Sunday, 1 September 2013

ಭಂಡಾರಧಾರ ಪ್ರವಾಸ ಕಥನ.. : ಅಧ್ಯಾಯ ೫



ಛತ್ರಿ ಜಲಪಾತವೂ, ಅಮೃತೇಶ್ವರ ಮಂದಿರವೂ..

      ಹೋಗಬೇಕೆಂದುಕೊಂಡಿದ್ದ Umbrella Falls ಹುಡುಕಿಕೊಂಡು ಹೊರಟೆವು. ದಾರಿಯಲ್ಲಿ ಅವರಿವರಲ್ಲಿ ಕೇಳಿದಾಗ, ಅಲ್ಲಿ ಇಲ್ಲಿ ಎಂದು ದಾರಿ ತೋರಿದರು. ಅದೇ ದಾರಿಯಲ್ಲೇ ಸಾಗಿದೆವಾದರೂ ಜಲಪಾತ ಕಣ್ಣಿಗೆ ಬೀಳಲಿಲ್ಲ. ಕೊನೆಗೆ ಜಲಪಾತದಲ್ಲಿ ನೀರಿಲ್ಲ ಎಂಬೊಂದು ವಿಚಾರ ತಿಳಿಯಿತು. ನೀರಿಲ್ಲದೆ ಇದೆಂಥ ಜಲಪಾತ ಅಂತ ಕೇಳಬೇಡಿ. ಮೈಸೂರುಪಾಕಿನಲ್ಲಿ ಮೈಸೂರೂ ಇರಲ್ಲ, ಪಾಕ್ ಕೂಡ ಇರಲ್ಲ; ಮದ್ದೂರು ವಡೆಯಲ್ಲಿ ಮದ್ದೂರು ಇರಲ್ಲ; ಅಷ್ಟೇ ಯಾಕೆ, ಈರುಳ್ಳಿಯೇ ಇಲ್ಲದ Onion Masala Dosa ಕಲ್ಕತ್ತೆಯಲ್ಲಿ ತಿಂದಿದ್ದೆ. ಆಗ ಮೊದಲಿನ ಎರಡು ಡೈಲಾಗ್ ಹೊಡೆದು ಗೆಳೆಯರು ನನ್ನ ಸಮಾಧಾನಿಸಿದ್ದರು. ಅದೇ ಥರ ಇದೊಂದು ನೀರಿಲ್ಲದ ಜಲಪಾತ ಅಂದುಕೊಳ್ಳಿ. ಮಳೆ ಹೆಚ್ಚಾದ೦ತೆ ಈ ಜಲಪಾತದಲ್ಲಿ ನೀರು ತುಂಬಿಕೊಳ್ಳುವುದಂತೆ. ಅಂತೂ ಬೇಸರದಿಂದಲೇ ಅತ್ತಿತ್ತ ಕಣ್ಣು ಹಾಯಿಸುತ್ತಾ ಕಡೆಯ ಪಕ್ಷ ಅದರ ಕುರುಹಾದರೂ ಕಾಣುವುದೋ ಎಂದು ನೋಡುತ್ತಿದ್ದೆವು. ಒಂದೆಡೆ ಸಣ್ಣಗೆ ಬೀಳುತ್ತಿದ್ದ ನೀರನ್ನು ಕಂಡು ಅದಕ್ಕೆ Umbrella Falls ಎಂದು ಹೆಸರು ಕೊಟ್ಟು, ನೊಂದ ಮನಸ್ಸಿನಿಂದ ಅದರ ಬಗ್ಗೆ "ನೀರು ಮೇಲಿಂದ ಕೆಳಗೆ ಧುಮುಕಲು ಅಣಿಯಾಗಿ ನಿಂತ ಪ್ರದೇಶದಿಂದ ಯಾರದೋ ಒಂದು ಕೊಡೆ (Umbrella)ಕೆಳಗೆ ಬಿತ್ತಂತೆ. ಹಾಗಾಗಿ ಅದರ ಹೆಸರು" ಎಂಬಿತ್ಯಾದಿ ಕಟ್ಟು ಕತೆ ಕಟ್ಟತೊಡಗಿದೆವು.

      ಮುಂದೆ ರತನ್ ವಾಡಿ ಕಡೆಗೆ ಪಯಣ ಮುಂದುವರಿಯಿತು. ಒಳಗೆ ಮತ್ತವೇ ಆಟ ಕೂಟಗಳು ಮುಂದುವರಿದಿತ್ತು. ನಾನಂತೂ ಕಿಟಕಿಯಿಂದ ಹೊರಗೇ ತಲೆ ನೆಟ್ಟು ಕುಳಿತಿದ್ದೆ. ಸಣ್ಣ ಪುಟ್ಟ ಝರಿ ತೊರೆಗಳು ದೂರದಿಂದಲೇ ಕರೆಯುತ್ತಿದ್ದವು. ಅವೆಲ್ಲವುಗಳಿಗೆ ಕೈ ಬೀಸುತ್ತಾ ಮುಂದೆ ಸಾಗಿದೆವು. ಹೀಗೆ ಸಾಗುವಾಗ ದಾರಿ ಬದಿಯಲ್ಲೊಂದು ಜಲಪಾತ ಕಾಣಿಸಿತು. ಅಷ್ಟೇನೂ ಜನ ಜಂಗುಳಿಯೂ ಇಲ್ಲದ್ದು ಮತ್ತೂ ಖುಷಿಕೊಟ್ಟಿತ್ತು. ಈ ಖುಷಿ ಹಿಂದಿನ ನಿರಾಸೆಯನ್ನು ಮೀರಿಸುವಂಥದ್ದು. ಇದರ ಹೆಸರು ನನಗೆ ಸ್ಪಷ್ಟವಾಗಿ ತಿಳಿದಿಲ್ಲ. ಅವರಿವರಿಂದ ಕೇಳಿ ತಿಳಿದ ಮಟ್ಟಿಗೆ ಇದನ್ನ 'ನಾಣೆ ಜಲಪಾತ' ಎನ್ನಬಹುದು. ನೀವು ನೋಡಬೇಕೆಂದಿದ್ದ Umbrella Falls 'ನಾನೇ' ಎನ್ನುವುದು ಅದರರ್ಥವೋ ನಾನರಿಯೆ. ನನಗಂತೂ ಎತ್ತರದಿಂದ ಧುಮುಕುವ ನೀರಿನ ಬುಡಕ್ಕೆ ಹೋಗಿ ನಿಲ್ಲುವ ತವಕ. ಎರಡು ಹೆಜ್ಜೆ ಮುಂದೆ ಸಾಗಿದರೆ ಒಂದು ಹೆಜ್ಜೆ ಹಿಂದೆ ಎಳೆಯುವ ಮನುಷ್ಯನ ಬುದ್ಧಿಯನ್ನ ಪ್ರಕೃತಿಯೂ ಕಲಿತಿದೆ. ಪಾಚಿಕಟ್ಟಿದ ಕಲ್ಲುಗಳೂ ಅದೇ ಮಾಡುತ್ತಿದ್ದವು. ಈ ಮಧ್ಯೆ ನನ್ನನ್ನು ಮರೆತು ಉಳಿದವರಿಗೆ ಎಚ್ಚರ ಹೇಳುತ್ತಾ ನೀರ ಕೆಳಗೆ ಹೋಗಿ ನಿಂತೆ. ಬಳಿಕ ಒಬ್ಬೊಬ್ಬರಾಗಿ ಬಂದು ಕೂಡಿಕೊಂಡರು. ಆದರೂ ಲೆಕ್ಕದಲ್ಲೊಂದು ಕಡಿಮೆ. ಆಕೆ ಮೊದಲ ಹೆಜ್ಜೆಯಲ್ಲೇ ಜಾರಿದ್ದರಿಂದ, ಜಾರಿ ಬಿದ್ದಿದ್ದರಿಂದ ಮುಂದಿನ ನಮ್ಮೆಲ್ಲರ ಸಾಹಸಗಳಿಗೆ ಸಾಕ್ಷಿಯಾಗಲು ಛಾಯಾಗ್ರಹಣದ ಉಸ್ತುವಾರಿ ವಹಿಸಬೇಕಾಯ್ತು. ಜಲದೇವಿ ಏನು ಸಾಮನ್ಯಳೇ, ನಮ್ಮ ಇರುವಿಕೆಯೇ ಕಾಣದಷ್ಟು ಗಾಢವಾಗಿ ನಮ್ಮ ಮೈಮೇಲೆ ಬರತೊಡಗಿದಳು. ವಿಚಿತ್ರ ನೋಡಿ, ಮಳೆಯ ರೂಪದಲ್ಲಿರುವಾಗ ನೀರು ಗಂಡು (ವರುಣ), ನದಿಯಲ್ಲಿ ಸೇರಿದಾಗ ಹೆಣ್ಣು (ಗಂಗೆ, ಯಮುನೆ ಇತ್ಯಾದಿ), ಕಡೆಗೆ ಸಾಗರವನ್ನು ಸೇರಿದಾಗ ಗಂಡು (ಸಮುದ್ರ ರಾಜ). ನೀರಿಲ್ಲದೇ ಹೋದರೆ ಗಂಡು ಹೆಣ್ಣೆಂಬ ಪ್ರಶ್ನೆ ಎತ್ತಲು ಈ ಒಂದಕ್ಕೂ ಅಸ್ತಿತ್ವವೇ ಇಲ್ಲ. (ಸುತ್ತಲಿನ ರೂಢಿಯಿಂದ ಕಳೆದ ಸಂಚಿಕೆಗಳಲ್ಲಿ ಮಳೆಗೆ ವರುಣ ಎಂದೂ, ಈಗ ಜಲದೇವಿ ಎಂದೂ ನಾನು ಬರೆದಿದ್ದು ನನಗೇ ನಗು ತಂದು ನಿಮ್ಮೊಂದಿಗೆ ಹಂಚಿಕೊಂಡ ವಿಚಾರ ಇದು.)

      ಸೂಜಿಯಂತೆ ಚುಚ್ಚುವ ನೀರು ಮೇಲಿಂದ ಬೀಳುತ್ತಿರುವಾಗ ಗಂಗಾವತರಣದ ಕತೆ ನೆನಪಾಯ್ತು. ಆ ಶಿವನಂತೆ ನಾನೂ ಈ ನೀರನ್ನು ತಡೆಯುವೆನೆನ್ನುವಂತೆ ಹುಚ್ಚಿನಿಂದ ಅದರ ಕೆಳಗೆ ನಿಂತೆ. ತಲೆಯ ಮೇಲೆ ಧಪಧಪನೆ ನೀರು ಬೀಳುತ್ತಿದ್ದುದು ಹಿತವೆನಿಸುತ್ತಿತ್ತು. ಶಿವನಷ್ಟು ಉದ್ದದ ಕೂದಲು ನನ್ನದಿರಲಿಲ್ಲ. ಹಾಗಾಗಿ ಧುಮುಕುತ್ತಿದ್ದ ನೀರನ್ನು ತಲೆ ಮೇಲೆ ಗಂಟು ಕಟ್ಟಿಕೊಳ್ಳಲಾಗಲಿಲ್ಲ. ಜೊತೆಗೆ ತಲೆಗೆ ಎಣ್ಣೆ ಹಚ್ಚಿಕೊಂಡು ಹೋಗಿದ್ದೂ, ಅದಕ್ಕೆ ಜಾರಿ ತಪ್ಪಿಸಿಕೊಳ್ಳಲು ಸುಲಭವಾಯ್ತು. ಅಂತೂ ಇಂಥ ಹುಚ್ಚಿನಲ್ಲಿ ಒಂದಿಷ್ಟು ಹೊತ್ತು ಕಳೆದ ಬಳಿಕ, ಬಳಿಯಲ್ಲಿದ್ದ ಅಂಗಡಿಯೊಂದರಲ್ಲಿ ಚಹಾ, ಈರುಳ್ಳಿ ಪಕೋಡಾ ಹಾಗೂ ಆಲೂಗಡ್ಡೆ ಬೋಂಡ ತಿಂದು ಒಂದು ಹಂತದ ಚಳಿ ಬಿಡಿಸಿಕೊಂಡಾದ ಮೇಲೆ ಮಹಿಳಾ ಮಣಿಗಳನ್ನೆಲ್ಲಾ ಹಾಗೆಯೇ ನಡುಗಬಿಟ್ಟು, ನಾವೆಲ್ಲಾ ಒಣವಸ್ತ್ರಧಾರಿಗಳಾದ ನಂತರ ಅಮೃತೇಶ್ವರ ಮಂದಿರದೆಡೆಗೆ ಹೊರಟೆವು.

      ಮುಂದೆ ಕೂಡ ದೂರದಲ್ಲಿ ಹೀಗೆಯೇ ಧುಮುಕುತ್ತಿದ್ದ ಜಲಪಾತಗಳೋ, ಝರಿಗಳೋ ಕಾಣುತ್ತಿದ್ದವು. ಎಡದಿಂದೊಂದು, ಬಲದಿಂದೊಂದು ಧಾರೆ ಹರಿದುಬಂದು ಮಧ್ಯದಲ್ಲಿ ನಂಟು ಬೆಳೆದು, ಗಂಟು ಬೆಸೆದು, ಮತ್ತೆ ಬಲದ ಧಾರೆ ಸ್ವಲ್ಪ ಎಡಕ್ಕೂ, ಎಡದ ಧಾರೆ ಸ್ವಲ್ಪ ಬಲಕ್ಕೂ ಸರಿದು ಹರಿಯುತ್ತಿದ್ದ  ಝರಿಯೊಂದನ್ನು ನೆಕ್ಲೆಸ್ ಫಾಲ್ಸ್ ಅಂತ ಸಹೋದ್ಯೋಗಿಯೊಬ್ಬರು ಪರಿಚಯ ಮಾಡಿಕೊಟ್ಟರು. ಅವನ್ನೆಲ್ಲಾ ಕಣ್ಣುಗಳಲ್ಲಿ ತುಂಬಿಕೊಳ್ಳುತ್ತಾ ಮುಂದೆ ಸಾಗಿದೆವು.

      ಜನಪ್ರಿಯ ದೇವರುಗಳೆಲ್ಲಾ ವಾಹನಾದಿ ಸೌಕರ್ಯಗಳು ಚೆನ್ನಾಗಿರುವಲ್ಲೇ ವಾಸವಾಗಿರುತ್ತಾರೋ, ಅಥವಾ ಆ ದೇವರ ಜನಪ್ರಿಯತೆ ತಮಗೂ ಬರಲೆಂದು, ಪ್ರಿಯವಲ್ಲದಿದ್ದರೂ ಒಂದಿಷ್ಟು ಜನ ತಮ್ಮನ್ನು ಗುರುತಿಸುವಂತಾಗಲೆಂದು ಜನರೇ ಎಲ್ಲಾ ಸೌಕರ್ಯಗಳನ್ನು ಪ್ರಾರಂಭಿಸುವರೋ ತಿಳಿಯದು. ಆದರೆ ರತನ್ ವಾಡಿ ಎಂಬ ಈ ಕೊಂಪೆಯಲ್ಲಿ ಕುಳಿತಿರೋ ಅಮೃತೇಶ್ವರ ಮಾತ್ರ ಇಂದಿನವರೆಗೆ ತುಂಬಾ ಸುಖಿ. ಹೆಚ್ಚೆಂದರೆ ಅಲ್ಲೊಂದು, ಇಲ್ಲೊಂದು ಕಾಣುತ್ತಿದ್ದ ಮನೆಗಳವರ ಸುಖ ಕಾಯ್ದರಾಯ್ತು. ದೂರದೂರಿಂದ ಬಂದು ಅರ್ಜಿ ಸಲ್ಲಿಸುವವರು ಯಾರೂ ಇಲ್ಲ. ಸಮೀಪದಲ್ಲೇ ಇರುವ ರತನ್ ಗಢ ಕೋಟೆ ನೋಡಲು ಬರುವವರು ಒಂದು ಬಾರಿ ಇವನನ್ನು ಭೇಟಿ ಮಾಡಿ ಹೋಗುವುದುಂಟು. ಹಾಗಾಗಿ ಊರಲ್ಲೇ ಬೆಳೆದ ಒಂದಿಷ್ಟು ಹೂಗಳನ್ನಾಯ್ದು, ಮಾಲೆ ಕಟ್ಟಿ ಎಲ್ಲವನ್ನೂ ತಾವೇ ಶಿವನ ಕೊರಳಿಗೊಡ್ಡಿದರೆ ಆ ಪುಣ್ಯದ ಭಾರ ತಮ್ಮಿಂದ ಹೊರಲಾಗದು ಎಂದು ತೋರಿದವರು ತಮ್ಮ ಪುಣ್ಯವನ್ನು ಒಂದಿಷ್ಟು ಮಾರಾಟಕ್ಕಿಟ್ಟುಕೊಂಡು ಕುಳಿತಿದ್ದರು. ಕಡೆಗೂ ಹೊಟ್ಟೆ ರೊಟ್ಟಿಯಿಂದ ತುಂಬೀತೆ ಹೊರತು ಪುಣ್ಯದಿಂದಲ್ಲವಷ್ಟೇ. ಆದರೆ ನಾವಾರೂ ಖರೀದಿಗೆ ಮನ ಮಾಡದೆ, ಸುಮ್ಮನೆ ಗುಡಿಗೆ ಒಂದು ಸುತ್ತು ಬಂದೆವು. ಶಿಥಿಲಗೊಳ್ಳುತ್ತಿರುವ ಕಲ್ಲಿನ ಕೆತ್ತನೆ, ಇನ್ನೊಂದಿಷ್ಟು ಕಾಲ ಸರಿದರೆ ಅದೂ ಉಳಿಯದೇನೋ. ಮಳೆಗಾಲವಾದ್ದರಿಂದ ಶಿವಲಿಂಗ ನೀರಲ್ಲಿ ಮುಳುಗಿತ್ತು. ಹೊತ್ತು ಮೀರಿದ್ದರಿಂದ ನಾವು ಕೋಟೆಗೆ ಲಗ್ಗೆಯಿಡಲು ಸಾಧ್ಯವಾಗಲಿಲ್ಲ. ನೋಡಲು ಯೋಗ್ಯವಾದ ಎಲ್ಲಾ ಸ್ಥಳಗಳಿಗೆ ಹೋಗುವುದಕ್ಕಿಂತಲೂ, ತಡ ರಾತ್ರಿಯೊಳಗೆ ಮರಳುವುದೇ ನಮ್ಮ ಉದ್ದೇಶವೂ ಆಗಿತ್ತು.



ಅಮೃತೇಶ್ವರ ಮಂದಿರ - ಸಾಂದರ್ಭಿಕ ಚಿತ್ರ : ಗೂ'ಗಲ್ಲಿ'ನಿಂದಾಯ್ದಿದ್ದು
       ಇಲ್ಲಿಂದ ನಮ್ಮದು ಮರು ಪ್ರಯಾಣ. ಬರುತ್ತಾ ಕಂಡಿದ್ದ ಬೆಟ್ಟಗುಡ್ಡಗಳ ಇನ್ನೊಂದು ಸೆರಗನ್ನು ನೋಡುತ್ತಾ, ಅವುಗಳಿಗೆಲ್ಲಾ ವಿದಾಯ ಹೇಳುತ್ತಾ ಕುಳಿತೆ. ಉಳಿದವರೆಲ್ಲಾ Truth and Dare ಆಡುತ್ತಾ ಕುಳಿತಿದ್ದರು. ಆದರೆ ಆಟದಲ್ಲಿ ಆಸಕ್ತಿಯಿದ್ದ ಸತ್ಯ (Truth), ಒಂದು ಕಾರ್ಯ ಕೈಗೊಳ್ಳಲು ತೋರುತ್ತಿದ್ದ ಧೈರ್ಯ (Dare) ಬೇಡ ಎಂದರೂ ಕೇಳುತ್ತಿತ್ತು, ಕಾಣುತ್ತಿತ್ತು. ಈ ಕುರಿತು ಮುಂದಿನ ಸಂಚಿಕೆಯಲ್ಲಿ ತಿಳಿಸುವೆ.

3 comments:

  1. Neerillada jalapaatha, Mulugida Shivalinga?? Swalpa gondala aste. Uddhatathanavendu thiliyadiri...

    ReplyDelete
    Replies
    1. ಉದ್ಧಟತನ ಅಂತೆಲ್ಲ ತಿಳಿಯೋಲ್ಲ.. ನಿಮ್ಮ ಅಭಿಪ್ರಾಯಗಳು ನನಗೆ ಇನ್ನೊಂದು ದಿಕ್ಕಲ್ಲಿ ಯೋಚಿಸಲು ಸಹಾಯ ಮಾಡುತ್ತವೆ. ನಾವು ಹೋದ ಸಮಯದಲ್ಲಿ Umbrella Fallsನಲ್ಲಿ ನೀರಿರಲಿಲ್ಲ. ಅದಕ್ಕೆ ಹಾಗೆ ಹೇಳಿದ್ದು. ಇನ್ನು ಅಮೃತೇಶ್ವರ ದೇವಸ್ಥಾನ ಅಲ್ಲಿಂದ ಒಂದಿಷ್ಟು ದೂರ. ಅಲ್ಲಿ ಶಿವಲಿಂಗ ನೀರಲ್ಲಿ ಮುಳುಗಿತ್ತು. ಅದನ್ನೇ ಇಲ್ಲಿ ಹೇಳಿದೆ.

      Delete