ವಿಲ್ಸನ್ ಅಣೆಕಟ್ಟು; ಆರ್ಥರ್ ಸರೋವರ..
ನೇಸರನು
ಮೇಲೆ ಹರಿದು, ಮಂಜು ಸರಿಸುವ ಮೊದಲೇ ಕಸಾರದ ಹಸಿರನ್ನು ಉಸಿರಲ್ಲಿ ತುಂಬಿಕೊಂಡು
ಮುನ್ನಡೆದೆವು. ದಾರಿಯುದ್ದಕ್ಕೂ ಬೆಟ್ಟದ ಸಾಲುಗಳನ್ನು ನೋಡುತ್ತಾ ಪಯಣ ಸಾಗಿತು. ಮುಂದಿನ
ನಿಲ್ದಾಣ ವಿಲ್ಸನ್ ಅಣೆಕಟ್ಟು. ಮತ್ತೆ ಆರ್ಥರ್ ಸರೋವರ. ಇದು ನಾವು ಅಂದುಕೊಂಡಿದ್ದು.
ಹೋಗಿ ನೋಡಿದರೆ ಇವೆರಡೂ ಒಂದೇ ನಾಣ್ಯದ ಎರಡು ಮುಖಗಳು. ಒಂದು ಆಣೆಕಟ್ಟು ಹರಿದು ಬರುವ
ನೀರಿಗೆ ಮುಂದೆ ಸಾಗದಂತೆ ಅಡ್ಡ ನಿಂತು, ತನ್ನಲ್ಲಿ ಜಮಾ ಆದ ನೀರಿನಿಂದ ಒಂದಿಷ್ಟು
ವಿದ್ಯುತ್ತು ಉತ್ಪಾದನೆಯಾಗಿ, ನಾಲ್ಕಾರು ಕತ್ತಲ ಮನೆಗಳಲ್ಲಿ ಸಂತೋಷವನ್ನು ಬೆಳಗುವುದು
ಅಥವಾ ಜಮೆಯಾದ ನೀರು ಕೆಲವು ರೈತರ ಹೊಲಗಳಲ್ಲಿ ಹರಿದು ಕೃಷಿಗೆ ನೆರವಾಗಿ, ಅವರ ಬದುಕಲ್ಲಿ
ಖುಷಿಯ ಪೈರು ಬೆಳೆಸುವುದು. ಆದರೆ ಬಹುತೇಕ ಲಾಭ ಒಬ್ಬರಿಗೆ ನಷ್ಟವಾದಾಗ ಮಾತ್ರ ಸಾಧ್ಯ
ಅಲ್ಲವೇ? ಇದೇ ರೀತಿ ಆ ಆಣೆಕಟ್ಟು ತನ್ನ ವಿಸ್ತಾರವನ್ನು ಹೆಚ್ಚಿಸಲಿಕ್ಕಾಗಿ
ಸುತ್ತಮುತ್ತಲಿನ ತಗ್ಗು ಪ್ರದೇಶಗಳನ್ನು ನುಂಗಿ ಬಿಡುವುದೂ ಉಂಟು. ಎಷ್ಟಾದರೂ
ಬಗ್ಗಿದವನಿಗೆ ಒಂದು ಗುದ್ದು ಹೆಚ್ಚು. ಹೀಗೆ ಎದೆಯುಬ್ಬಿಸಿ ನಿಂತ ಆಣೆಕಟ್ಟು ಒಂದಾದರೆ,
ಅದರ ಹಿನ್ನೀರೇ ಆರ್ಥರ್ ಸರೋವರ. ಮೊದಲಿಗೆ ಆ ಸರೋವರದಲ್ಲಿ ಕುಣಿಯುತ್ತಿದ್ದ ಅಲೆಗಳನ್ನು
ನೋಡಿ ಒಂದು ನದಿಯೇನೋ ಅಂದುಕೊಂಡಿದ್ದೆ. ಆದರೆ ಈಗ ನಿಜ ವಿಷಯ ತಿಳಿದಿರುವುದರಿಂದ ಇನ್ನು ಮುಂದೆ ಅದನ್ನ ಸರೋವರ ಎಂದೇ ಕರೆಯೋಣ.
ಸುತ್ತಲ
ನೋಟ, ಬೀಸಿ ಬರುತ್ತಿದ್ದ ಗಾಳಿ, ತುಂಬಿ ಹರಿಯುತ್ತಿದ್ದ ಸರೋವರ ಎಲ್ಲಾ ಒಂದಾಗಿ
ಅಲ್ಲೊಂದು ಸುಂದರ ವಾತಾವರಣ ಸೃಷ್ಟಿಯಾಗಿತ್ತು. ಆದರೆ ಇದರ ಅನುಭವ ನಮ್ಮ ನಂತರ ಬಂದವರಿಗೆ
ಅಷ್ಟೊಂದು ಅನುಭವವಾಗಿರಲಿಕ್ಕಿಲ್ಲ. ಯಾಕಂದ್ರೆ ಅದಾಗಲೇ ಅಲ್ಲಿ ನಮ್ಮ ಕಪಿ ಚೇಷ್ಟೆ
ಶುರುವಾಗಿತ್ತಷ್ಟೇ. ಈ ವರ್ಷ ಇಷ್ಟರಲ್ಲಾಗಲೇ ಎಲ್ಲೆಡೆ ಮಳೆ ಹೆಚ್ಚಾಗಿದ್ದರೂ ಇಲ್ಲಿಯ
ಸರೋವರದಲ್ಲಿ ಅಷ್ಟೊಂದು ನೀರಿರಲಿಲ್ಲ. ಆದರೆ ಜೋರಾಗಿ ಬೀಸಿ ಬರುತ್ತಿದ್ದ ಗಾಳಿಯಿಂದಾಗಿ
ಅಲೆಗಳು ಒಂದರ ಬೆನ್ನೇರಿ ಒಂದು ಬರುತ್ತಿದ್ದವು. ಆದರೂ ನಾವು ಅವುಗಳ ಕೆಳಗೆ
ನುಗ್ಗುವಷ್ಟು ಎತ್ತರಕ್ಕೇನೂ ಏರಿರಲಿಲ್ಲ ಬಿಡಿ. ಇದರೊಂದಿಗೆ ಅಲ್ಲಿ ನೀರಿಗಿಳಿಯದಂತೆ
ನಮ್ಮನ್ನು ತಡೆಯಲೂ ಯಾರೂ ಇರದ್ದರಿಂದ ಉತ್ಸಾಹ ಉತ್ತುಂಗಕ್ಕೇರಿತ್ತು. ಹಾಗೇ ನೀರಿನಲ್ಲಿ
ಕಾಲೆಳೆಯುತ್ತಾ ಒಂದೆರಡು ಮಾರು ಸಾಗಿದೆ. ಇನ್ನೂ ಚೂರು ಮುಂದೆ ಅಳತೆಗೋಲು ಮೂರು ಅಡಿ
ಎತ್ತರದವರೆಗೂ ನೀರಿದೆ ಎಂದು ಹೇಳುತ್ತಿತ್ತು. ಅದರ ಮುಂದಿದ್ದ ಇನ್ನೊಂದು ಎಷ್ಟು ಹೇಳುತ್ತಿತ್ತು? ಕಾಣಲಿಲ್ಲ, ಕೇಳಲಿಲ್ಲ. ಈ ನಡುವೆ ಜೊತೆಗಿದ್ದ ಅಭಿಷೇಕ್ ಒಂದಿಷ್ಟು
ಹೆದರಿಸಿದ. ಮುಂದೆ ಹೋಗಬೇಕೆಂದಿದ್ದ 'ಛತ್ರಿ ಜಲಪಾತ'(Umbrella Falls)ದಲ್ಲಿ
ನೀರಿಲ್ಲದಿದ್ದರೆ ಅನ್ನೋ ಅನುಮಾನ ಅದು. ನೀರಿನ ತಾಣಕ್ಕೆ ಬಂದು ಅಡಿಯಿಂದ ಮುಡಿತನಕ
ನೆನೆಯದೇ ಹೋದರೆ ಹೋಗಿ ಬಂದ ಖುಷಿಯೇ ಮೂಡದು. ನೀವಿದನ್ನ ಯಾವ ನೆನೆಯುವಿಕೆಯ ಅರ್ಥದಲ್ಲಿ ಕೊಂಡರೂ ಸರಿಯೇ.
ಇದೇ
ಮನಸ್ಸಿಂದ ನೀರಿನಲ್ಲಿ ಎರಡು ಮುಳುಗು ಹಾಕಿ ಎದ್ದೆ. ಇನ್ನೂ ಒಂದಿಷ್ಟು
ಹಾಕುತ್ತಿದ್ದೆನೇನೋ.! ಆದರೆ ಅಷ್ಟರಲ್ಲೇ ನನ್ನ ಕೊರಡು ದೇಹಕ್ಕೇನಾದರೂ ಆದರೆ ಎಂಬ ಭಯ
ಬಿದ್ದು; ಭಯವಲ್ಲವಂತೆ, ಕಾಳಜಿಯಂತೆ ಅದು. ಮೊದಲಿಗೆ ಆಕೆ care ಎಂದು ಕೂಗಿದ್ದು scare ಎಂದಂತೆ ಕೇಳಿ, ಎರಡೆರಡು ಬಾರಿ ಆಕೆ ಅದನ್ನೇ ಹೇಳಿದರೂ, ನನ್ನ ಕಿವಿಗಳನ್ನು ಎಷ್ಟೇ ಅರಳಿಸಿದರೂ, ಸರಿಯಾಗಿ ಕೇಳಿಸದೇ ಹೋಗಿ, ಕೊನೆಗೆ ಕನ್ನಡದಲ್ಲಿ 'ಕಾಳಜಿ' ಅಂತ ಹೇಳಿದಾಗ ಕಿವಿಗೆ ಕೇಳಿಸಿತು. ಬುದ್ಧಿಗೆ ಅರ್ಥವಾಯ್ತು. ಆ ಕಾಳಜಿಯಿಂದಾಗಿ ನನ್ನ ಸಾಹಸವನ್ನು
ನಿಲ್ಲಿಸಬೇಕಾಗಿ ಬಂತು. ನಮ್ಮ ಮನಸ್ಸು ಯಾವುದರಲ್ಲಿ ಖುಷಿ ಕಾಣುತ್ತೆ ಅಂತ ತಿಳಿಯದೆಯೇ, ಒದಗಬಹುದಾದ ಆಪತ್ತಿನ ಬಗ್ಗೆಯೇ ಯೋಚಿಸಿದ್ದೇ ಆದರೆ ಅಲ್ಲಿ ಎಂದೂ ಸಂತೋಷದಿಂದ ಬದುಕುವುದು ಸಾಧ್ಯವಿಲ್ಲ. ಹಾಗಂತ ನನ್ನ ಮರುಳು ಇನ್ನೊಬ್ಬರ ಆತಂಕಕ್ಕೆ ಕಾರಣವಾಗಲೂಬಾರದು. ಈ ಕಾರಣಕ್ಕಾಗಿ ನೀರಿಂದ ಹೆಜ್ಜೆ ಹಿಂದಿಡಬೇಕಾಯ್ತು. ಬಳಿಕ ನೀರಿನಲ್ಲಿ ಕಲ್ಲೆಸೆಯುವ ಸ್ಪರ್ಧೆ ಶುರುವಾಯ್ತು. ಬಹಳ ದೂರ ಯಾರು ಎಸೀತಾರೆ ಅಂತ. ನಾನು ಮಾತ್ರ ಎಸೆಯಲು ಹೋಗಲಿಲ್ಲ. ಎಲ್ಲರೂ ಕಲ್ಲು ಎಸೆದು ಸರೋವರದಲ್ಲಿ ನೀರಿನ ಮಟ್ಟ ಹೆಚ್ಚಾಗಿಬಿಟ್ಟರೆ ಅಂತ.
ನಾವು ಹೋದಲ್ಲೆಲ್ಲೂ ಕಪಿಗಳ ಹಾವಳಿ ಇರಲಿಲ್ಲ. ಮನಸ್ಸಿನಿಂದ ಮಾನವ ಇಲ್ಲವೇ ಮನುಷ್ಯ ಎಂಬುದಕ್ಕಿಂತಲೂ, ಮಂಗನಿಂದ ಮಾನವ ಎನ್ನುವುದನ್ನ ಗಾಢವಾಗಿ ನಂಬಿರುವ ನಾವೇ ಅವುಗಳ ಪಾತ್ರವನ್ನೂ ವಹಿಸಿದೆವು. ಮರ ಹತ್ತಿ ಕುಳಿತೆವು, ಕೆಮರಾ ನೋಡಿ ಹಲ್ಕಿರಿದೆವು. ನಿಜವಾಗಿ ಕೋತಿಗಳೇನಾದರೂ ಅಲ್ಲಿ ಇದ್ದಿದ್ದೇ ಆದರೆ ನಾಚಿ ಮರೆಗೆ ಸರಿಯುತ್ತಿದ್ದವೇನೋ!?. ಕಡೆಗೆ ನಿಮಗೆಲ್ಲರಿಗೂ ಗೊತ್ತಿರುವಂತೆ, ಇಂದಿನ ಬಹುತೇಕ ಯುವಜನತೆಗೆ ಮಹಾತ್ಮಾ ಗಾಂಧೀಜಿಯವರ ಬಗ್ಗೆ ಎಂಥದೇ ದ್ವೇಷ ಇದ್ದರೂ, ತಪ್ಪಿ ಪ್ರೀತಿಯಿದ್ದರೆ ಅದಕ್ಕಿಂತಲೂ ಸ್ವಲ್ಪ ಹೆಚ್ಚೇ ಪ್ರೀತಿ; ಅವರದ್ದೆಂದು ಕರೆಯಲ್ಪಡುವ ಮೂರು ಮಂಗಗಳ ಮೇಲೆ. ಹಾಗಾಗಿ ಅವುಗಳಂತೆ ಕುಳಿತು ಫೋಟೋಗೆ ಪೋಸು ಕೊಟ್ಟಿದ್ದೂ ಆಯ್ತು. ನಮ್ಮಲ್ಲಿ ಸ್ವಲ್ಪ ಲೆಕ್ಕ ತಪ್ಪಾಗಿರಲೂಬಹುದು. ಹಾಗಾಗಿ ಮೂರಕ್ಕಿಂತಲೂ ಹೆಚ್ಚಿಗೆ ಇದ್ದೆವೋ ಏನೋ. ಕಣ್ಣು ಮುಚ್ಚಿಕೊಂಡಿದ್ದ ಮಂಗಕ್ಕೆ ಹೇಗೂ ಗೊತ್ತಿರಲಿಕ್ಕಿಲ್ಲ. ಫೋಟೋ ತೆಗೆದಾತ ಎಣಿಸುತ್ತಾ ಕೂತಿರಲಿಕ್ಕಿಲ್ಲ. ಉಳಿದವುಗಳು ಕತ್ತು ತಿರುಗಿಸಿ ನೋಡಹೋಗಿ, ಮರದಿಂದ ಕೆಳಗೆ ಬಿದ್ದು, ಲೆಕ್ಕದಲ್ಲಿ ತಾವೇ ಕಡಿಮೆಯಾದರೆ ಎಂಬ ಭಯದಿಂದಲೇ ಸುಮ್ಮನಿದ್ದವು. ದಿನದ ಬಹುಪಾಲು ಬಾಯಿ ಮುಚ್ಚಿಕೊಂಡೇ ಇದ್ದ ನಾನು, ಇಲ್ಲಿ ಅಧಿಕೃತವಾಗಿ ಬಾಯಿಗೆ ಕೈ ಅಡ್ಡ ಇಟ್ಟುಕೊಂಡು ಕುಳಿತೆ.

ಒಂದಿಷ್ಟು ಫೋಟೊಗಳನ್ನ ಕ್ಲಿಕ್ಕಿಸಿ ಆದ ಮೇಲೆ ಮುಂದೆ ಸಾಗಿದ್ದು ಜಲಪಾತವನ್ನರಸಿ. ಆ ಕಥೆ ಮುಂದಿನವಾರ.
:)
ReplyDelete