Sunday, 11 May 2014

ಭಂಡಾರಧಾರ ಪ್ರವಾಸ ಕಥನ.. : ಅಧ್ಯಾಯ ೧

ನಾನು, ಫೋನು ಮತ್ತು ನನ್ನ ಮನಸ್ಸು...


      ರಾತ್ರಿ ಪೂರ್ತಿ ಅದೇ ಕನಸು. ಸುತ್ತಲೂ ತುಂಬಿ ನಿಂತ ಹಸಿರು. ಸಹ್ಯಾದ್ರಿಯ ಸಾಲೇ ಇರಬೇಕದು. ಬೇರೆ ಯಾವುದನ್ನೂ ಅಷ್ಟೊಂದು ಮನದುಂಬಿ ನೋಡಿದ ನೆನಪಿಲ್ಲ. ಹಿಂದೊಮ್ಮೆ ನೀಲಗಿರಿಯ ಬೆಟ್ಟಗಳನ್ನು ನೋಡಿದ್ದೆನಾದರೂ ಅದರ ಸ್ಪಷ್ಟ ಚಿತ್ರ ಮನಸ್ಸಿನಲ್ಲಿ ಉಳಿದಿಲ್ಲ. ನಾಳೆ ಹೋಗಲಿರುವುದು ಹೀಗೆಯೇ ಇದ್ದೀತೇ ಎಂದು ಮನಸ್ಸು ಕನಸು ಕಾಣುತ್ತಿತ್ತು. 'ನಾಳೆಯ ಬಗ್ಗೆ ಯೋಚಿಸಬೇಡವೋ ಮರುಳೇ..' ಎಂದು ನಾನು ನನ್ನ ಮನಸ್ಸಿಗೇ ಹೇಳಿಕೊಳ್ಳುವುದುಂಟಾದರೂ, ನಾನು ನನ್ನನ್ನು ಮರೆತು ನಿದ್ರಾಧೀನನಾದಾಗ ನಾಳೆಯ ಕನಸನ್ನು ಕಂಡು ಮಾರನೆಯ ಬೆಳಿಗ್ಗೆ ಎದ್ದೊಡನೆ 'ನಿನ್ನ ಇವತ್ತು ಹೀಗೆ..' ಎಂದೆನ್ನುತ್ತಾ ಮುಗುಳ್ನಗುವ ಮರುಳು ಮನಸ್ಸಿಗೆ ಏನೆನ್ನಲಿ ? 'ನಿನ್ನ ಕನಸುಗಳು ಕೈಗೂಡದಾಗ ಮತ್ತೆ ನೀನೇ ಅನುಭವಿಸುವಿಯಂತೆ, ಇನ್ನೆಂದೂ ನೀನು ಕನಸು ಕಾಣುವ ಯೋಚನೆ ಮಾಡಲಾರೆ' ಎಂದು ಒಂದಿಷ್ಟು ಬೈದು ಸುಮ್ಮನಾದೆನಾದರೆ, 'ಪ್ರತಿ ದಿನ ನಿನ್ನೊಂದಿಗೆ ಮಾತಾಡುತ್ತಿರುವಷ್ಟು ಸಮಯ ನಾನು ಕನಸ ಕಾಣಬಾರದೆಂದೇ ಯೋಚಿಸುತ್ತೇನೆ. ಆದರೆ ನೀನು ದಣಿದು ಮಲಗಿದಾಗ, ನಿದ್ರೆಯನ್ನರಿಯದ ನನ್ನೊಂದಿಗೆ ಮಾತಾಡಲು ಬೇರಾರೂ ಸಿಗದೆ ಕನಸು ಕಾಣುತ್ತಾ ಕೂರುವೆ' ಎನ್ನುವ ಈ ಮರುಳಿಗೆ ಏನೆನ್ನಲಿ.? ಹಾಗಾಗಿಯೇ ಇತ್ತೀಚೆಗೆ ನನ್ನ ಮನಸ್ಸು ಕನಸು ಕಾಣುತ್ತಿರುವುದು ನನಗೆ ತಿಳಿದರೂ ಕೂಡ ಸುಮ್ಮನಾಗುತ್ತೇನೆ. ಅದರ ನಗುವಿನೊಂದಿಗೆ ನಾನೂ ಮುಗುಳ್ನಗುತ್ತೇನೆ. ಈ ನಗುವನ್ನು ಮುರಿಯಲೋ ಎಂಬಂತೆ ನನ್ನ ಫೋನು ರಾಗ ಹಾಡತೊಡಗಿತು. ಇನ್ನು ಅದನ್ನು ಸುಮ್ಮನಾಗಿಸುವ ಕೆಲಸ.

      ಫೋನು ಕೂಗತೊಡಗಿದ್ದು ಪವನ್ ನನ್ನ ಕರೀತಿದಾನೆ ಅಂತ ಹೇಳಲು. ನಾಲ್ಕು ಮುಕ್ಕಾಲರ ಸುಮಾರಿಗೆ ಅವರ ಮನೆಯ ಬಳಿಯಿಂದ ಗಾಡಿ ಹೊರಟಾಗ ಕರೆ ಮಾಡುವುದಾಗಿ ಮೊದಲೇ ಅವನು ತಿಳಿಸಿದ್ದರಿಂದ ಒಮ್ಮೆಲೇ ಗಾಬರಿಯಾಯಿತು. ನನ್ನ ಫೋನು ನಾಲ್ಕು ಗಂಟೆಗೆ ಯಾಕೆ ನನ್ನ ಎಬ್ಬಿಸಲಿಲ್ಲ, ಅಥವಾ ಅದು ಎಬ್ಬಿಸಿದ್ದು ನನಗೆ ಗೊತ್ತೇ ಆಗಲಿಲ್ಲವಾ ಎಂದು ಯೋಚಿಸುತ್ತಿರುವಾಗಲೇ ಪವನ್ ಕರೆ ಮಾಡಿದ್ದೇ ನನ್ನನ್ನು ಎಬ್ಬಿಸಲೆಂದು ತಿಳಿಯಿತು. ಗಂಟೆ ನಾಲ್ಕಾಗುವುದಕ್ಕೆ ಇನ್ನೂ ಐದು ನಿಮಿಷ ಇತ್ತು. 'ಏನೇನೋ ಅನ್ಕೋಬೇಡ, ನನ್ನದೇನೂ ತಪ್ಪಿಲ್ಲ' ಎನ್ನುತ್ತಾ ಫೋನು ನಗುತ್ತಿತ್ತು. ಸರಿ ಎಂದು ಅದನ್ನು ಪಕ್ಕಕ್ಕಿರಿಸಿದ ಎರಡು ನಿಮಿಷದಲ್ಲಿ ಮತ್ತೊಮ್ಮೆ ಕೂಗತೊಡಗಿತು. ಈಗೇನಪ್ಪಾ ಅಂದ್ರೆ ನಾನು ಎದ್ದಿದ್ದು ಅದಕ್ಕೆ ಹೇಳಿರಲಿಲ್ಲ, ಮಾಮೂಲಿಯಾಗಿ ಗಂಟೆ ನಾಲ್ಕಾಯ್ತು ಅಂತ ಹೇಳೋಕೆ ಈ ಆರ್ಭಟ. ಅಂತೂ ಅದನ್ನು ಸುಮ್ಮನಾಗಿಸಿ ಪ್ರಾತರ್ವಿಧಿಗಳನ್ನು ಮುಗಿಸಿ ಅಭಿಷೇಕ್ ನ ಕರೆಗೆ ಕಾಯುತ್ತಾ ಕುಳಿತೆ. ಈ ಮಧ್ಯೆ ನನ್ನ ಫೋನು ಎರಡು ಬಾರಿ ATM ನಿಂದ ದುಡ್ಡು ಬಿಡಿಸಲು ನೆನಪು ಮಾಡಿದ್ದು ಬಿಟ್ಟರೆ ಪೂರ್ಣ ಮೌನಕ್ಕೆ ಶರಣಾಗಿತ್ತು. ಏನೊಂದೂ ಮಾತಾಡದೇ ಇರುವ ನನ್ನ ಫೋನಿನ ಮೇಲೆ ಈಗ ಒಂದಿಷ್ಟು ಅನುಮಾನ ಶುರುವಾಯ್ತು. ದಿನದ 23 ತಾಸುಗಳ ಜೊತೆಗಿದ್ದು, ಹೊತ್ತಿಗೆ ಸರಿಯಾಗಿ ಅದಕ್ಕೆ ಆಹಾರ ಕೊಟ್ಟಿಲ್ಲವಾದರೂ ಸದಾ ನನಗೆ ಸಹಾಯ ಮಾಡುತ್ತಿದ್ದ ಫೋನಿಗಿಂತ ಮುಖವೇ ಕಂಡಿಲ್ಲದ ಡ್ರೈವರ್ ಮಹಾನುಭಾವನ ಸಮಯಪ್ರಜ್ಞೆಯ ಮೇಲೆ ನಂಬಿಕೆ ಇಟ್ಟು ನಾಲ್ಕು ಮುಕ್ಕಾಲಿಗೆ ಕೋಣೆಯಿಂದ ಹೊರಬಿದ್ದೆ.

      ಈಗ ನನ್ನ ಫೋನು ಮತ್ತೊಮ್ಮೆ ATM ಗೆ ಹೋಗಲು ನೆನಪು ಮಾಡಿತು. ಅದರಾಜ್ಞೆಯನ್ನು ಮೀರದೆ ಸಮೀಪದ ಕೆನರಾಬ್ಯಾಂಕ್ ನ ATM ಗೆ ಹೋದೆ. ಅದು ದುಡ್ದನ್ನಂತೂ ಕೊಡಲಿಲ್ಲ ಆದರೆ 'ನಿಮಗೆ ಕಾಸು ಕೊಡಲಾಗದಕ್ಕೆ ವಿಷಾದಿಸುತ್ತೇವೆ' ಅಂತ ಕ್ಷಮೆ ಕೇಳುವುದನ್ನಂತೂ ಮರೆಯಲಿಲ್ಲ. ಮನುಷ್ಯ ತನ್ನಿಂದಾಗದನ್ನೆಲ್ಲಾ ಯಂತ್ರಗಳಿಗೆ ಹೇಳಿಕೊಟ್ಟಿರುವ ರೀತಿ ಕಂಡು ನನಗೆ ನಗು ಬಂತು. ಜೊತೆಗೆ 'ನಿನಗೆ ನಿನ್ನೆಯೇ ಹೇಳಿದ್ನಲ್ಲಾ, ಕೆನರಾ ಬ್ಯಾಂಕ್ ನ ATM ದುಡ್ಡು ಕೊಡಲ್ಲಾಂತ' ಎನ್ನುತ್ತಾ ತನ್ನ ಮಾತುಗಳೆಂದೂ ಸುಳ್ಳಾಗದು ಎಂದು ಬೀಗುತ್ತಿದ್ದ ನನ್ನ ಮನಸ್ಸನ್ನು ಕಂಡು ಪೆಚ್ಚೆನಿಸಿತು. ಅಲ್ಲಿಂದ ಮುಂದಿರುವ ಐಸಿಐಸಿಐ ಬ್ಯಾಂಕ್ ನ ATM ಗೆ ಹೋದೆ. ಇದು ರಶೀದಿಗೆ ಮಾಫಿ ಕೇಳಿತಾದರೂ ದುಡ್ದನ್ನಂತೂ ಕೊಟ್ಟಿತು. ತಿರುಗಿ ಬಂದು ಕೆನರಾ ಬ್ಯಾಂಕ್ ಬಳಿಯ ಮಹಾದ್ವಾರವೊಂದರ ಬಳಿ ಬರಲಿರುವ ಗಾಡಿಗಾಗಿ ಕಾಯುತ್ತಾ ನಿಂತೆ. ಯಂತ್ರಗಳಿಗಿಂತ ಮನುಷ್ಯನನ್ನು ನಂಬಿದ್ದಕ್ಕೆ ನನಗೆ ಸಿಕ್ಕಿದ್ದು ಈ ಕಾಯುವಿಕೆ ಎಂಬ ಬಹುಮಾನ. ಈ ಬಹುಮಾನ ನೋಡಿ ನನ್ನ ಫೋನೂ ನಕ್ಕಿರಬೇಕು, 'ನನ್ನ ಅನುಮಾನಿಸಿದ ಕರ್ಮವನ್ನನುಭವಿಸು' ಎನುತ್ತಿತ್ತೇನೋ, ನನಗಂತೂ ಅದಕ್ಕೆ ಮುಖ ತೋರಿಸಲೂ ಮನ ಬಾರದೆ ಕೈಗದಡಿಯಾರದಲ್ಲೇ ಆಗಾಗ ಸಮಯ ನೋಡುತ್ತಾ ಕುಳಿತೆ.

      ಆದರೆ ಒಂದು ವಿಷ್ಯ ಹೇಳ್ತೀನಿ ಕೇಳಿ, ನೀವು ಸ್ವಸಮರ್ಥನೆ ಎಂದರೂ ಸರಿಯೇ. ನಾನೇನೂ ಸುಖಾ ಸುಮ್ಮನೆ ನನ್ನ ಫೋನನ್ನು ಅನುಮಾನಿಸಿದ್ದಲ್ಲ. ಆದರೆ ಆ ಅನುಮಾನಕ್ಕೆ ಪೂರ್ತಿ ಹೊಣೆ ನನ್ನ ಫೋನೊಂದೇ ಅಲ್ಲ, ನನ್ನ ಬಗ್ಗೆ ತೀರ ಕಾಳಜಿ ವಹಿಸುವ Customer Care ನವರೂ ಹೌದು. ಎಷ್ಟೋ ಸಾರಿ ನನ್ನ ಫೋನು Signal ತೋರಿಸುತ್ತಿದ್ದರೂ ನನ್ನ ಫೋನು Switch Off ಎಂದೋ , ವ್ಯಾಪ್ತಿ ಪ್ರದೇಶದ ಹೊರಗಿದ್ದಾರೆಂದೋ ಸುಳ್ಳು ಹೇಳಿದುದುಂಟು. ಈ ಬಗ್ಗೆ ಸ್ನೇಹಿತರು ನನ್ನಲ್ಲಿ ದೂರಿದಾಗ ನಾನು ಫೋನಿನ ಮುಖ ನೋಡದಿದ್ದರಾದೀತೇ? ಈ ಸಂದರ್ಭಗಳಲ್ಲಿ Customer Care ನವರು ಸುಳ್ಳಾಡಿದ್ದರೂ ನನಗೆ ಅವರ ಮೇಲೇ ಹೆಚ್ಚು ನಂಬಿಕೆ. ಇದಕ್ಕೆ ಮತ್ತೊಂದು ಕಾರಣ ಏನಂದ್ರೆ 'ಫೋನು proxy signal ತೋರಿಸ್ತಿದ್ರೆ' ಅನ್ನುವ ಒಂದು ಅನುಮಾನ ನನ್ನ ಮನಸ್ಸಿಗೆ ಫೋನಿನ ಮೇಲಿರುವುದು.

      ಇಷ್ಟೆಲ್ಲಾ ಆದರೂ ಇನ್ನೂ ನಮ್ಮ ಮೋಟಾರಂತೂ ಬಂದಿಲ್ಲ. ನಾನು ಅಲ್ಲೇ ಸಮೀಪದ ಬೀದಿ ದೀಪವೊಂದರ ಕೆಳಗೆ ಕಾರಂತಜ್ಜನೊಂದಿಗೆ ಹರಟುತ್ತಾ ಕುಳಿತೆ. ಈ ಶತಮಾನದ  ವಿಶ್ವೇಶ್ವರಯ್ಯನಾಗಲಿಲ್ಲವಾದರೂ ಬೇಸರವಾದರೂ ಕಳೆದೀತು ಅಂತ. ತಮ್ಮ ಹುಚ್ಚು ಮನಸ್ಸಿನ ಹತ್ತು ಹಲವಾರು ಮುಖಗಳ ಬಗ್ಗೆ ಅವರು ಹೇಳುತ್ತಾ ಹೋದರು. ನಾನಂತೂ ಕಾಣದ ಅವರ ಜೀವವನ್ನ, ಜೀವನವನ್ನ ಕಣ್ಣಲ್ಲಿ ಸೆರೆಹಿಡಿಯುವ ಮನದಲ್ಲಿ ಅನುಭವಿಸುವ ಪ್ರಯತ್ನದಲ್ಲಿದ್ದೆ. ಕೆಲವೊಂದೆಡೆ ನನ್ನನ್ನು ತಡೆದು 'ಅವರ ಹುಚ್ಚು ಮನಸ್ಸಿನಂತೆಯೇ ಆಲ್ವಾ ನಾನು ?' ಎಂದು ನನ್ನ ಮರುಳು ಮನಸ್ಸು ಕೇಳುತ್ತಿತ್ತು. ಮತ್ತೊಮ್ಮೆ ಅದಕ್ಕೆ ಬಯ್ಯುವ ಮನಸ್ಸಾಗಲಿಲ್ಲ. ನಕ್ಕು ಸುಮ್ಮನಾದೆ.

3 comments:

  1. ಚೆನ್ನಾಗಿದೆ.ಬರವಣಿಗೆಯ ಶೈಲಿಯಲ್ಲಿ ಕಾರಂತಜ್ಜನ ಪ್ರಭಾವ ಎದ್ದು ಕಾಣುತ್ತಿದೆ.

    ReplyDelete
  2. Very nice. Keep going... Good Luck.

    ReplyDelete