ಮಹಾನಗರಿಯಿಂದ ಹೊರಬಿದ್ದಿದ್ದು..
ಬಹುತೇಕ ಎಲ್ಲ ಪ್ರವಾಸಗಳಲ್ಲೂ ಅನುಭವಿಸುವ ಸಾಮಾನ್ಯ ಸನ್ನಿವೇಶವೊಂದು ನಮ್ಮೊಡನೆಯೂ ಜರುಗಿತು. ಗಾಡಿಯಲ್ಲಿ Pendrive ಕನೆಕ್ಟ್ ಮಾಡುವ ವ್ಯವಸ್ಥೆ ಇರಲಿಲ್ಲ. ಡ್ರೈವರನ ಬಳಿಯಿದ್ದ CDಯಲ್ಲಿದ್ದ ಹಾಡುಗಳು ಚೆನ್ನಾಗಿದ್ದರೂ ಆ ಸಮಯದಲ್ಲಿ ಆಸ್ವಾದಿಸುವ ಮನಸ್ಸು ಯಾರಿಗೂ ಇದ್ದಂತಿರಲಿಲ್ಲ. ಹೀಗಾಗಿ ನಮ್ಮ ಗಾಡಿಯಲ್ಲಿ ಒಂದಿಷ್ಟು ಗಾನ ಕೋಗಿಲೆಗಳ ಉಗಮವಾಯಿತು. ನಿಮ್ಮ ನೆನಪಿನಲ್ಲಿರಬೇಕಾದ ಒಂದು ವಿಚಾರ, ಎಲ್ಲಾ ಕೋಗಿಲೆಗಳು ಇಂಪಾಗಿಯೇ ಹಾಡಬೇಕೆಂದಿಲ್ಲ ಎಂಬುದೊಂದಾದರೆ ಕರ್ಕಶವಾಗಿ ಹಾಡುವ ಎಲ್ಲಾ ಹಕ್ಕುಗಳು ಕಾಗೆಗಳಿಗೆ ಮಾತ್ರ ಕಾಯ್ದಿರಿಸಲಾಗಿಲ್ಲ ಎಂಬುದಿನ್ನೊಂದು. ಮುಂದೆ ಒಬ್ಬೊಬ್ಬರು ಒಂದೊಂದು ಹಾಡತೊಡಗಿದರು. ಮಧ್ಯದಲ್ಲಿ ಎಲ್ಲವೂ ಒಟ್ಟಾಗಿ ಇಂದಿನ Re-Mix ಹೂರಣ ತಯಾರಾಗುತ್ತಿತ್ತು. ಹಾಡುವುದು ನಮ್ಮಿಚ್ಛೆ, ಕೇಳುವುದು ಪರರಿಚ್ಛೆ ಎಂಬಂಥ ಧಾಟಿ ಅದು ಎಂದರೂ ಸರಿ. ಎಲ್ಲ ಕೇಳಲಿ ಎಂದು ಅವರೆಲ್ಲಾ ಹಾಡಿದ್ದಲ್ಲ, ಒಂದು ಪ್ರವಾಸ ಹೋಗ್ತಾ ಅದರಲ್ಲೂ ಬಾಡಿಗೆ ಗಾಡಿ ಹಿಡಿದು ಉತ್ಸಾಹಿ ತಂಡ ಜೊತೆಯಲ್ಲಿದ್ದಾಗ ಹಾಡು ಕುಣಿತಗಳು ನಡೆಯಲೇಬೇಕೆಂಬುದು ಹಿಂದಿನಿಂದ ಬಂದ ಸಂಪ್ರದಾಯವೇನೋ ಎಂಬಷ್ಟು ರೂಢಿಯಾಗಿಬಿಟ್ಟಿದೆಯಲ್ಲಾ, ಅದರ ಫಲ ಇದು. ಇಂಥದೊಂದು ಹಾಡುಗಳ ಹೂರಣಕ್ಕೆ ತಡೆ ಹಾಕಲು, ಅಂತ್ಯಾಕ್ಷರಿ ಆಟ ಶುರುವಾಯ್ತು. ಎಲ್ಲರೂ ಬಹುತೇಕ ಹಿಂದಿ ಹಾಡುಗಳನ್ನೇ ಹಾಡುತ್ತಿದ್ದುದರಿಂದ ನಾನು ಬಾಯಿ ಹಾಕಲು ಹೋಗಲಿಲ್ಲ. ಮೊದಲೆರಡು ಸಾಲುಗಳನ್ನು ಬಿಟ್ಟರೆ ಮುಂದೆ ಬರೀ 'ಲ' ಇಲ್ಲವೇ 'ನ' ಅಕ್ಷರದ ಗುಣಿತಾಕ್ಷರಗಳಿಂದಲೇ ಹಾಡು ಪೂರ್ತಿಗೊಳಿಸುವ ನನ್ನ ಕುಶಲತೆ ಇಲ್ಲಿ ಪ್ರದರ್ಶಿಸುವುದು ಬೇಡ ಎಂದು ಸುಮ್ಮನಾಗಿದ್ದೆ. ಕನ್ನಡ ಹಾಡುಗಳಿಗೆ ಅವಕಾಶವಿದ್ದರೂ, ಎಲ್ಲರ ಬತ್ತಳಿಕೆಯಲ್ಲಿದ್ದ ಹಿಂದಿ ಹಾಡುಗಳು ಬರಿದಾದ ಮೇಲೆಯೇ ಅವಕಾಶ ಎಂದು ಗೊತ್ತಿದ್ದರಿಂದ ನಾನು ಸುಮ್ಮನೆ ಕುಳಿತೆ.
ಒಂದಿಷ್ಟು ಹೊತ್ತು ಹೀಗೆ ಹಾಡಿ ದಣಿದ ಬಾಯಿಗಳಿಗೆ ವಿಶ್ರಾಂತಿ ನೀಡುವುದೆಂದು ನಿರ್ಧರಿಸಿ Dumb Charades ಆಡುವ ಉಮ್ಮೇದು ಎಲ್ಲರಿಗೆ. ಐದೈದು ಜನರ ಎರಡು ತಂಡಗಳನ್ನು ರಚಿಸಿದ್ದಾಯ್ತು. ಒಂದು ತಂಡದವರು ಎರಡನೇ ತಂಡದ ಯಾರಾದರೊಬ್ಬರ ಕಿವಿಯಲ್ಲಿ ಒಂದು ಚಲಚ್ಚಿತ್ರದ ಹೆಸರನ್ನು ಪಿಸುಗುಡುವುದು, ಅವನು/ಳು ಅಭಿನಯಿಸಿದ್ದನ್ನು ಉಳಿದವರು ಅರ್ಥ ಮಾಡಿಕೊಂಡು ಚಿತ್ರದ ಹೆಸರನ್ನು ಹೇಳಬೇಕು. ಇಲ್ಲಿ ಎರಡು ರೀತಿಯ ಸ್ಪರ್ಧೆ. ಒಬ್ಬ ಕಿವುಡನಿಗೆ ನೀವು ಒಂದು ವಿಷಯವನ್ನು ಎಷ್ಟು ಸಮರ್ಥವಾಗಿ ಅರ್ಥಮಾಡಿಸಬಲ್ಲಿರಿ ಎಂಬುದು ಒಂದಾದರೆ, ಎರಡನೆಯದು ಒಬ್ಬ ಮೂಕನ ಭಾಷೆಯನ್ನು ನೀವೆಷ್ಟು ಅರ್ಥ ಮಾಡಿಕೊಳ್ಳಬಲ್ಲಿರಿ ಎಂಬುದು. ನಾನು ಮೊದಲ ಬಾರಿ ಇದನ್ನು ಆಡಿದ್ದು ನನ್ನ ಇಂಜಿನಿಯರಿಂಗ್ ಸಮಯದ ಹಾಸ್ಟೆಲ್ ಜೀವನದಲ್ಲಿ. ಆಗ ಬರೀ ಒಂದು ಆಟವಾಗಿ ಕಂಡಿದ್ದರ ಇನ್ನೊಂದು ಅರ್ಥ ಈಗ ಕಾಣುತ್ತಿದೆ. ಈ ಆಟವಂತೂ ನನಗೆ ಇಷ್ಟವಾಯ್ತು. ಜೊತೆಗೆ ಇಂಜಿನಿಯರಿಂಗ್ ಮುಗಿಯುವವರೆಗೆ ವಿವಿಧ ಪ್ರಹಸನಗಳಲ್ಲೋ, ಮೂಕಾಭಿನಯಗಳಲ್ಲೋ ಅಭಿನಯಿಸಿದ್ದರ ಫಲವಾಗಿ ಮನದಲ್ಲೇನಾದರೂ ಚೂರು ಅಭಿಮಾನ ಉಳಿದಿದ್ದರೆ ಅದಂತೂ ಮಾಯವಾಯ್ತು.
ನಮ್ಮ ರಥದ ಒಳಗೆ ಇಷ್ಟೆಲ್ಲಾ ನಡೆಯುವಷ್ಟರಲ್ಲಿ, ನಾವು ಮಹಾನಗರಿಯಿಂದ ಹೊರಬಿದ್ದಿದ್ದೆವು. ನಮ್ಮೆಲ್ಲರ ಕಿರುಚಾಟಗಳಿಗೆ ಕಿವುಡಾಗಿ, ಬಾಯಿ ಬಂದರೂ ಮೂಕನಾಗಿದ್ದ ಸಾರಥಿ
'ಯಾರೇ ಕೂಗಾಡಲಿ.. ಯಾರೇ ತೆಪ್ಪಗಿರಲಿ..
ನನ್ನ ನೆಮ್ಮದಿಗೆ ಭಂಗವಿಲ್ಲ..
ನನ್ನ ಗಾಡಿಗೆ ಬೇರೆ ಸಾಟಿಯಿಲ್ಲ..
ಬಿಸಿಲು, ಮಳೆ, ಮಂಜು, ಗಾಳಿಗೆ ಅಳುಕದೆ ಮುಂದೆ ಸಾಗುವೆ..'
ಎಂದು ನಿರ್ಧರಿಸಿದಂತಿತ್ತು. ಹೀಗೆ ಹೊರಟ ಪಯಣ ಗಂಟೆ ೭.೩೦ರ ಸುಮಾರಿಗೆ ಬೆಳಗ್ಗಿನ ಉಪಾಹಾರದ ಸಲುವಾಗಿ ಅಲ್ಪವಿರಾಮ ಪಡೆಯಿತು.
ಇಷ್ಟು ಹೊತ್ತು ಏನೂ ನುಡಿಯದೆ ಸುಮ್ಮನಿದ್ದ ಹೊಟ್ಟೆ ಈಗ ತನ್ನ ಇರುವನ್ನು ಸಾರತೊಡಗಿತು. ಅದಕ್ಕೆರಡು ಇಡ್ಲಿ, ಒಂದು ಮಸಾಲೆ ದೋಸೆ ತಿನ್ನಿಸಿ ಸಮಾಧಾನ ಪಡಿಸಿದೆ. ಎಲ್ಲರೂ ತಿಂಡಿ ಮುಗಿಸಿ ಬರುವಷ್ಟರಲ್ಲಿ ನಮ್ಮ ಡ್ರೈವರನೂ ತನ್ನ ಉದರ ಪೋಷಣೆ ಮುಗಿಸಿ ನಮಗಾಗಿ ಕಾಯುತ್ತಿದ್ದ. ಎಲ್ಲರೂ ಗಾಡಿ ಏರಿ ಮುನ್ನಡೆದೆವು.
No comments:
Post a Comment