Thursday 18 July 2013

ಬರೆಯುವ ಹಂಬಲ ಯಾಕೆ ..!!??


    ಕತೆಗಳನ್ನೋದುವುದು ಚಿಕ್ಕಂದಿನ ಹುಚ್ಚು. ಪ್ರಾಯ ಹೆಚ್ಚಿದಂತೆ ಈ ಹುಚ್ಚು ಹೆಚ್ಚಾಗಿ ಈಗ ಕಾದಂಬರಿಗಳನ್ನೋದುವ ಮಟ್ಟಕ್ಕೆ ಬೆಳೆದಿದೆ. ಬರೀ ಓದಿದರೆ ಸಾಕೇ, ಕೆಲವೊಂದು ಪಾತ್ರಗಳನ್ನು ನೋಡಿ 'ಇದು ನಾನಾ ?' ಎಂಬ ಪ್ರಶ್ನೆ ಮೂಡಿದ್ದೂ ಇದೆ. ಆಗ ನನ್ನ ಮರುಳು ಮನಸ್ಸು 'ಹೌದು' ಎಂದು ಸಮ್ಮತಿಸಿದರೆ ಇನ್ನೊಮ್ಮೆ ಅದೇ ವ್ಯಕ್ತಿಯ ಒಂದಿಷ್ಟು ಗುಣದೋಷಗಳನ್ನು ನೋಡಿ 'ಇದು ನಾನಲ್ಲ' ಎಂದದ್ದಿದೆ. ಜೊತೆಗೆ 'ಇದು ನಾನಾಗಿದ್ದರೆ ಹೀಗಿರುತ್ತಿದ್ದೆ' ಎಂದು ಹೇಳಿದ್ದೂ ಇದೆ. ಆ 'ಹೀಗಿರುತ್ತಿದ್ದೆ'ಯನ್ನ ಹಂಚಿಕೊಳ್ಳುವುದಕ್ಕೆ ಬರೆಯುವ ಹಂಬಲ ಹುಟ್ಟಿತು.

    ಕಲಾವಿದನೊಬ್ಬನ ಕಲಾಕೃತಿಗೆ ಸುತ್ತಲ ಜಗತ್ತೇ ಸ್ಪೂರ್ತಿ. ಕಾದಂಬರಿಗಳಲ್ಲಂತೂ ಕಲ್ಪನೆಯ ಕತೆಗಿಂತಲೂ, ಪಾತ್ರಗಳ ಶೀಲ ನಿರೂಪಣೆಯೇ ಪ್ರಧಾನ ವಸ್ತು. ಒಂದು ಪಾತ್ರಕ್ಕೆ ಗುಣ ದೋಷಗಳನ್ನು ಹೊರಿಸುವಲ್ಲಿ ಕಾದಂಬರಿಕಾರನ ಸ್ವಂತ ಅನುಭವಗಳೂ, ಅವನು ಕಂಡ ಇತರರ ಬದುಕಿನ ಅನುಭವಗಳೂ ಪ್ರಮುಖ ಪಾತ್ರ ವಹಿಸುತ್ತವೆ. ಒಟ್ಟಾರೆಯಾಗಿ ಹೇಳುವುದಾದರೆ ಒಂದು ಕಾದಂಬರಿ ಯಾವುದೋ ಒಬ್ಬ ವ್ಯಕ್ತಿಯ ಜೀವನ ಚರಿತ್ರೆ ಎಂದರೂ ತಪ್ಪಿಲ್ಲ. ಇದು ನನ್ನ ಸ್ವಂತ ಅಭಿಪ್ರಾಯ. ಇಂಥ ಕಾದಂಬರಿಗಳಲ್ಲಿ ಒಂದು ಪಾತ್ರ ನಾನಾದರೆ ನನ್ನ ಜೊತೆ ಒಡನಾಡಿದ ಪಾತ್ರಗಳನ್ನು ದೃಷ್ಟಿಯಲ್ಲಿಟ್ಟು ಹೊರಜಗತ್ತಲ್ಲಿ ಅಂಥವರನ್ನು ಹುಡುಕುವ ಹುಚ್ಚು ಕನಸನ್ನೂ ಕಂಡಿದ್ದೇನೆ. 'ಅದು ನೀವಾ ?' ಎಂದು ಕೇಳುವುದಕ್ಕೆ ಬರೆಯುವ ಹಂಬಲ ಹುಟ್ಟಿತು.

    ಮುಖ್ಯವಾಗಿ ಇವೆಲ್ಲವನ್ನೂ ಮುಖತಃ ಕೇಳಲು ಮನಸ್ಸಿಲ್ಲದವರಲ್ಲಿ ನಾನು ಹೇಳಿಕೊಳ್ಳುವುದಕ್ಕಿಂತ ಬರೆಯುವ ಪ್ರಯತ್ನ ಮಾಡಿದ್ದೇ ಆದರೆ ಇನ್ನೊಬ್ಬರಿಗೆ ನನ್ನಿಂದಾಗುವ ಕರಕರೆ - ಕಿರಿಕಿರಿಯೂ ತಪ್ಪಿತಷ್ಟೇ. ಅದಕ್ಕಾಗಿ ಬರೆಯುವ ಹಂಬಲ ಹುಟ್ಟಿತು.

    ಇದಿಷ್ಟರ ಜೊತೆಗೆ ಸ್ನೇಹಿತರೊಂದಿಗೆ ಕಳೆದ ಕೆಲ ಕ್ಷಣಗಳನ್ನೂ, ಹಳೆಯ ಕೆಲ ನೆನಪುಗಳನ್ನೂ ಅವು ಮರೆಯುವ ಮೊದಲೊಮ್ಮೆ ಬರೆಯುವ ಹಂಬಲ ಹುಟ್ಟಿತು.



    ಈ ನನ್ನ ಮರುಳು ಮಾತುಗಳಿಗೆ ಯಾವುದೇ ಮೆಚ್ಚುಗೆಯ ಆಶೆಯಿಲ್ಲ, ಹಳಿದರೆ ಹತಾಶೆಯಿಲ್ಲ. ನನಗನ್ನಿಸಿದ್ದು ನಿಮಗನ್ನಿಸಲೇಬೇಕೆಂದಿಲ್ಲ. ಆದರೆ ಪ್ರತಿಯಾಗಿ ನಿಮಗನ್ನಿಸಿದ್ದನ್ನು ಹಂಚಿಕೊಂಡರೆ ಒಂದಿಷ್ಟು ಹೊಸ ವಿಚಾರಗಳನ್ನು ತಿಳಿದೇನೆಂಬ ಆಶಯದೊಂದಿಗೆ ಈ ಬರಹವನ್ನು ಮುಗಿಸುತ್ತಿದ್ದೇನೆ.