Friday 16 August 2013

ಭಂಡಾರಧಾರ ಪ್ರವಾಸ ಕಥನ.. : ಅಧ್ಯಾಯ ೩

ಕಸಾರಾ ಘಾಟಲ್ಲೊಂದಿಷ್ಟು ಹೊತ್ತು..


      ಬೆಳಗ್ಗಿನ ಉಪಾಹಾರ ಮುಗಿಸಿದ್ದಾಯ್ತು. ಅಂದಿನ ಮುಖ್ಯಾಹಾರವೂ ಅದೇ ಆಗಿದ್ದೀತೆಂಬ ಯೋಚನೆಯೇ ಆಗ ಬಂದಿರಲಿಲ್ಲ. ಪಯಣ ಮುಂದುವರಿಯಿತು. ಮುಂದಿನ ಯಾವುದೇ ಆಟೋಟಗಳಲ್ಲಿ ನಾನು ಪಾಲ್ಗೊಳ್ಳಲಿಲ್ಲ. ಇದು ಬರೀ ಆಟ + ಓಟಕ್ಕೆ ಸೀಮಿತವಾಗಿದ್ದಲ್ಲ, ಬದಲಾಗಿ ಆಟ + ಊಟಕ್ಕೂ. ಬಾಕಿ ದೇಹವೆಲ್ಲಾ ಗಾಡಿಯೊಳಗೇ ಇದ್ದರೂ ಮನಸ್ಸು ಹಾಗೂ ತಲೆಗಳೆರಡನ್ನೂ ಹೊರಗಿನ ಹಸಿರನ್ನು ಮೇಯಲು ಬಿಟ್ಟಿದ್ದೆ. ಕಣ್ಣುಗಳಿಗೋ ದೂರದಲ್ಲಿ ಕಾಣುತ್ತಿದ್ದ ಹಸಿರು ತುಂಬಿದ ಬೆಟ್ಟಗಳನ್ನು ನೋಡಿ ತ(ದ)ಣಿಯುವುದಷ್ಟೇ ಕೆಲಸ. ಒಳಗೆ ಮತ್ತೂ ಅಂತ್ಯಾಕ್ಷರಿಯೋ, ಮೂಕಾಭಿನಯವೋ, ಎರಡೋ, ಎರಡರಲ್ಲೊಂದೋ ಮುಂದುವರಿದಿತ್ತಾದರೂ ಯಾವುದೆಂದು ಅರಿವಿರಲಿಲ್ಲ. ಮಧ್ಯದಲ್ಲೊಮ್ಮೆ ಆಟದಲ್ಲೊಂದಾಗಲು ಆಹ್ವಾನ ಬಂದಿತ್ತಾದರೂ ತಿರುಗಿಯೂ ನೋಡದೆ ತಿರಸ್ಕರಿಸಿದ್ದೆ.
 
      ಸುಮಾರು ೮ ತಿಂಗಳುಗಳು ಕಳೆದು ವರುಣನ ಆಗಮನವಾಗಿರುವುದರಿಂದ ಖುಷಿಗೊಂಡ ಸಹ್ಯಾದ್ರಿ ತನ್ನ ಹುಸಿಮುನಿಸು, ಬೇಸರಗಳೆಲ್ಲವನ್ನೂ ಮರೆತು ಸೃಷ್ಟಿಯ ಸಕಲ ಚೆಲುವೂ ತನ್ನಲ್ಲೇ ಇದೆ ಎನ್ನುವಂತೆ ಮೈತುಂಬಿ ನಿಂತಿರುವುದು ನೋಡುತ್ತಿದ್ದರೆ ಕಣ್ಣುಗಳು ಕದಲುತ್ತಿರಲಿಲ್ಲ. ಮುಂದೆ ಮುಂದೆ ಸಾಗುವಾಗ ಒಂದಕ್ಕಿಂತ ಒಂದು ಎತ್ತರದ ಬೆಟ್ಟಗಳನ್ನು ಕಂಡಾಗ  ಅತಳ, ವಿತಳ, ಸುತಳ, ತಳಾತಳ, ಮಹಾತಳ, ರಸಾತಳ, ಪಾತಾಳಗಳನ್ನು ಪಾದದಡಿಯಲ್ಲಿ ತುಳಿದಿಟ್ಟ ದಿಟ್ಟ ಪರಾಕ್ರಮವಲ್ಲವಾದರೂ, ಒಂದರೆ ಕ್ಷಣ ಆ ಬೆಟ್ಟಗಳ ಮೇಲೆ ಹತ್ತಿ ನಿಲ್ಲುವ ಮನಸ್ಸಾಗುತ್ತಿತ್ತು. ಆದರೆ ಸಾಗುತ್ತಿದ್ದುದು ಮುಖ್ಯರಸ್ತೆಯಲ್ಲಾದುದರಿಂದ ಕಂಡ ಕಂಡಲ್ಲಿ ವಾಹನ ನಿಲ್ಲಿಸಲು ಅವಕಾಶವಿರಲಿಲ್ಲವಾದ್ದರಿಂದ ಒತ್ತಿ ಬರುತ್ತಿದ್ದ ಆಸೆಯನ್ನು ಹತ್ತಿಕ್ಕಿ ಕೂರಬೇಕಾಯ್ತು. ಕಣ್ಣೆವೆ ಮುಚ್ಚದೆ, ನಿಸರ್ಗದ ಸೊಬಗನ್ನೆಲ್ಲ ಇಂದೇ ಸೆರೆಹಿಡಿದುಬಿಡುವೆನೆನ್ನುವಂತೆ ಕುಳಿತ ನನ್ನನ್ನು ನೋಡಿ ವರುಣನಿಗೂ ಸಿಟ್ಟು ಬಂತೇನೋ.! ಅಥವಾ ಹೊಟ್ಟೆಕಿಚ್ಚೋ..!! ನುಗ್ಗಿ ಬಂದು ಕಣ್ಣುಗಳಿಗೆ ಸೂಜಿಯಂತೆ ಚುಚ್ಚತೊಡಗಿದ. ಅವನಿಗೆ ಬೆಂಬಲ ಕೊಡಲು ಮರುತ್ತ ಬೇರೆ. ಆದರೂ ನನ್ನ ಹಟ ಬಿಡದೆ ಹಾಗೆಯೇ ಕುಳಿತೆ. ನಾನೇ ಪೂರ್ಣ ಹಿಂದಿನ ಸೀಟಿನಲ್ಲಿ ಕೂತಿದ್ದುದರಿಂದ ಅಲ್ಪ ಸ್ವಲ್ಪ ನೀರು ಒಳ ಹೊಕ್ಕರೂ ಇತರರಿಗೆ ತೊಂದರೆಯಾಗುವ ಪ್ರಶ್ನೆಯಿರಲಿಲ್ಲ. ಅಲ್ಲದೆ ಉಳಿದವರೆಲ್ಲಾ ಅವರವರ ಆಟದಲ್ಲೋ, ನೋಟದಲ್ಲೋ ಮಗ್ನರಾಗಿದ್ದುದರಿಂದ ಆ ಬಗ್ಗೆ ಯಾವುದೇ ಯೋಚನೆ ನನಗೆ ಬಂದೂ ಇರದೆ ತಲೆ ಒಳ ಹಾಕದೆ ಕುಳಿತೇ ಇದ್ದೆ. ನನ್ನ ಹಟದ ಮುಂದೆ ಸೋತೋ, ಕನಿಕರ ಬಂದೋ ವರುಣ ಸುಮ್ಮನಾದ. ಈಗ ನಿಮ್ಮ ಮುಂದೆ 'ಅದು ನನ್ನದೇ ಗೆಲುವು, ಅಂದು ಅವನು ಸೋತಿದ್ದೇ ಸತ್ಯ' ಎಂದು ನಾನಿಲ್ಲಿ ಕೊಚ್ಚಿಕೊಂಡರೂ ಅವನಿಗೇನೂ ತಿಳಿಯದು ಬಿಡಿ. ಹೀಗೆ ಮತ್ತೊಮ್ಮೆ ನೋಡಲು ಸಿಗದ ದೃಶ್ಯಗಳನ್ನೆಲ್ಲಾ ಒಂದೇ ನೋಟಕ್ಕೆ ಕಣ್ಮನಗಳಲ್ಲಿ ತುಂಬಿಕೊಳ್ಳುತ್ತಾ ಮುಂದೆ ಸಾಗಿದೆ. ಈ ಮಧ್ಯೆ ಮಧು ಒಮ್ಮೆ ಬಂದು ನನ್ನ ತಲೆ ತೊಯ್ದಿರುವುದರ ನೆನಪು ಮಾಡಿಕೊಟ್ಟು ಹೋದಳು. ಅದೇನೂ ನನಗೆ ತಿಳಿಯದ ವಿಷಯವೇ.? ನಕ್ಕು ಸುಮ್ಮನಾದೆ.

  
       ಒಂದಿಷ್ಟು ಮುಂದೆ ಸಾಗಿದ ಬಳಿಕ ಕಸಾರ್ ಎಂಬಲ್ಲಿ ಗಾಡಿ ನಿಲ್ಲಿಸಲು ಸ್ವಲ್ಪ ಅವಕಾಶವಿತ್ತು. ಮೂರು ಮಾರು ದೂರದಲ್ಲಿರುವುದೇ ಸ್ಪಷ್ಟವಾಗಿ ಕಾಣದಷ್ಟು ಮಂಜು ಮುಸುಕಿದ ಪ್ರದೇಶವದು. ಜೊತೆಗೆ ನೆಲದ ತುಂಬಾ ತುಂಬಿದ ಹಸಿರು ಹುಲ್ಲು, ನೆಲಕ್ಕೆ ರತ್ನಗಂಬಳಿ ಹಾಸಿದಂತಿತ್ತು. ದಿನಾ ಅದೇ ಕಟ್ಟಡಗಳ ಮಧ್ಯೆ ಇದ್ದು ಬೇ'ಸತ್ತ' ಮನಸ್ಸಿಗೊಂದಿಷ್ಟು ಚೈತನ್ಯ ಬಂದಂತಾಯಿತು. ಕಾಡು, ಗುಡ್ಡ , ಹಸಿರುಗಳನ್ನೆಲ್ಲಾ ಕಾಣದ ಮನುಷ್ಯ ನಾನಲ್ಲ. ಮೊತ್ತ ಮೊದಲ ಬಾರಿಗೆ ಇದನ್ನು ಕಂಡು 'ಅದ್ಭುತ' ಎಂದೆನ್ನುತ್ತಿರುವುದೂ ಅಲ್ಲ. ಬದಲಾಗಿ ಮಣ್ಣು, ನೀರುಗಳೊಂದಿಗೆ ಆಡುವುದು ಚಿಕ್ಕಂದಿನಿಂದ ಬಂದ ಒಂದು ತೆರದ ಹುಚ್ಚು. ತೋಟದಲ್ಲಿ ಹರಿಯುವ ತೋಡಿನ ನೀರಿನಲ್ಲಿ, ಅಂತೆಯೇ ಸಣ್ಣ ಪುಟ್ಟ ಪ್ರವಾಸದ ಸಂದರ್ಭಗಳಲ್ಲಿ ಸಮುದ್ರದ ಕಿನಾರೆಯಲ್ಲಿ ಚಿಕ್ಕಂದಿನಿಂದಲೂ ಆಡಿದ ನೆನಪಿದೆ. ಮಳೆಯಲ್ಲಿ ನೆನೆಯುತ್ತಾ Football ಆಡಿ ಶಿಕ್ಷೆ ಪಡೆದಿದ್ದೂ ನೆನಪಿದೆ. ಆದರೆ ಓದು ಸಾಗಿದಂತೆ ಭವಿಷ್ಯದ ಚಿಂತೆ ಕಟ್ಟಿ, ಮಗ ತಮ್ಮಂತೆ ಕಷ್ಟಪಡಬಾರದೆಂಬ ತಂದೆ-ತಾಯಿಯರ ಮುದ್ದಿನಿಂದಾಗಿ ತೋಟದ ಮಣ್ಣು ತುಳಿಯದೆ ಬೆಳೆದು, Engineering ಅಥವಾ Medical ಎಂಬುದೊಂದು ತಲೆಯಲ್ಲಿ ತುಂಬಿ ನಿಂತು, Biology ಕಷ್ಟ ಎಂದು ಡಾಕ್ಟರಾಗುವ ಆಸೆ ಬಿಟ್ಟು, ಇಂಜಿನಿಯರಿಂಗ್ ಓದಿ, ಇಂದೊಂದು ಕೆಲಸ ಹಿಡಿದಿದ್ದಾಗಿದೆ. ಇಷ್ಟು ದಿನದ ಬದುಕಲ್ಲಿ ಕಾಣದ, ಮುಂದೆಯೂ ಕಂಡೇನೆಂಬ ನಂಬಿಕೆ ಇಲ್ಲದಿರುವ ಒಂದು ವಿಚಾರ ಎಂದರೆ 'ಒಬ್ಬ ಒಳ್ಳೆ ರೈತನಾಗು' ಅಂತ ಯಾರಾದರೂ, ಯಾರನ್ನಾದರೂ ಹರಸಿಯಾರೆನ್ನುವುದು. ಈಗಂತೂ ಎಲ್ಲ ಕೆಟ್ಟು ಅಂತಲ್ಲವಾದರೂ ಪಟ್ಟಣ ಸೇರುವ ಆಸೆಯಿರುವವರೇ. ಅದಕ್ಕೇ ಜಾಗ ಸಾಲದಾಗಿ ಹಳ್ಳಿಗಳೆಲ್ಲಾ ದಿಲ್ಲಿಗಳಾಗಹೊರಟಿವೆ. ಇರಲಿ, ಯಾರಿಗೋ ಉಪದೇಶ ಮಾಡಿ ಒಂದಿಷ್ಟು ಜನರ ಶಭಾಷಗಿರಿ, ಮತ್ತೊಂದಿಷ್ಟು ಜನರ ನಿಷ್ಠುರ ನನಗ್ಯಾಕೆ ? ಹೇಳಬೇಕಾಗಿದ್ದ ವಿಷಯ ಏನಪ್ಪಾ ಅಂತಂದ್ರೆ, ಇತ್ತೀಚಿಗೆ ಹೆಚ್ಚಿರುವ ಓದಿನ ಹುಚ್ಚಿನಿಂದಾಗಿಯೋ, ಮೊದಲಿನಿಂದಲೂ ಇದ್ದಿದ್ದೆಯೋ; ಹೊರಗಿನ ಚೆಲುವು ಆಸ್ವಾದಿಸುವ ಮನಸ್ಸಂತೂ ಬೆಳೆದಿದೆ.

      ಹೀಗೆ ಕಸಾರಾ ಘಾಟಿನ ಸೊಬಗ ಸವಿಯುತ್ತಾ ಕುಳಿತಾಗ, ಹಿಂದೆಯೂ ತುಂಬಾ ಸಾರಿ ಮನದಲ್ಲಿ ಮಿಂಚಿ ಮರೆಯಾದೊಂದು ಪ್ರಶ್ನೆ ಮತ್ತೊಮ್ಮೆ ಸುಳಿಯಿತು.
ಸೌಂದರ್ಯ ಇರುವುದು ಪ್ರಕೃತಿಯಲ್ಲೋ ?
ಅದನ್ನು ನೋಡುವ ನೋಟದಲ್ಲೋ ?
ಅನುಭವಿಸುವ ಮನಸ್ಸಿನಲ್ಲೋ ?
ವ್ಯಕ್ತಪಡಿಸುವ ಮಾತುಗಳಲ್ಲೋ ?
ಒಂದಿಬ್ಬರಲ್ಲಿ ಕೇಳಿದೆ, ನಗೆಯಾಡಿದರು. 'ಇದೇನು ಮರುಳು ಇವನಿಗೆ ಎಂದೋ, ಏನೋ..!?' ಅಂತೂ ಪ್ರಶ್ನೆ ಉದ್ಭವಿಸಿದ್ದೆಲ್ಲೋ ಅಲ್ಲೇ ಉಳಿಯಿತು.
  
      ಪಾಳುಬಿದ್ದೊಂದು ರೈಲು ಪಟ್ಟಿಯ ಬಳಿ ಒಂಟಿ ಕಂಬಿಯ ಮೇಲೆ ನಡೆಯುವ ಸರ್ಕಸ್ಸು ನಡೆಸುವವರಂತೆ, ಸುತ್ತಲ ಹಸಿರಲ್ಲಿ ಹರಡಿ ನಿಂತು ಅಷ್ಟೂ ಹಸಿರಲ್ಲಿ ನಮ್ಮದೇ ಉಸಿರೆನ್ನುವಂತೆ, ಮುಂದೊಮ್ಮೆ ಈ ಎಲ್ಲಾ ನೆನಪುಗಳನ್ನು ಮತ್ತೊಮ್ಮೆ ಹಸಿಯಾಗಿಸಲೆಂಬಂತೆ ಸ್ವಲ್ಪ ಹೊತ್ತು ಫೋಟೋ ಕ್ಲಿಕ್ಕಿಸಿಕೊಂಡು ಪಯಣ ಮುಂದುವರೆಯಿತು. ಮುಂದೆಯೂ ಇಂಥದೇ ನೋಟ. ಹಸಿರು ತುಂಬಿದ ಕಾಡು, ನಾನಿರುವ ಎತ್ತರಕ್ಕೆ ನೀನೇರಬಲ್ಲೆಯಾ ಎನ್ನುವ ಬೆಟ್ಟಗಳು, ಇಗೋ ಬಂದೆ ಎಂದೆಂದು ಮೇಲೇರಿ ಸಾಗುತ್ತಿರುವ ಮೋಡಗಳು, ಇದನ್ನೆಲ್ಲಾ ನನ್ನ ಮುಂದಿನ ಸೀಟಿನಲ್ಲಿ ಕಿಟಕಿ ಪಕ್ಕ ಕುಳಿತು ಕೆಮರಾ ಒಂದರಲ್ಲಿ ಸೆರೆ ಹಿಡಿಯುವ ಪ್ರಯತ್ನ ಮಾಡುತ್ತಿದ್ದರು. 'ನಾನು ಕಣ್ಣಲ್ಲಿ ನೋಡಿ ಮನಸ್ಸಲ್ಲಿ ತುಂಬಿಕೊಂಡಷ್ಟು, ಇವರು ಪುಟಗೋಸಿ ಕೆಮರಾದ ಕಣ್ಣಲ್ಲಿ ನೋಡಿ Memory Cardನಲ್ಲಿ ತುಂಬಿಕೊಬಹುದೇ ?' ಅಂತನ್ನಿಸಿದರೂ ಯಾರಲ್ಲೂ ಕೇಳಹೋಗಿಲ್ಲ. ಒಂದೇ ವಿಷಯಕ್ಕೆ ಮತ್ತೆ ಮತ್ತೆ ಸಮರ್ಥನೆ ಕೊಡೋದು ಬೇಕಿಲ್ಲ, ಆಲ್ವಾ..?

Friday 9 August 2013

ಭಂಡಾರಧಾರ ಪ್ರವಾಸ ಕಥನ.. : ಅಧ್ಯಾಯ ೨

ಮಹಾನಗರಿಯಿಂದ ಹೊರಬಿದ್ದಿದ್ದು..


   ಅಲ್ಲೇ ಬೆಳಗುತ್ತಿದ್ದ ಬೀದಿದೀಪವೊಂದರ ಕೆಳಗೆ ಕುಳಿತು ಕಾರಂತಜ್ಜನ ಆತ್ಮಕಥೆ 'ಹುಚ್ಚು ಮನಸ್ಸಿನ ಹತ್ತು ಮುಖಗಳು' ಅನ್ನು ಓದುತ್ತಿದ್ದೆ. ಸ್ವಲ್ಪ ಹೊತ್ತಲ್ಲಿ ನನ್ನ ಫೋನು ಸಂಗೀತ ಹಾಡತೊಡಗಿತು. ನಮ್ಮ ಗಾಡಿ ಪವನ್ ಹಾಗೂ ಅಭಿಷೇಕ್ ರನ್ನು ಹೊತ್ತು ಮುಂದೆ ಹೊರಟಿರುವುದಾಗಿ ತಿಳಿದು ಬಂತು. ಅದು ಜೆ.ಬಿ.ನಗರ ತಲುಪಿದಾಗ ಸಮಯ ೫.೩೦ ಸರಿದಿತ್ತು. ಇಷ್ಟರಲ್ಲಿ ಹುಡುಗಿಯರ ಗುಂಪೂ ಬಂದು ಕಲೆತು ಮುಂದಿನ ಹತ್ತು ನಿಮಿಷದಲ್ಲಿ ಇಲ್ಲಿಂದ ಹೊರಟಿದ್ದಾಯ್ತು. ಆದಿತ್ಯನನ್ನುಳಿದು ಬಾಕಿ ಎಲ್ಲರೂ ಗಾಡಿಯಲ್ಲಿ ಜಮಾ ಆದೆವು. ನಾನೊಂದು ಕಿಟಕಿ ಬದಿಯ ಆಸನವನ್ನು ಹಿಡಿದು ಕುಳಿತೆ. ಉಳಿದೆಲ್ಲರ ಕೃಪೆಯಿಂದ ತಿರುಗಿ ಬರುವವರೆಗೂ ಆ ಆಸನ ನನ್ನದಾಗಿಯೇ ಉಳಿಯಿತು. ಮುಂದೆ ಬೋರಿವಲಿಯಲ್ಲಿ ಆದಿತ್ಯನನ್ನೂ ಹತ್ತಿಸಿಕೊಂಡು ನಮ್ಮ ಗಾಡಿ ಮುಂದೆ ಸಾಗಿತು. ನಾನು ಕಿಟಕಿಯಿಂದಾಚೆ ಇಣುಕುತ್ತಾ ಹಿಂದೆ ಹೋಗುತ್ತಿದ್ದ ಕಟ್ಟಡಗಳನ್ನ ಲೆಕ್ಕ ಹಾಕುತ್ತಾ ಕುಳಿತೆ.

   ಬಹುತೇಕ ಎಲ್ಲ ಪ್ರವಾಸಗಳಲ್ಲೂ ಅನುಭವಿಸುವ ಸಾಮಾನ್ಯ ಸನ್ನಿವೇಶವೊಂದು ನಮ್ಮೊಡನೆಯೂ ಜರುಗಿತು. ಗಾಡಿಯಲ್ಲಿ Pendrive ಕನೆಕ್ಟ್ ಮಾಡುವ ವ್ಯವಸ್ಥೆ ಇರಲಿಲ್ಲ. ಡ್ರೈವರನ ಬಳಿಯಿದ್ದ CDಯಲ್ಲಿದ್ದ ಹಾಡುಗಳು ಚೆನ್ನಾಗಿದ್ದರೂ ಆ ಸಮಯದಲ್ಲಿ ಆಸ್ವಾದಿಸುವ ಮನಸ್ಸು ಯಾರಿಗೂ ಇದ್ದಂತಿರಲಿಲ್ಲ. ಹೀಗಾಗಿ ನಮ್ಮ ಗಾಡಿಯಲ್ಲಿ ಒಂದಿಷ್ಟು ಗಾನ ಕೋಗಿಲೆಗಳ ಉಗಮವಾಯಿತು. ನಿಮ್ಮ ನೆನಪಿನಲ್ಲಿರಬೇಕಾದ ಒಂದು ವಿಚಾರ, ಎಲ್ಲಾ ಕೋಗಿಲೆಗಳು ಇಂಪಾಗಿಯೇ ಹಾಡಬೇಕೆಂದಿಲ್ಲ ಎಂಬುದೊಂದಾದರೆ ಕರ್ಕಶವಾಗಿ ಹಾಡುವ ಎಲ್ಲಾ ಹಕ್ಕುಗಳು ಕಾಗೆಗಳಿಗೆ ಮಾತ್ರ ಕಾಯ್ದಿರಿಸಲಾಗಿಲ್ಲ ಎಂಬುದಿನ್ನೊಂದು. ಮುಂದೆ ಒಬ್ಬೊಬ್ಬರು ಒಂದೊಂದು ಹಾಡತೊಡಗಿದರು. ಮಧ್ಯದಲ್ಲಿ ಎಲ್ಲವೂ ಒಟ್ಟಾಗಿ ಇಂದಿನ Re-Mix ಹೂರಣ ತಯಾರಾಗುತ್ತಿತ್ತು. ಹಾಡುವುದು ನಮ್ಮಿಚ್ಛೆ, ಕೇಳುವುದು ಪರರಿಚ್ಛೆ ಎಂಬಂಥ ಧಾಟಿ ಅದು ಎಂದರೂ ಸರಿ. ಎಲ್ಲ ಕೇಳಲಿ ಎಂದು ಅವರೆಲ್ಲಾ ಹಾಡಿದ್ದಲ್ಲ, ಒಂದು ಪ್ರವಾಸ ಹೋಗ್ತಾ ಅದರಲ್ಲೂ ಬಾಡಿಗೆ ಗಾಡಿ ಹಿಡಿದು ಉತ್ಸಾಹಿ ತಂಡ ಜೊತೆಯಲ್ಲಿದ್ದಾಗ ಹಾಡು ಕುಣಿತಗಳು ನಡೆಯಲೇಬೇಕೆಂಬುದು ಹಿಂದಿನಿಂದ ಬಂದ ಸಂಪ್ರದಾಯವೇನೋ ಎಂಬಷ್ಟು ರೂಢಿಯಾಗಿಬಿಟ್ಟಿದೆಯಲ್ಲಾ, ಅದರ ಫಲ ಇದು. ಇಂಥದೊಂದು ಹಾಡುಗಳ ಹೂರಣಕ್ಕೆ ತಡೆ ಹಾಕಲು, ಅಂತ್ಯಾಕ್ಷರಿ ಆಟ ಶುರುವಾಯ್ತು. ಎಲ್ಲರೂ ಬಹುತೇಕ ಹಿಂದಿ ಹಾಡುಗಳನ್ನೇ ಹಾಡುತ್ತಿದ್ದುದರಿಂದ ನಾನು ಬಾಯಿ ಹಾಕಲು ಹೋಗಲಿಲ್ಲ. ಮೊದಲೆರಡು ಸಾಲುಗಳನ್ನು ಬಿಟ್ಟರೆ ಮುಂದೆ ಬರೀ 'ಲ' ಇಲ್ಲವೇ 'ನ' ಅಕ್ಷರದ ಗುಣಿತಾಕ್ಷರಗಳಿಂದಲೇ ಹಾಡು ಪೂರ್ತಿಗೊಳಿಸುವ ನನ್ನ ಕುಶಲತೆ ಇಲ್ಲಿ ಪ್ರದರ್ಶಿಸುವುದು ಬೇಡ ಎಂದು ಸುಮ್ಮನಾಗಿದ್ದೆ. ಕನ್ನಡ ಹಾಡುಗಳಿಗೆ ಅವಕಾಶವಿದ್ದರೂ, ಎಲ್ಲರ ಬತ್ತಳಿಕೆಯಲ್ಲಿದ್ದ ಹಿಂದಿ ಹಾಡುಗಳು ಬರಿದಾದ ಮೇಲೆಯೇ ಅವಕಾಶ ಎಂದು ಗೊತ್ತಿದ್ದರಿಂದ ನಾನು ಸುಮ್ಮನೆ ಕುಳಿತೆ.

   ಒಂದಿಷ್ಟು ಹೊತ್ತು ಹೀಗೆ ಹಾಡಿ ದಣಿದ ಬಾಯಿಗಳಿಗೆ ವಿಶ್ರಾಂತಿ ನೀಡುವುದೆಂದು ನಿರ್ಧರಿಸಿ Dumb Charades ಆಡುವ ಉಮ್ಮೇದು ಎಲ್ಲರಿಗೆ. ಐದೈದು ಜನರ ಎರಡು ತಂಡಗಳನ್ನು ರಚಿಸಿದ್ದಾಯ್ತು. ಒಂದು ತಂಡದವರು ಎರಡನೇ ತಂಡದ ಯಾರಾದರೊಬ್ಬರ ಕಿವಿಯಲ್ಲಿ ಒಂದು ಚಲಚ್ಚಿತ್ರದ ಹೆಸರನ್ನು ಪಿಸುಗುಡುವುದು, ಅವನು/ಳು ಅಭಿನಯಿಸಿದ್ದನ್ನು ಉಳಿದವರು ಅರ್ಥ ಮಾಡಿಕೊಂಡು ಚಿತ್ರದ ಹೆಸರನ್ನು ಹೇಳಬೇಕು. ಇಲ್ಲಿ ಎರಡು ರೀತಿಯ ಸ್ಪರ್ಧೆ. ಒಬ್ಬ ಕಿವುಡನಿಗೆ ನೀವು ಒಂದು ವಿಷಯವನ್ನು ಎಷ್ಟು ಸಮರ್ಥವಾಗಿ ಅರ್ಥಮಾಡಿಸಬಲ್ಲಿರಿ ಎಂಬುದು ಒಂದಾದರೆ, ಎರಡನೆಯದು ಒಬ್ಬ ಮೂಕನ ಭಾಷೆಯನ್ನು ನೀವೆಷ್ಟು ಅರ್ಥ ಮಾಡಿಕೊಳ್ಳಬಲ್ಲಿರಿ ಎಂಬುದು. ನಾನು ಮೊದಲ ಬಾರಿ ಇದನ್ನು ಆಡಿದ್ದು ನನ್ನ ಇಂಜಿನಿಯರಿಂಗ್ ಸಮಯದ ಹಾಸ್ಟೆಲ್ ಜೀವನದಲ್ಲಿ. ಆಗ ಬರೀ ಒಂದು ಆಟವಾಗಿ ಕಂಡಿದ್ದರ ಇನ್ನೊಂದು ಅರ್ಥ ಈಗ ಕಾಣುತ್ತಿದೆ. ಈ ಆಟವಂತೂ ನನಗೆ ಇಷ್ಟವಾಯ್ತು. ಜೊತೆಗೆ ಇಂಜಿನಿಯರಿಂಗ್ ಮುಗಿಯುವವರೆಗೆ ವಿವಿಧ ಪ್ರಹಸನಗಳಲ್ಲೋ, ಮೂಕಾಭಿನಯಗಳಲ್ಲೋ ಅಭಿನಯಿಸಿದ್ದರ ಫಲವಾಗಿ ಮನದಲ್ಲೇನಾದರೂ ಚೂರು ಅಭಿಮಾನ ಉಳಿದಿದ್ದರೆ ಅದಂತೂ ಮಾಯವಾಯ್ತು.

   ನಮ್ಮ ರಥದ ಒಳಗೆ ಇಷ್ಟೆಲ್ಲಾ ನಡೆಯುವಷ್ಟರಲ್ಲಿ, ನಾವು ಮಹಾನಗರಿಯಿಂದ ಹೊರಬಿದ್ದಿದ್ದೆವು. ನಮ್ಮೆಲ್ಲರ ಕಿರುಚಾಟಗಳಿಗೆ ಕಿವುಡಾಗಿ, ಬಾಯಿ ಬಂದರೂ ಮೂಕನಾಗಿದ್ದ ಸಾರಥಿ
'ಯಾರೇ ಕೂಗಾಡಲಿ.. ಯಾರೇ ತೆಪ್ಪಗಿರಲಿ..
ನನ್ನ ನೆಮ್ಮದಿಗೆ ಭಂಗವಿಲ್ಲ..
ನನ್ನ ಗಾಡಿಗೆ ಬೇರೆ ಸಾಟಿಯಿಲ್ಲ..
ಬಿಸಿಲು, ಮಳೆ, ಮಂಜು, ಗಾಳಿಗೆ ಅಳುಕದೆ ಮುಂದೆ ಸಾಗುವೆ..'
ಎಂದು ನಿರ್ಧರಿಸಿದಂತಿತ್ತು. ಹೀಗೆ ಹೊರಟ ಪಯಣ ಗಂಟೆ ೭.೩೦ರ ಸುಮಾರಿಗೆ ಬೆಳಗ್ಗಿನ ಉಪಾಹಾರದ ಸಲುವಾಗಿ ಅಲ್ಪವಿರಾಮ ಪಡೆಯಿತು.

   ಇಷ್ಟು ಹೊತ್ತು ಏನೂ ನುಡಿಯದೆ ಸುಮ್ಮನಿದ್ದ ಹೊಟ್ಟೆ ಈಗ ತನ್ನ ಇರುವನ್ನು ಸಾರತೊಡಗಿತು. ಅದಕ್ಕೆರಡು ಇಡ್ಲಿ, ಒಂದು ಮಸಾಲೆ ದೋಸೆ ತಿನ್ನಿಸಿ ಸಮಾಧಾನ ಪಡಿಸಿದೆ. ಎಲ್ಲರೂ ತಿಂಡಿ ಮುಗಿಸಿ ಬರುವಷ್ಟರಲ್ಲಿ ನಮ್ಮ ಡ್ರೈವರನೂ ತನ್ನ ಉದರ ಪೋಷಣೆ ಮುಗಿಸಿ ನಮಗಾಗಿ ಕಾಯುತ್ತಿದ್ದ. ಎಲ್ಲರೂ ಗಾಡಿ ಏರಿ ಮುನ್ನಡೆದೆವು.