Sunday, 11 May 2014

Happy ಹೋಳಿ Day : ಭಾಗ ೧

   ಬಣ್ಣಗಳ ಹಬ್ಬ ಹೋಳಿ. ಪ್ರತಿಯೊಂದು ಹಬ್ಬವೂ ತನ್ನದೇ ವೈಶಿಷ್ಟ್ಯಗಳಿಂದ ಜನಮನದ ರಂಗೇರಿಸುವುದುಂಟಾದರೂ ಈ ವಿಷಯದಲ್ಲಿ ಹೋಳಿ ಹಬ್ಬ ಇನ್ನೂ ಒಂದಿನಿತು ಮುಂದೆ ಸಾಗಿ ಜನರ ತನು-ಮನವನ್ನೂ ರಂಗೇರಿಸುತ್ತೆನ್ನಬಹುದು. ಮೈಗಂಟುವ ಬಣ್ಣಗಳಲ್ಲಿ ಲೀನವಾಗುವ ಆಶೆ ಅಷ್ಟೊಂದು ಉತ್ಕಟವಾಗಿಲ್ಲದಿದ್ದರೂ ಬಹಳ ಜನ ಒಂದೆಡೆ ಕಲೆತು ಬಣ್ಣಗಳಿಂದ ಮೈ-ಮನ ತುಂಬಿಕೊಳ್ಳುವುದನ್ನು ನನ್ನ ಕಣ್ತುಂಬಿಕೊಳ್ಳುವ ಬಯಕೆಯೊಂದಂತೂ ಇತ್ತು. ನಿತ್ಯದ ಜಂಜಾಟಗಳನ್ನು ಮರೆತು ಹಬ್ಬದ ಸಡಗರದಿಂದ ಕುಣಿಯುತ್ತಿರುವ ಅಷ್ಟೂ ಜನರಿಂದ ದೂರ ನಿಂತು, ಒಂದು ಸಾಮಾನ್ಯ ದಿನವನ್ನು ಖುಷಿಯ ಬುಗ್ಗೆಯಾಗಿ ಪರಿವರ್ತಿಸುವ ಜನರನ್ನು ನೋಡಿದ ಕಣ್ಣುಗಳು ಮನಸ್ಸಿನಲ್ಲಿ ತುಂಬುವ ಬಣ್ಣಗಳ ಮುಂದೆ ಬಾಕಿ ಎಲ್ಲ ನಿರ್ವರ್ಣ. ನೀರ್ ಬಣ್ಣ.

   ಮೊದಲಿಗೆ ನನ್ನ ರೂಮ್-ಮೇಟ್ಗಳಿಗೆಲ್ಲಾ ಅಲ್ಪ ಸ್ವಲ್ಪ ಬಣ್ಣ ಹಚ್ಚಿ ನಾನೂ ಹಚ್ಚಿಸಿಕೊಂಡು ಹೋಳಿ ಶುಭಾಶಯ ವಿನಿಮಯ ಆದ ಮೇಲೆ ಇಬ್ಬರು ಕಛೇರಿಯ ಸ್ನೇಹಿತರೊಡಗೂಡಿ, ಇನ್ನೂ ಮೂರ್ನಾಲ್ಕು ಜನ ಬಂದು ಸೇರುವ ನಿರೀಕ್ಷೆಯೊಂದಿಗೆ ಕೋಣೆಯಿಂದ ಹೊರಬಿದ್ದೆ. ಸಮೀಪದಲ್ಲಿಯೇ ಇದ್ದ ಶಾಲಾ ಆವರಣವೊಂದರಲ್ಲಿ ಸಾರ್ವಜನಿಕ ಹೋಳಿ ಹಬ್ಬ ಏರ್ಪಡಿಸಲಾಗಿತ್ತು. ಮೊದಲೇ ಸದ್ದು-ಗದ್ದಲ ಹೆಚ್ಚಿರುವ ಮುಂಬಾಯಿ ನಗರಿಯಲ್ಲಿ ಮನೆ ಮನೆಯಲ್ಲೂ ತಮಟೆ ಬಡೆದು ಅದನ್ನ ಇನ್ನೂ ಹೆಚ್ಚಿಸುವುದು ಬೇಡ ಎಂತಲೋ, ಶಹರಿನ ನಿತ್ಯದ ಬಣ್ಣ ಹೋಳಿಯ ರಂಗಿನಿಂದ ಅಳಿಸಿಹೋಗಬಾರದೆಂದೋ ಈ ವ್ಯವಸ್ಥೆ. ತಲಾ ೧೨೫ ರೂಪಾಯಿಯ ಪಾಸುಗಳನ್ನು ಕೊಂಡು ಮೂವರೂ ಒಳನುಗ್ಗಿದೆವು. ಆಯೋಜಕರೇ ಒದಗಿಸಿದ ಬಣ್ಣದ ಪಾಕೀಟುಗಳನ್ನೂ, ಒಂದೊಂದು ಬಟ್ಟೆ ತುಂಡನ್ನೂ ಎತ್ತಿಕೊಂಡು ಮುಂದೆ ನಡೆದೆವು.

   ಧ್ವನಿವರ್ಧಕದಿಂದ ಬರುತ್ತಿದ್ದ ಡ್ಹುಬ್ ಡ್ಹುಬ್ ಎಂಬ ಸದ್ದಿನ ಹಿಂದಿರುತ್ತಿದ್ದ ಎಷ್ಟೋ ಶಬ್ದಗಳು ಸ್ಪಷ್ಟವಾಗಿ ಕೇಳಿಸದೇ ಇದ್ದರೂ, ಅಲ್ಪ ಸ್ವಲ್ಪ ಕೇಳಿದರೂ ಅರ್ಥವಾಗದೇ ಇದ್ದರೂ, ಕೆಲವೊಂದು ಅರ್ಥವಾದರೂ, ಇಷ್ಟು ದಿನ ಬೇರೆ ಬೇರೆ ರಾಗಗಳಲ್ಲಿ ಕೇಳಿದ್ದ ಬಾಲಿವುಡ್ಡಿನ ಹಾಡುಗಳೆಲ್ಲ ಒಂದೇ ತಾಳದವು ಎಂಬ ಹೊಸ ಸತ್ಯವೊಂದರ ಸಾಕ್ಷಾತ್ಕಾರ ನನಗಾಗ ಆಯಿತಾದರೂ, ಇದಾವುದರ ಪರಿವೆಯೇ ಇಲ್ಲದಂತೆ ಕುಣಿಯುತ್ತಿದ್ದ ಜನಗಳ ಮಧ್ಯೆ ನಾನೂ ಹೊಕ್ಕೆ. ಸ್ನೇಹಿತರನ್ನೆಲ್ಲಿ ಬಿಟ್ಟೆ ಎಂಬ ಕಾಳಜಿ ನಿಮಗೆ ಬಂದಿದ್ದೀತು. ಆ ಜನಜಂಗುಳಿಯಲ್ಲಿ ಒಂದಾದ ಅವರ ಮನದಲ್ಲಿ ಹುಟ್ಟಿದ ಕಥೆಯನ್ನು ಕೇಳಿಯೋ, ಕಲ್ಪಿಸಿಯೋ ಬರೆಯುವ ಕಥೆಗಾರ ನಾನಲ್ಲ. ವೀಕ್ಷಕನಾಗಿ ನಿಂತ ನನ್ನ ಪಾಲಿಗೆ ಅಲ್ಲಿ ನೆರೆದ ಅಷ್ಟೂ ಜನ ಒಂದು, ಅವರ ಮಧ್ಯೆ ಇದ್ದೂ ಹೊರಗಿನಿಂದ ನೋಡುತ್ತಿದ್ದ ನಾನೊಂದು.

   ಹೆಣ್ಣು-ಗಂಡೆಂಬ ಲಿಂಗ ತಾರತಮ್ಯ ಇಲ್ಲದೆ, ಬ್ರಾಹ್ಮಣ-ಶೂದ್ರ ಎಂಬ ಜಾತಿ ಭೇದ ಇಲ್ಲದೆ, ಕಪ್ಪು ಜನರ ಬಣ್ಣ ಎಂದೂ ಬದಲಾಗದು, ಬಣ್ಣ ಬದಲಾಗುವುದು ಬಿಳಿಯ ಜನರದ್ದು ಎಂಬ ಎಷ್ಟೋ ಪೋಸ್ಟುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ಜನ ಇಂದು ಅದರ ನೆನಪೂ ಇಲ್ಲದೆ, ಇದ್ದರೂ ಅಂಥ ದೊಡ್ಡ ಮಾತುಗಳನ್ನು ಜನರ ಮುಂದೆ ವ್ಯಕ್ತಪಡಿಸಿದರೆ ಅದನ್ನೆಷ್ಟು ಜನ ಲೈಕ್ ಮಾಡಿಯಾರು, ಎಷ್ಟು ಜನ ಕಾಮೆಂಟ್ ಮಾಡಿಯಾರು ಎಂಬ ಏಕಮಾತ್ರ ಉದ್ದೇಶದಿಂದ ಬರೆದಿದ್ದು ಬೇರಾವ ಭಾವನೆಯೂ ಇರಲಿಲ್ಲ ಎಂದು ತಮ್ಮಲ್ಲೇ ತಪ್ಪೊಪ್ಪಿಕೊಂಡು, ಒಪ್ಪಿಕೊಳ್ಳುವ ಮನಸ್ಸು ಬಾರದವರು ಅದು ಆಫ್ರಿಕಾದ ನೀಗ್ರೋ ಕುರಿತು ಹೇಳಿದ್ದು, ಅಲ್ಲಿ ಹೋಳಿ ಹಬ್ಬ ಆಚರಿಸುವುದಿಲ್ಲ ಎಂಬ ಸಮಝಾಯಿಶಿ ಕೊಟ್ಟುಕೊಂಡು ಅಂತೂ ತಮ್ಮ ಚರ್ಮದ ವರ್ಣ ಭೇದ ಮರೆತು ಹೋಳಿಯ ಖುಷಿಯ ರಂಗನ್ನು ಮೆತ್ತಿ, ಮೆತ್ತಿಸಿಕೊಂಡು, ಆವರಣದ ಬದಿಯಲ್ಲಿ ಎತ್ತರಕ್ಕೆ ಕಟ್ಟಿದ್ದ ಪೈಪುಗಳಿಂದ ಕಾರಂಜಿಯಂತೆ ಚಿಮ್ಮುತ್ತಿದ್ದ ನೀರಿನಡಿಯಲ್ಲಿ ನೆನೆಯುತ್ತಾ ಕಿವಿಗೆ ಹೊಡೆದಂತೆ ಕೇಳುತ್ತಿದ್ದ ಧ್ವನಿವರ್ಧಕದ ಡ್ಹುಬ್ ಡ್ಹುಬ್ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದ ಜನರ ಖುಷಿಯಲ್ಲಿ ನಾನೂ ಒಂದಾದೆ.

   ಅಷ್ಟರಲ್ಲಿ ನನ್ನ ಕೊಠಡಿಮಿತ್ರರು, ಅವರ ಮಿತ್ರರು ಅಲ್ಲೇಜಮಾಯಿಸಿದ್ದರು. ಬೇಕಾಗಿಯೋ, ಬೇಡಾಗಿಯೋ, ನನ್ನ ಸ್ನೇಹಿತವರ್ಗ ಚಿಕ್ಕದಿತ್ತೆಂಬ ಅನಿವಾರ್ಯತೆಯಿಂದಲೋ, ಸ್ವಲ್ಪ ಹೊತ್ತಿನ ಮೊದಲು ಪರಿಚಯವೇ ಇಲ್ಲದ ನನ್ನ ಮುಖಕ್ಕೂ ಬಣ್ಣ ಹಚ್ಚಿ 'ಹ್ಯಾಪಿ ಹೋಳಿ' ಎಂದು ಶುಭ ಹಾರೈಸುವ ಮೂಲಕ 'ಎಂದಿನ ನೀನು ಇಂದು ನೀನಲ್ಲ, ನಿನ್ನ ಬಣ್ಣ ಬದಲಾಯಿಸಿದ್ದೇವೆ' ಎಂದು ಸಾರಿದ ಆ ಗುಂಪಿನಲ್ಲಿ ನಾನೂ ಒಂದಾದೆ.

   ಮಧ್ಯೆ-ಮಧ್ಯೆ ತಲೆ ಮೇಲೆ ಬೀಳುತ್ತಿದ್ದ ನೀರು ಮೈ ತುಂಬಾ ಹರಿದು ಕಾಲಬೆರಳಿನ ತುದಿ ಮುಟ್ಟುವಾಗ ಹಿತವೆನಿಸುತ್ತಿತ್ತು. ಪರ್ವತ ಶಿಖರಗಳಲ್ಲಿ ಹುಟ್ಟಿದ ನದಿ ಸಿಕ್ಕ ಸಿಕ್ಕಲ್ಲಿ ಹರಿದು ಹಲವು ನದಿಗಳೊಂದಾಗಿ ಸೃಷ್ಟಿಯಾದ ಸಾಗರವನ್ನು ಸೇರುವಂತೆ, ಹಲವರ ತಲೆಯ ಮೇಲಿಂದ ಹರಿದು ನೆಲ ತಲುಪಿದ ನೀರನ್ನು ಅದು ಸೇರುತ್ತಿತ್ತು. ವರುಣದೇವನ ಕೃಪೆ ಇಲ್ಲದಿದ್ದರೂ, ಮುಂಬಯಿ ಮಹಾನಗರ ಪಾಲಿಕೆ ಹಾಗೂ ಪಂಪುದೇವನ ದಯೆಯಿಂದ ಮಳೆ ನೃತ್ಯ (Rain Dance) ನಡೆಯಿತು. 'ಹುಯ್ಯೋ ಹುಯ್ಯೋ ಮಳೆರಾಯ'ದಿಂದ 'ಮುಂಗಾರು ಮಳೆಯೇ'ವರೆಗಿನ ಕನ್ನಡ ಗೀತೆಗಳಂತೆ ಯಾವುದೇ ಮಳೆಹಾಡು ಕೇಳಿಬರಲಿಲ್ಲವಾದರೂ, ಇತ್ತೀಚಿಗೆ ಪ್ರಖ್ಯಾತಿಗೊಂಡ 'ಪಾನಿ ಪಾನಿ' ಎಂಬೊಂದು ಗೀತೆ ತುಂಬಾ ಸಲ ಕೇಳಿ ಬಂತು. ಹನಿ ಸಿಂಗ್ ಹಾಡಿದ್ದರಿಂದ ಅದನ್ನೊಂದು ಹನಿಗವನ ಎಂದು ನೀವು ಕರೆದರೂ ನನ್ನ ಆಕ್ಷೇಪವಿಲ್ಲ.

   ಕುಣಿಯುವುದು ನನ್ನ ವೃತ್ತಿ, ಪ್ರವೃತ್ತಿ ಅಲ್ಲವಾದರೂ; ಬರಿದೇ ಮುಡಿಯ ಮೇಲೆ ಸುರಿಯುವ ನೀರ ಕೆಳಗೆ ನಿಂತು, ಅದರ ಮುಂದೆ ನನ್ನ ಆಟವೇನೂ ಸಾಗದು ಎನ್ನುವ ಅರಿವಿದ್ದರೂ ಅದನ್ನು ಮಣ್ಣ ಸೇರಗೊಡುವುದಿಲ್ಲೆಂಬ ಮನದ ಹುಚ್ಚು ಉನ್ಮಾದವೊಂದೇ ಸಾಕು ಸಂತೋಷ ಪಡಲು ಎಂಬ ಸತ್ಯ ನನಗೆ ತಿಳಿದಿದ್ದರೂ; ಅಷ್ಟನ್ನೇ ಮಾಡಿದೆನಾದರೆ ಈಗಾಗಲೇ ಕೂಡಿಕೊಂಡ ಗುಂಪಿನಿಂದ ಒದಗಬಹುದಾಗಿದ್ದ ಪ್ರಶ್ನೆಗಳಿಗೆ ಉತ್ತರಿಸುವುದಕ್ಕಿಂತ ಡ್ಹುಬ್ ಡ್ಹುಬ್ ತಾಳಕ್ಕೆ ಕುಣಿಯುವುದೇ ಒಳಿತೆನ್ನಿಸಿತು. ಸುರಿಯುವ ನೀರು ಒಮ್ಮೆ ನನ್ನ ಮುಖದ ಬಣ್ಣ ತೊಳೆದಷ್ಟು ಹೊತ್ತು ನಾನು ನಾನಾಗಿರುತ್ತಿದ್ದೆ. ಅದು ನಿಂತು ಮತ್ತೆ ಇನ್ನಾರೋ ಮುಖಕ್ಕೆ ಬಣ್ಣ ಹಚ್ಚಿದೊಡನೆ ಅವರೊಂದಿಗೆ ಕುಣಿಯುತ್ತಿದ್ದೆ. ಸುತ್ತಲ್ಲೂ ಬಣ್ಣ ಬಣ್ಣದ ಬಣ್ಣಗಳನ್ನು ಮೆತ್ತಿಕೊಂಡ ತರುಣ ತರುಣಿಯರ ದಂಡೇ ಇದ್ದರೂ, ತುಂತುರು ಹನಿಗಳಿಗೆ ಬಿಸಿಲಿನ ಮೇಲೆ ಪ್ರ್ರೀತಿಯಾಗಿ ಲಜ್ಜೆಯಿಂದ ರಂಗೇರಿ ಸೃಷ್ಟಿಯಾಗುತ್ತಿದ್ದ ಬಿಲ್ಲಿನಾಕಾರದಲ್ಲಿಲ್ಲದ ಕಾಮನಬಿಲ್ಲನ್ನು ನೋಡುತ್ತಾ ನಿಂತೆನಾದರೆ ಸುತ್ತಲ ಶಬ್ದ ಕ್ಷೀಣವಾಗಿ, ಕೇಳುವುದು ನಿಂತು ಹೋಗುತ್ತಿತ್ತು (ಅಷ್ಟು ಹೊತ್ತಿನ ಡ್ಹುಬ್ ಡ್ಹುಬ್ ಸದ್ದಿಗೆ ಕಿವಿ ಹೊಂದಿಕೊಂಡಿದ್ದರಿಂದ ಹಾಗಾಗಿದ್ದು ಎಂದು ನಿಮಗನ್ನಿಸೀತು). ಬಾಕಿ ಎಲ್ಲಾ ಮಬ್ಬಾಗಿ ಬರೀ ಏಳು ಬಣ್ಣಗಳಲ್ಲೇ ದೃಷ್ಟಿ ನೆಟ್ಟು ಹೋಗುತ್ತಿತ್ತು (ಒಂದಿಷ್ಟು ಬಣ್ಣ ಕಣ್ಣು ಹೊಕ್ಕಿದ್ದರಿಂದ ಹಾಗೆ ಕಂಡಿದ್ದು, ಬಾಯಲ್ಲೂ ಒಂದಿಷ್ಟು ಬಣ್ಣದ ನೀರು ಹರಿದಿರುವುದರಿಂದ ಬಣ್ಣ ಬಣ್ಣದ ಮಾತುಗಳು ಇಂದು ಬರುತ್ತಿವೆ ಎಂದು ನಿಮಗೆ ಕಂಡೀತು). 'ಅಷ್ಟು ಜನರ ಮುಂದೆ ನಾನೊಬ್ಬ ಭಾವುಕ ಜೀವಿ ಎಂಬೊಂದು ಸೋಗಿನ ನಾಟಕ ಆಡುತ್ತಿದ್ದೀನಾ ?' ಅಂತೊಂದು ಪ್ರಶ್ನೆ ಮನಸ್ಸಲ್ಲೇ ಮೂಡುತ್ತಿತ್ತಾದರೂ, ಉತ್ತರ ಸ್ಪಷ್ಟವಾಗುತ್ತಿತ್ತು. 'ನಾಟಕವಾದುತ್ತಿದ್ದುದು ನಿಜ. ಸ್ವಲ್ಪ ಹೊತ್ತು ಮೊದಲು, ಇನ್ನು ಸ್ವಲ್ಪ ಹೊತ್ತಿನ ಬಳಿಕ'. ಬಣ್ಣವಿಲ್ಲದ ನೀರು ನನ್ನ ಬಣ್ಣ ಕಳೆಯುತ್ತಿದ್ದಷ್ಟು ಹೊತ್ತು ನಾನು ನಾನೇ, ಮುಂದೆ ಮಂದಿಯ ಮಂದೆಯಲ್ಲಿ ಒಂದು. ಸುರಿಯುತ್ತಿದ್ದ ನೀರು ನಿಂತು ಮತ್ತೆ ಕುಣಿಯತೊಡಗಿದಾಗ ಪಕ್ಕದಲ್ಲಿದ್ದ ಹುಡುಗಿಯೊಂದರ ಸ್ಪರ್ಶವಾಗಿ ಮೈ ಜುಮ್ಮೆನ್ನಿಸಿತ್ತು.

1 comment:

  1. sundara ati sundra varnane gore.. illi tamilunaadinalli aa bannagala aatada suddiye illa iddaru nammanu talupalee illa. ide modala baarige bannavillade holi aachariside.

    ReplyDelete