Thursday 14 November 2013

ಚ ಚಾ ಚಿ ಚೀ.. ಅಲ್ಲ; ಚಾಚಾ.. ಛೀ.. ಛೀ..

      ಮತ್ತೊಂದು ನವೆಂಬರ್ ೧೪. ಸ್ವತಂತ್ರ ಭಾರತದ ಮೊಟ್ಟ ಮೊದಲ ಪ್ರಧಾನಿ ಪಂಡಿತ್ ಜವಹರಲಾಲ್ ನೆಹರೂರವರ ಜನ್ಮದಿನ. ಸುಮ್ಮ ಸುಮ್ಮನೇ ಎಷ್ಟು ಜನರ ಜನ್ಮದಿನಗಳನ್ನು ಲೆಕ್ಕವಿಟ್ಟುಕೊಳ್ಳಲಾದೀತು. ಅದಕ್ಕೆ ತಮ್ಮ ಜನ್ಮದಿನವನ್ನು ಇನ್ನಾವುದೇ ಆಚರಣೆಯ ಹೆಸರಲ್ಲಿ ತಳುಕು ಹಾಕಿಬಿಟ್ಟರೆ ಆ ನೆಪದಲ್ಲಾದರೂ ತಮ್ಮನ್ನೊಮ್ಮೆ ನೆನೆಸಿಕೊಂಡಾರಲ್ಲವೇ. ಬೆರಾರದ್ದೋ ಯಾಕೆ; ಚಾಂದ್ರಮಾನ, ಆಂಗ್ಲಮಾನ ಪಂಚಾಂಗಗಳ ಗೊಂದಲಗಳ ಮಧ್ಯೆ, ನನ್ನ ಹುಟ್ಟಿದ ದಿನವೇ ನನಗೆ ನೆನಪು ಬರುವುದಿಲ್ಲ. ನಾಲ್ಕಾರು ಸ್ನೇಹಿತರು ಕರೆ ಮಾಡಿ ಶುಭಾಶಯ ತಿಳಿಸುವುದರಿಂದ ಒಂದಿಷ್ಟು ನೆನಪು ಹತ್ತುವುದುಂಟು. ಇದ್ದುದರಲ್ಲಿ ಸಮಾಧಾನಕರ ವಿಷಯ ಅಂದ್ರೆ ಮಕರ ಸಂಕ್ರಾಂತಿಯಂದು ಹುಟ್ಟಿದವ ನಾನಾದ್ದರಿಂದ ನನ್ನ ಜನ್ಮದಿನವನ್ನು ಅದರೊಂದಿಗೆ ತಗುಲಿಸಿಬಿಟ್ಟರೆ ನೆನಪಿಟ್ಟುಕೊಳ್ಳುವುದೂ ಸಲೀಸು. ಅಷ್ಟೂ ಅಲ್ಲದೆ ನನ್ನ ಜನ್ಮದಿನಕ್ಕೆ ದೇಶದ ಕೆಲವೆಡೆ ಸರ್ಕಾರಿ ರಜೆ ಘೋಷಿಸಿದ್ದಾರೆಂದೂ ಬೀಗಬಹುದಲ್ಲವೇ.! ಯಾರ ಜನ್ಮದಿನದ ಸಲುವಾಗಿ ನಮ್ಮ ನಿತ್ಯದ ಕೆಲಸಗಳು ಕಡಿಮೆಯಾಗಿ, ನಮ್ಮ ಶ್ರಮವಿರದೇ ಆ ದಿನ ಸುಖಮಯವಾಗಿ ಕಾಣುವುದೋ ಅವರನ್ನೇ ಆಲ್ವಾ ನಾವು ಮಹಾ ಮಹಿಮರೆನ್ನುವುದು. ಸಾಕು, ಆತ್ಮಪ್ರಶಂಸೆ ಕಡಿಮೆ ಮಾಡಿ ಮುಖ್ಯ ವಿಷಯಕ್ಕೆ ಬರೋಣ.

      ಅಂತೂ ನೆಹರೂರವರಿಗೆ ಮಕ್ಕಳ ಮೇಲಿದ್ದ ಪ್ರೀತಿಯ ಸಾಕಾರವಾಗಿ ಅವರ ಜನ್ಮದಿನ 'ಮಕ್ಕಳ ದಿನಾಚರಣೆ' ಆಯ್ತು. ಆದರೆ ಅವರಲ್ಲಿದ್ದ ಪ್ರೀತಿ ಸ್ವಂತ ಮಕ್ಕಳ ಮೆಲಿನದ್ದೋ! ದೇಶದ ಸಮಸ್ತ ಮಕ್ಕಳ ಮೆಲಿನದ್ದೋ! ತಿಳಿಯಲೇ ಇಲ್ಲ. ಆದರೂ ಇವರ ಬಗ್ಗೆ ನಮ್ಮಲ್ಲಿದ್ದ ಪ್ರೀತಿಯನ್ನು ತೋಡಿಕೊಳ್ಳಲು 'ಚಾಚಾ' ಎಂದು ಕರೆದೆವು. ಅವರ ನಿಲುವಂಗಿಯ ಮೇಲೆ ನಗುತ್ತಾ ನಿಂತಿದ್ದ ಗುಲಾಬಿಯನ್ನು ನೋಡಿ ಅದನ್ನೇ ಅನುಕರಿಸಲೆಂಬಂತೆ ನಮ್ಮ ಅಂಗಿಗಳಿಗೂ ಹೂ ಸಿಕ್ಕಿಸಿಕೊಳ್ಳುವ ಪ್ರಯತ್ನ ಮಾಡಿದ್ದೂ ಆಯ್ತು. ಕಿಸೆಯಲ್ಲಿ ಅದು ನಿಲ್ಲಲಾರದ್ದರಿಂದ ಅಂಗಿಯ ಗುಂಡಿ ಸಿಕ್ಕಿಸುವ ರಂಧ್ರದಲ್ಲಿ ಸಿಕ್ಕಿಸಿದರೂ ಆಗುತ್ತಿತ್ತು. ರೋಜಾ ಹೂವಾ ಏನೂ ನಮ್ಮ ಜೀವಾ ಆಗಿಲ್ಲದ ಕಾರಣ ದಾಸ್ವಾಳವಾದರೂ ಸರಿ, ಲಂಟಾನಿನ ಹೂವಿನ ಗೊಂಚಲಾದರೂ ಸರಿ; ಅಂಗಿಗೆ ಸಿಕ್ಕಿಸಿಕೊಂಡು ನಿಂತರೆ ನೆಹರೂಗಿಂತ ನಾವೇನೂ ಕಡಿಮೆ ಕಾಣುತ್ತಿರಲಿಲ್ಲ. ಕನಿಷ್ಠ ಪಕ್ಷ ಅದು ನಮ್ಮ ನಂಬಿಕೆಯ ಮಟ್ಟಕ್ಕಾದರೂ ಸತ್ಯ. ಹೂ ಇಟ್ಬಿಟ್ರೆ ಆಯ್ತಾ, ಟೋಪಿ ಹಾಕೋದು ಬೇಡ್ವಾ? ಅದೂ ಇತ್ತು. ಸುದ್ದಿ ಪತ್ರಿಕೆಯನ್ನು ಮಡಿಸಿ ದೊಡ್ಡ ದೊಡ್ಡ ದೋಣಿಗಳನ್ನೂ, ಅರಿಶಿನ ಕುಂಕುಮದ ಬಟ್ಟಲನ್ನೂ ಮಾಡಲು ಕಳಿಸಿದ್ದ ನಮ್ಮ ಗುರುಗಳು ಯಕ್ಷಗಾನದ ಕಿರೀಟ, ಗಾಂಧಿ ಟೊಪ್ಪಿಗೆಗಳನ್ನು ಮಾಡಲೂ ಕಲಿಸಿದ್ದರು. ಅದೇ ಗಾಂಧಿ ಟೋಪಿ ಅಡ್ಡಕ್ಕೆ ಧರಿಸಿದರೆ ನರ್ಸ್ ಟೋಪಿ ಆಗುತ್ತಿತ್ತು. ಇಷ್ಟೆಲ್ಲಾ ಅವತಾರ ಧರಿಸಿ ನಿಂತರೆ ನಮ್ಮನ್ನು ಕೇಳುವವರುಂಟೆ?

      ಈ ದಿನದ ಗುಣಗಾನ ಪ್ರತಿ ವರ್ಷವೂ ಊರ ಹಿರಿಯರಿಂದ, ನಮ್ಮ ಶಿಕ್ಷಕರಿಂದ ಕೇಳಿದಾಗ 'ಕಳೆದ ವರ್ಷವೂ ಇದನ್ನೇ ಹೇಳಿದ್ದರಲ್ಲಾ' ಎಂಬ ಸತ್ಯ ಯಾವತ್ತೂ ಕಣ್ಣ ಮುಂದಾಗಲೀ, ಬುದ್ಧಿಯ ಮುಂದಾಗಲೀ ಬಂದು ನಿಲ್ಲುತ್ತಿರಲಿಲ್ಲ. ಎಲ್ಲದಕ್ಕೂ ಮರೆವು ಬಂದೋ, ನೆನಪು ಹೋಗಿಯೋ ಮತ್ತೆ ಹಿಂದಿನ ವರ್ಷದ್ದೇ ಭಾಷಣ ಕೇಳಿ ಸತ್ತು ಸ್ವರ್ಗದಲ್ಲಿರುವ ಚಾಚಾಗೆ ಕೇಳಲಿ ಎನ್ನುವಂತೆ ಜೋರಾಗಿ ಚಪ್ಪಾಳೆ ತಟ್ಟಿ ಉರಿ ಬಂದ ಕೈಗಳ ಮೇಲೆ ಸಿಹಿ ಬೀಳುವುದನ್ನೇ ಕಾಯುತ್ತಾ ಕುಳಿತಿದ್ದು ಮರೆಯುವುದುಂಟೇ?

      ಪ್ರೌಢಶಾಲಾ ಶಿಕ್ಷಣ ಮುಗಿಯುವವರೆಗೂ ಇದೇ ಗುಂಗಿನಲ್ಲಿದ್ದ ನಾವು ಮುಂದೆ ಕೇಳಿದ್ದು ಇಷ್ಟು ದಿನ ನಾವಿದ್ದುದು ಭ್ರಮಾಲೋಕದಲ್ಲಿ ಎಂಬಂತಹ ಮಾತುಗಳು. ಇಷ್ಟುದಿನ ಚಾಚಾ ಎಂದು ಕರೆದವರನ್ನೇ ಛೀ..ಛೀ.. ಎನ್ನುವಂಥ ಮಾತುಗಳು. ಹತ್ತು ವರ್ಷಗಳಿಂದ ನಂಬಿಕೊಂಡು ಬಂದ ಸತ್ಯ ಹತ್ತು ನಿಮಿಷಗಳಲ್ಲಿ ಸುಳ್ಳೆಂದುಕಾಣತೊಡಗಿತು. ಭಾರತಕ್ಕೆ ಸ್ವಾತಂತ್ರ್ಯವನ್ನು ಗಳಿಸಿಕೊಡುವಲ್ಲಿ ಬಾಪೂ ಬಿಟ್ಟರೆ ಚಾಚಾರದ್ದೇ ಸಾಹಸ ಎಂಬ ನಮ್ಮ ಅಷ್ಟು ದಿನದ ನಂಬಿಕೆ ನಮ್ಮಿಂದ ಕಳಚಿ ಬೀಳುವ ಮೊದಲೇ ಹೊಸವಿಷಯಗಳನ್ನು ಸತ್ಯ ಎಂದು ನಂಬಿಬಿಟ್ಟೆವು.

      'ಕ್ರಾಂತಿ' ಎಂಬೊಂದು ಭೂತ ಬೇತಾಳದಂತೆ ಬೆನ್ನು ಏರಿದ ಮೇಲೆ ಪ್ರತಿಯೊಬ್ಬರೂ ವಿಕ್ರಮರೇ. ಆಗಿಂದ ಚಾಚಾ ಬಗ್ಗೆ ಇದ್ದ ಅಲ್ಪ ಸ್ವಲ್ಪ ವಿಶ್ವಾಸವೂ ಮರೆಗೆ ಸರಿಯಿತು. ಜೊತೆಜೊತೆಗೆ ಗಾಂಧೀಜಿಯವರ ಕುರಿತೂ ಸಹ. ಮುಂದೆ ಅವರನ್ನು ಪ್ರೀತಿಯಿಂದ ಕರೆಯುತ್ತಿದ್ದ ಹೆಸರುಗಳು ಮರೆತೋಗಿ, ಅಥವಾ ಉದ್ದೇಶಪೂರ್ವಕವಾಗಿ ಮರೆತು, ಇಲ್ಲವೇ ಮರೆತಂತೆ ನಟಿಸುತ್ತಾ ಬದುಕಿದ ನಮಗೆ ಕನಿಷ್ಟಪಕ್ಷ ಅವರ ವಯಸ್ಸಿಗಾದರೂ ಬೆಲೆಕೊಡಬೇಕೆಂಬ ಔದಾರ್ಯವೂ ಉಳಿಯಲಿಲ್ಲ. ಮುಂದಿನ ದಿನಗಳಲ್ಲಿ ಅವರನ್ನ ಯಾವೆಲ್ಲಾ ಬೈಗುಳಗಳಿಂದ ಬೈದಿದ್ದೇವೆನ್ನುವುದು ಈಗ ಲೆಕ್ಕಕ್ಕೂ ಸಿಗದು. ದೇಶಕ್ಕೆ ೧೯೪೭ರಷ್ಟು ತಡವಾಗಿ ಸ್ವಾತಂತ್ರ್ಯ ಸಿಗಲೂ ಇವರಿಬ್ಬರೇ ನೇರ ಹೊಣೆ ಎಂದು ಎಲ್ಲರೆದುರು ಹೇಳಿಕೊಳ್ಳಲು ನಾವೆಷ್ಟು ಹೆಮ್ಮೆ ಪಟ್ಟಿಲ್ಲ? ನಾವು ಮಾತಿನಲ್ಲಿ ವ್ಯಕ್ತಪಡಿಸುತ್ತಿದ್ದ ಆಕ್ರೋಶ ಎಷ್ಟಿತ್ತೆಂದರೆ ಒಬ್ಬೊಬ್ಬರೂ ಒಂದೊಂದು ಬಾರಿ ಅವರನ್ನು ಕೊಂದು ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಡುತ್ತೇವೆನ್ನುವಷ್ಟು.

      ಇಷ್ಟಕ್ಕೂ ನೆಹರೂ ಬಗ್ಗೆ ನಮ್ಮ ಅಭಿಪ್ರಾಯಗಳು ಅಷ್ಟು ಸುಲಭವಾಗಿ ಬದಲಾಗಿದ್ದಾದರೂ ಯಾಕೆ ಗೊತ್ತಾ..? ಯಾವುದೇ ಸಂದರ್ಭಗಳಲ್ಲಿ ನಾವಿರಿಸಿದ್ದ ನಂಬಿಕೆ, ನಾವು ವ್ಯಕ್ತಪಡಿಸುತ್ತಿದ್ದ ಅಭಿಪ್ರಾಯಗಳು ನಮ್ಮ ಸ್ವಂತದ್ದಾಗಿರಲಿಲ್ಲ. ಮೊದಲು ನಮ್ಮ ಗುರುಗಳ ಮೇಲಿನ ಶ್ರದ್ಧೆ, ಭಕ್ತಿ ಅವರ ಮಾತನ್ನು ನಂಬುವಂತೆ ಮಾಡಿತು. ಮುಂದೆ ಅನೇಕ ಭಾಷಣಕಾರರು ಮಂಡಿಸಿದ ವಾದ, ಅವರ ಮಾತಿನ ವೈಖರಿ ನಮಗೆ ಮೆಚ್ಚಿಗೆಯಾಗಿ ಅವರಾಡಿದ್ದೆಲ್ಲಾ ಸತ್ಯ ಎಂಬ ನಂಬಿಕೆ ನಾವು ತಾಳಿದೆವು. ಅದು ಆಳವಿಲ್ಲದ ಶ್ರದ್ಧೆ, ನೀರ ಮೇಲಣ ಗುಳ್ಳೆ. ಸಮುದ್ರದ ಆಳವೆಷ್ಟೆಂದು ದಡದಲ್ಲಿ ಕುಳಿತವನಲ್ಲಿ ಕೇಳಿದರೆ ಆತ ಏನೆಂದಾನು!? ಯಾರಿಂದಾದರೂ ಕೇಳಿ ತಿಳಿದಿದ್ದನ್ನಷ್ಟೇ ಅಲ್ವೇ.? ಅದನ್ನೇ ಸಮುದ್ರದ ಆಳ ಎಂದರೆ ಹೇಗಾದೀತು!? ನಮ್ಮಷ್ಟೇ ಅಲ್ಲವೇ.?

      ಇನ್ನಾದರೂ ಚಾಚಾ.. ಛೀ..ಛೀ.. ಮರೆಯುವ; ಇಲ್ಲದ ಗುಣಗಳನ್ನು ಹೊಗಳುವುದೂ ಬೇಡ; ಸಲ್ಲದ ಆರೋಪಗಳನ್ನು ಹೊರಿಸಿ ತೆಗಳುವುದೂ ಬೇಡ. ಗೊತ್ತಿಲ್ಲದಿರುವ ವಿಷಯಕ್ಕೆ 'ಯಾವುದೋ ಊರಿನ ಅಜ್ಜಿಯ ಅಜ್ಜಿ ಹೀಗೆನ್ನುತ್ತಿದ್ದರು' ಎಂಬ ಸಾಕ್ಷ್ಯ ನೀಡಿ ನಂಬಿಸುವುದಕ್ಕಿಂತ 'ನಮಗೆ ಗೊತ್ತಿಲ್ಲ' ಎಂದು ಒಪ್ಪಿಕೊಳ್ಳೋಣ. ಅಳಿದವರನ್ನು ಹಳಿಯುವುದರಲ್ಲಿ ಕಾಲಹರಣಗೈಯುವ ಬದಲು ಉಳಿದಿರುವವರು ಬಾಳುವ ಬಗೆಯನ್ನು ಯೋಚಿಸುವ. ಏನಂತೀರಿ ?

(ಸೂಚನೆ : ನನಗೆ ತೋಚಿದ ಅಭಿಪ್ರಾಯಗಳನ್ನು ಮಂಡಿಸುವಾಗ ಇದೇ ತೆರನಾದ ಯೋಚನೆಗಳು ಬರೀ ನನಗಷ್ಟೇ ಬಂದಿರದು ಎಂದು ತೋರಿ ನನಗೇ ಗೊತ್ತಿರದ ಆ ಇನ್ನೊಬ್ಬರ ಅಭಿಪ್ರಾಯವೂ ಸೇರಿ ಇದು ನಮ್ಮ ಅಭಿಪ್ರಾಯ ಎಂದು ಬರೆದಿದ್ದೇನೆ)

Sunday 10 November 2013

ಕಾನೂನು ಕಟ್ಟಳೆಗಳಿಂದ ಜನರ ಮನಸ್ಸನ್ನು ಬದಲಾಯಿಸುವುದು ಸಾಧ್ಯವೇ?

      ಅಂಧಶ್ರದ್ಧೆ ಮಾನವನ ಹುಟ್ಟುಗುಣ. ಆದರೆ ಸುಟ್ಟರೂ ಹೋಗದಂಥದ್ದೇನಲ್ಲ. ವಿವೇಚನೆಯ ಕಿಚ್ಚು ಹಚ್ಚಿದ್ದಾದರೆ ಅದು ಕಡಿಮೆಯಾಗುವುದುಂಟು. ಸುಟ್ಟ ಬೀಜ ಮೊಳಕೆಯೊಡೆಯುವುದಿಲ್ಲವಷ್ಟೇ. ಆದರೆ ಬುದ್ಧಿಗೆ ಯೋಚಿಸುವ ತಾಪತ್ರಯವೇ ನೀಡಿಲ್ಲವಾದರೆ ಒಳಗಿನ ಅಂಧಶ್ರದ್ಧೆ ಹಾಗೆಯೇ ಬೆಳೆದು, ತಾನು ನಂಬಿದ್ದೊಂದೇ ಸತ್ಯ ಎಂದು ತೋರುವುದುಂಟು.

      ಅಂಧಶ್ರದ್ಧೆ ಬೆಳೆಯಲು ಇನ್ನೊಂದು ಕಾರಣವೆಂದರೆ ನಮಗೆ ಗೊತ್ತಿಲ್ಲದಿರುವ ವಿಚಾರಗಳನ್ನು ಗೊತ್ತಿಲ್ಲ ಎನ್ನಲು ಅಂಜುವುದು. ಅದರ ಬದಲಾಗಿ ನಾವು ನಂಬಿರುವ ಯಾರೋ ಹೇಳಿದ ವಿಚಾರಗಳನ್ನು ಹೇಳಿ 'ಅದು ಹಾಗೆ, ಇದು ಹೀಗೆ' ಎಂದಂದು ತಮ್ಮ ವಾದದಲ್ಲಿ ತಾವು ಗೆದ್ದೆವೆಂದು ಬೀಗುವುದು. ವ್ಯಕ್ತಿ ತನಗೆ ಗೊತ್ತಿಲ್ಲದ ವಿಚಾರಗಳಲ್ಲಿ ಕುತೂಹಲ ತಾಳಿ ಅವನ್ನು ಕಲಿಯಲೆತ್ನಿಸುವುದೆಂದರೆ ಅದು ಖರ್ಚಿನ ಕೆಲಸ. ತನ್ನ ಬುದ್ಧಿಯನ್ನೂ, ಸಮಯವನ್ನೂ ವೆಚ್ಚ ಮಾಡಬೇಕು. ಅದಕ್ಕಿಂತ ವೇದಗಳು, ಪುರಾಣಗಳು ಹೇಳಿದವು ಎಂದು ಹೇಳಿ ಬಾಯಿ ಮುಚ್ಚಿಸುವುದು ಸುಲಭವಲ್ಲವೇ. ಒಂದುವೇಳೆ ತಿರುಗಿ ಅವರು ವೇದಗಳನ್ನು ಓದಿದ್ದಾರೆಯೇ ಎಂದು ಕೇಳಿದ್ದೇ ಆದರೆ ಅವರು ಕೇಳಿಯಾರು 'ನನಗೆ ಆ ಸ್ವಾಮೀಜಿ ಹೇಳಿದ್ದು, ಆ ಮಹಾನುಭಾವರು ಹೇಳಿದ್ದು, ನಿಮ್ಮ ಅರ್ಥದಲ್ಲಿ ಏನು ಅವರು ಹೇಳಿದ್ದು ಸುಳ್ಳೋ' ಎಂದು. ಒಟ್ಟಿನಲ್ಲಿ ನಾನು ಸರಿ. ನನಗೆ ಹೇಳಿದವರೇ ತಪ್ಪು ಹೇಳಿದ್ದರೆ ವಿಚಾರ ಮಾಡದೆ ನಂಬಿದ ನನ್ನ ತಪ್ಪಲ್ಲ.

      ಇಂತಿಪ್ಪ ಸಮಾಜದಲ್ಲಿ ನೀವು ಯಾವುದೇ ಮಾತಿನಿಂದ ಮತ್ತೊಬ್ಬನ ನಂಬಿಕೆಗಳನ್ನು ಬದಲಾಯಿಸುವುದು ಸಾಧ್ಯವಿಲ್ಲ. ಅದನ್ನು ನಂಬಿದವ ಎಂಥ ಮೂಢನೇ ಇರಲಿ ನೀವೇ ಸೋಲೊಪ್ಪಿಕೊಂಡು ಇಂದಿನ ಕಾಲಕ್ಕೆ ಅಪ್ರಸ್ತುತ ಎನಿಸಿದ ನಂಬಿಕೆಯನ್ನೇ ಮೂಢ ಎಂದು ಕರೆದು ನಾನೂ ಗೆಲ್ಲಬಲ್ಲೆ ಎಂದು ತೋರಿಸಿಕೊಂಡರಾಯ್ತು. ಗೆಲ್ಲುವ ಹಟದಲ್ಲಿ ರೂಢಿಯಿಂದ ಬಂದಂಥ ನಂಬಿಕೆಯೊಂದನ್ನ ಮೂಢ ಎಂದಂದು ತಮ್ಮ ತಮ್ಮ ಮೌಢ್ಯವನ್ನೂ ಜಾಹೀರುಪಡಿಸಿಕೊಂಡರಾಯ್ತು. ಆದರೆ ಬರಿಯ ಮಾತಿನಿಂದಾಗದ್ದು ಕಾನೂನು ಕಟ್ಟಳೆಗಳಿಂದ ಸಾಧ್ಯವೇ?

      ಒಂದಿಷ್ಟು ನಂಬಿಕೆಗಳಿಗೆ ಮರಣಶಾಸನ ಬರೆಯುವ ಇಂಥ ಒಂದು ಉಮೇದು ರಾಜ್ಯದ ಮಾನ್ಯ ಮುಖ್ಯ ಮಂತ್ರಿಗಳಿಗೆ ಬಂದಿದ್ದೂ ಆಯ್ತು. ಕಾನೂನು ಕಾಯಿದೆಗಳಿಂದ ಭ್ರಷ್ಟಾಚಾರ, ಅಪರಾಧಗಳನ್ನಂತೂ ಕಡಿಮೆ ಮಾಡಲಾಗಲಿಲ್ಲ. ಜನರ ನಂಬಿಕೆಗಳನ್ನೇ ಬದಲಿಸುವ ಎಂಬ ಹುಮ್ಮಸ್ಸು. ಸಾಮೂಹಿಕ ಆಚರಣೆಗಳ ವೇಳೆ ಮಾಡಿ-ಮೈಲಿಗೆ ನೆಪದಲ್ಲಿ ಯಾವುದೇ ಜಾತಿಯ ಜನರನ್ನು ಹೊರಗಿಡುವ, ಪಂಕ್ತಿಭೇದ ಮಾಡುವ ಸಂಪ್ರದಾಯದಿಂದಾಗಿ ಸಮಾಜದಲ್ಲಿ ಮೇಲು-ಕೀಳೆಂಬ ಭೇದ ಭಾವ ಇದೆ ಎಂದು ನಂಬಿರುವವರು ಅವರು.  ಪಾಪ, ಸರ್ಕಾರದ ನೀತಿಗಳಲ್ಲೇ ಪರಿಶಿಷ್ಟ ವರ್ಗಗಳನ್ನು ಹೊರತುಪಡಿಸಿ ಮತ್ತೆಲ್ಲರೂ ಸ್ಥಿತಿವಂತರೆಂದು ನಂಬಿರುವುದು ಕಾಣಿಸಲೇ ಇಲ್ಲ. ಹೋಗಲಿ ಬಿಡಿ ಅವರ ವಿಷಯ ನಮಗ್ಯಾಕೆ ? ಆದರೆ ನನ್ನ ಪ್ರಶ್ನೆ ಇದ್ದಿದ್ದು 'ಕಾನೂನು ಕಟ್ಟಳೆಗಳಿಂದ ಜನರ ಮನಸ್ಸನ್ನು ಬದಲಾಯಿಸುವುದು ನಿಜವಾಗಿಯೂ ಸಾಧ್ಯವೇ?' ಎಂದಲ್ಲವೇ. ಹಾಗಾಗಿ ಒಂದಿಷ್ಟು ಹೇಳಬೇಕಾಯ್ತು.

      ಒಂದು ವಿಷಯ ಕೇಳಿ. ನಮ್ಮ ದೇಶದಲ್ಲಿ ಮೊದಲಿಂದಲೂ ಕಸುಬಿನ ಹೆಸರಲ್ಲಿ ಕಟ್ಟಿಕೊಂಡ ಜಾತಿಗಳೂ; ಜಾತಿಗಳ, ದೇವರುಗಳ ಹೆಸರಲ್ಲಿ ಕಟ್ಟಿಕೊಂಡ ಧರ್ಮಗಳೂ ರಾಜಕೀಯ ಶಕ್ತಿಯ ಬಲದಿಂದಲೇ ಬೆಳೆದವುಗಳು, ಉಳಿದವುಗಳು. ಇಂತಿಂಥಾ ರಾಜ ಇಂತಿಂಥಾ ದೇವಾಲಯಗಳನ್ನು ಕಟ್ಟಿಸಿದ ಎಂದೋ, ಇಂತಿಂಥಾ ದೇವಾಲಯಗಳಿಗೆ ಅನುದಾನವನ್ನಿತ್ತ ಎಂದೋ ಚಿಕ್ಕಂದಿನಲ್ಲಿ ಸಮಾಜ-ವಿಜ್ಞಾನ ಪಾಠ ಪುಸ್ತಕದ ಇತಿಹಾಸದ ವಿಭಾಗದಲ್ಲಿ ಓದಿಯೇ ಇರುತ್ತೀರಿ. ಆದರೆ ಒಂದೇ ಪ್ರದೇಶದ ಜನರಲ್ಲಿ ಬೇರೆ ಬೇರೆ ರಾಜರ ಆಳ್ವಿಕೆಯಲ್ಲಿ, ಬೇರೆ ಬೇರೆ ಧರ್ಮದ ನಂಬಿಕೆಗಳನ್ನು ಹೇರುವುದು ಹೇಗೆ ಸಾಧ್ಯವಾಯಿತು ? ಬರಿಯ ಬಾಯಿ ಮಾತಿನಿಂದ ಜನರು ಹೊಸ ಮತಗಳನ್ನು ಒಪ್ಪಿಕೊಂಡರೇ? ಅದಂತೂ ಸುತಾರಾಂ ಸಾಧ್ಯವಿಲ್ಲ. ಹಾಗಾದರೆ ಇಂದು ನಮ್ಮಲ್ಲಿರುವ ಎಷ್ಟೋ ಧಾರ್ಮಿಕ ನಂಬಿಕೆಗಳು ಯಾವುದೋ ರಾಜಕೀಯ ಶಕ್ತಿಗಳು ಇಂತಹ ಕಾನೂನುಗಳನ್ನು ತಂದಿದ್ದರ ಫಲವೇ ಎಂಬ ಅನುಮಾನವೂ ಮೂಡುವುದುಂಟು. ಇದಕ್ಕೆ ಉತ್ತರ ಪಡೆಯಲೆತ್ನಿಸಿದರೆ ಮತ್ತದೇ 'ಈ ಧರ್ಮದ ಮೇಲಾದ ಅತ್ಯಾಚಾರ ಅದು, ಪರಧರ್ಮೀಯರನ್ನು ಓಲೈಸುವ ತಂತ್ರ' ಎಂದು ತಾವು ಕಣ್ಣು ಮುಚ್ಚಿ ಕಂಡ ರಾಜಕೀಯ ಪಕ್ಷಗಳ ಗುಣಗಳನ್ನು ಕುರಿತು ಭಾಷಣ ಬಿಗಿಯುವವರು ಸಿಕ್ಕಾರೇ ವಿನಃ ಒಬ್ಬನ ವ್ಯಕ್ತಿ ಸ್ವಾತಂತ್ರ್ಯದ ಬಲಿ ಎಂದು ಯಾರಿಗೂ ತೋರದು.

      ಆದರೆ ಏನೇ ಹೇಳಿ, ಕಾಯಿದೆ ಬಂದರೂ, ಬಿಟ್ಟರೂ, ಕಾಯಿದೆಗಳಿಂದ ಜನ ಬದಲಾದರೂ, ಆಗದಿದ್ದರೂ ಸೋಲು ಮಾತ್ರ ಜನರದ್ದೇ. ಯಾಕೆ ಗೊತ್ತಾ, ಬದಲಾದರೆ ತಾವು ಗೆದ್ದೆವೆಂದು ಇಲ್ಲವಾದರೆ ತಾವು ಸರ್ವ ಧರ್ಮ ಸಹಿಷ್ಣುಗಳೆಂದು ಸೋಗು ಧರಿಸಿದವರು ಹಿಂದಿನವರು. ಈಗಿನವರಿಗೆ ಇಷ್ಟು ಮಾಡಲೂ ತಿಳಿಯದಿದ್ದೀತೇ ?