Thursday 5 February 2015

ಹೊರಗಿನ ಬೆಟ್ಟವನ್ನೊರಗಿದೊಂದು ದಿನ

ಕೊಕ್ಕೊಕೋ..ಕೋ.. ಕೊಕ್ಕೊಕೋ..ಕೋ.. ​ಬೆಳ್ಳಿ ಮೂಡುವ ಮೊದಲೇ ಕೋಳಿ ಕೂಗಿತ್ತು. ಅದರ ಕೂಗಿಗೇ ನನಗೆ ಎಚ್ಚರವಾಗಿದ್ದೆಂಬುದು ಸುಳ್ಳು. ನಾಲ್ಕೂ ಮುಕ್ಕಾಲಿಗೆ ಕೂಗಿಕೊಳ್ಳುವಂತೆ ಇಟ್ಟಿದ್ದ ಅಲರಾಮು ಕೂಡ ಇನ್ನೂ ಕೂಗಿಕೊಳ್ಳದ್ದರಿಂದ ಯಾವುದೋ ಕನಸು ಬಿದ್ದೇ ಎಚ್ಚರವಾಗಿದ್ದಿರಬೇಕು. ಹೀಗೆ ಎಚ್ಚರವಾದ ಜೀವಕ್ಕೆ ಆ ಕೋಳಿಗಳ ಕೂಗು ಕೇಳಿದೆ ಎಂಬುದೇ ಪರಮ ಸತ್ಯ. ಅಂಥದ್ದೇ ಇನ್ನೊಂದು ಸತ್ಯ ಏನಪ್ಪಾ ಅಂದ್ರೆ, ಒಂದಾನೊಂದು ಕಾಲದಲ್ಲಿ, ಮಲೆನಾಡಿನ ಮೂಲೆಯಲ್ಲಿದ್ದ ಸೋಮನಹಳ್ಳಿಯ ಮುದುಕಿ ತನ್ನ ಕೋಳಿಯ ಕೋಗಿಗೇ ಬೆಳಗಾಗುವುದು ಎಂಬ ಭ್ರಮೆಯಲ್ಲಿದ್ದಂತೆ, ಕೋಳಿ ಕೂಗು ಕೇಳಿ ಬೆಳಗಾಯ್ತೆಂದು ನೀವಂದುಕೊಂಡಿರಾದರೆ ಮಧ್ಯರಾತ್ರಿಯಲ್ಲಿ ನಿದ್ದೆಯಿಂದೆದ್ದು ಕೂರಬೇಕಾದೀತೆಂಬುದು. ರಸ್ತೆಯುದ್ದಕ್ಕೂ ಇದ್ದ ಬೀದಿ ದೀಪಗಳಲ್ಲಿ ಯಾರದೇ ಪ್ರತಿಭಟನೆ, ಮುಷ್ಕರಗಳಿಗೆ ಆಹಾರವಾಗದೇ ಉಳಿದ ಕೆಲವು ಸೋಡಿಯಂ ದೀಪಗಳನ್ನೇ ಒಬ್ಬೊಬ್ಬ ಸೂರ್ಯ ಎಂದು ತಿಳಿದು ರಾತ್ರಿಯಿಡೀ ಕೂಗುತ್ತವೆ ಇಂದಿನ ಕೋಳಿಗಳು. ಇಂತಹ ಕೋಳಿರವವನ್ನು ಹೊತ್ತು ಮೂಡುವ ಮೊದಲೇ ಕೇಳುತ್ತಾ ಎದ್ದು, ನಿತ್ಯಕರ್ಮಗಳನ್ನು ಮುಗಿಸಿಕೊಂಡೆ. ಮಧ್ಯದಲ್ಲಿ ಕೈಕೊಟ್ಟ ಕರೆಂಟಿಗೆ ​ಮನದಲ್ಲೇ ಹಿಡಿ ಶಾಪ ಹಾಕುತ್ತಾ, ಕತ್ತಲಲ್ಲೇ ತಲೆ ಬಾಚಿಕೊಂಡು, ನೀರಿನ ಬಾಟಲು, ಹ್ಯಾಟುಗಳನ್ನು ಹೆಗಲ ಚೀಲಕ್ಕೆ ತುರುಕಿ, ಶೂ ಮೆಟ್ಟುವಷ್ಟರಲ್ಲಿ ಹೋದ ಕರೆಂಟು ವಾಪಸ್ಸು ಬಂದು ಒಳಗೆ ಉರಿಯುತ್ತಿದ್ದ ಟ್ಯೂಬ್ ಲೈಟು ನಾನು ಸ್ವಿಚ್ ಆಫ್ ಮಾಡಲು ಮರೆತಿದ್ದನ್ನು ನೆನಪಿಸಿದ್ದಕ್ಕೆ ತೊಟ್ಟಿದ್ದೊಂದು ಬೂಟನ್ನು ಬಿಚ್ಚಿ ದೀಪ ಆರಿಸಿ ಬಂದೆ. ಮತ್ತೇನೂ ಮರೆತಿಲ್ಲ ಎಂಬ ಖಾತ್ರಿ ಆದೊಡನೆ ಎರಡೂ ಶೂ ಕಟ್ಟಿಕೊಂಡು ಮನೆಯಿಂದ ಹೊರಟೆ.

ಗಂಟೆ ಆರಾಗುತ್ತಾ ಬಂದಿತ್ತು. ೬.೫೦ರೊಳಗೆ ಎಲ್ಲರೂ ಬಸ್ಸು ನಿಲ್ದಾಣ ತಲುಪಿರಬೇಕೆಂದು ನಿಗದಿಯಾಗಿತ್ತು. ಐಸೋಲೇಶನ್ ಸ್ಟಾಪ್ ಬಳಿ ಮೆಜೆಸ್ಟಿಕ್ ಕಡೆಗೆ ಹೋಗುವ ಬಸ್ಸಿಗಾಗಿ ಕಾಯುತ್ತಾ ನಿಂತೆ. ಸಮಯ ಕಳೆಯಲೆಂದು ಫೋನಿನಲ್ಲೇ ಇದ್ದ ಎಫ್.ಎಂ. ಆನ್ ಮಾಡಿ ಇಯರ್ ಫೋನನ್ನು ಕಿವಿಗೆ ಚುಚ್ಚಿಕೊಂಡೆ. ಭಕ್ತಿಗೀತೆಗಳ ಕಾರ್ಯಕ್ರಮ ಶುರುವಾಗಿತ್ತು. ಲೋಕದ ಕಣ್ಣಿಗೆ ನಾನೊಬ್ಬ ನಾಸ್ತಿಕನಾಗಿರುವುದರಿಂದಲೂ , ಸ್ವಭಾವತಃ ನಾನು ಎಲ್ಲರಂತಹ ಆಸ್ತಿಕನಲ್ಲದ್ದರಿಂದಲೂ ಆ ಕೀರ್ತನೆಗಳನ್ನು ಕೇಳುವ ಮನಸ್ಸಾಗದೆ ಚಾನೆಲ್ ಬದಲಾಯಿಸುತ್ತಾ ಹೋಗಿ ಸುಮಧುರ ಹಿಂದಿ ಚಿತ್ರಗೀತೆಗಳನ್ನು ಕೇಳುತ್ತಾ ನಿಂತೆ. ಸ್ವಲ್ಪ ಹೊತ್ತಿನಲ್ಲಿ ಬಂದ ಬಸ್ಸಿನ ಬೋರ್ಡು ಕಾಣುವುದು ಆ ಕತ್ತಲೆಯಲ್ಲಿ ಶಕ್ಯವಿರಲಿಲ್ಲ. ಮುಂದಿನ ಬಾಗಿಲ ಬಳಿ ಸಾಗಿ 'ಮೆಜೆಸ್ಟಿಕ್' ಎನ್ನುತ್ತಾ ಡ್ರೈವರ್ ಕಡೆ ಪ್ರಶ್ನಾರ್ಥಕವಾಗಿ ನೋಡಿದೆ. 'ಹತ್ತು' ಎನ್ನುವಂತೆ ಆತ ಕತ್ತು ಆಡಿಸಿದ. ಬಸ್ಸನ್ನೇರಿ ಒಂದು ಸೀಟು ಹಿಡಿದು ಕೂರುವಷ್ಟರಲ್ಲಿ ಬಂದ ಕಂಡಕ್ಟರ್ ಮಹಾಶಯನ ಕೈಗೆ ೨೦ ರೋಪಯಿಗಳನ್ನಿಡುತ್ತಾ 'ಮೆಜೆಸ್ಟಿಕ್' ಅಂದೆ. ೧೯ ರೂಪಾಯಿಯ ಚೀಟಿಯನ್ನು ನನ್ನ ಕೈಗಿಟ್ಟು ಮುಂದೆ ಹೊರಟಿದ್ದ ಆತನನ್ನು ತಡೆದು, 'ಸಾರ್, ಒಂದು ರೂಪಾಯಿ ಚೇಂಜ್' ಅಂದಿದ್ದಕ್ಕೆ ಆತ ತನ್ನ ಪರ್ಸನ್ನೆಲ್ಲಾ ಹುಡುಕಿ ಎರಡು ರೂಪಾಯಿ ಪಾವಲಿ ಹೊರತೆಗೆದು 'ಒಂದು ರೂಪಾಯಿ ಇದ್ರೆ ಕೊಡಿ, ಎರಡು ರುಪಾಯಿ ಕೊಡ್ತೀನಿ' ಅಂದ. ಈಗ ನಾನು ಚೀಲವನ್ನೆಲ್ಲಾ ಹುಡುಕಿ ಕೈಗೆ ಸಿಕ್ಕ ೨'ಸಿಕ್ಕಾ'ಗಳಲ್ಲಿ ಒಂದನ್ನು ಅವನ ಕೈಗಿಟ್ಟು, ಆತ ಕೊಟ್ಟ ಎರಡು ರುಪಾಯಿಗಳನ್ನು ಬ್ಯಾಗಿಗೆ ತುರುಕಿಟ್ಟ ಬಳಿಕ ಕಿಟಕಿಯಿಂದ ಹೊರಗೆ ದೃಷ್ಟಿ ನೆಟ್ಟು ಕುಳಿತೆ.

ಮೆಜೆಸ್ಟಿಕ್ ತಲುಪುವ ವೇಳೆಗೆ ಗಂಟೆ ಆರೂವರೆಯ ಆಸುಪಾಸಿನಲ್ಲಿತ್ತು. ಬಸ್ಸಿಂದ ಇಳಿಯುವಲ್ಲಿ ಹಿಂದಿನ ಟ್ರೆಕ್ ಸಂದರ್ಭದಲ್ಲಿ ಪರಿಚಯವಾದೊಬ್ಬನನ್ನು ಭೇಟಿಯಾದೆ. ಒಟ್ಟಾಗಿ ಕೆ.ಎಸ್.ಆರ್.ಟಿ.ಸಿ ಯ ಮೂರನೇ ಟರ್ಮಿನಲಿನತ್ತ ನಡೆದೆವು. ದಾರಿಯುದ್ದಕ್ಕೂ ನಮ್ಮ ನಮ್ಮ ಮೂಗಿಗೆ ಅಡ್ಡ ಕೈಗಳನ್ನೊತ್ತಿ ಹೆಚ್ಚಿನ ರಕ್ಷಣೆ ಕೊಡುವ ಅನಿವಾರ್ಯತೆ ಇತ್ತು. ಸ್ವಲ್ಪವೇ ದೂರದಲ್ಲಿದ್ದ ಶೌಚಾಲಯವನ್ನು ನಿತ್ಯಕರ್ಮಗಳಿಗೆ ಉಪಯೋಗಿಸಿದಲ್ಲಿ ಅವು ಕಲುಷಿತಗೊಂಡು, ನಮ್ಮ ದೇಶ 'ಸ್ವಚ್ಛ ಭಾರತ್, ಶ್ರೇಷ್ಠ ಭಾರತ್' ಆಗುವುದು ತಪ್ಪೀತೆಂದು ಬೆದರಿಯೋ, ಇಲ್ಲವೇ ರಸ್ತೆ ಬದಿಯಲ್ಲಿ ವಿಪರೀತ ಜನಜಂಗುಳಿಯಾಗುವುದನ್ನು ತಪ್ಪಿಸಲು ಏಕಮಾತ್ರ ವಿಧಾನವೆಂದು ತಿಳಿದೋ ಕೆಲ ಜನರು ಇಂದಿಗೂ ಈ ಅಭಿಯಾನವನ್ನು ಮುನ್ನಡೆಸಿಕೊಂಡೇ ಇರುವರು. ಯಾವುದು ಎಂದು ಬಾಯ್ಬಿಟ್ಟು ಹೇಳುವ ಅಗತ್ಯವಿಲ್ಲವಷ್ಟೇ. 'ಇಡೀ ಬೆಟ್ಟವನ್ನಾದರೂ ಸ್ವಚ್ಚಗೊಳಿಸೇವು, ಇದು ಮಾತ್ರ ಸಾಧ್ಯವಾಗದೇನೋ' ಎರಡು ವಾರದ ಹಿಂದೆ ಸ್ಕಂದಗಿರಿಯ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದ್ದ ನೆನಪಿನಲ್ಲೇ ಆಡಿದ ಮಿತ್ರರ ಮಾತಿಗೆ ಪ್ರತಿಯಾಗಿ 'ಜನರ ಮನಸ್ಸು, ಬುದ್ಧಿಗಳು ಸ್ವಚ್ಚವಾದಂದು ಹೊರ ಜಗತ್ತಿಗೆ ಯಾರೂ ಸ್ವಚ್ಚತೆಯ ಪಾಠ ಹೇಳುವ ಅಗತ್ಯವೇ ಇರಲಾರದು' ಎಂಬ ನೆನಪೂ ಹತ್ತಿ ಒಮ್ಮೆ ಮುಗುಳ್ನಕ್ಕೆ. ಬೇಗ ಹೋದೆವೆಂದರೆ ಉಳಿದವರಿಗಾಗಿ ಕಾಯುವ ಕೆಲಸ. ಕೆಲವರಿಗೆ ‘ಕಾಯಕವೇ ಕೈಲಾಸ’, ಇನ್ನೂ ಕೆಲವರಿಗೆ ‘ಕಾಯುವಿಕೆಯೇ ಕೈಲಾಸ’. ಗಂಟೆ ಎಳಾಗುವಷ್ಟರಲ್ಲಿ ಒಂದಿಷ್ಟು ಜನ ಜಮಾಯಿಸಿದ್ದರು. ಅದಕ್ಕಿಂತಲೂ ಹೆಚ್ಚಿನ ಹೊತ್ತು ಕಾಯುವ ಅವಕಾಶವೂ ಇರಲಿಲ್ಲ. ಬಂದವರೆಲ್ಲಾ ಒಂದಾಗಿ, ಬರದವರನ್ನು ಬಿಟ್ಟು ಹೊರಡಲಣಿಯಾದೆವು. ಹೆಸರು ಕೊಟ್ಟು, ಬರುವುದನ್ನು ಖಚಿತಪಡಿಸಿದ್ದ ೨೦ ಮಂದಿಯಲ್ಲಿ, ೧೪ ಮಂದಿ ಬಂದಿದ್ದರು. ಎಂದಿನಂತೆ ಮೊದಲಿಂದ ಪರಿಚಯವಿದ್ದವರು ತಮ್ಮ ಪಾಡಿಗೆ ಹರಟುತ್ತಾ ಕುಳಿತರೆ, ನಾನೊಂದು ಮೂಲೆಯಲ್ಲಿ ಕೂತಿದ್ದೆ. ಈ ಹಿಂದೆ ಚೆನ್ನಗಿರಿಗೆ ಹೋದುದೇ ದಾರಿಯಾದ್ದರಿಂದ ಅಷ್ಟೇನೂ ಹೊರನೋಡುವ ಇಂಗಿತವಿರಲಿಲ್ಲ. ತಣ್ಣನೆ ಬೀಸುವ ಗಾಳಿಗೆ ಮುಖವೊಡ್ಡಿ ಸೀಟಿಗೊರಗಿ ಕುಳಿತಿದ್ದೆ. ಅಷ್ಟರಲ್ಲಿ ಕಂಡಕ್ಟರ್ ಬಂದು 'ಕಿಟಕಿ ಗ್ಲಾಸ್ ಕ್ಲೋಸ್ ಮಾಡ್ರಿ' ಅಂದ. ನಾನು ಮುಕ್ಕಾಲು ಭಾಗ ಮುಚ್ಚುವುದರಳೊಗೇ ಮತ್ತೊಮ್ಮೆ 'ಪೂರ್ತಿ ಮುಚ್ರೀ, ತುಂಬಾ ಕೋಲ್ಡ್ ಬರ್ತಾ ಇದೆ' ಅಂದ. ಪ್ರತಿಯಾಡದೇ ಕಿಟಕಿ ಮುಚ್ಚಿದ್ದರ ಜೊತೆಗೆ ಕಣ್ಣನ್ನೂ ಮುಚ್ಚಿ ತಲೆಯನ್ನು ಸೀಟಿಗೊರಗಿಸಿ ಕುಳಿತೆ.




ಎಲ್ಲರೂ ಏದುಸಿರು ಬಿಡುತ್ತಾ ಬೆಟ್ಟದ ಮೇಲೆ ತಲುಪಿದೆವು. ಒಬ್ಬೊಬ್ಬರು ಒಂದೊಂದು ದಿಕ್ಕಿಗೆ ಓಡಿ ಹಾರುವ ಮೋಡಗಳನ್ನು ಕೈಯಲ್ಲಿ ಹಿಡಿಯುವಂತೆ ಆಡುತ್ತಿದ್ದರು. ಮಧ್ಯೆ-ಮಧ್ಯೆ 'ವ್ಹಾವ್.. ಬ್ಯೂಟಿಫುಲ್', 'ಆಸ್ಸಮ್..' ಎಂಬಿತ್ಯಾದಿ ಉದ್ಗಾರಗಳು ಕೇಳಿ ಬರುತ್ತಿದ್ದವು. ಹಸಿರ ಸೊಬಗು ನಡೆದು ಬಂದ ದಣಿವನ್ನು ತಣಿಸಿದ್ದರೂ, ಹೊಟ್ಟೆ ಹಸಿವನ್ನು ಡಂಗುರ ಹೊಡೆದು ಸಾರುತ್ತಿತ್ತು. ಕಟ್ಟಿ ತಂದಿದ್ದ ಅನ್ನವನ್ನು ಉಣ್ಣಲೆಂದು ಎಲ್ಲರೂ ಸುತ್ತು ಕಟ್ಟಿ ಕುಳಿತೆವು. ನಾನೋ ಆತುರಾತುರವಾಗಿ ಮುಕ್ಕತೊಡಗಿದೆ. ಅನ್ನ ಗಂಟಲಲ್ಲಿ ಸಿಕ್ಕಿಕೊಂಡಿತು. 'ಖ್ಹಫ಼್.. ಖ್ಹವ್..' ನಾನು ಕೆಮ್ಮುತ್ತಿದ್ದೆ. ಮುಂದೆ ನೋಡಿದರೆ ನಮ್ಮ ತಂಡದಲ್ಲೊಬ್ಬ ಬಸ್ಸಿನಿಂದಿಳಿಯಲು ಸಿದ್ಧನಾಗಿದ್ದು ಕಂಡೆ. 'ಖ್ಹಫ಼್.. ಖ್ಹವ್..' ಕೆಮ್ಮು ಬರುತ್ತಲೇ ಇತ್ತು. ಉಳಿದೆಲ್ಲರೊಂದಿಗೆ ದೇವನಹಳ್ಳಿ ನಿಲ್ದಾಣದಲ್ಲಿ ಬಸ್ಸಿನಿಂದಿಳಿದೆ. ಕನಸಿನಲ್ಲಿ ಗಂಟಲು ಕಟ್ಟಿದ್ದಕ್ಕೆ ನಿಜವಾಗಿಯೂ ಕೆಮ್ಮಿದ್ದು ನೆನಪಾಗಿ ನಗು ಬರುತ್ತಿತ್ತು. ಜನ ಈತನಿಗೇತರ ಮರುಳು ಎಂದು ತಿಳಿದಾರೆಂದು ಸುಮ್ಮನಾದೆ. ಅಲ್ಲೇ ಇದ್ದ ಉಪಹಾರ ಗೃಹಕ್ಕೆ( ನೀವು ಮಂದಿರವೆಂದು ಕರೆದರೂ ನನ್ನ ಅಭ್ಯಂತರವೇನಿಲ್ಲ ) ತೆರಳಿ ಬೆಳಗ್ಗಿನ ಉಪಹಾರ ಮುಗಿಸಿ, ಮಧ್ಯಾಹ್ನಕ್ಕೆ ಚಿತ್ರಾನ್ನ ಮತ್ತು ವಡೆ ಪಾರ್ಸೆಲ್ ಕಟ್ಟಿಸಿಕೊಂಡು ಕಾರೇಹಳ್ಳಿ ಕ್ರಾಸ್ ಗೆ ಹೋಗುವ ಬಸ್ಸಿಗಾಗಿ ಕಾಯುತ್ತಾ ನಿಂತೆವು. ೯.೧೫ ರ ಬಸ್ಸು ಬರುವುದರೊಳಗೆ ಆಟೋಗಾಗಿ ಎರಡು ಸುತ್ತಿನ ವಿಫಲ ಮಾತುಕತೆ ಮುಗಿದಿತ್ತು. ಬಂದ ಬಸ್ಸಿಗೆ ಹತ್ತಿ ಕುಳಿತರೆ ಆತ ನಿಲ್ದಾಣದಲ್ಲೊಂದಿಷ್ಟು ಹೊತ್ತು, ಹೊರಗೆ ಮತ್ತೊಂದಿಷ್ಟು ಹೊತ್ತು ಕಾಯಿಸಿ ೧೦ ಗಂಟೆಯ ಸುಮಾರಿಗೆ ಕಾರೇಹಳ್ಳಿ ಕ್ರಾಸ್ ತಲುಪಿಸಿದ.

ಈ ಮೊದಲು ಹೊರಗಿನ ಬೆಟ್ಟಕ್ಕೆ ಚಾರಣಕ್ಕೆಂದು ಬಂದವರಾರೂ ತಂಡದಲ್ಲಿಲ್ಲದ್ದರಿಂದ ಬೆಟ್ಟದ ಬುಡಕ್ಕೆ ಸಾಗುವ ದಾರಿ ತಿಳಿಯುವಲ್ಲಿ ಸ್ವಲ್ಪ ಗೊಂದಲವಾಯ್ತು. ಪಕ್ಕದಲ್ಲಿದ್ದ ಆಟೋ ಚಾಲಕರಿಗೆ ಹೊರಗಿನ ಬೆಟ್ಟ ಎಂದೆವಾದರೆ ಅರ್ಥವಾಗುವಂತಿರಲಿಲ್ಲ. ಅವರ ಲೆಕ್ಕದಲ್ಲೇ ಹೇಳುವುದಾದರೆ ಬೆಟ್ಟದ ಬುಡ ತಲುಪಲು ೮-೧೦ ಕಿಲೋಮೀಟರುಗಳಷ್ಟು ದೂರವಾದೀತು. ಕೊನೆಗೆ ಈ ಹಿಂದೆ ಬಂದಿದ್ದ ಒಂದಿಬ್ಬರಿಗೆ ಕರೆ ಮಾಡಿ ತಿಳಿದ ದಾರಿಯ ಚಿತ್ರಗಳನ್ನು ತಿರುಗಿ ಕಳಿಸಿ ಖಾತ್ರಿ ಮಾಡಿಕೊಂಡು ಮುನ್ನಡೆದೆವು. ಇಷ್ಟಾಗುವಷ್ಟರಲ್ಲಿ ಕೆಲವು ಮಂದಿ ತೀರದ ದಾಹಕ್ಕೋ, ಆರದ ಆಸೆಗೋ ಒಂದೊಂದು ಎಳನೀರು ಕುಡಿದು ಮುಂದಿನ ಕಾಲ್ನಡಿಗೆಯ ಪ್ರಯಾಣಕ್ಕೆ ಸಿದ್ಧರಾಗಿದ್ದರು. ಉಳಿದವರಾರಿಗೂ ಆ ಹೊತ್ತಿನಲ್ಲಿ ಕುಡಿಯುವ ಉಮೇದು ಇಲ್ಲದ್ದರಿಂದ ಎಂದಿನಂತೆ ವರ್ತುಲಾಕಾರದಲ್ಲಿ ನಿಂತು ನಮ್ಮ ನಮ್ಮ ಪರಿಚಯ ಮಾಡಿಕೊಂಡಾದ ಬಳಿಕ ಸಂಘಟಕರ ಮುಂದಾಳತ್ವ ಹಾಗೂ ಹಿಂದಾಳತ್ವಗಳಲ್ಲಿ ಚಾರಣ ಶುರುವಾಯ್ತು.




ಆರಂಭದ ಒಂದಿಷ್ಟು ದೂರದ ರಸ್ತೆ ನಡಿಗೆ ಸ್ಕಂದಗಿರಿಯನ್ನು ನೆನಪಿಸುತ್ತಿತ್ತು. ಅಂತಹುದೇ ರಸ್ತೆ, ಗಲ್ಲಿಗಳಲ್ಲಿ ಗುಲಾಲಿ ಬಣ್ಣದ ಕೈಗವಸುಗಳನ್ನು ತೊಟ್ಟು, ಮುಖಕ್ಕೊಂದು ಮುಖವಾಡ ತೊಟ್ಟು, ಒಂದೊಂದು ಪ್ಲಾಸ್ಟಿಕ್ ಚೀಲಗಳನ್ನು ಹೊತ್ತೊಯ್ಯುತ್ತಿದ್ದ ಒಂದಿಷ್ಟು ಜನರ ಚಿತ್ರ ಕಣ್ಮುಂದೆ ಸುಳಿದು ಹೋಯ್ತು. ಒಮ್ಮೆ 'ಸ್ವಚ್ಛ ಸ್ಕಂದಗಿರಿ’ಯ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ, ಬೆಟ್ಟದ ದಾರಿಯುದ್ದಕ್ಕೂ ಬಾಟಲು, ಪ್ಲಾಸ್ಟಿಕ್ ಇತ್ಯಾದಿ ಕಸವನ್ನು ಕಂಡಾಗ ಅದೇನೋ ಹಿಂಸೆಯಾಗುತ್ತಿತ್ತು. ಆ ರೀತಿ ಗಲೀಜು ಮಾಡಿ ಹೋದವರ ಬಗ್ಗೆ ಯಾರೆಂಬ ಅರಿವಿಲ್ಲದಿದ್ದರೂ ಮನದಲ್ಲೇ ತಿರಸ್ಕಾರ ಮೂಡುತ್ತಿತ್ತು. ಮಧ್ಯದಲ್ಲಿ ಬೀಸುತ್ತಿದ್ದ ತಣ್ಣನೆಯ ಗಾಳಿ ಈ ಎಲ್ಲಾ ಯೋಚನೆಗಳನ್ನು ಬದಿಗೆ ಸರಿಸಿ 'ಇಲ್ಲದಿರುವುದ ಮರೆತು, ಇರುವುದನನುಭವಿಸು' ಎಂದು ಸಾರಿ ಹೇಳುತ್ತಿತ್ತು. ಇವೆಲ್ಲದರ ಜೊತೆಗೇ ದಣಿದ ದೇಹಕ್ಕಿಷ್ಟು ವಿಶ್ರಾಂತಿಯನ್ನೂ, ಉಂಟಾದ ದಾಹಕ್ಕೆ ಗುಟುಕು ನೀರನ್ನೂ, ಅವರಿವರು ಹೊತ್ತು ತಂದಿದ್ದ ತಿಂಡಿ ತಿನಿಸುಗಳನ್ನೂ ಹೊಂದುತ್ತಾ ಹೆಜ್ಜೆ ಹೆಜ್ಜೆಯಾಗಿ ಮೇಲೆ ಸಾಗುತ್ತಿದ್ದೆವು.

ನಾವು ಬೆಟ್ಟದ ಬುಡದಲ್ಲಿ ನಿಂತಿದ್ದಾಗ ನಮ್ಮ ಎಡ ಹಾಗೂ ಬಲಕ್ಕೊಂದೊಂದು ಬೆಟ್ಟಗಳು ಕಾಣುತ್ತಿದ್ದವು. ನಾವು ಸಾಗತೊಡಗಿದ ದಾರಿ ಒಂದು ತರಹ ಹೆಣ್ಣುಮಕ್ಕಳು ತೊಡುವ ಹೇರ್ ಪಿನ್ನಿನಂತಹ ದಾರಿ. ಒಮ್ಮೆ ಎಡಕ್ಕೆ ಪೂರ್ತಿ ಸಾಗಿದ ಬಳಿಕ ಬಹುತೇಕ ಅಷ್ಟೇ ಭಾಗ ಬಲಕ್ಕೆ ವಾಪಸ್ಸು ಬರುವುದಿತ್ತು. ಒಂದೊಮ್ಮೆ ನಾವು ಹತ್ತುತ್ತಿರುವುದು ಯಾವ ಬೆಟ್ಟ ಎಂದು ನಮಗೇ ಗೊಂದಲವಾಗಿದ್ದೂ ಉಂಟು. ಇಂತಹ ಗೊಂದಲದ ಒಂದು ಪರಿಣಾಮವೇ ನಮಗೆ ನಾಲ್ಕು ಗುಟುಕು ಕಬ್ಬಿನಹಾಲು ಕುಡಿಸಿತು. ಅದೇನಾಯ್ತಪ್ಪಾ ಅಂದ್ರೆ, ಒಂದಿಷ್ಟು ಸವೆದ ದಾರಿಯ ಜಾಡನ್ನೇ ಹಿಡಿದು ಸೀದಾ ಮುಂದೆ ಹೋದ ನಾವು ಒಂದು ಚೆನ್ನಾದ ಡಾಂಬರು ರಸ್ತೆಗೆ ತಲುಪಿದ್ದೆವು. ಬಲಕ್ಕೆ ಸಾಗಿದರೆ ನಂದಿ ಬೆಟ್ಟ, ಎಡಕ್ಕೆ ಬ್ರಹ್ಮಗಿರಿ. ಎರಡೂ ಬಿಟ್ಟು ಮಧ್ಯದಲ್ಲಿ ನಿಂತಿದ್ದ ಗಾಡಿಯ ಬಳಿ ಹೋಗಿ ಕಬ್ಬಿನಹಾಲು ಕೊಂಡು ಕುಡಿದಾದ ಮೇಲೆ ಮತ್ತೆ ಈ ಹಿಂದೆ ಬಂದವರಿಗೆ ಕರೆ ಮಾಡಿ ನಾವು ದಾರಿ ತಪ್ಪಿದ್ದ ವಿಷಯ ತಿಳಿಸಿದೆವು. ಅತ್ತ ಕಡೆಯಿಂದ ಬಂದ ಮಾಹಿತಿಯ ಪ್ರಕಾರ ಆ ತಂಡವೂ ದಾರಿ ತಪ್ಪಿ ಇದೇ ಜಾಗಕ್ಕೆ ಬಂದಿದ್ದರಂತೆ. ಆದರಾಗ ಕಬ್ಬಿನಹಾಲಿನ ಗಾಡಿ ಇತ್ತೋ, ಇರಲಿಲ್ವೋ ಗೊತ್ತಿಲ್ಲ. ಬೇಕಾಗಿದ್ದಿದ್ದು ದಾರಿ ಆಲ್ವಾ, ಬಂದ ದಾರಿಯಲ್ಲೇ ಸ್ವಲ್ಪ ಹಿಂದೆ ಸಾಗಿ ಬಲಕ್ಕೆ ತಿರುಗಬೇಕಿತ್ತು. ಅಂತೂ ಸರಿಯಾದ ದಾರಿ ಹಿಡಿದು ಮುನ್ನಡೆದೆವು. ಕುಡಿದ ಕಬ್ಬಿನಹಾಲು ಎಲ್ಲರಿಗೂ ಒಂದಿನಿತು ಚೈತನ್ಯ ತುಂಬಿದ್ದು ದಿಟವಾದರೂ ಕಡೆಯ ಸುಮಾರು ಒಂದು ಮೈಲಿಯ ನಡಿಗೆ ಕೆಲವರಿಗೆ ಸುಸ್ತು ತಂದಿದ್ದೂ ಅಷ್ಟೇ ದಿಟ. ಹಾಗೂ ಹೀಗೂ ಕೂರುತ್ತಾ, ಏರುತ್ತಾ ಬೆಟ್ಟದ ತುದಿಗೆ ಮುಟ್ಟುವಾಗ ಗಂಟೆ ಒಂದು ದಾಟಿತ್ತು.




ಬೆಂಗಳೂರಿನಲ್ಲಿರುವುದು ಬರೀ ಎರಡೇ ಕಾಲ. ಒಂದು ಚಳಿಗಾಲ, ಮತ್ತೊಂದು ಚಳಿಗಾಲವಲ್ಲ. ಇದೇ ಕಾರಣವೋ, ಇಲ್ಲವಾದರೂ ಬೆರೆಡೆಯಲ್ಲೆಲ್ಲಾ ಮಳೆಗಾಲ ಕಳೆದು ಸುಮಾರು ನಾಲ್ಕು ತಿಂಗಳಾಗುತ್ತಾ ಬಂದಿರುವುದರಿಂದಲೂ ಎಲ್ಲೂ ಹಚ್ಚ ಹಸಿರನ್ನು ಕಾಣುವುದು ಶಕ್ಯವಿರಲಿಲ್ಲ. ಬದಲಿಗೆ ಬೆಳೆದಿದ್ದ ಹುಲ್ಲೆಲ್ಲಾ ಒಣಗಿ, ಒಂದು ಕಾಲದ ಹುಲ್ಲಿನ ರತ್ನಗಂಬಳಿ ಈಗ ಶರ ಶಯ್ಯೆಯಾಗಿತ್ತು. ಅದಿಷ್ಟೇ ಸಾಲದ್ದಕ್ಕೆ ಈ ಎಲ್ಲಾ ಬೆಟ್ಟಗಳಲ್ಲಿ ಕಲ್ಲು ಬಂಡೆಗಳೇ ಹೆಚ್ಚು. ಅವನ್ನು ಕಂಡು ಹರ್ಷಿಸುವ ಜನ ನೀವಾದರೆ ನಿಮಗಿದೊಂದು ಅದ್ಭುತ ತಾವು ಎಂದು ಕಂಡೀತು. ಇಲ್ಲಿಯ ಬಂಡೆಗಳು ನಿತ್ಯವೂ ಹೊಸ ಹೊಸ ಪಾರ್ಟ್ ಟೈಮ್, ಫುಲ್ ಟೈಮ್ ಪ್ರೇಮಿಗಳ ಹೆಸರಿನ ಹಚ್ಚೆ ಹಾಕಿಸಿಕೊಳ್ಳುತ್ತವೆ. ಆದರೆ ಹಚ್ಚೆ ಮಾತ್ರ ಪರ್ಮನೆಂಟ್ ಅಲ್ಲ. ಕಾಲ ಸವೆದಂತೆ ಅದೂ ಸವೆದು ಹೋಗುವುದುಂಟು. ಇನ್ನು ಹಚ್ಚೆ ಬರೆದವರಿಗೇನಾದರೂ ತಾನು ಯಾರ್ಯಾರ ಬೆನ್ನ ಮೇಲೆ ಬರೆದಿರುವೆನೆಂಬ ನೆನಪಿರುತ್ತದೋ ! ಮುಂದೊಮ್ಮೆ ತನ್ನ ಹೊಸ ಪ್ರಿಯತಮೆಯ ಜೊತೆ ಹೋದಾಗ ಹಿಂದಿನ ಕೆತ್ತನೆಯಲ್ಲಿರುವ ತನ್ನ ಹೆಸರನ್ನು ಕಂಡೊಡನೊಮ್ಮೆ ಬೆವರೊರೆಸಿಕೊಂಡು ನಾನವನಲ್ಲ ಅಂದಾನು; ಇಲ್ಲವೇ ಇಬ್ಬರೂ ತಾವು ಹಿಂದೊಮ್ಮೆ ಬಂದಾಗಿನ ನೆನಪನ್ನು ಮೆಲುಕು ಹಾಕಿಯಾರು. ಇಂತಿಪ್ಪ ಭೂತ ಬಂಡೆಗಳ ನಡುವೊಂದು ಮರದ ನೆರಳಲ್ಲಿ ಕುಳಿತು, ಹೊತ್ತು ತಂದಿದ್ದ ಪೊಟ್ಟಣಗಳನ್ನು ಬಿಚ್ಚಿ ಚಿತ್ರಾನ್ನ, ವಡೆಗಳನ್ನು ಮೆದ್ದು ಸ್ವಲ್ಪ ಹೊತ್ತು ಹರಟುತ್ತಾ ಕಾಲ ಕಳೆದೆವು.




ಇನ್ನೂ ಇಲ್ಲೇ ಕುಳಿತೆವಾದರೆ ರಾತ್ರಿಯೊಳಗೆ ವಾಪಸ್ಸು ಮನೆ ಸೇರುವುದು ಕಷ್ಟವಾದೀತೆಂದು ತೋರಿ ಎಲ್ಲರೂ ಮರಳಲಣಿಯಾದೆವು. ನೆನಪಿನ ಬುತ್ತಿಗೆ ಒಂದಿಷ್ಟು ಗ್ರೂಪ್ ಫೋಟೋಗಳನ್ನು ಪಾರ್ಸೆಲ್ ಕಟ್ಟಲಾಯ್ತು. ಬೆಳಿಗ್ಗೆ ಬಂದ ದಾರಿಯನ್ನೇ ಮತ್ತೆ ತುಳಿಯುತ್ತಾ ಹೆಜ್ಜೆ ಹಾಕಿದೆವು. ಬೆಟ್ಟ ಇಳಿಯುವುದು ಹತ್ತುವುದಕ್ಕಿಂತ ಸಲೀಸು. ಹತ್ತುವಾಗ ಉಸಿರಾಡಲು ಇರುವ ಮೂಗೊಂದು ಸಾಲದೇ, ಮಾತನಾಡಲಿಕ್ಕಾಗಿ ಇರುವ ಬಾಯನ್ನೂ ಅದಕ್ಕೇ ಬಳಸುತ್ತಿದ್ದವರು ಈಗ ಒಂದಿಷ್ಟು ಮಾತಾಡುತ್ತಿದ್ದರು. ಇನ್ನೊಂದು ಬಾಯಿ ಇದ್ದುದೇ ಆದರೆ ಇನ್ನೂ ಒಂದಿಷ್ಟು ಮಾತು ಹೆಚ್ಚಿಗೆ ಆಡಬಹುದಿತ್ತೆನೋ. ಮೂಗಿಗೆ ಒಂದೇ ಹೊಳ್ಳೆ ಇದ್ದರೂ ಸಾಕಿತ್ತೇನೋ. ಇನ್ನೂ ಏನೇನೋ ಯೋಚನೆಗಳು. ಎಷ್ಟೆಂದರೂ ಇರುವುದೆಲ್ಲವ ಬಿಟ್ಟು ಇಲ್ಲದಿದುರೆಡೆ ಸೆಳೆವುದೇ, ಸುಳಿವುದೇ  ಆಲ್ವಾ ಜೀವನ. ಜೀವನದಲ್ಲಿ ಅನುಭವಿಸುತ್ತಿರುವುದನ್ನು ಬಿಟ್ಟು ಹೊರಗಿನ ಯೋಚನೆಗಳೇ ಅಲ್ವಾ ಕನಸುಗಳು. ಕೆಲವು ಹಗಲು ಮತ್ತೊಂದಿಷ್ಟು ರಾತ್ರಿ ಕನಸುಗಳು. ಈ ಕನಸುಗಳಿಲ್ಲದ ಜೀವನ ಹೇಗಿರುತ್ತಿತ್ತು ? ಯೋಚಿಸ ಹೊರಟರೆ ಅದು ಮತ್ತೊಂದು ಕನಸಾದೀತು, ಯಾಕಂದ್ರೆ ನಿಜ ಜೀವನದಲ್ಲಿ ಎಲ್ಲರಿಗೂ ಒಂದಲ್ಲ ಒಂದು ಕನಸುಗಳಿವೆ. ಇಲ್ಲವೇ ಕನಸುಗಳು ಬೀಳುತ್ತವೆ. ಇಲ್ಲ ಅನ್ನುವವರಿಗೆ ಅವುಗಳ ನೆನಪಿರಲಿಕ್ಕಿಲ್ಲ ಅಷ್ಟೇ. ಇಷ್ಟೆಲ್ಲಾ ಯೋಚಿಸುತ್ತಾ ನಡೆಯುವುದರಲ್ಲಿ ನಾವು ಬಹುತೇಕ ಬೆಟ್ಟದ ಬುಡಕ್ಕೆ ಮರಳಿದ್ದೆವು. ಸಮೀಪದಲ್ಲೇ ಇದ್ದ ಹೋಟೆಲೊಂದರಲ್ಲಿ ಚಹಾ ಕುಡಿದಾದ ಮೇಲೆ, ಸಂಘಟಕರು ಎಲ್ಲರಿಂದಲೂ ಇಂದಿನ ಪ್ರವಾಸಾನುಭವದ ಕಿರು ಮರು ಮಾಹಿತಿ ಪಡೆದರು. ಅವರು ನಾಲ್ಕು ಮಾತಾಡಲು ಬಾಯಿ ತೆರೆಯುವ ಮೊದಲೇ ಮಜೆಸ್ಟಿಕ್ ಕಡೆಗೆ ಸಾಗುವ ಬಸ್ಸು ಬಂದಿದ್ದರಿಂದ ಎಲ್ಲರೂ ಲಗುಬಗೆಯಿಂದ ಬಸ್ಸು ಹತ್ತಿದೆವು.

ಸಂಘಟಕರ ಮಾತಿನ್ನೂ ಮುಗಿದಿರಲಿಲ್ಲವಷ್ಟೇ. ಅವರೂ ಎರಡೆರಡು ಔಪಚಾರಿಕ ಮಾತುಗಳನ್ನಾಡಿಯಾದ ಮೇಲೆ ದಿನದ ಖರ್ಚು ವೆಚ್ಚದ ಲೆಕ್ಕ ತಾಳೆ ಹಾಕಿ ಹೇಳಿದರು. ಒಬ್ಬೊಬ್ಬರ ತಲೆಯ ಮೇಲೂ ೨೩೮ ರುಪಾಯಿ, ಮೇಲೊಂದಿಷ್ಟು ಪೈಸೆಗಳ ಖರ್ಚು ಬಿದ್ದಿತ್ತು. ೧೨ ರುಪಾಯಿ ಬಿ.ಟಿ.ಸಿ ಯ ನಿಧಿಗೂ ಸೇರಿಸಿ ತಲಾ ೨೫೦ ರುಪಾಯಿ ಸಂಗ್ರಹ ಮಾಡಿದರು. ಬಸ್ಸಿನಲ್ಲಿ ಕುಳಿತಷ್ಟೂ ಹೊತ್ತು ಹಿಂದಿದ್ದ ಇಬ್ಬರ, ಮುಂದಿದ್ದ ಮೂರ್ವರ, ಮತ್ತೊಂದು ದಿಕ್ಕಿಗಿದ್ದ ನಾಲ್ಕೆಂಟು ಜನಗಳ ಮಾತಿಗೆ ಕಿವಿಯಾಗಿದ್ದೆ. ಪ್ರತಿಯೊಬ್ಬರ ಮಾತಿನಲ್ಲೂ ವ್ಯಕ್ತವಾಗುತ್ತಿದ್ದ ವಿಷಯಗಳು ಬೇರೆ ಬೇರೆ. ನೀರವತೆಯಲ್ಲಿ ಮನಸ ನೆಟ್ಟು ಸಂತಸ ಪಡುವವರು ನೀವಾಗಿದ್ದರೆ ಎಲ್ಲಾ ನಿಮಗೆ ಕಿರಿ ಕಿರಿ ಅನ್ನಿಸೀತು. ಆದರೆ ಮನೆಗೆ ಮರಳುವ ದಾರಿಯಲ್ಲಿ ದಿನವನ್ನು ನೆನೆದಾಗ ಒಬ್ಬೊಬ್ಬರ ಒಂದೊಂದು ಮಾತೂ ಕಲರವದಂತೆ ಕಲಕುತ್ತಿತ್ತು. ಇಷ್ಟರಲ್ಲೇ ದಿನದ ಚಾರಣಕ್ಕೆ ಅಧಿಕೃತ ತೆರೆ ಬಿದ್ದಿತ್ತಾದರೂ ಗಳಿಸಿದ ಗೆಳೆತನಕ್ಕಲ್ಲ. ಮುಂದೊಮ್ಮೆ ಯಾವುದೋ ಒಂದು ಚಾರಣದ ಸಂದರ್ಭದಲ್ಲಿ ಮತ್ತೆ ಭೇಟಿಯಾದೇವು ಎಂಬೊಂದು ಆಶಾವಾದದ ತಿಳಿ ಬೆಳಕು ಬೇಕೆನ್ನದೆಯೂ ಮಿನುಗುತ್ತಿತ್ತು.



~~~~~~~~~~ ~~~~~~~~~~ ~~~~~~~~~~ ಮುಗಿಯಿತು~~~~~~~~~~ ~~~~~~~~~~ ~~~~~~~~~~