾಯಿಸಿದ್ದರು. ಬೇಕಾಗಿಯೋ, ಬೇಡಾಗಿಯೋ, ನನ್ನ ಸ್ನೇಹಿತವರ್ಗ ಚಿಕ್ಕದಿತ್ತೆಂಬ ಅನಿವಾರ್ಯತೆಯಿಂದಲೋ, ಸ್ವಲ್ಪ ಹೊತ್ತಿನ ಮೊದಲು ಪರಿಚಯವೇ ಇಲ್ಲದ ನನ್ನ ಮುಖಕ್ಕೂ ಬಣ್ಣ ಹಚ್ಚಿ 'ಹ್ಯಾಪಿ ಹೋಳಿ' ಎಂದು ಶುಭ ಹಾರೈಸುವ ಮೂಲಕ 'ಎಂದಿನ ನೀನು ಇಂದು ನೀನಲ್ಲ, ನಿನ್ನ ಬಣ್ಣ ಬದಲಾಯಿಸಿದ್ದೇವೆ' ಎಂದು ಸಾರಿದ ಆ ಗುಂಪಿನಲ್ಲಿ ನಾನೂ ಒಂದಾದೆ.

   ಮಧ್ಯೆ-ಮಧ್ಯೆ ತಲೆ ಮೇಲೆ ಬೀಳುತ್ತಿದ್ದ ನೀರು ಮೈ ತುಂಬಾ ಹರಿದು ಕಾಲಬೆರಳಿನ ತುದಿ ಮುಟ್ಟುವಾಗ ಹಿತವೆನಿಸುತ್ತಿತ್ತು. ಪರ್ವತ ಶಿಖರಗಳಲ್ಲಿ ಹುಟ್ಟಿದ ನದಿ ಸಿಕ್ಕ ಸಿಕ್ಕಲ್ಲಿ ಹರಿದು ಹಲವು ನದಿಗಳೊಂದಾಗಿ ಸೃಷ್ಟಿಯಾದ ಸಾಗರವನ್ನು ಸೇರುವಂತೆ, ಹಲವರ ತಲೆಯ ಮೇಲಿಂದ ಹರಿದು ನೆಲ ತಲುಪಿದ ನೀರನ್ನು ಅದು ಸೇರುತ್ತಿತ್ತು. ವರುಣದೇವನ ಕೃಪೆ ಇಲ್ಲದಿದ್ದರೂ, ಮುಂಬಯಿ ಮಹಾನಗರ ಪಾಲಿಕೆ ಹಾಗೂ ಪಂಪುದೇವನ ದಯೆಯಿಂದ ಮಳೆ ನೃತ್ಯ (Rain Dance) ನಡೆಯಿತು. 'ಹುಯ್ಯೋ ಹುಯ್ಯೋ ಮಳೆರಾಯ'ದಿಂದ 'ಮುಂಗಾರು ಮಳೆಯೇ'ವರೆಗಿನ ಕನ್ನಡ ಗೀತೆಗಳಂತೆ ಯಾವುದೇ ಮಳೆಹಾಡು ಕೇಳಿಬರಲಿಲ್ಲವಾದರೂ, ಇತ್ತೀಚಿಗೆ ಪ್ರಖ್ಯಾತಿಗೊಂಡ 'ಪಾನಿ ಪಾನಿ' ಎಂಬೊಂದು ಗೀತೆ ತುಂಬಾ ಸಲ ಕೇಳಿ ಬಂತು. ಹನಿ ಸಿಂಗ್ ಹಾಡಿದ್ದರಿಂದ ಅದನ್ನೊಂದು ಹನಿಗವನ ಎಂದು ನೀವು ಕರೆದರೂ ನನ್ನ ಆಕ್ಷೇಪವಿಲ್ಲ.

   ಕುಣಿಯುವುದು ನನ್ನ ವೃತ್ತಿ, ಪ್ರವೃತ್ತಿ ಅಲ್ಲವಾದರೂ; ಬರಿದೇ ಮುಡಿಯ ಮೇಲೆ ಸುರಿಯುವ ನೀರ ಕೆಳಗೆ ನಿಂತು, ಅದರ ಮುಂದೆ ನನ್ನ ಆಟವೇನೂ ಸಾಗದು ಎನ್ನುವ ಅರಿವಿದ್ದರೂ ಅದನ್ನು ಮಣ್ಣ ಸೇರಗೊಡುವುದಿಲ್ಲೆಂಬ ಮನದ ಹುಚ್ಚು ಉನ್ಮಾದವೊಂದೇ ಸಾಕು ಸಂತೋಷ ಪಡಲು ಎಂಬ ಸತ್ಯ ನನಗೆ ತಿಳಿದಿದ್ದರೂ; ಅಷ್ಟನ್ನೇ ಮಾಡಿದೆನಾದರೆ ಈಗಾಗಲೇ ಕೂಡಿಕೊಂಡ ಗುಂಪಿನಿಂದ ಒದಗಬಹುದಾಗಿದ್ದ ಪ್ರಶ್ನೆಗಳಿಗೆ ಉತ್ತರಿಸುವುದಕ್ಕಿಂತ ಡ್ಹುಬ್ ಡ್ಹುಬ್ ತಾಳಕ್ಕೆ ಕುಣಿಯುವುದೇ ಒಳಿತೆನ್ನಿಸಿತು. ಸುರಿಯುವ ನೀರು ಒಮ್ಮೆ ನನ್ನ ಮುಖದ ಬಣ್ಣ ತೊಳೆದಷ್ಟು ಹೊತ್ತು ನಾನು ನಾನಾಗಿರುತ್ತಿದ್ದೆ. ಅದು ನಿಂತು ಮತ್ತೆ ಇನ್ನಾರೋ ಮುಖಕ್ಕೆ ಬಣ್ಣ ಹಚ್ಚಿದೊಡನೆ ಅವರೊಂದಿಗೆ ಕುಣಿಯುತ್ತಿದ್ದೆ. ಸುತ್ತಲ್ಲೂ ಬಣ್ಣ ಬಣ್ಣದ ಬಣ್ಣಗಳನ್ನು ಮೆತ್ತಿಕೊಂಡ ತರುಣ ತರುಣಿಯರ ದಂಡೇ ಇದ್ದರೂ, ತುಂತುರು ಹನಿಗಳಿಗೆ ಬಿಸಿಲಿನ ಮೇಲೆ ಪ್ರ್ರೀತಿಯಾಗಿ ಲಜ್ಜೆಯಿಂದ ರಂಗೇರಿ ಸೃಷ್ಟಿಯಾಗುತ್ತಿದ್ದ ಬಿಲ್ಲಿನಾಕಾರದಲ್ಲಿಲ್ಲದ ಕಾಮನಬಿಲ್ಲನ್ನು ನೋಡುತ್ತಾ ನಿಂತೆನಾದರೆ ಸುತ್ತಲ ಶಬ್ದ ಕ್ಷೀಣವಾಗಿ, ಕೇಳುವುದು ನಿಂತು ಹೋಗುತ್ತಿತ್ತು (ಅಷ್ಟು ಹೊತ್ತಿನ ಡ್ಹುಬ್ ಡ್ಹುಬ್ ಸದ್ದಿಗೆ ಕಿವಿ ಹೊಂದಿಕೊಂಡಿದ್ದರಿಂದ ಹಾಗಾಗಿದ್ದು ಎಂದು ನಿಮಗನ್ನಿಸೀತು). ಬಾಕಿ ಎಲ್ಲಾ ಮಬ್ಬಾಗಿ ಬರೀ ಏಳು ಬಣ್ಣಗಳಲ್ಲೇ ದೃಷ್ಟಿ ನೆಟ್ಟು ಹೋಗುತ್ತಿತ್ತು (ಒಂದಿಷ್ಟು ಬಣ್ಣ ಕಣ್ಣು ಹೊಕ್ಕಿದ್ದರಿಂದ ಹಾಗೆ ಕಂಡಿದ್ದು, ಬಾಯಲ್ಲೂ ಒಂದಿಷ್ಟು ಬಣ್ಣದ ನೀರು ಹರಿದಿರುವುದರಿಂದ ಬಣ್ಣ ಬಣ್ಣದ ಮಾತುಗಳು ಇಂದು ಬರುತ್ತಿವೆ ಎಂದು ನಿಮಗೆ ಕಂಡೀತು). 'ಅಷ್ಟು ಜನರ ಮುಂದೆ ನಾನೊಬ್ಬ ಭಾವುಕ ಜೀವಿ ಎಂಬೊಂದು ಸೋಗಿನ ನಾಟಕ ಆಡುತ್ತಿದ್ದೀನಾ ?' ಅಂತೊಂದು ಪ್ರಶ್ನೆ ಮನಸ್ಸಲ್ಲೇ ಮೂಡುತ್ತಿತ್ತಾದರೂ, ಉತ್ತರ ಸ್ಪಷ್ಟವಾಗುತ್ತಿತ್ತು. 'ನಾಟಕವಾದುತ್ತಿದ್ದುದು ನಿಜ. ಸ್ವಲ್ಪ ಹೊತ್ತು ಮೊದಲು, ಇನ್ನು ಸ್ವಲ್ಪ ಹೊತ್ತಿನ ಬಳಿಕ'. ಬಣ್ಣವಿಲ್ಲದ ನೀರು ನನ್ನ ಬಣ್ಣ ಕಳೆಯುತ್ತಿದ್ದಷ್ಟು ಹೊತ್ತು ನಾನು ನಾನೇ, ಮುಂದೆ ಮಂದಿಯ ಮಂದೆಯಲ್ಲಿ ಒಂದು. ಸುರಿಯುತ್ತಿದ್ದ ನೀರು ನಿಂತು ಮತ್ತೆ ಕುಣಿಯತೊಡಗಿದಾಗ ಪಕ್ಕದಲ್ಲಿದ್ದ ಹುಡುಗಿಯೊಂದರ ಸ್ಪರ್ಶವಾಗಿ ಮೈ ಜುಮ್ಮೆನ್ನಿಸಿತ್ತು.

Happy ಹೋಳಿ Day : ಭಾಗ ೨

    ಸದಾ ನಿಸರ್ಗದ ಅಷ್ಟೂ ವರ್ಣಗಳನ್ನು ನೋಡಿ ಮನ ದಣಿಯದಿದ್ದಲ್ಲಿ ತಣಿಯದಿದ್ದಲ್ಲಿ ಯಾವುದಾದರೊಂದು ಪ್ರದೇಶವನ್ನು ತನ್ನ ಪ್ರಖರ ಕಿರಣಗಳಿಂದ ಸುಟ್ಟು ಹೋಳಿಕಾ ದಹನವನ್ನೂ, ಅದರ ಪ್ರತಿಫಲವಾಗಿ ಒದಗುವ ಬೂದಿಯ ಬೂದು ಬಣ್ಣ, ಸುಟ್ಟ ಜಾಗದ ಕರಕಲಿನ ಕರಿ ಬಣ್ಣ, ಸ್ವಲ್ಪ ಶಾಖ ತಗುಲಿದ ಹುಲ್ಲಿನ ಬಂಗಾರದ ಬಣ್ಣಗಳನ್ನು ನೋಡುತ್ತಿದ್ದ ರವಿರಾಯ ಇಂದು ಕೃತಕ ಬಣ್ಣಗಳಿಂದ ಜನ ಬಣ್ಣಗೆಡುವುದನ್ನು ನೋಡಲು ಉತ್ಸುಕನಾಗಿ ಕಾಲವನ್ನು ಬಹುಬೇಗ ಸರಿಸುತ್ತಾ ಮೇಲೇರಿ ಬರುತ್ತಿದ್ದ. ನಿತ್ಯದಂತಾದರೆ ಸೂರ್ಯ ನೆತ್ತಿಯ ಮೇಲೆ ಬಂದಾಗ ಸುಮ್ಮನೆ ನಡೆದು ಹೋದರೂ ಬಳಲಿಕೆಯಾಗುವುದುಂಟು. ಆದರೆ ನೀರಲ್ಲಿ ನೆನೆಯುತ್ತಿದ್ದುದಕ್ಕೋ, ನಾಳೆಯ ದಿನ ಇದೇ ಥರ ಮತ್ತೆ ಕುಣಿಯುವ ಅವಕಾಶ ದಕ್ಕದು ಎಂಬುದು ಎಲ್ಲರಿಗೂ ಗೊತ್ತಿದ್ದುದಕ್ಕೋ ಜನರಲ್ಲಿ ಸುಸ್ತು ಕಾಣಿಸುತ್ತಿರಲಿಲ್ಲ. ಮಧ್ಯೆ ಒಮ್ಮೆ ಹೊರ ಹೋಗಿ ನೀರು ಕುಡಿದೋ, ಇಲ್ಲವೇ ಏನನ್ನಾದರೂ ತಿಂದು ಬಂದು ಮತ್ತೆ ಕುಣಿತ ಮುಂದುವರೆಯುತ್ತಿತ್ತು. ಈ ಮಧ್ಯೆ ನನಗೂ ನನ್ನ ಜೇಬಿನಲ್ಲಿ ಸುಮಾರು ಒಂದೆರೆಡು ಗಂಟೆಗಳಿಂದ ನೀರಲ್ಲಿ ನೆನೆದು ಛಳಿಯಿಂದ ಮುದ್ದೆಯಾಗಿ ಕುಳಿತ ನೂರರ ನೋಟೊಂದರ ನೆನಪಾಯ್ತು. ಇನ್ನೂ ಹೊತ್ತು ಕಳೆದರೆ ಅದರ ಜೀವ ಯಾತಕ್ಕೂ ಉಪಯೋಗ ಬರದೆ ಹೋದೀತು, ಅಲ್ಲದೆ ಹಿಂತಿರುಗುವ ವೇಳೆಗೆ ನನ್ನ ಖುಷಿಯಲ್ಲಿ ಅದರ ಅಸ್ತಿತ್ವವೇ ನಾಶವಾದೀತೆಂದು ತೋರಿ ಅದನ್ನು ಮಾರಾಟ ಮಾಡಲು ನಿಶ್ಚಯಿಸಿದೆ. ಮಾರಿದ್ದಕ್ಕೆ ಒಂದು ಲೀಟರ್ ಸ್ಲೈಸ್ ಹಾಗೂ ಮೂರು ವಡಾ-ಪಾವ್ ನಷ್ಟು ಸಂಪಾದನೆಯಾಯಿತು. ನಮ್ಮ ಗುಂಪಿನ ಬಹುತೇಕ ಎಲ್ಲರ ಹೊಟ್ಟೆಗೂ ತುತ್ತು ವಡಾ-ಪಾವ್ ಹಾಗೂ ಗುಟುಕು ಮಾವಿನ ರಸ ಸೇರಿದಾಗ ಆ ನೋಟಿಗೂ ತನ್ನ ಜೀವನದ ಸಾರ್ಥಕತೆಯ ಅರಿವಾಗಿರಬೇಕು. ಅದರ ಮೇಲೊಂದು ನಗು ಮುಖವನ್ನು ನಾನು ಕಂಡೆ.

    ತಿರುಗಿ ಬಂದು ನೆರೆದ ಜನರಲ್ಲಿ ಒಂದಾದೆ. ಹಾಡುಗಳು ಬದಲಾಗುತ್ತಿದ್ದರೂ ಮುಖ್ಯವಾಹಿನಿಯಲ್ಲಿ ಅದೇ ಡ್ಹುಬ್ ಡ್ಹುಬ್ ಸದ್ದು. ಬಾಕಿ ಯಾವುದೇ ಚಟುವಟಿಕೆಗಳಲ್ಲಿ ವ್ಯತ್ಯಾಸವಿಲ್ಲ. ಲೈಸೆನ್ಸು ಅವಧಿ ವಿಸ್ತರಿಸಿದ್ದರಿಂದಲೋ, ಹಾಡುಗಳ ಸಂಗ್ರಹ ಕಡಿಮೆಯಿದ್ದೋ ಮತ್ತೆ ಸ್ವಲ್ಪ ಹೊತ್ತಿನಲ್ಲಿ ಮೊದಲು ಕೇಳಿದ ಹಾಡುಗಳೇ ಪುನರಾವರ್ತನೆಯಾಗತೊಡಗಿದವು. ಜನರ ಉತ್ಸಾಹಕ್ಕೆ ಇದೇನೂ ಧಕ್ಕೆ ತರಲಿಲ್ಲ. ಇದರ ಪರಿವೆಯೇ ಇಲ್ಲದಂತೆ ಬಣ್ಣಗಳೆರಚಾಟ, ಕುಣಿತ ಅದೇ ಭರದಲ್ಲಿ ಸಾಗುತ್ತಿತ್ತು.

    ಈ ನಡುವೆ ಅದ್ಯಾರಿಗೋ ಬಣ್ಣ ಹಚ್ಚ ಹೊರಟ ಆಕೆಯ ಕೈ ನನಗೆ ತಾಕಿತು. ಇಂಥ ಸಂದರ್ಭದಲ್ಲಿ ಅರಿವಿದ್ದೋ, ಇಲ್ಲದೆಯೋ ಬಣ್ಣ ಹಚ್ಚಿಸಿಕೊಂಡಾತ(ಕೆ) ತಿರುಗಿ ಬಣ್ಣ ಹಚ್ಚುವ ಮಟ್ಟದ ಪ್ರತಿಭಟನೆ ಹಚ್ಚಿದಾತನ(ಕೆಯ) ಪರಿಚಯವಿದ್ದರೂ, ಇಲ್ಲದಿದ್ದರೂ ಆ ದಿನದ ಮಟ್ಟಿಗೆ ಜನರಲ್ಲಿ ಸಂತೋಷ ತರುವುದನ್ನು ಇದುವರೆಗೆ ಕಂಡಿದ್ದರಿಂದ ನಾನೂ ಅದನ್ನೇ ಮಾಡಹೋದೆ. ಇತ್ತೀಚಿನ ದಿನಗಳಲ್ಲಿ ಶೀಘ್ರ ಪ್ರತಿರೋಧ ನನ್ನ ಸ್ವಭಾವವಲ್ಲ. ಎಷ್ಟು ಸಾಧ್ಯವೋ ಅಲ್ಲಿಯವರೆಗೆ ತಾಳ್ಮೆ ವಹಿಸಿಯೇನು. ಎಷ್ಟೇ ಮಳೆ ಸುರಿದರು ಅಲುಗಾಡದ ಗಿರಿಯಂತೆ ಇದ್ದೇನು. ಎಂದು ಗಿರಿ ಪ್ರತಿಸ್ಪಂದಿಸಿತೋ ಅಂದು ಅದರ ನಾಶ, ಕೊಚ್ಚಿ ಬರುವ ನೀರಲ್ಲಿ ತನ್ನನ್ನು ತಾನು ಕಳೆದುಕೊಂಡು ತೊಳೆದು ಹೋದೀತು. ಆದರೆ ಬೆಳಗ್ಗಿನಿಂದ ಆಡುತ್ತಿದ್ದ ನಾಟಕದ ಮತ್ತೊಂದು ಅಂಕ ಇದಾಗಿರುವಾಗ, ಇಷ್ಟರವರೆಗೂ ನಟಿಸಿ ಈಗ ಸುಮ್ಮನಿರಲಾದೀತೆ ? ಬಣ್ಣದ ಪಾಕೆಟ್ಟಿಗೆ ಕೈ ಹಾಕಿ, ಗುಲಾಲು ಮೆತ್ತಿದ ಕೈಯನ್ನು ಅವಳೆಡೆಗೆ ಎತ್ತಿದೆ. ಎತ್ತಿದ ಕೈ ಹಾಗೇ ಇಳಿಸುವ ಮನಸ್ಸಾಗದೆ ಬಣ್ಣ ಹಚ್ಚಿದೆ. ಎಲ್ಲಿ ತಾಗಿತೋ ? ತಿರುಗಿ ನೋಡೋ ಅಷ್ಟು ಚೈತನ್ಯ ಮನಸ್ಸಿನಲ್ಲಿರಲಿಲ್ಲ. ಈಗ ನಾನು ಬಣ್ಣ ಹಚ್ಚಿದುದರ ಹಗೆ ತೀರಿಸಿಕೊಳ್ಳಲು ಆಕೆ ಮತ್ತೆ ಬಣ್ಣ ಹಿಡಿದು ಬಂದಳು. ಈ ಬಾರಿ ನಾನು ಅಲುಗಲಿಲ್ಲ, ಕೊಸರಿಕೊಳ್ಳಲಿಲ್ಲ. ತಪ್ಪು ಮಾಡಿದ ವಿದ್ಯಾರ್ಥಿ ಅದಕ್ಕೆ ಶಿಕ್ಷಕಿ ತನಗೆ ಕೊಡಲಿರುವ ಶಿಕ್ಷೆ ಏನೆಂಬ ಅರಿವಿದ್ದಾಗ ತಲೆ ತಗ್ಗಿಸಿ ಅದಕ್ಕೆ ಸಿದ್ದವಾಗಿ ವಿಧೇಯತೆಯಿಂದ ನಿಲ್ಲುವಂತೆ ನನ್ನನ್ನು ನಾನು ಒಪ್ಪಿಸಿಕೊಂಡೆ. ತಾಗಿದ ಬಣ್ಣ ತೊಳೆಯಲು ಪಂಪುದೇವ ಇದ್ದನಲ್ಲ.!

    ಹೊತ್ತು ಸರಿಯುತ್ತಿತ್ತು. ಲೈಸೆನ್ಸು ಅವಧಿ ಮುಗಿಯುತ್ತಾ ಬಂದಿತ್ತು. ಆದರೇನು, ಜನ ಬಹಳಷ್ಟು ಜಮಾಯಿಸಿದ್ದರಿಂದ, ಎಷ್ಟೇ ದಂಡ ತೆತ್ತು ಇನ್ನೊಂದು ತಾಸು ಕಾರ್ಯಕ್ರಮವನ್ನು ವಿಸ್ತರಿಸಿದರೂ ಆಯೋಜಕರಿಗೆ ನಷ್ಟವಿಲ್ಲ ಎಂದು ತೋರಿದ್ದರಿಂದ, ಕಾವಲಿದ್ದ ಪೋಲೀಸರ lunch ಟೈಮಿನಲ್ಲಿ ಒಂದಿಷ್ಟು ಲಂಚ ತಿನ್ನಿಸಿ ಗಡುವನ್ನು ಇನ್ನೂ ಒಂದು ತಾಸು ವಿಸ್ತರಿಸಿದ್ದಾಯಿತು. ಎಷ್ಟೆಂದರೂ ಲಂಚದ ದಾರಿ ಸಲೀಸು. ದೂರ ಕಡಿಮೆ. ಹೀಗೆ ನಾಳೆಯ ಚಿಂತೆ ಮರೆತು ಇಂದಿಗಾಗಿ ಬಾಳುವವರಿಗೆ ಲಂಚದ ರಾಜ್ಯವೇ ಸೊಗಸು ಹೊರತು ಇಂದು ನಾಳೆಯ ಯೋಚನೆ ಮಾಡಿ, ನಾಳೆ ಬಂದಾಗ ನಾಡಿದ್ದನ್ನು ಯೋಚಿಸುತ್ತಾ ಕುಳಿತು, ಎಂದಾದರೊಂದು ದಿನ ಸಿಗಲಿರುವ ಸುಖದ ಯೋಚನೆಯಲ್ಲಿ ಮುಳುಗಿರುವವರಿಗೆ ಲಂಚ ತುಚ್ಛವಾಗಿ ಕಂಡೀತು.

    ಹೀಗೆ ದೊರೆತ ಹೆಚ್ಚುವರಿ ಅವಧಿಯಲ್ಲಿ ಮೂರ್ನಾಲ್ಕು ಹುಡುಗಿಯರು ವೇದಿಕೆ ಹತ್ತಿ ಕುಣಿಯತೊಡಗಿದ್ದರು. ಕೆಳಗಿದ್ದ ಕೆಲವು ಪುಟ್ಟ ಮಕ್ಕಳನ್ನು ಮೇಲೆ ಹತ್ತಿಸಿ ನೃತ್ಯದಲ್ಲಿ ತೊಡಗಲು ಪ್ರೋತ್ಸಾಹಿಸಲಾಯಿತು. ಕೆಲವರಲ್ಲಿ ಕೆಲವರು ಚೆನ್ನಾಗಿ ಕುಣಿದರು. ಇನ್ನೂ ಕೆಲವರು ಕೆಳಗೆ ತಮ್ಮ ತಂದೆ-ತಾಯಿ ಕುಣಿದು ತೋರಿದುದನ್ನು ಅನುಕರಿಸಿದರು. ಒಂದು ಮಗು ಸುಮಾರು ನಾಲ್ಕು ವರ್ಷ ಪ್ರಾಯವಿದ್ದೀತು; ಏನೆಂದರೂ ಕುಣಿಯಲು ಕೇಳಲಿಲ್ಲ. ಬೆಳಗ್ಗಿನಿಂದ ಆಯೋಜಕರೇ ಒದಗಿಸುತ್ತಿದ್ದ ಬಟ್ಟೆಯ ತುಂಡೊಂದರಿಂದ ಅದಕ್ಕೆ ಸನ್ಮಾನ ಮಾಡಿದರೂ ಅದಕ್ಕೆ ಖುಷಿಯಾಗಲಿಲ್ಲ. ಬದಲು ಅಷ್ಟು ಜನರ ಮುಂದೆ ತನ್ನನ್ನು ಸಣ್ಣ-Man ಆಗಿ ತೋರಿಸಿದುದು ಅದಕ್ಕೆ ಬೇಜಾರು ತರಿಸಿತೇನೋ. ಕುಣಿಯಲು ಪೋಷಕರ ಒತ್ತಾಯ ಹೆಚ್ಚಿದಾಗ ಆ ಮಗುವಿನ ಕಣ್ಣು ಹನಿಗೂಡಿತೇ ಹೊರತು ಕಾಲು ಅಲುಗಲಿಲ್ಲ. ಅಂತೂ ಕೊನೆಗೆ ಆ ಮಗುವಿನ ತಂದೆ ಬಂದು ಅವನನ್ನು ಕೆಳಗಿಳಿಸಿಕೊಂಡರು. ಈಗ ಆ ಮಗುವಿನಲ್ಲಿ ಸುರಿಯುವ ನೀರಿನಲ್ಲಿ ಮನದುಂಬಿ ನೆನೆಯುವ, ಮೇಲಿಂದ ಉದುರುವ ಒಂದೊಂದು ನೀರ ಹನಿಯ ಚಿಟ-ಪಟ ಸದ್ದನ್ನು ಕಿವಿಯೊಳಗೆ ತುಂಬಿಕೊಳ್ಳುವ, ನೆಲದ ಮೇಲೆ ಹರಡಿಕೊಂಡಿದ್ದ ಬಣ್ಣ ಬಣ್ಣದ ನೀರ ಮೇಲೆ ಕುಪ್ಪಳಿಸಿ ಮತ್ತೆ ಮೇಲೆಬ್ಬಿಸುವ ಉತ್ಸಾಹ ತುಂಬಿ ನಿಂತಿತ್ತು. ಬಣ್ಣಗಳ ಭಾರಕ್ಕೋ, ಒಮ್ಮೆ ನೆಲ ಮುಟ್ಟಿದ ನೀರಿಗೆ ಭೂಮಿಯ ಮೇಲೆ ಉಂಟಾದ ಪ್ರೀತಿಯ ಭಾರಕ್ಕೋ ನೀರು ಮೇಲೇರಲಿಲ್ಲ. ಅಪ್ಪ-ಅಮ್ಮನಿಗೆ ಮನಸ್ಸಿಲ್ಲದಿದ್ದರೂ ಹಟ ಮಾಡಿ ಆಡ ಬಂದ ಆ ಮಗುವಿನ ಕಣ್ಣಿಂದ ಬೇಡೆಂದರೂ ಜಿನುಗುತ್ತಿದ್ದ ಹನಿಗಳು ಕೆಳಗಿಳಿಯುವುದು ಇನ್ನೂ ನಿಂತಿರಲಿಲ್ಲ.

    ಸ್ವಲ್ಪ ಹೊತ್ತಲ್ಲಿ ತನ್ನ ಆಶಯಗಳು ಫಲಿಸಿದಂತೆ ಮಗುವಿನ ಮುಖ ಸಂತೋಷದ ಬುಗ್ಗೆಯಾಗಿತ್ತು.ಅಷ್ಟು ಹೊತ್ತು ನನ್ನನ್ನೇ ಮರೆತು, ಮಧ್ಯೆ ನೆನಪಾದರೂ ಮತ್ತೆ ಮರೆತು ಆ ಮಗುವನ್ನೇ ನೋಡುತ್ತಾ ನಿಂತಿದ್ದ ನನಗೆ ಸುರಿಯುವ ನೀರಿನಿಂದ ದೂರ ಸರಿದು ನಿಂತಿದ್ದರ ನೆನಪು ಬಂತು. ತನ್ನ ಸ್ವಭಾವಕ್ಕೆ ಸಲ್ಲದ್ದನ್ನು ಆ ಮಗು ವಿರೋಧಿಸುತ್ತಿದ್ದುದ್ದನ್ನು ಕಂಡಾಗ 'ನಾನೂ ಯಾಕೆ ಹೀಗೆ ಮಾಡಲಿಲ್ಲ ?' ಎಂಬ ಪ್ರಶ್ನೆ ಏಳುತ್ತಿತ್ತು. ಮುಂದೆ ಬರಲಿರುವ ಪ್ರಶ್ನೆಗಳನ್ನು ನೆನೆದಲ್ಲವೇ ಇಷ್ಟು ಹೊತ್ತು ನಾಟಕವಾಡಿದ್ದು. 'ಇದು ನನ್ನ ಸ್ವಭಾವವಲ್ಲ ಎಂದು ಧಿಕ್ಕರಿಸಿದ್ದರೆ ಏನಾಗುತ್ತಿತ್ತು ?' ಎಂದು ಯೋಚಿಸುತ್ತಲೇ ನಾನು ಮತ್ತೆ ನೀರಿನಡಿ ಹೋದೆ. ಸ್ವಲ್ಪ ಹೊತ್ತು ನೀರಲ್ಲಿ ಕುಣಿದು, ದಣಿದು, ಮನ ತಣಿದ ಮಗು ಹೊರಟು ಹೋಗಿತ್ತು. ಮುಂದೆ ಕಾರ್ಯಕ್ರಮ ಮುಗಿಯುವಷ್ಟೂ ಹೊತ್ತು ಆ ಮಗುವನ್ನು ನನ್ನಲ್ಲಿ ಆವಾಹಿಸಿಕೊಂಡವನಂತೆ ನಾನು ನಾನಾಗೇ ಇದ್ದು ಹೊರಬಂದೆ.

    ಹೊರ ಬಂದ ಮೇಲೆ ಎಲ್ಲರಿಗೂ ಇಷ್ಟು ಹೊತ್ತೂ ಪರಿಚಯ ಇಲ್ಲದವರೊಡನೆ ಹೋಳಿ ಆಚರಿಸಿಕೊಂಡ ತಪ್ಪಿನ ಅರಿವಾದಂತಿತ್ತು. ಪ್ರಾಯಶ್ಚಿತ್ತವಾಗಿ ಎಲ್ಲರೂ ತಮ್ಮ ತಮ್ಮ ಹೆಸರು ಹೇಳಿಕೊಂಡು, ನೆನಪಿಗೆ ಫೋಟೋ ಮುಂದೆ ನಗುವಿನ ಮುಖವಾಡ ಧರಿಸಿ ನಿಂತು ಎಲ್ಲರೂ ನಮ್ಮ ನಮ್ಮ ಗೂಡು ಸೇರಿದೆವು. ಸುಮಾರು ನಾಲ್ಕು ತಾಸು ನೆನೆದ ಮೈ ಚೂರು ಒಣಗಿತ್ತು. ಮತ್ತೆ ನೆನೆಯುವ ಮನಸ್ಸಾಗಿ ಸ್ನಾನದ ಮನೆ ಹೊಕ್ಕೆ. ಮತ್ತೆ ಮತ್ತೆ ಸೋಪು ಹಾಕಿ ತಿಕ್ಕಿಕೊಂಡೆ. ನಿತ್ಯದ ಸ್ನಾನದ ಲೆಕ್ಕದಲ್ಲೊಮ್ಮೆ, ಬಣ್ಣ ಬಿಡಲು ಮತ್ತೊಮ್ಮೆ, ಆಕೆಯ ಸ್ಪರ್ಶದ ಬಣ್ಣವನ್ನಳಿಸಲು ಮಗದೊಮ್ಮೆ ಇನ್ನೂ ಏನೇನು ಕಾರಣಗಳಿದ್ದವೋ ನೆನಪಿಗೆ ಬಾರದು. ಎಲ್ಲಾ ಬಣ್ಣಗಳನ್ನು ತೊಳೆದು ಕಳೆದು ಬರುವ ವೇಳೆಗೆ ಆಕೆಯ ಹೆಸರು ಮರೆತರೂ, ಬಣ್ಣ ಮೆತ್ತಿದ ಅವಳ ನೆನಪುಗಳು ಮರೆಯುವ ಮುನ್ನ ಬರೆಯಲು ಕುಳಿತೆ.

ಬಣ್ಣಗಳಲ್ಲಿ ಬಣ್ಣಗೆಟ್ಟ ಮುಖಗಳು

******************************ಮುಗಿಯಿತು******************************

ಕನ್ನಡಾಭಿಮಾನ

      ನವೆಂಬರ ಮಾಸ ಕಳೆದು ಬಹಳ ಕಾಲವಾಯಿತು. ಮುಂದಿನದು ಬರಲು ಅದಕ್ಕಿಂತ ಹೆಚ್ಚಿನ ಅವಧಿ ಇದೆ. ಅಂಥ ಸಂದರ್ಭಗಳಲ್ಲಿಲ್ಲದ ಕನ್ನಡಾಭಿಮಾನ ಈಗ್ಯಾಕೆ ಅಂತ ನಿಮಗೆಲ್ಲರಿಗೂ ಅಲ್ಲದಿದ್ದರೂ ಕೆಲವರಿಗಾದರೂ ಅನ್ನಿಸಿದ್ದೀತು. ನವೆಂಬರ ತಿಂಗಳಲ್ಲಿ ಸಾಮಾಜಿಕ ಜಾಲತಾಣಗಳಿಂದ ದೂರ ಉಳಿದವರಿಗೆ ಕನ್ನಡ ರಾಜ್ಯೋತ್ಸವ ಬಂದಿತೆಂದೂ ಅನ್ನಿಸಿದ್ದೀತು. ಕರ್ನಾಟಕದಿಂದ ಹೊರಗಿರುವಾತನಿಗೆ ಭಾಷೆಯ ಮೇಲಿನ ಅಭಿಮಾನದ ಸೋಗು ಹೆಚ್ಚಿದೆ ಎಂದೂ ಅನ್ನಿಸಿದ್ದೀತು. ಅಂತೆಲ್ಲಾ ಊಹಾಪೋಹಗಳಿಗೆ ನೀವು ನೀವೇ ಜವಾಬ್ದಾರರೇ ಹೊರತು ನಾನಲ್ಲ. ಭಾರತ ದೇಶಕ್ಕಿಂತ ನಮ್ಮ ರಾಜ್ಯವೇ ದೊಡ್ಡದು ಎನ್ನುವಂತೆ ಹೆಸರಿರಿಸಿಕೊಂಡ ಸೊಕ್ಕಿನ ಜನರ ನೆಲದಲ್ಲಿ ಬಾಳುತ್ತಿರುವ ನನಗೆ ಮಹಾರಾಷ್ಟ್ರದ ರಾಜ್ಯೋದಯ ದಿನ ಹತ್ತಿರವಾದಂತೆ, ಸುಮಾರು ಒಂದೂವರೆ ವರ್ಷದಿಂದ ಜನ್ಮವೆತ್ತ ನಾಡಿನಿಂದ ಹೊರಗಿದ್ದು, ಕನ್ನಡ ನುಡಿಯುವಾಗಲೂ ಕಾಲು ಭಾಗದಷ್ಟು ಹಿಂದೂಸ್ತಾನಿ ಶಬ್ದಗಳೇ ನಾಲಿಗೆ ತುದಿಗೆ ಬಂದು ನಿಲ್ಲುವ ಈ ದಿನಗಳಲ್ಲಿ ಕನ್ನಡದ ಬಗ್ಗೆ ಅಭಿಮಾನ ಕೆರಳಿತೋ ಎಂದು ನೀವು ಒಂದಿನಿತು ಶಂಕಿಸಲಡ್ಡಿಯಿಲ್ಲ. ಕನ್ನಡದ ಬಗ್ಗೆ ನನ್ನದು ಕೆರಳಿದ ಅಭಿಮಾನವೋ, ಅರಳಿದ ಅಭಿಮಾನವೋ, ಒಂದೂವರೆ ವರ್ಷದಲ್ಲಿ ಅಳಿದು-ಉಳಿದ ಅಭಿಮಾನವೋ ಎಂಬಿತ್ಯಾದಿ ಮೂರು ಪ್ರಶ್ನೆಗಳ ಜೊತೆಗೆ ನೂರು ಪ್ರಶ್ನೆಗಳು ಮೂಡುವಾಗ, ನನಗೇ ಉತ್ತರಗಳನ್ನು ಕಂಡುಕೊಳ್ಳಲಾಗದವನು ನಿಮ್ಮ ಪ್ರಶ್ನೆಗಳ ಒಳ ಹೊಕ್ಕು ಉತ್ತರ ಹುಡುಕಿಯೇನು ಎಂಬ ಖಾತ್ರಿ ಇಲ್ಲವಾದರೂ ಲೇಖನದ ಕೊನೆ ಮುಟ್ಟುವ ವೇಳೆಗೆ ನಿಮ್ಮನ್ನು ಇನ್ನೊಂದು ಪ್ರಶ್ನೆಯ ತುದಿಯಲ್ಲಿ ನಿಲ್ಲಿಸಿಯೇನು.

      ಬೆಳಿಗ್ಗೆ ೧೧.೩೦ರ ವೇಳೆಗೆ ತನ್ನ ಬ್ಲಾಗಿನಲ್ಲಿ ಬರೆದಿರುವ ಲೇಖನವೊಂದನ್ನು ಓದುವಂತೆ ನನ್ನ ರೂಮ್-ಮೇಟ್ ನಿಂದ ಕರೆ ಬಂತು. ಹಿಂದೆ-ಮುಂದೆ ಆಗಿನ, ಈಗಿನ, ಯಾವಾಗಿನ ಇತ್ಯಾದಿ ಪ್ರತ್ಯಯ ಸೇರಿಸದೆ ರೂಮ್-ಮೇಟ್ ಎಂದೆನಾದರೆ ಅದು ನಾನು ಇಂಜಿನಿಯರಿಂಗ್ ಓದುವಾಗಿನ ನಾಲ್ಕು ವರ್ಷದ ರೂಮ್-ಮೇಟ್. ಅವನು ಸಮಯ ಸಿಕ್ಕಾಗ ಬ್ಲಾಗೊಂದನ್ನು ಶುರುಮಾಡಿದ್ದಾನೆ.ಎಲ್ಲರೂ ಸಮಯ ಸಿಕ್ಕಾಗಲೇ ಸಲ್ಲದ ತರಲೆ ಶುರು ಮಾಡಿಕೊಳ್ಳುವುದು ಎಂಬ ನಿಮ್ಮ ತಲೆಹರಟೆ ಸದ್ಯಕ್ಕೆ ಬೇಡ. ಬ್ಲಾಗಿನ ಹೆಸರೇ ಸಮಯ ಸಿಕ್ಕಾಗ; ಸ್ವಲ್ಪ ಮಟ್ಟಿಗೆ ಯೋಚಿಸಿಯೇ ಹೆಸರಿಟ್ಟಿದ್ದು. ತಾನು ಸಮಯ ಸಿಕ್ಕಾಗ ಬರೆಯುವುದು; ಓದುಗರು ಸಮಯ ಸಿಕ್ಕಾಗ ಓದುವುದು ಅದರ ಆಶಯ ಎಂದರೂ ತಪ್ಪಾಗಲಿಕ್ಕಿಲ್ಲ.

      ಮೊದಲ ಮಾತು ಎಂದು ತೊದಲು ಮಾತುಗಳನ್ನಾಡಿ, ಮುಂದೆ ಆಡಲೇಬೇಕಾದ ಮಾತುಗಳಿಗೆ  ಅವಕಾಶವಾಗದೆ ಹೋದೀತೆಂದೋ ಏನೋ ಮುನ್ನುಡಿ ಬರೆಯುವ ಗೋಜಿಗೆ ಹೋಗದೆ ರಾಜ್ಯದಲ್ಲಿ, ರಾಜ್ಯ ರಾಜಧಾನಿಯಲ್ಲಿ ರಾಜ್ಯಭಾಷೆಗೆ ಒದಗಿರುವ ಗತಿಯನ್ನು ಕುರಿತ ಬರಹ ಅದು. ಆ ಗತಿ ಸದ್ಗತಿಯೋ, ದುರ್ಗತಿಯೋ ಎಂಬುದು ನನಗಿಂತ ಚೆನ್ನಾಗಿ ನಿಮಗೇ ಗೊತ್ತು. ಆದರೆ ಇಂದು ಕನ್ನಡ ಉಳಿದಿರುವುದು ಯಾರ ಕೈಯಲ್ಲಿ ಎಂಬುದನ್ನು ತನಗೆ ಕಂಡಂತೆ ಹೇಳಿ, ಇನ್ನೂ ಹೆಚ್ಚಿನದಕ್ಕೆ ಎಲ್ಲರ ಯೋಚನೆಗೆಂದು ಪ್ರಶ್ನೆಯೊಂದನ್ನು ಮುಂದಿಟ್ಟಾಗ; ಪ್ರಶ್ನೆಗೆ ಉತ್ತರಿಸುವುದಕ್ಕಿಂತ ಮರುಪ್ರಶ್ನೆ ಕೇಳುವುದೇ ಇಂದಿನ ಬುಧ್ಧಿವಂತಿಕೆಯ ಲಕ್ಷಣ ಎಂದುಕೊಂಡಿದ್ದಕ್ಕೆ ಈ ಕನ್ನಡಾಭಿಮಾನದ ಉದಯ ಸಾಧ್ಯವಾಗಿದ್ದು.

   ಅನ್ನ ಕೊಡೋ ಮಣ್ಣು ಬೇಡವಾದ ಮನುಷ್ಯನಿಗೆ ತಾನು ಚಿಕ್ಕಂದಿನಲ್ಲಿ ತೊದಲು ಮಾತುಗಳನ್ನಾಡಿದ ಭಾಷೆ ಅನ್ನ ಕೊಟ್ಟೀತೇ ? ಓದು ಬರಹ ಅರಿಯದ ಮಂದಿಗೆ ತಮ್ಮ ಮಕ್ಕಳು ತಮ್ಮಂತಾಗುವುದು ಬೇಡ; ನಾಲ್ಕಕ್ಷರ ಕಲಿತು, ಒಂದು ನೌಕರಿ ಹಿಡಿದು ತನ್ನ ಬಾಳನ್ನು ರೂಪಿಸಿಕೊಳ್ಳಲಿ; ಮಣ್ಣಲ್ಲೇ ಹುಟ್ಟಿ, ಮಣ್ಣಲ್ಲೇ ಬೆಳೆದು, ಮಣ್ಣಲ್ಲೇ ಸಾಯುವ ಎರೆಹುಳದ ಬದುಕು ತಮ್ಮ ಮಕ್ಕಳಿಗೆ ಬೇಡ ಎಂಬಾಸೆ. ತೀರಾ ಓದಿದ ಜನರಿಗೆ ತಮ್ಮ ಮಕ್ಕಳು ತಮ್ಮಂತೆಯೇ ದೊಡ್ಡ ಇಂಜಿನಿಯರ್ ಆಗಬೇಕು, ವೈದ್ಯನಾಗಬೇಕು; ಮಣ್ಣಲ್ಲೇ ಹುಟ್ಟಿ, ಮಣ್ಣಲ್ಲೇ ಬೆಳೆದು, ಮಣ್ಣಲ್ಲೇ ಸಾಯುವ ಎರೆಹುಳದ ಬದುಕು ತಮ್ಮ ಮಕ್ಕಳಿಗೆ ಬೇಡ ಎಂಬಾಸೆ. ಈ ಒಂದೇ ಮಾತು ಮತ್ತೆ ಮತ್ತೆ ಯಾಕೆ ಹೇಳಿದೆ ಅಂದ್ರೆ ಎಲ್ಲಾ ತಂದೆ ತಾಯಿಯರ ಮೂಲ ಆಶಯ ಒಂದೇ, ಆ ದಾರಿಯಲ್ಲಿ ಅವರ ಬೇಕು ಬೇಡಗಳು ಹೇಗೆ ಬೇರೆ ಬೇರೆ ಎಂದು ತಿಲಿಸಲಷ್ಟೇ. ಹೀಗಿರುವಾಗ ಅವರಿಗೆ ತಮ್ಮ ಮಕ್ಕಳು ಮಮ್ಮಿ, ಡ್ಯಾಡಿ ಎಂದೆನ್ನುತ್ತಾ ಈಜಿಪ್ತಿನ ಪಿರಮಿಡ್ಡುಗಳಡಿಯಲ್ಲಿ ಕೊಳೆಯುತ್ತಿರುವ ಸತ್ತ ಹೆಣ ನೀವು ಎಂದು ಬಾರಿ ಬಾರಿ ಸಾರಿದರೂ ಅದೇ ಆಪ್ಯಾಯಮಾನವಾಗಿರುತ್ತದೆ. ಇಲ್ಲದಿದ್ದಲ್ಲಿ ಮಗನ ಇಂಗ್ಲೀಷು ಕಲಿಕೆ ಮುಂದೆ ಸಾಗಿಲ್ಲ ಎಂದೆನಿಸುತ್ತದೆ. ಹೀಗಿರುವಾಗ ಕನ್ನಡದ ಕುರಿತು ಯೋಚಿಸುತ್ತಾ ಕೂರಲು ಸಮಯ ಎಲ್ಲಿದೆ ?

      ಕಲಿತ ಇಂಗ್ಲೀಷು ಸಾಫ್ಟ್-ವೇರ್ ಕಂಪನಿಗಳಲ್ಲೋ, ಇನ್ಯಾವುದೋ ಕಾರ್ಖಾನೆಗಳಲ್ಲೋ ಒಳ್ಳೆಯ ಕೆಲಸ ಕೊಟ್ಟೀತು. ಅರ್ಥ ಅರಿಯದೆ ಇಂದಿಗೂ ಅನುಸರಿಸಿಕೊಂಡು ಬರುತ್ತಿರುವ, ಜನನದಿಂದ ಮರಣದವರೆಗಿನ ಸಕಲ ಕರ್ಮಗಳಿಂದಾಗಿ ಸಂಸ್ಕೃತವೂ ಸಂಪಾದನೆಗೊಂದು ದಾರಿಯಾದೀತು. ಅಲ್ಪ ಸ್ವಲ್ಪ ತಮಿಳು ತೆಲುಗು ಬಂದುದಾದರೆ ಅಲ್ಲಿಯ ಚಲಚ್ಚಿತ್ರಗಳನ್ನು ಸವಿಯಲಾದೀತು. ಕನ್ನಡ ಪ್ರಾಧ್ಯಾಪಕರು ಕೂಡಾ ಇಂಗ್ಲೀಷು ಕಲಿತು ಕನ್ನಡವನ್ನೂ ಇಂಗ್ಲೀಷಿನಲ್ಲಿ ಕಲಿಸಬೇಕಾದ ಈ ದಿನ ಹಿತ್ತಲ ಗಿಡ ಮದ್ದಲ್ಲ ಸ್ವಾಮಿ, ದಿನಕ್ಕೆರಡು ಸೀನು ಹೆಚ್ಚಿಗೆ ಬಂದರೂ ಅಲೋಪತಿ ಡಾಕ್ಟರರ ಬಳಿ ಓಡುವ ಇಂದಿನ ದಿನಗಳಲ್ಲಿ ಕನ್ನಡದ ಬಗ್ಗೆ ಅಭಿಮಾನ ಹೇಗೆ ಹೆಚ್ಚಬೇಕು ಹೇಳಿ.

      ಇದಿಷ್ಟು ಕನ್ನಡದ ಬಗ್ಗೆ ಅಭಿಮಾನ ತೋರದವರ ದೃಷ್ಟಿಯಾದರೆ; ಕನ್ನಡವೇ ದೇವರು ಎಂದೋ, ದೇವರಲ್ಲಿ ನಂಬಿಕೆ ಇಲ್ಲವಾದರೆ ಅಥವಾ ಕಡಿಮೆಯಾದರೆ ಕನ್ನಡವೇ ತನ್ನ ತಾಯಿ ಎಂದೋ ಪೂಜಿಸುವ ಕನ್ನಡದ ಕಂದಮ್ಮಗಳಿಗೂ ಕೊರತೆಯಿಲ್ಲ. ಇಂಥ ಕಂದಮ್ಮಗಳು ಶುದ್ಧ ಕನ್ನಡದಲ್ಲಿ ನುಡಿಯಲಾರಂಭಿಸಿದರೆಂದರೆ ಅಲ್ಲಿ ಕನ್ನಡಕ್ಕಿಂತ ಸಂಸ್ಕೃತದ ಅಬ್ಬರ ಹೆಚ್ಚು. ಇವರ ಅಧ್ಯಯನ ಏನಿದ್ದರೂ ಸಾಮಾನ್ಯ ಜನರಿಗೆ ಅರ್ಥವಾಗದ ವ್ಯಾಕರಣದಿಂದ ಶುರುವಾಗಿ ಹಳೆಗನ್ನಡ, ನಡುಗನ್ನಡ ದಾಟಿ ಪ್ರಸ್ತುತಕ್ಕೆ ಬರುವ ವೇಳೆಗೆ ಪಕ್ಕದಲ್ಲಿರುವವ ಸುಸ್ತಾಗಿರುತ್ತಾನೆ. ನೇರವಾಗಿ ಸಾಮಾನ್ಯ ಕನ್ನಡದಲ್ಲೇ ಮಾತನಾಡಿದನೆಂದರೆ ಅವನ ಪಾಂಡಿತ್ಯ, ಭಾಷೆಯ ಮೇಲಣ ಅಭಿಮಾನ ಉಳಿದವರಿಗೆ ತಿಳಿಯುವುದಾದರೂ ಹೇಗೆ ? ಅದಕ್ಕೆ ಪರರಿಗೆ ಅರ್ಥವಾಗದ ದಾರಿಯಲ್ಲಿ ನಾವು ನಡೆಯಬೇಕು. ಆದರೆ ಅಲ್ಲಿ ಸೋತರೆ ಮೂರ್ಖರೆನಿಸುತ್ತೇವೆ, ಗೆದ್ದರೆ ಮಹಾತ್ಮರೆನಿಸುತ್ತೇವೆ. ಇಂಥ ಕಂದಮ್ಮಗಳು ಸಾವಿರಕ್ಕೊಬ್ಬರೋ, ಲಕ್ಷಕ್ಕೊಬ್ಬರೋ ಇದ್ದಾರು. ಪೈಪೋಟಿ ಇಲ್ಲದಿರುವುದರಿಂದ ಎರಡು ಹೊತ್ತಿನ ಊಟಕ್ಕೆ ಮೋಸವಾಗಲಿಕ್ಕಿಲ್ಲ. ಆದರೆ ಅದನ್ನೇ ನಂಬಿ ಹೋದರೆ ಎಷ್ಟು ಜನರ ಹೊಟ್ಟೆ ತುಂಬೀತು ?

      ವಸ್ತುಸ್ಥಿತಿ, ಜನರ ಮನಸ್ಥಿತಿ ಇಂತಿರುವಾಗ 'ಕನ್ನಡದ, ಕನ್ನಡ ಚಳುವಳಿಗಳ ಕೂಗು ಮುಟ್ಟಬೇಕಾದ್ದು ಎಲ್ಲಿಗೆ ? ನಿಜವಾಗಿ ಕನ್ನಡಾಭಿಮಾನ ಎಂದರೇನು ? ಭಾಷೆ ಒಂದು ಸಂವಹನ ಮಾಧ್ಯಮವಾಗಿರುವಾಗ ಅಲ್ಲಿ ಸಂವಹನ ಮುಖ್ಯವೇ? ಅದಕ್ಕಿಂತ ಹೆಚ್ಚಿನ ಅಭಿಮಾನವೇ?' ಎಂಬಿತ್ಯಾದಿ ಉತ್ತರ ಸಿಗದ ಪ್ರಶ್ನೆಗಳಲ್ಲಿ ತೊಳಲುತ್ತಾ ಸದ್ಯಕ್ಕೆ ವಿರಮಿಸುತ್ತೇನೆ.