Sunday, 22 September 2013

ಭಂಡಾರಧಾರ ಪ್ರವಾಸ ಕಥನ.. : ಅಧ್ಯಾಯ ೬

Truth and Dare, ಲವ್ವು - ಕ್ರಶ್ಶು - ದೇಶಸೇವೆ ಇತ್ಯಾದಿ..

      ಚಿಕ್ಕದಾಗಿದ್ದ ಗುಡಿಯನ್ನು ನೋಡಲು ಬಹಳ ಹೊತ್ತು ಹಿಡಿಯಲಿಲ್ಲ. ಪ್ರಚಾರಪ್ರಿಯನಲ್ಲದವನನ್ನು ನೋಡಲು ಎಷ್ಟು ಜನ ಬಂದಾರು.!? ಅಲ್ಲಿಯ ಜನರೂ ಮುಗ್ಧರು. ದೇವರ ಹೆಸರಲ್ಲಿ ದಂಧೆ ನಡೆಸಲು ಬರದವರು. ಹಾಗಾಗಿ ಅಲ್ಲಿಂದ ಬೇಗನೆ ಹೊರಡಲು ಅನುಕೂಲವಾಯಿತು. ಸಮೀಪದಲ್ಲಿದ್ದ ಕೋಟೆ ನೋಡುವ ಮಾನಸಿಕ ಹಂಬಲ, ದೈಹಿಕ ಶಕ್ತಿ ಎರಡೂ ನನ್ನಲ್ಲಿತ್ತಾದರೂ ಉಳಿದೆಲ್ಲರಲ್ಲೂ ಕನಿಷ್ಠಪಕ್ಷ ಎರಡರಲ್ಲೊಂದು ಇದ್ದಂತಿರಲಿಲ್ಲ. ಒಂದಿಬ್ಬರು ಹೇಗಾದರೂ ಸರಿ ಎಂದರಾದರೂ ಸ್ಪಷ್ಟ ಅಭಿಪ್ರಾಯ ತಿಳಿಸದೇ ಇದ್ದುದರಿಂದ ನನ್ನ ಪರವಾಗಿದ್ದಿದ್ದು ನನ್ನದೊಂದೇ ಮತ. ಪ್ರಜಾಪ್ರಭುತ್ವದ ನಾಡಿನಲ್ಲಿ ಹೆಚ್ಚು ಮತಗಳನ್ನು ಪಡೆದವರು ನಡೆದಂತೆ ನಾವೂ ನಡೆಯಬೇಕು. ಅವರು ಭ್ರಷ್ಟರಾದರೆ ನಾವೂ ಭ್ರಷ್ಟರಾಗಬೇಕು. ಯಾಕಂದ್ರೆ ಭ್ರಷ್ಟತನ ಬೇಕೆಂಬ ಕಾರಣಕ್ಕೇ ಅಲ್ವಾ ಅವರಿಗೆ ವೋಟು ಹಾಕಿದ್ದು. ಆದರೆ ಜನರಿಗೆ ತಿಳುವಳಿಕೆ ಇಲ್ಲ, ತಾವೇ ಬುದ್ಧಿವಂತರು, ಜನಗಳ ಮನದಲ್ಲಿ ಹೊಸ ಅರಿವಿನ ಬೀಜ ಬಿತ್ತಿ ಹೆಮ್ಮರವಾಗಿಸುವವರು ಎಂದು ಜನನಾಯಕರು ಅಂದುಕೊಂಡಷ್ಟು ದಿನ ಇದು ಹೀಗೆಯೇ ಸಾಗುವಂಥದ್ದು. ಅದರ ಬಗ್ಗೆ ಹೆಚ್ಚಿನ ಮಾತೇಕೆ ? ಉಳಿದವರೆಲ್ಲರ ಆಶಯದಂತೆ ಅಲ್ಲಿಂದ ಮರಳುವ ನಿಶ್ಚಯವಾಯ್ತು. ಮನಸ್ಸು ಹಸಿದು ಸತ್ತರೆ ಕೇಳುವವರಿಲ್ಲ, ಕೊರಡು ದೇಹದ್ದೇ ಚಿಂತೆ. ನೆನಪಿರಲಿ, 'ನೊಂದಾಗಲಷ್ಟೇ ಈ ದೇಹ ನಶ್ವರ, ಜಗತ್ತು ಮಾಯೆ, ಸುಖದಿಂದಿರುವಾಗಲಲ್ಲ'.

      ಮರಳಿ ಹೊರಟಾಗ ಗಾಡಿಯಲ್ಲಿ 'Truth and Dare' ಆಟ ಶುರುವಾಗಿತ್ತು. ಇದೊಂಥರ 'ಸಂಗೀತ ಕುರ್ಚಿ'ಯಂಥದೇ ಆಟ. ಅಲ್ಲಿ ಸಂಗೀತ ಶುರುವಾದೊಡನೆ ಕುರ್ಚಿಗೆ ಸುತ್ತು ಬರತೊಡಗಿ, ಸಂಗೀತ ನಿಂತೊಡನೆ ಕುರ್ಚಿಯಲ್ಲಿ ಕೂತವನು ಗೆದ್ದ, ಸಿಗದವನು ಸೋತ. ಆದರಿಲ್ಲಿ ಇದರ ವಿರುದ್ಧ. ಸಂಗೀತ ಶುರುವಾದೊಡನೆ ಸರದಿಯಂತೆ ಒಬ್ಬೊಬ್ಬ ಕೂತು, ಎದ್ದು ಹೋಗುತ್ತಿರಬೇಕು. ಸಂಗೀತ ಮುಗಿಯುವ ವೇಳೆಗೆ ಯಾರು ಕುಳಿತಿರುವನೋ ಅವನು ಸೋತಂತೆ. ಗೆದ್ದಾತ ಗೆಲುವಿನ ಸಂತೋಷದಿಂದ ಬೀಗುತ್ತಿರಬೇಕಾದರೆ, ಸೋತವನಿಗೆ ಸೋಲಿನ ಶಿಕ್ಷೆ ಸಾಲದೆಂಬುದಕ್ಕೆ, ಮತ್ತೊಂದು ಶಿಕ್ಷೆಯ ಬರೆ. ಅವನ ಮುಂದೆ ಎರಡು ಆಯ್ಕೆಗಳಿರುತ್ತವೆ. Truth and Dare.
     
      ಸೋತವನ ಆಯ್ಕೆ Truth ಆದರೆ ಉಳಿದೆಲ್ಲರೂ ಸೇರಿ ಕೇಳಿದ ಪ್ರಶ್ನೆಗೆ ಆತ ಸತ್ಯವಾದ ಉತ್ತರ ನೀಡಬೇಕು. ಆಯ್ಕೆ Dare ಎಂದಾದರೆ, ಉಳಿದೆಲ್ಲರೂ ಹೇಳಿದ ಕೆಲಸ ಮಾಡಲು ಆತ ಧೈರ್ಯ ತೋರಬೇಕು. ಆದರೆ ಒಂದು ಸಂಗತಿ ಸತ್ಯವೋ, ಸುಳ್ಳೋ ಎಂದು ತಿಳಿಯುವುದಾದರೂ ಹೇಗೆ ? ವಿಜ್ಞಾನ ಎಷ್ಟೇ ಮುಂದುವರಿದರೂ, ಸುಳ್ಳು ಪತ್ತೆ ಹಚ್ಚುವ ಯಂತ್ರ ಕಂಡುಹಿಡಿದರೂ 'ಇದು ಸತ್ಯ' ಎಂದು ಒಂದನ್ನು ತೋರಿಸಲು ಸಾಧ್ಯವೇ? ಕೊನೆಗೆ ಎಷ್ಟೆಂದರೂ ಒಂದು ಸಂಗತಿ ಸತ್ಯ ಅಥವಾ ಸುಳ್ಳುಗಳೆಂದು ನಿರ್ಧಾರವಾಗುವುದು ಕೇಳುವವನಿಗೆ ಆ ವಿಷಯಗಳು ಮೊದಲೇ ಗೊತ್ತಿದ್ದರೆ, ಅಥವಾ ಆತ ಕೇಳುವ ವಿಚಾರದಲ್ಲಿ ಹೊಂದಿರಬಹುದಾದ ನಂಬಿಕೆಯ ಮೇಲೆಯೇ ಅಲ್ಲವೇ ?

      ಸತ್ಯ ಸುಳ್ಳುಗಳ ಸಂಗತಿ ಹಾಗಿರಲಿ,ಈ ಆಟವನ್ನ ಕುರ್ಚಿಯ ಮೇಲೆ ಕೂತೆದ್ದು ಆಡುವುದಿಲ್ಲವಾದರೂ ಎರಡೂ ಆಟಗಳ ಸಾಮ್ಯತೆಯಲ್ಲಿರುವ ವಿರೋಧವನ್ನೋ, ವಿರೋಧದಲ್ಲಿರುವ ಸಾಮ್ಯತೆಯನ್ನೋ ತಿಳಿಸುವ ಪ್ರಯತ್ನವಾಗಿ ಹೇಳಿದೆ ಅಷ್ಟೇ. ನೀರಿನ ಬಾಟಲಿಯನ್ನು ಹಸ್ತಾಂತರಿಸುತ್ತಲೋ, ಸಂಗೀತವೂ ಇಲ್ಲದೆ ಲೇಖನಿಯಿಂದನ್ನು ತಿರುಗಿಸುತ್ತ ಅದರ ತುದಿ ಯಾರ ಮುಖ ನೋಡುವುದೋ ಅವರು ಸೋತರೆಂದೋ ನಿಮ್ಮಲ್ಲಿ ಲಭ್ಯವಿರುವ ಪರಿಕರಗಳಿಗೆ ತಕ್ಕಂತೆ ನಿಯಮಗಳನ್ನು ಬದಲಾಯಿಸಿಕೊಂಡು ಆಡಬಹುದು.

      ಆದರೆ ಎಲ್ಲರಿಗೂ ಸತ್ಯ ತಿಳಿಯುವ ಕಾತುರತೆಯಿದ್ದದ್ದು, ಸೋತವನಿಗೆ ಎಷ್ಟು ಜನ ಸ್ನೇಹಿತೆಯರಿದ್ದರು ? ಅವರಲ್ಲಿ ಎಷ್ಟು ಜನ ಪ್ರೇಯಸಿಯರು ? ಮೊದಲ ನೋಟಕ್ಕಷ್ಟೇ ಇಷ್ಟವಾಗಿ ಈಗ ನಿಕೃಷ್ಟ ಎನಿಸಿರುವವರು ಎಷ್ಟು ಮಂದಿ? ಈಗಲೂ ಕನಸಿನಲ್ಲಿ ಬಂದು ಕಾಡುವವರೆಷ್ಟು ? ನಮ್ಮಲ್ಲಿ ಆತನಿಗೆ ಯಾರು ಇಷ್ಟ ? ಇದರ ಜೊತೆಗೆ ಪ್ರತಿಯೊಂದಕ್ಕೂ ಒಂದೊಂದು ಹೆಸರು ಬೇರೆ. Crush, Infatuation, Love ಇನ್ನೂ ಏನೇನೋ. ಹುಡುಗಿಯರ ವಿಷಯದಲ್ಲೂ ಹುಡುಗರಿಗೆ ಇದೇ ಕುತೂಹಲ. ಆಕೆಗೆ ಈ ಹಿಂದೆ ಎಷ್ಟು ಜನ Boy Friendsಗಳಿದ್ರು ? ಈಗೆಷ್ಟು ? ಉತ್ತರ ಹೇಳುವ ಉತ್ಸಾಹದಲ್ಲಿ ಸತ್ಯವೆಷ್ಟೋ ? ಸುಳ್ಳೆಷ್ಟೋ ? ಆದರೆ ಎಲ್ಲರ ಬದುಕೂ ಒಂದೇ ತೆರನಾಗಿ ನಡೆಯುತ್ತಿತ್ತೆಂದು ಮಾತ್ರ ಬೇಡ ಎಂದರೂ ಕಿವಿಗೆ ಕೇಳಿಸುತ್ತಿತ್ತು.

      ಇನ್ನು ಇವರು ಬಯಸುತ್ತಿದ್ದ ಧೈರ್ಯವೂ ಅಷ್ಟೇ, ಹಳೇ Girl Friend ಹೆಸರನ್ನ ಜೋರಾಗಿ ಕೂಗು, ಇಲ್ಲಿ ಇದ್ದವರಲ್ಲೇ ಯಾರಲ್ಲಾದರೂ ಪ್ರೀತಿ ಬೇಕೆಂದು ಅಂಗಲಾಚು, ಇಂಥವೇ. ಇದು ಆಟ, ಇದನ್ಯಾಕೆ ಅಷ್ಟು ಗಂಭೀರವಾಗಿ ತಗೋತೀಯಾ ಅಂತ ನನ್ನ ನೀವು ಕೇಳಿದ್ರೆ, ಎಷ್ಟೋ ಜನ ಜನ್ಮ ಜನ್ಮಾಂತರದ್ದು, ಪರಮ ಪವಿತ್ರವಾದದ್ದು ಎಂತೆಲ್ಲಾ ಕರೆಯೋ ಪ್ರೀತಿ ಕೇವಲ ಒಂದು ಆಟದ ವಸ್ತುವೇ ಅನ್ನೋದು ನನ್ನ ಪ್ರಶ್ನೆ.
ಇನ್ನು ಆಟ ಗಂಭೀರ ಸ್ವರೂಪದ್ದೇ ಆದರೆ, ಇದಕ್ಕಿಂತ ಗಂಭೀರ ವಿಚಾರಗಳೇನೂ ಇಲ್ವಾ ಅನ್ನೋದು ಇನ್ನೊಂದು ಪ್ರಶ್ನೆ.

      Crush, Infatuation, Love ಇವುಗಳಲ್ಲಿರುವ ಸಾಮ್ಯತೆಯಾಗಲೀ, ವ್ಯತ್ಯಾಸವಾಗಲೀ ಸರಿಯಾಗಿ ಗೊತ್ತಿಲ್ಲದ ನಾನು ಇದರ ಬಗ್ಗೆ ಜಾಸ್ತಿ ಹೇಳಲಾರೆ. ಆದರೆ ಪ್ರತಿಯೊಂದು ಹಂತದಲ್ಲಿಯೂ ಒಬ್ಬೊಬ್ಬ ವ್ಯಕ್ತಿಗೆ ಮನಸ್ಸು ಮಾರಿಕೊಂಡು ಬದುಕುವುದಕ್ಕೆ ಏನಂತ ಕರೀತೀರಿ ? ದೇಹ ಮಾರಿಕೊಂಡು ಬದುಕುವುದು ವೇಶ್ಯಾವಾಟಿಕೆ, ಸೂಳೆಗಾರಿಕೆ ಅಂದಂತೆ ಇದಕ್ಕೂ ಒಂದು ಹೆಸರಿರಬಹುದಲ್ಲವೇ ? ತಿಳಿದಿದ್ದರೆ ದಯವಿಟ್ಟು ಹೇಳಿ. ನನಗೆ ಇನ್ನೊಂದು ಅನ್ನಿಸುವುದೇನೆಂದರೆ, ಇಂಥ ಮನಸ್ಸು ಮಾರಿಕೊಂಡು ಬದುಕುವ ಕಾಲ ಬರಬಾರದೆಂಬುದಕ್ಕೇ ಬಾಲ್ಯವಿವಾಹ, ಸತಿ ಸಹಗಮನ ಮುಂತಾದ ಕಟ್ಟುಪಾಡುಗಳು ಶುರುವಾಗಿ, ಅದನ್ನು ಅರ್ಥೈಸಿಕೊಳ್ಳಲು ಬಾರದೆ ಇಂದು ಸಮಾಜ ಸುಧಾರಣೆಯಾಯಿತೋ ಹೇಗೆ ಅಂತ.

      ಇಷ್ಟೆಲ್ಲಾ ಮಾತುಗಳು ಬರೀ ನನ್ನೊಳಗೇ ನಡೆದಿದ್ದು. ನನ್ನ ಪ್ರೌಢಶಾಲಾ ಶಿಕ್ಷಣದ ಸಂದರ್ಭದಲ್ಲಿ ಹತ್ತಿದ್ದ ಸಂನ್ಯಾಸದ ಮೋಹದಿಂದಲೋ, ಪದವಿ ಪೂರ್ವ ಶಿಕ್ಷಣದ ಸಂದರ್ಭದಲ್ಲಿ ಹತ್ತಿದ್ದ ದೇಶಸೇವೆಯ ಆಶೆಯಿಂದಲೋ ಬೇರೆಲ್ಲಾ ವಿಚಾರಗಳ ಕುರಿತು ಯೋಚಿಸಿದ್ದು ತುಂಬಾ ಕಮ್ಮಿ. ಪದವಿ ಶಿಕ್ಷಣದ ಸಂದರ್ಭದಲ್ಲೂ ಎಷ್ಟೋ ರಾತ್ರಿಗಳಲ್ಲಿ 'ಆಜಾದ್' ಎಂಬ ಗುಂಪು ಕಟ್ಟಿಕೊಂಡು, ಸುತ್ತ ಮುತ್ತಲ ಊರುಗಳಲ್ಲಿ ಜನ ಜಾಗೃತಿ ಕೈಗೊಳ್ಳಬೇಕು, ಶ್ರಮದಾನಗೈಯಬೇಕು ಎಂದೆಲ್ಲಾ ಕನಸು ಕಂಡಿದ್ದುಂಟು. ಆದರೆ ಈಗೀಗ ಈ ಎಲ್ಲಾ ಹುಚ್ಚುತನ ಕೊಚ್ಚಿಹೋಗಿ, ನಾಳಿನ ಕನಸು ಕಾಣುವ ಭರದಲ್ಲಿ ಇಂದಿನ ಸೊಗವನ್ನು ಮರೆಯಬಾರದೆಂಬ ಬುದ್ಧಿ ಬಂದಿದೆ. ನಾಳೆಯ ಕನಸು ಕಾಣುವವನು ನಾಳೆ ಬಂದಾಗ ನಾಡಿದ್ದಿನ(ನಾಳೆಯ ನಾಳೆ)ಕನಸು ಕಾಣುವಲ್ಲಿ ಮಗ್ನನಾದಾನು, ಆದರೆ ಇಂದಿನ ಬಗ್ಗೆ ಯೋಚಿಸುವವನು ನಾಳೆಯೂ (ನಾಳೆಯ ಇಂದು) ಖುಷಿಯಿಂದ ಬದುಕಿಯಾನು ಎಂಬ ಸತ್ಯದ ಅರಿವಾಗಿದೆ. ಹಾಗೆಯೇ, ಹೇಗೆ ನನ್ನ ಮನೆಯ ಕೆಲಸ ನಾನು ಮಾಡಿದರೆ ನಾನು ಮನೆಸೇವೆ ಮಾಡಿದೆ ಅಂತ ಹೇಳುವುದಿಲ್ಲವೋ, ದೇಶ ನನ್ನದು ಎಂದು ತಿಳಿದಾಗ ದೇಶಸೇವೆ ಎಂಬ ಮಾತಿನಲ್ಲೂ ಯಾವುದೇ ಅರ್ಥವಿಲ್ಲ ಎಂದೂ ತಿಳಿದಿದೆ.

ಇಂಥದೇ ಯೋಚನೆಗಳನ್ನೆಲ್ಲಾ ಗಂಟು ಕಟ್ಟಿಕೊಂಡು ಮರಳುತ್ತಿರುವಾಗ ಊಟಕ್ಕೆಂದು ರೆಸ್ಟೋರೆಂಟ್ ಒಂದರ ಬಳಿ ಗಾಡಿ ನಿಲ್ಲಿಸಲಾಯಿತು. ಇಷ್ಟೊತ್ತೂ ಕಾಣದಿದ್ದ ಹಸಿವು ಈಗ ಶುರುವಾಗಿದ್ದ ನೋಡಿ ಹಸಿವೂ ಕೂಡಾ ಮನಸ್ಸಿನ ಭಾವವೇ ? ಎಂದೆನಿಸಿದ್ದು ಸುಳ್ಳಲ್ಲ.

ಅದಕ್ಕೆರಡು ರೋಟಿ ತಿನ್ನಿಸಿ ಬರುತ್ತೇನೆ, ಅಲ್ಲಿಯವರೆಗೆ ವಿರಾಮ.

Sunday, 1 September 2013

ಭಂಡಾರಧಾರ ಪ್ರವಾಸ ಕಥನ.. : ಅಧ್ಯಾಯ ೫



ಛತ್ರಿ ಜಲಪಾತವೂ, ಅಮೃತೇಶ್ವರ ಮಂದಿರವೂ..

      ಹೋಗಬೇಕೆಂದುಕೊಂಡಿದ್ದ Umbrella Falls ಹುಡುಕಿಕೊಂಡು ಹೊರಟೆವು. ದಾರಿಯಲ್ಲಿ ಅವರಿವರಲ್ಲಿ ಕೇಳಿದಾಗ, ಅಲ್ಲಿ ಇಲ್ಲಿ ಎಂದು ದಾರಿ ತೋರಿದರು. ಅದೇ ದಾರಿಯಲ್ಲೇ ಸಾಗಿದೆವಾದರೂ ಜಲಪಾತ ಕಣ್ಣಿಗೆ ಬೀಳಲಿಲ್ಲ. ಕೊನೆಗೆ ಜಲಪಾತದಲ್ಲಿ ನೀರಿಲ್ಲ ಎಂಬೊಂದು ವಿಚಾರ ತಿಳಿಯಿತು. ನೀರಿಲ್ಲದೆ ಇದೆಂಥ ಜಲಪಾತ ಅಂತ ಕೇಳಬೇಡಿ. ಮೈಸೂರುಪಾಕಿನಲ್ಲಿ ಮೈಸೂರೂ ಇರಲ್ಲ, ಪಾಕ್ ಕೂಡ ಇರಲ್ಲ; ಮದ್ದೂರು ವಡೆಯಲ್ಲಿ ಮದ್ದೂರು ಇರಲ್ಲ; ಅಷ್ಟೇ ಯಾಕೆ, ಈರುಳ್ಳಿಯೇ ಇಲ್ಲದ Onion Masala Dosa ಕಲ್ಕತ್ತೆಯಲ್ಲಿ ತಿಂದಿದ್ದೆ. ಆಗ ಮೊದಲಿನ ಎರಡು ಡೈಲಾಗ್ ಹೊಡೆದು ಗೆಳೆಯರು ನನ್ನ ಸಮಾಧಾನಿಸಿದ್ದರು. ಅದೇ ಥರ ಇದೊಂದು ನೀರಿಲ್ಲದ ಜಲಪಾತ ಅಂದುಕೊಳ್ಳಿ. ಮಳೆ ಹೆಚ್ಚಾದ೦ತೆ ಈ ಜಲಪಾತದಲ್ಲಿ ನೀರು ತುಂಬಿಕೊಳ್ಳುವುದಂತೆ. ಅಂತೂ ಬೇಸರದಿಂದಲೇ ಅತ್ತಿತ್ತ ಕಣ್ಣು ಹಾಯಿಸುತ್ತಾ ಕಡೆಯ ಪಕ್ಷ ಅದರ ಕುರುಹಾದರೂ ಕಾಣುವುದೋ ಎಂದು ನೋಡುತ್ತಿದ್ದೆವು. ಒಂದೆಡೆ ಸಣ್ಣಗೆ ಬೀಳುತ್ತಿದ್ದ ನೀರನ್ನು ಕಂಡು ಅದಕ್ಕೆ Umbrella Falls ಎಂದು ಹೆಸರು ಕೊಟ್ಟು, ನೊಂದ ಮನಸ್ಸಿನಿಂದ ಅದರ ಬಗ್ಗೆ "ನೀರು ಮೇಲಿಂದ ಕೆಳಗೆ ಧುಮುಕಲು ಅಣಿಯಾಗಿ ನಿಂತ ಪ್ರದೇಶದಿಂದ ಯಾರದೋ ಒಂದು ಕೊಡೆ (Umbrella)ಕೆಳಗೆ ಬಿತ್ತಂತೆ. ಹಾಗಾಗಿ ಅದರ ಹೆಸರು" ಎಂಬಿತ್ಯಾದಿ ಕಟ್ಟು ಕತೆ ಕಟ್ಟತೊಡಗಿದೆವು.

      ಮುಂದೆ ರತನ್ ವಾಡಿ ಕಡೆಗೆ ಪಯಣ ಮುಂದುವರಿಯಿತು. ಒಳಗೆ ಮತ್ತವೇ ಆಟ ಕೂಟಗಳು ಮುಂದುವರಿದಿತ್ತು. ನಾನಂತೂ ಕಿಟಕಿಯಿಂದ ಹೊರಗೇ ತಲೆ ನೆಟ್ಟು ಕುಳಿತಿದ್ದೆ. ಸಣ್ಣ ಪುಟ್ಟ ಝರಿ ತೊರೆಗಳು ದೂರದಿಂದಲೇ ಕರೆಯುತ್ತಿದ್ದವು. ಅವೆಲ್ಲವುಗಳಿಗೆ ಕೈ ಬೀಸುತ್ತಾ ಮುಂದೆ ಸಾಗಿದೆವು. ಹೀಗೆ ಸಾಗುವಾಗ ದಾರಿ ಬದಿಯಲ್ಲೊಂದು ಜಲಪಾತ ಕಾಣಿಸಿತು. ಅಷ್ಟೇನೂ ಜನ ಜಂಗುಳಿಯೂ ಇಲ್ಲದ್ದು ಮತ್ತೂ ಖುಷಿಕೊಟ್ಟಿತ್ತು. ಈ ಖುಷಿ ಹಿಂದಿನ ನಿರಾಸೆಯನ್ನು ಮೀರಿಸುವಂಥದ್ದು. ಇದರ ಹೆಸರು ನನಗೆ ಸ್ಪಷ್ಟವಾಗಿ ತಿಳಿದಿಲ್ಲ. ಅವರಿವರಿಂದ ಕೇಳಿ ತಿಳಿದ ಮಟ್ಟಿಗೆ ಇದನ್ನ 'ನಾಣೆ ಜಲಪಾತ' ಎನ್ನಬಹುದು. ನೀವು ನೋಡಬೇಕೆಂದಿದ್ದ Umbrella Falls 'ನಾನೇ' ಎನ್ನುವುದು ಅದರರ್ಥವೋ ನಾನರಿಯೆ. ನನಗಂತೂ ಎತ್ತರದಿಂದ ಧುಮುಕುವ ನೀರಿನ ಬುಡಕ್ಕೆ ಹೋಗಿ ನಿಲ್ಲುವ ತವಕ. ಎರಡು ಹೆಜ್ಜೆ ಮುಂದೆ ಸಾಗಿದರೆ ಒಂದು ಹೆಜ್ಜೆ ಹಿಂದೆ ಎಳೆಯುವ ಮನುಷ್ಯನ ಬುದ್ಧಿಯನ್ನ ಪ್ರಕೃತಿಯೂ ಕಲಿತಿದೆ. ಪಾಚಿಕಟ್ಟಿದ ಕಲ್ಲುಗಳೂ ಅದೇ ಮಾಡುತ್ತಿದ್ದವು. ಈ ಮಧ್ಯೆ ನನ್ನನ್ನು ಮರೆತು ಉಳಿದವರಿಗೆ ಎಚ್ಚರ ಹೇಳುತ್ತಾ ನೀರ ಕೆಳಗೆ ಹೋಗಿ ನಿಂತೆ. ಬಳಿಕ ಒಬ್ಬೊಬ್ಬರಾಗಿ ಬಂದು ಕೂಡಿಕೊಂಡರು. ಆದರೂ ಲೆಕ್ಕದಲ್ಲೊಂದು ಕಡಿಮೆ. ಆಕೆ ಮೊದಲ ಹೆಜ್ಜೆಯಲ್ಲೇ ಜಾರಿದ್ದರಿಂದ, ಜಾರಿ ಬಿದ್ದಿದ್ದರಿಂದ ಮುಂದಿನ ನಮ್ಮೆಲ್ಲರ ಸಾಹಸಗಳಿಗೆ ಸಾಕ್ಷಿಯಾಗಲು ಛಾಯಾಗ್ರಹಣದ ಉಸ್ತುವಾರಿ ವಹಿಸಬೇಕಾಯ್ತು. ಜಲದೇವಿ ಏನು ಸಾಮನ್ಯಳೇ, ನಮ್ಮ ಇರುವಿಕೆಯೇ ಕಾಣದಷ್ಟು ಗಾಢವಾಗಿ ನಮ್ಮ ಮೈಮೇಲೆ ಬರತೊಡಗಿದಳು. ವಿಚಿತ್ರ ನೋಡಿ, ಮಳೆಯ ರೂಪದಲ್ಲಿರುವಾಗ ನೀರು ಗಂಡು (ವರುಣ), ನದಿಯಲ್ಲಿ ಸೇರಿದಾಗ ಹೆಣ್ಣು (ಗಂಗೆ, ಯಮುನೆ ಇತ್ಯಾದಿ), ಕಡೆಗೆ ಸಾಗರವನ್ನು ಸೇರಿದಾಗ ಗಂಡು (ಸಮುದ್ರ ರಾಜ). ನೀರಿಲ್ಲದೇ ಹೋದರೆ ಗಂಡು ಹೆಣ್ಣೆಂಬ ಪ್ರಶ್ನೆ ಎತ್ತಲು ಈ ಒಂದಕ್ಕೂ ಅಸ್ತಿತ್ವವೇ ಇಲ್ಲ. (ಸುತ್ತಲಿನ ರೂಢಿಯಿಂದ ಕಳೆದ ಸಂಚಿಕೆಗಳಲ್ಲಿ ಮಳೆಗೆ ವರುಣ ಎಂದೂ, ಈಗ ಜಲದೇವಿ ಎಂದೂ ನಾನು ಬರೆದಿದ್ದು ನನಗೇ ನಗು ತಂದು ನಿಮ್ಮೊಂದಿಗೆ ಹಂಚಿಕೊಂಡ ವಿಚಾರ ಇದು.)

      ಸೂಜಿಯಂತೆ ಚುಚ್ಚುವ ನೀರು ಮೇಲಿಂದ ಬೀಳುತ್ತಿರುವಾಗ ಗಂಗಾವತರಣದ ಕತೆ ನೆನಪಾಯ್ತು. ಆ ಶಿವನಂತೆ ನಾನೂ ಈ ನೀರನ್ನು ತಡೆಯುವೆನೆನ್ನುವಂತೆ ಹುಚ್ಚಿನಿಂದ ಅದರ ಕೆಳಗೆ ನಿಂತೆ. ತಲೆಯ ಮೇಲೆ ಧಪಧಪನೆ ನೀರು ಬೀಳುತ್ತಿದ್ದುದು ಹಿತವೆನಿಸುತ್ತಿತ್ತು. ಶಿವನಷ್ಟು ಉದ್ದದ ಕೂದಲು ನನ್ನದಿರಲಿಲ್ಲ. ಹಾಗಾಗಿ ಧುಮುಕುತ್ತಿದ್ದ ನೀರನ್ನು ತಲೆ ಮೇಲೆ ಗಂಟು ಕಟ್ಟಿಕೊಳ್ಳಲಾಗಲಿಲ್ಲ. ಜೊತೆಗೆ ತಲೆಗೆ ಎಣ್ಣೆ ಹಚ್ಚಿಕೊಂಡು ಹೋಗಿದ್ದೂ, ಅದಕ್ಕೆ ಜಾರಿ ತಪ್ಪಿಸಿಕೊಳ್ಳಲು ಸುಲಭವಾಯ್ತು. ಅಂತೂ ಇಂಥ ಹುಚ್ಚಿನಲ್ಲಿ ಒಂದಿಷ್ಟು ಹೊತ್ತು ಕಳೆದ ಬಳಿಕ, ಬಳಿಯಲ್ಲಿದ್ದ ಅಂಗಡಿಯೊಂದರಲ್ಲಿ ಚಹಾ, ಈರುಳ್ಳಿ ಪಕೋಡಾ ಹಾಗೂ ಆಲೂಗಡ್ಡೆ ಬೋಂಡ ತಿಂದು ಒಂದು ಹಂತದ ಚಳಿ ಬಿಡಿಸಿಕೊಂಡಾದ ಮೇಲೆ ಮಹಿಳಾ ಮಣಿಗಳನ್ನೆಲ್ಲಾ ಹಾಗೆಯೇ ನಡುಗಬಿಟ್ಟು, ನಾವೆಲ್ಲಾ ಒಣವಸ್ತ್ರಧಾರಿಗಳಾದ ನಂತರ ಅಮೃತೇಶ್ವರ ಮಂದಿರದೆಡೆಗೆ ಹೊರಟೆವು.

      ಮುಂದೆ ಕೂಡ ದೂರದಲ್ಲಿ ಹೀಗೆಯೇ ಧುಮುಕುತ್ತಿದ್ದ ಜಲಪಾತಗಳೋ, ಝರಿಗಳೋ ಕಾಣುತ್ತಿದ್ದವು. ಎಡದಿಂದೊಂದು, ಬಲದಿಂದೊಂದು ಧಾರೆ ಹರಿದುಬಂದು ಮಧ್ಯದಲ್ಲಿ ನಂಟು ಬೆಳೆದು, ಗಂಟು ಬೆಸೆದು, ಮತ್ತೆ ಬಲದ ಧಾರೆ ಸ್ವಲ್ಪ ಎಡಕ್ಕೂ, ಎಡದ ಧಾರೆ ಸ್ವಲ್ಪ ಬಲಕ್ಕೂ ಸರಿದು ಹರಿಯುತ್ತಿದ್ದ  ಝರಿಯೊಂದನ್ನು ನೆಕ್ಲೆಸ್ ಫಾಲ್ಸ್ ಅಂತ ಸಹೋದ್ಯೋಗಿಯೊಬ್ಬರು ಪರಿಚಯ ಮಾಡಿಕೊಟ್ಟರು. ಅವನ್ನೆಲ್ಲಾ ಕಣ್ಣುಗಳಲ್ಲಿ ತುಂಬಿಕೊಳ್ಳುತ್ತಾ ಮುಂದೆ ಸಾಗಿದೆವು.

      ಜನಪ್ರಿಯ ದೇವರುಗಳೆಲ್ಲಾ ವಾಹನಾದಿ ಸೌಕರ್ಯಗಳು ಚೆನ್ನಾಗಿರುವಲ್ಲೇ ವಾಸವಾಗಿರುತ್ತಾರೋ, ಅಥವಾ ಆ ದೇವರ ಜನಪ್ರಿಯತೆ ತಮಗೂ ಬರಲೆಂದು, ಪ್ರಿಯವಲ್ಲದಿದ್ದರೂ ಒಂದಿಷ್ಟು ಜನ ತಮ್ಮನ್ನು ಗುರುತಿಸುವಂತಾಗಲೆಂದು ಜನರೇ ಎಲ್ಲಾ ಸೌಕರ್ಯಗಳನ್ನು ಪ್ರಾರಂಭಿಸುವರೋ ತಿಳಿಯದು. ಆದರೆ ರತನ್ ವಾಡಿ ಎಂಬ ಈ ಕೊಂಪೆಯಲ್ಲಿ ಕುಳಿತಿರೋ ಅಮೃತೇಶ್ವರ ಮಾತ್ರ ಇಂದಿನವರೆಗೆ ತುಂಬಾ ಸುಖಿ. ಹೆಚ್ಚೆಂದರೆ ಅಲ್ಲೊಂದು, ಇಲ್ಲೊಂದು ಕಾಣುತ್ತಿದ್ದ ಮನೆಗಳವರ ಸುಖ ಕಾಯ್ದರಾಯ್ತು. ದೂರದೂರಿಂದ ಬಂದು ಅರ್ಜಿ ಸಲ್ಲಿಸುವವರು ಯಾರೂ ಇಲ್ಲ. ಸಮೀಪದಲ್ಲೇ ಇರುವ ರತನ್ ಗಢ ಕೋಟೆ ನೋಡಲು ಬರುವವರು ಒಂದು ಬಾರಿ ಇವನನ್ನು ಭೇಟಿ ಮಾಡಿ ಹೋಗುವುದುಂಟು. ಹಾಗಾಗಿ ಊರಲ್ಲೇ ಬೆಳೆದ ಒಂದಿಷ್ಟು ಹೂಗಳನ್ನಾಯ್ದು, ಮಾಲೆ ಕಟ್ಟಿ ಎಲ್ಲವನ್ನೂ ತಾವೇ ಶಿವನ ಕೊರಳಿಗೊಡ್ಡಿದರೆ ಆ ಪುಣ್ಯದ ಭಾರ ತಮ್ಮಿಂದ ಹೊರಲಾಗದು ಎಂದು ತೋರಿದವರು ತಮ್ಮ ಪುಣ್ಯವನ್ನು ಒಂದಿಷ್ಟು ಮಾರಾಟಕ್ಕಿಟ್ಟುಕೊಂಡು ಕುಳಿತಿದ್ದರು. ಕಡೆಗೂ ಹೊಟ್ಟೆ ರೊಟ್ಟಿಯಿಂದ ತುಂಬೀತೆ ಹೊರತು ಪುಣ್ಯದಿಂದಲ್ಲವಷ್ಟೇ. ಆದರೆ ನಾವಾರೂ ಖರೀದಿಗೆ ಮನ ಮಾಡದೆ, ಸುಮ್ಮನೆ ಗುಡಿಗೆ ಒಂದು ಸುತ್ತು ಬಂದೆವು. ಶಿಥಿಲಗೊಳ್ಳುತ್ತಿರುವ ಕಲ್ಲಿನ ಕೆತ್ತನೆ, ಇನ್ನೊಂದಿಷ್ಟು ಕಾಲ ಸರಿದರೆ ಅದೂ ಉಳಿಯದೇನೋ. ಮಳೆಗಾಲವಾದ್ದರಿಂದ ಶಿವಲಿಂಗ ನೀರಲ್ಲಿ ಮುಳುಗಿತ್ತು. ಹೊತ್ತು ಮೀರಿದ್ದರಿಂದ ನಾವು ಕೋಟೆಗೆ ಲಗ್ಗೆಯಿಡಲು ಸಾಧ್ಯವಾಗಲಿಲ್ಲ. ನೋಡಲು ಯೋಗ್ಯವಾದ ಎಲ್ಲಾ ಸ್ಥಳಗಳಿಗೆ ಹೋಗುವುದಕ್ಕಿಂತಲೂ, ತಡ ರಾತ್ರಿಯೊಳಗೆ ಮರಳುವುದೇ ನಮ್ಮ ಉದ್ದೇಶವೂ ಆಗಿತ್ತು.



ಅಮೃತೇಶ್ವರ ಮಂದಿರ - ಸಾಂದರ್ಭಿಕ ಚಿತ್ರ : ಗೂ'ಗಲ್ಲಿ'ನಿಂದಾಯ್ದಿದ್ದು
       ಇಲ್ಲಿಂದ ನಮ್ಮದು ಮರು ಪ್ರಯಾಣ. ಬರುತ್ತಾ ಕಂಡಿದ್ದ ಬೆಟ್ಟಗುಡ್ಡಗಳ ಇನ್ನೊಂದು ಸೆರಗನ್ನು ನೋಡುತ್ತಾ, ಅವುಗಳಿಗೆಲ್ಲಾ ವಿದಾಯ ಹೇಳುತ್ತಾ ಕುಳಿತೆ. ಉಳಿದವರೆಲ್ಲಾ Truth and Dare ಆಡುತ್ತಾ ಕುಳಿತಿದ್ದರು. ಆದರೆ ಆಟದಲ್ಲಿ ಆಸಕ್ತಿಯಿದ್ದ ಸತ್ಯ (Truth), ಒಂದು ಕಾರ್ಯ ಕೈಗೊಳ್ಳಲು ತೋರುತ್ತಿದ್ದ ಧೈರ್ಯ (Dare) ಬೇಡ ಎಂದರೂ ಕೇಳುತ್ತಿತ್ತು, ಕಾಣುತ್ತಿತ್ತು. ಈ ಕುರಿತು ಮುಂದಿನ ಸಂಚಿಕೆಯಲ್ಲಿ ತಿಳಿಸುವೆ.