Sunday, 11 May 2014

ಭಂಡಾರಧಾರ ಪ್ರವಾಸ ಕಥನ.. : ಅಧ್ಯಾಯ ೭


ಮರಳಿ ಗೂಡಿಗೆ :

      ಅಬ್ಬಬ್ಬಾ..!!​ ೨ ರೋಟಿ ತಿಂದು ಬರಲು ಇಷ್ಟು ಹೊತ್ತೇ ? ಇವನದೇನು ಬಕಾಸುರನ ಹೊಟ್ಟೆಯೇ ಎಂದು ತಿಳಿಯಬೇಡಿ. ಒಂದು ದಿನದ ಅನುಭವವನ್ನು ನಿಮ್ಮ ಮುಂದಿಡಲು ಸುಮಾರು ೨ ತಿಂಗಳು ಹಿಡಿಯುತ್ತಾ ಬಂತು. ಹೀಗಿರುವಾಗ ಕಳೆದ ವಾರ ಊಟಕ್ಕೆ ಹೋದವ ಈ ವಾರ ಮರಳಿ ಬರುವುದರಲ್ಲೇನು ತಪ್ಪು ? ಆದರೆ ಒಂದು ವಿಚಾರ ಕೇಳಿ, ಬಕಾಸುರನಿಗಾಗಿ ಬಂಡಿ ಭೋಜನ ಕೊಂಡೊಯ್ದುದು ಅವನೊಬ್ಬನೇ ತಿನ್ನುತ್ತಿದ್ದನೋ, ಅವನ ಪರಿವಾರದವರೆಲ್ಲಾ ತಿನ್ನುತ್ತಿದ್ದರೋ ಕಂಡು ಹೇಳಿದವರಿಲ್ಲ. ಆದರೆ ಅವನಿಗೆಂದು ಕೊಂಡೊಯ್ದ ಅಷ್ಟೂ ಭಕ್ಷ್ಯ ಭೋಜ್ಯಗಳನ್ನು ಒಬ್ಬನೇ ತಿಂದ ಭೀಮನ ಹೊಟ್ಟೆಯೇ ದೊಡ್ಡದೇನೋ ಅಂತ ನನ್ನ ಅಭಿಪ್ರಾಯ. ಇನ್ನು ಬಕಾಸುರ ಒಬ್ಬನೇ ತಿನ್ನುತ್ತಿದ್ದ, ಬರೀ ಭಕ್ಷ್ಯ ಭೋಜ್ಯಗಳಷ್ಟೇ ಅಲ್ಲದೆ ಗಾಡಿಗೆ ಕಟ್ಟಿದ ಪಶುಗಳನ್ನೂ, ಗಾಡಿಯನ್ನೊಯ್ದ ಮಾನವನನ್ನೂ ತಿನ್ನುತ್ತಿದ್ದುದರಿಂದ ಅವನದೇ ದೊಡ್ಡ ಹೊಟ್ಟೆ ಎಂದು ನೀವು ಹೇಳಿದರೂ ನನ್ನ ತಕರಾರಿಲ್ಲ. ನಮ್ಮ ನಮ್ಮ ಹೊಟ್ಟೆ ತುಂಬುವಷ್ಟೋ, ಅದಕ್ಕೆ ಸ್ವಲ್ಪ ಕಮ್ಮಿಯೋ (ಆಮೇಲೆ ತಿಂದಿದ್ದು ಹೊರಬರಬಾದೆಂಬ ಮುನ್ನೆಚ್ಚರಿಕೆಯಿಂದ) ತಿಂದು ಅಲ್ಲಿಂದ ಹೊರಟಿದ್ದಾಯ್ತು.

      ಇನ್ನು ಮುಂದೆ ಯಾವುದೇ ನಿಲ್ದಾಣಗಳಿಲ್ಲ. ಬೆಳಿಗ್ಗೆಯ ನಮ್ಮ ಆರಂಭಿಕ ಸ್ಥಾನವೇ ನಮ್ಮ ಗಮ್ಯಸ್ಥಾನವೂ ಆಗಿತ್ತು. ಮತ್ತೆ ಎಲ್ಲ ತಮ್ಮ ತಮ್ಮ ಕಥೆಗಳನ್ನುಸುರುವುದರಲ್ಲಿ ಮಗ್ನರಾದರು. ಬೇಡ ಎಂದರೂ ಕೇಳಿ ಬಂದ ಒಂದೆರಡು ಸಾಲುಗಳಿಂದ ತಿಳಿದುದೇನೆಂದರೆ ಈ ಕಥೆಗಳು ಯಾವುದೇ ಸಿನಿಮಾ ಕಥೆಗಳಿಗೂ ಕಮ್ಮಿಯಿರಲಿಲ್ಲ. 'ಈಗಿನ ಸಿನಿಮಾಗಳಲ್ಲಿ ಕಥೆ ಎಲ್ಲಿರುತ್ತದೆ?' ಅಂತೇನಾದ್ರೂ ನೀವು ಕೇಳಿದ್ರೆ ನನ್ನತ್ರ ಉತ್ತರ ಇಲ್ಲ. ಮುಂದೆ ಮಹಾನಗರಿಯಿಂದ ಹೊರಬೀಳುವುದೆಂದೆಂದು ಖಾತ್ರಿಯಿಲ್ಲದ್ದರಿಂದ ಬಂದ ಸಮಯವನ್ನ ಸದುಪಯೋಗಪಡಿಸಿಕೊಳ್ಳುವ ಸಲುವಾಗಿ ಕಿಟಕಿಯಿಂದ ತಲೆ ಹೊರಹಾಕಿಕೊಂಡು ಕುಳಿತೆ. ಈಗ ನನ್ನ ಕಿವಿಗಳಿಗೆ ಕೇಳುತ್ತಿದ್ದುದು ಗಾಳಿಯದೊಂದೇ ಸದ್ದು.

      ಈಗೀಗ ನಮ್ಮ ರಥದ ಸಾರಥಿಗೂ ಏನೋ ಸ್ಫೂರ್ತಿ ತುಂಬಿದಂತಿತ್ತು. ಬಹಳ ವೇಗವಾಗಿ ಗಾಡಿಯನ್ನೋಡಿಸುತ್ತಿದ್ದ. ಅಷ್ಟೆಯೋ, ಅದಕ್ಕಿಂತಲೂ ಸ್ವಲ್ಪ ಹೆಚ್ಚೋ ವೇಗವಾಗಿ ಬೀಸುವ ಗಾಳಿ. ಬೆಳಿಗ್ಗೆ ನನ್ನ ಮುಂದೆ ಸೋತು ಹೋಗಿದ್ದ ವರುಣ ಈಗ ಮರುತ್ತನನ್ನು ಕಳಿಸಿದ್ದ. ಜೋರಾಗಿ ಬೀಸುವ ಗಾಳಿಗೆ ಕಣ್ಣು ಕಿತ್ತು ಬಂದಂತೆನಿಸಿದರೂ ಎವೆ ಮುಚ್ಚದೆ ಕುಳಿತೆ. ಆದರೂ ಸ್ವಲ್ಪ ಹೊತ್ತಿನಲ್ಲಿ ಸೋಲು ನನ್ನದಾಯ್ತು. ಒಂದು ಕ್ಷಣ ಸುಧಾರಿಸಿಕೊಂಡು ಮತ್ತೆ ಪಂಥ ಒಡ್ಡಿದೆ. ಮತ್ತದೇ ಫಲಿತಾಂಶ. ಹೀಗೆ ನಾಲ್ಕೈದು ಪಂದ್ಯಗಳಾಗಿ, ಅಷ್ಟರಲ್ಲೂ ನಾನು ಸೋತ ಖುಷಿಯಿಂದ ಮರುತ್ತ ಮರಳಿದ. ನಮ್ಮ ಗಾಡಿ ಕೂಡ ನಿಧಾನಗೊಂಡಿತ್ತು. ನಾವು ಮಹಾನಗರಿಯಲ್ಲಿ ಕಾಲಿಟ್ಟಾಯ್ತು ಅಂತ ಬಿಡಿಸಿ ಹೇಳೋದು ಬೇಡ ತಾನೇ!?

      ಈಗ ಮತ್ತೊಮ್ಮೆ ಎಲ್ಲರೊಂದಿಗೆ Dumb Charades ಆಟದಲ್ಲಿ ನಾನೂ ಒಂದಾದೆ. ಸ್ವಲ್ಪ ಹೊತ್ತಿನ ಆಟ ಎಲ್ಲರಿಗೂ ಬೇಜಾರಾಗಿ ಏನೇನೋ ಮಾತುಕತೆಯಲ್ಲಿ ಲೀನರಾದರು. ನಾನು ಪೂರ್ತಿ ದಿನದ ಪುಟಗಳನ್ನು ತಿರುವಿ ಹಾಕುತ್ತಿದ್ದೆ.

ಕೊನೆಯ ಮಾತು (ಬೆನ್ನುಡಿ):

      ಮನಸ್ಸು ದಣಿವರಿಯದಿದ್ದರೂ, ದೇಹ ಅರಿತಿತ್ತು. ೯ : ೧೫ ರ ಸುಮಾರಿಗೆ ಜೆ.ಬಿ.ನಗರ ತಲುಪಿದವನೇ ಕೋಣೆಗೆ ಹೋಗಿ, ಹೊತ್ತೊಯ್ದ ಚೀಲವನ್ನಿಟ್ಟು ರಾತ್ರಿಯ ಊಟಕ್ಕೆ ಎಲ್ಲರನ್ನೂ ಕೂಡಿಕೊಂಡೆ. ಆದಿತ್ಯ, ದಿವಾಯ್ ಇಬ್ಬರಿಗೂ ಮನೆಯಲ್ಲಿ ಊಟ ಕಾಯುತ್ತಿತ್ತಂತೆ, ಅದಕ್ಕೆ ಅವರು ಹೊರಟರು. ನಾನೋ, ಮನೆಗೆ ಬರುವ ಊಟಕ್ಕೆ ಇಂದು ಬರದಿರಲು ಮೊದಲೇ ತಿಳಿಸಿದ್ದೆ. ಎಲ್ಲರೂ ಊಟ ಮುಗಿಸಿ ಅವರವರ ಮನೆ ಕಡೆಗೆ ಸಾಗಿದ್ದಾಯ್ತು.

      ಸಾಮಾನ್ಯವಾಗಿ ಅವರಿವರೊಂದಿಗೆ ಅಷ್ಟಾಗಿ ಬೇರೆಯದಿದ್ದರೂ, ಪ್ರವಾಸಕ್ಕೆ ಆಹ್ವಾನಿಸಿ, ಕರೆದೊಯ್ದ ಎಲ್ಲರಿಗೂ ಮನದಲ್ಲೇ ಧನ್ಯವಾದಗಳನ್ನು ಸಲ್ಲಿಸುತ್ತಾ, ನನ್ನಿಂದ ಎಲ್ಲಾದರೂ ಅವರ ಸಂತೋಷಕ್ಕೆ ಭಂಗ ಬಂದಿದ್ದಲ್ಲಿ ಅವರಲ್ಲಿ ಕೇಳಬೇಕಾದ ಕ್ಷಮೆಯನ್ನ ನನ್ನಲ್ಲೇ ಕೇಳಿಕೊಳ್ಳುತ್ತಾ, ಇಡೀ ದಿನವನ್ನ ಮೆಲುಕು ಹಾಕುತ್ತಾ ಮಲಗಿದೆ. ಬೆಳಿಗ್ಗೆಯಿಂದ ಕಣ್ಣೆವೆ ಮುಚ್ಚಿದ್ದು ತೀರಾ ಕಡಿಮೆ ಎಂಬ ನೆನಪಾಗಿ ಬೇಗನೆ ಮುಚ್ಚಿಕೊಂಡೆ.

      ಈಗ ಮತ್ತೆ ನನ್ನ ಮನಸ್ಸು ಮಾತನ್ನಾಡಲು ಶುರುಮಾಡಿತ್ತು. ಬೆಳಿಗ್ಗೆ ಅದಕ್ಕೆ ಮರುಳೇ ಎಂದು ಬಯ್ದಿದ್ದರ ಸೇಡು ತೀರಿಸಿಕೊಳ್ಳಲು ಕಾದಂತಿತ್ತು. "ನಿನ್ನೆ ರಾತ್ರಿ ಕಂಡ ನನ್ನ ಕನಸು ನನಸಾಯ್ತು, ಈಗಲಾದರೂ ನಾನು ಮರುಳಲ್ಲ; ನೀನೇ ಮರುಳು ಅಂತ ಒಪ್ಪಿಕೋ" ಎಂದು ದಬಾಯಿಸುತ್ತಿತ್ತು. "ನಾನು ಮರುಳಲ್ಲ, ನೀನೇ ಮರುಳು" ಎಂದಂದು ನಸುನಗುತ್ತಾ ನಿದ್ರೆ ಹೋದೆ.

      ಇಷ್ಟರವರೆಗೂ ನಿಮಗೆ ತೋರಿಸದಿದ್ದ ನನ್ನ ಸಹೋದ್ಯೋಗಿಗಳ ಮುಖಗಳು ಇಲ್ಲಿವೆ. ಅವರ ಅಪ್ಪಣೆ ಕೇಳದೆ ಪ್ರಕಟಿಸಿದ್ದು.

ಭಂಡಾರಧಾರ ಹೋಗಿ ಬಂದ ತಂಡ (ಮುಂದಿಂದ ಹಿಂದಕ್ಕೆ.)
ಎಡ ಪಂಕ್ತೀಯರು: ದಿವಾಯ್,ಅಪೂರ್ವಾ,ನಾನು,ಅಭಿಷೇಕ್,ನಿರಂಜನ್
ಬಲ ಪಂಕ್ತೀಯರು:  ರುಚಿಕಾ,   ಆದಿತ್ಯ,   ಪವನ್,    ಮಧು,   ದಿವ್ಯಾ

No comments:

Post a Comment