'ಸ್ವಚ್ಛ ಭಾರತ್, ಶ್ರೇಷ್ಠ ಭಾರತ್' ಅನ್ನೋ ಬರಹ ಹೊತ್ತ ಸಣ್ಣ ಹಲಗೆಯೊಂದನ್ನು ಕೊರಳಿಗೆ ನೇತು ಹಾಕಿಕೊಂಡು, ಒಂದು ಕೈಯಲ್ಲಿ ಮೂರ್ನಾಲ್ಕು ಖಾಲಿ ಗೋಣಿಚೀಲಗಳನ್ನೂ, ಮತ್ತೊಂದು ಕೈಯಲ್ಲಿ ಸಣ್ಣದೊಂದು ಕಡ್ಡಿ ಪೊರಕೆ ಹಾಗೂ ಸ್ವಲ್ಪ ಉದ್ದವಾದ ದೊಣ್ಣೆಯೊಂದನ್ನು ಹೊತ್ತು ಬೆಟ್ಟದ ತಪ್ಪಲೊಂದಕ್ಕೆ ಹೋಗಿದ್ದೆ. ಅವರಿವರು ಎಸೆದಿದ್ದ ಕಸವನ್ನೆಲ್ಲಾ ಎತ್ತಿ, ಆ ತಪ್ಪಲನ್ನು ಸ್ವಚ್ಛಗೊಳಿಸಿ; ಆ ಕಸದಿಂದ ರಸವನ್ನೋ, ರಸಗೊಬ್ಬರವನ್ನೋ ತಯಾರಿಸುವ ಹೆಬ್ಬಯಕೆ. ಅದು ಸಾಧ್ಯವಾಗದಿದ್ದಲ್ಲಿ ಆ ಒಂದು ತಪ್ಪಲಿನ 'Before' ಮತ್ತು 'After' ಫೋಟೋ ತೆಗೆದು ನಮ್ಮ ಪ್ರಧಾನಿಯವರಿಗೆ ಕಳಿಸಿದೆನಾದರೆ ಅವರ ಕನಸನ್ನು ಸಾಕಾರಗೊಳಿಸುತ್ತಿರುವೆನೆಂಬ ಕಾರಣಕ್ಕೆ ನನಗೊಂದಿಷ್ಟು ಪಾರಿತೋಷಕಗಳು ಸಿಕ್ಕಾವು, ಅವೇ ಫೋಟೋಗಳನ್ನು Facebookನಲ್ಲಿ ಹಾಕಿದೆನಾದರೆ ನೂರಾರು ಲೈಕುಗಳೂ ಬಂದಾವು, ನಾನೂ ಈ ಒಂದು ಪ್ರಪಂಚದಲ್ಲಿ ಸಣ್ಣಗೆ ಪ್ರಸಿದ್ಧನಾದೇನು ಎಂಬೊಂದು ಆಸೆ. ಭೂಮಿಯ ಮೇಲೆ ಹುಟ್ಟಿದುದಕ್ಕೆ ಗುರುತಾಗಿ ಒಂದು ಹೆಸರನ್ನಾದರೂ ಬಿಟ್ಟು ಹೋಗಬೇಡವೇ, ಸತ್ತ ಮೇಲೆ ನಾಲ್ಕು ಕಡೆ ಸಿಮೆಂಟಿನದ್ದೋ, ಕಬ್ಬಿಣದ್ದೋ ವಿಗ್ರಹಗಳನ್ನು ನೆಟ್ಟು; ಜೀವಂತ ಮನುಷ್ಯರು ತಲೆ ಮೇಲೆ ಸೂರಿಲ್ಲದೆ ರಸ್ತೆ ಬದಿಯಲ್ಲಿ ಮಳೆ ಬಿಸಿಲುಗಳ ಸಹಿಸಲಾಗದೇ ನರಳುತ್ತಾ ಬಿದ್ದಿರುವಾಗ, ಸ್ಮಾರಕ ಎಂಬ ಹೆಸರಿನ ಗುಡಿಸಲೊಳಗೆ ನಗುತ್ತಾ ನಿಲ್ಲಬೇಡವೇ. ನಾಲ್ಕು ಮಾರ್ಗಗಳಿಗೆ ನನ್ನ ಹೆಸರನ್ನಿಟ್ಟು, ಮೂರು ಸರ್ಕಲ್ಲುಗಳಲ್ಲಿ ಮೂರ್ತಿಗಳನ್ನು ನೆಟ್ಟು, ಅದರ ಮೇಲೆ ಕಾಕಪಿಷ್ಟದ ಅಭ್ಯಂಜನವಾಗಬೇಡವೇ. ಕಾಕಪಿಶ್ಟದ ನೆನಪು ಬಂದೊಡನೆ ಒಮ್ಮೆ ತಲೆ ಮುಟ್ಟಿ ನೋಡಿಕೊಂಡೆ. ಏನೂ ಇರಲಿಲ್ಲ. ಮೇಲೆ ಹತ್ತುವಷ್ಟರಲ್ಲಾದ ಸುಸ್ತಿಗೆ ಕಲ್ಲಿನ ಮಂಟಪದಲ್ಲಿ ತಣ್ಣನೆಯ ಗೋಡೆಯನ್ನು ಒರಗಿ ಕೂತವನಿಗೆ ಒಳ್ಳೆ ನಿದ್ರೆ ಬಂದು ಕನಸು ಕಟ್ಟಿತ್ತು. ಬ್ಯಾಗಿನಲ್ಲಿದ್ದ ನೀರಿನ ಬಾಟಲಿಯಿಂದ ಮುಖಕ್ಕಿಷ್ಟು ನೀರು ಸಿಂಪಡಿಸಿಕೊಂಡು ನನ್ನಷ್ಟೂ ಪರಿಕರಗಳೊಂದಿಗೆ ಹೊರಬಿದ್ದೆ.
ಸ್ವಲ್ಪವೇ ದೂರದಲ್ಲಿ ಐದು ಜನರ ಗುಂಪೊಂದು ಹರಟುತ್ತಾ ಕುಳಿತಿತ್ತು. ಮಧ್ಯೆ ಮಧ್ಯೆ ನೆಲದಿಂದ ಮೇಲೆದ್ದು ಬರುತ್ತಿದ್ದ ಬಾಟಲಿಗಳನ್ನು ಕಂಡೆ. 'ಹಾಳು ಕುಡುಕರು' ಎಂದು ಮನದಲ್ಲೇ ಬೈದುಕೊಂಡು ಮತ್ತೊಂದು ದಿಕ್ಕಿನೆಡೆ ಹೋದೆ. ಚೀಲ ಪೊರಕೆಗಳನ್ನೆಲ್ಲಾ ಕೆಳಗಿಟ್ಟು, ಗಲೀಜಾಗಿದ್ದ ಒಂದು ದಿಕ್ಕಿನ ಫೊಟೊ ತೆಗೆಯಲೆಂದು ಕ್ಯಾಮೆರಾ ಕೈಗೆ ಎತ್ತಿಕೊಳ್ಳುವ ವೇಳೆಗೆ ಅದೆಲ್ಲಿದ್ದನೋ ಭೂಪ, ಅರಣ್ಯ ರಕ್ಷಕನೊಬ್ಬ ಕೈಯಲ್ಲಿ ದೊಣ್ಣೆ ಹಿಡಿದು ಏನನ್ನೋ ಕೂಗುತ್ತಾ ಬಂದ. ನನಗದು ಸ್ಪಷ್ಟವಾಗಿ ಕೇಳಿಸಲಿಲ್ಲ. ಮತ್ತೊಮ್ಮೆ ನಾನು ಕ್ಯಾಮೆರಾದ ಕಣ್ಣಲ್ಲಿ ಕಣ್ಣಿಡುವಷ್ಟರಲ್ಲಿ ಆತ ಎದುರಿಗೇ ನಿಂತಿದ್ದ. ಕ್ಯಾಮೆರಾದಲ್ಲಿ ಕಸದ ಬದಲು ದುರುಗುಟ್ಟುವ ಅವನ ಕೆಂಪು ಕಣ್ಣುಗಳು ಕಾಣುತ್ತಿದ್ದವು.
"ಸ್ವಲ್ಪ ಸೈಡಿಗೆ ಬನ್ನಿ ಸಾರ್, ಫೋಟೋ ತಗೋತಿದೀನಿ" ಎಂದ ನನ್ನ ಮಾತು ಮುಗಿಯುವಷ್ಟರಲ್ಲಿ ಆತ ನಾನು ಯಾವೆಲ್ಲಾ ಸಾಮಾನುಗಳನ್ನು ಹೊತ್ತು ಬಂದಿದ್ದೇನೆಂದು ನೋಡಿಯಾಗಿತ್ತು.
"ಎಲ್ಲಿಂದ ಬಂದಿದೀರಾ, ಇವೆಲ್ಲಾ ಏನು ?" ಗತ್ತಿನಿಂದಲೇ ಕೇಳಿದ.
"ಬೆಟ್ಟ ಕ್ಲೀನ್ ಮಾಡಕ್ಕೆ ಬಂದಿದೀನಿ ಸಾರ್. ಇಲ್ಲಿ ಬಿದ್ದಿರೋ ಪ್ಲಾಸ್ಟಿಕ್, ರಬ್ಬರ್, ಪೇಪರ್, ಗ್ಲಾಸಿನ ತ್ಯಾಜ್ಯಗಳನ್ನೆಲ್ಲಾ ಒಟ್ಟುಮಾಡಿ ರಿಸೈಕಲ್ ಪ್ಲಾಂಟ್ ಗೆ ಕಳಿಸ್ತೀನಿ ಸಾರ್. ಕಸದಿಂದ ರಸ, ಜೊತೆಗೇ ಸ್ವಚ್ಛ ಭಾರತ್ ಶ್ರೇಷ್ಠ ಭಾರತ್" ಕೊರಳಲ್ಲಿದ್ದ ಹಲಗೆ ತೋರಿಸುತ್ತಾ ಹೇಳಿದೆ.
"ಬಿ.ಜೆ.ಪಿಯವ್ನೇನೋ ನೀನು ?" ಮತ್ತದೇ ಗತ್ತು.
"ನಾನು ಯಾವ ಪಕ್ಷದಲ್ಲೂ ಇಲ್ಲ ಸಾರ್, ಒಳ್ಳೇ ವಿಷಯಗಳನ್ನು ಅನುಸರಿಸೋಕೆ ಯಾವ ಪಕ್ಷ ಆದ್ರೆ ಏನು ಸಾರ್. ಅಷ್ಟಕ್ಕೂ ಮೋದಿ ಹೇಳ್ತಿರೋದ್ನ ಎಪ್ಪತ್ತು ವರ್ಷ ಹಿಂದೆ ಗಾಂಧೀಜಿ ಹೇಳಿಲ್ವಾ, ಅವ್ರು ಕಾಂಗ್ರೆಸ್ಸು" ಎಂದೆ.
"ಹಾಗಿದ್ರೆ ನೀನು ಕಾಂಗ್ರೆಸ್ ಪಕ್ಷದೋನಾ ?" ಮತ್ತದೇ ಪ್ರಶ್ನೆ.
"ಇಲ್ಲ ಸಾರ್, ನಾನು ಯಾವ ಪಕ್ಷದಲ್ಲೂ ಇಲ್ಲ. ನಾನು ಬಂದಿರೋದು ಈ ಬೆಟ್ಟ ಕ್ಲೀನ್ ಮಾಡಣ ಅಂತ ಅಷ್ಟೇ" ಎನ್ನುತ್ತಾ ಪಕ್ಕದಲ್ಲಿಟ್ಟಿದ್ದ ಪೊರಕೆ ಕೈಗೆತ್ತಿಕೊಂಡು ಮುಂದೆ ಹೊರಟೆ.
"ಏಯ್, ನಾನು ಮಾತಾಡ್ತಾನೇ ಇದೀನಿ. ಅದ್ಯೆತ್ತಾ ಹೊರ್ಟಿ? ಬಾರೋ ಇಲ್ಲಿ" ಧ್ವನಿ ಜೋರಾಗಿತ್ತು.
"ಏನ್ ಸಾರ್. ಕೈಯಲ್ಲಿ ಪೊರಕೆ ನೋಡಿ ಆಮ್ ಆದ್ಮಿ ಪಾರ್ಟಿ ಅನ್ಕೊಂಡ್ರಾ, ಈಗ ಬಿ.ಜೆ.ಪಿಯವ್ರು ಕೂಡಾ ಕೈಯಲ್ಲಿ ಪೊರಕೆ ಹಿಡ್ಕೊಂಡು ಕ್ಯಾಮೆರಾಗೆ ಪೋಸು ಕೊಡ್ತಾರೆ." ತಾಳ್ಮೆಗೆಟ್ಟು ನುಡಿದೆ.
"ಅದಕ್ಕಲ್ಲಯ್ಯಾ, ಅದೇನೋ ರಸದಿಂದ ಕಸ ಅಂತಿದ್ಯಲ್ಲಾ, ಫಾರೆಸ್ಟ್ ಡಿಪಾರ್ಟ್ಮೆಂಟಿಂದ ಪರ್ಮಿಶನ್ ತಗೊಂಡಿದೀಯಾ ?" ಆತ ಕೇಳಿದ.
ನನ್ನ ಧ್ಯೇಯವನ್ನು ಆತ ತಿರುಗು ಮುರುಗಾಗಿ ಹೇಳಿದ್ದು ಅರಿವಿಗೆ ಬಂದರೂ ಕೊನೆಯ ಮಾತು ನನ್ನ ನಾಲಿಗೆಯನ್ನು ಕಟ್ಟಿ ಹಾಕಿತು. ನನಗೇ ಕೇಳಿಸದಷ್ಟು ಸಣ್ಣ ದನಿಯಲ್ಲಿ "ಇಲ್ಲ ಸಾರ್" ಎಂದೆ.
"ನೋಡಪ್ಪಾ, ಪರ್ಮಿಶನ್ ಇಲ್ದೆ ಇಲ್ಲಿ ನೀನು ಸ್ವರ್ಗದಿಂದ ಪಾರಿಜಾತದ ಗಿಡ ತಂದು ನೆಡ್ತೀನಂದರೂ ಬಿಡಕಾಗಲ್ಲ. ಸೋ ಏನೇನು ತಗೊಂಡು ಬಂದಿದೀಯೋ ಎಲ್ಲಾ ಹೊತ್ಕೊಂಡು ವಾಪಸ್ ಹೋಗಿಬಿಡು." ಆತ ನಯವಾಗಿಯೇ ಹೇಳಿದ್ದ. ಆದರೂ ದೂರದಲ್ಲಿ ಕುಡಿಯುತ್ತಾ ಕೂತಿದ್ದವರ ಗುಂಪು ನೋಡಿದಾಗ ನನ್ನ ಅಹಂಕಾರಕ್ಕೆ ಪೆಟ್ಟು ಬಿದ್ದಿತ್ತು.
"ಕುಡಿದು ಇಲ್ಲಿಯ ಪರಿಸರಾನ ಹಾಳು ಮಾಡೊಕ್ಕೆ ನೀವು ಪರ್ಮಿಶನ್ ಕೇಳಲ್ಲ. ಅದನ್ನ ಕ್ಲೀನ್ ಮಾಡ್ತೀನಂದ್ರೆ ಅಡ್ಡ ಮಾತಾಡ್ತೀರಲ್ಲಾ, ಇದು ಯಾವ ಸೀಮೆ ನ್ಯಾಯ ಸಾರ್?" ನನ್ನ ಧ್ವನಿ ನನಗೇ ತಿಳಿಯದಂತೆ ಜೋರಾಗಿತ್ತು. ನಾನು ಯಾರ ಕುರಿತು ಮಾತಾಡಿದ್ದೆಂಬುದು ಅವನಿಗೆ ಅರಿವಾಗಿತ್ತು.
"ನೋಡಪ್ಪಾ, ಕುಡಿಯೊರೇನಿದ್ರೂ ತಮ್ಮಲ್ಲಿರೋದನ್ನ ಇಲ್ಲಿ ಬಿಟ್ಟು ಹೋಗ್ತಾರೆ. ನಿನ್ ಥರ ಇಲ್ಲಿಂದ ಬಾಚ್ಕೊಂಡು ಹೋಗಲ್ಲ." ಎನ್ನುತ್ತಾ ಆತ ಗುಟ್ಕಾ ತಿಂದು ಕೆಂಪಗಾಗಿದ್ದ ತನ್ನ ಹಲ್ಲುಗಳನ್ನು ತೋರುತ್ತಾ ನಗೆಯಾಡಿದ್ದ.
"ಆದ್ರೆ ಬಾಚ್ಕೊಂಡು ಹೋಗೋದು ಕಸಾನ ತಾನೇ, ಅದರಿಂದ ಇಲ್ಲಿಯದೇ ವಾತಾವರಣ ಚೆನ್ನಾಗಿರೋದು. ಅದು ಬಿಟ್ಟು ನಾನೇನು ಇಲ್ಲಿಂದ ನಿಧಿ ಕೊಳ್ಳೆ ಹೊಡ್ಕೊಂಡೇನು ಹೋಗಲ್ಲ ಸಾರ್." ನನ್ನ ಅಸಮಾಧಾನವನ್ನು ವ್ಯಕ್ತಪಡಿಸಿದ್ದೆ.
"ಹಾಗೆ ಯಾರದ್ರೂ ಹೋದ್ರೂನು ನಂಗೆ ಗೊತ್ತಾಗೊಲ್ಲಪ್ಪ, ನಾನೇನು ನಿನ್ನ ಬೆನ್ನ ಹಿಂದೇನೆ ಕಾವಲು ಕಾಯೋಕ್ಕಾಗುತ್ತಾ" ಏರದ ದನಿಯಲ್ಲೇ ಮಾತು ಬಂದಿತ್ತು.
"ಬೇರೆಯವರ ಬಗ್ಗೆ ನಂಗೆ ಗೊತ್ತಿಲ್ಲ ಸಾರ್, ನಾನೇನು ಹಾಗೆ ಮಾಡೋಲ್ಲ. ನನ್ನ ನಂಬಿ ಸಾರ್" ನಾನೂ ನನ್ನ ಧ್ವನಿ ತಗ್ಗಿಸಿದ್ದೆ.
"ನೋಡಪ್ಪಾ, ನನಗೆ ಬೇರೆ ಜನ ಹೇಗೋ ನೀನೂ ಹಾಗೇ. ಎಲ್ಲರೂ ನನಗೆ ಹೊಸಬರೇ. ಒಬ್ಬನಲ್ಲಿ ನಂಬಿಕೆ, ಮತ್ತೊಬ್ಬನಲ್ಲಿ ಅಪನಂಬಿಕೆ ನನ್ನಿಂದಾಗದ ಮಾತು. ಹಾಗಂತ ಎಲ್ರನ್ನ ನಂಬಿ ನನ್ನ ತಲೇನ ಪಣಕ್ಕಿಡೋದು ಸಹಾ ಸಾಧ್ಯ ಇಲ್ಲ. ನೀನು ಪರ್ಮಿಶನ್ ತಗೊಂಡು ಬಂದ್ರೆ ನಿಂಗೂ ಕ್ಷೇಮ, ನಂಗೂ ಕ್ಷೇಮ." ಕಡ್ಡಿ ಮುರಿದಂತೆ ಆತ ಸ್ಪಷ್ಟವಾಗಿ ಹೇಳಿದ್ದರೂ ನನ್ನ ಅಹಂಕಾರದ ಬುದ್ಧಿಗೆ ತಿಳಿಯಲಿಲ್ಲ. ಹಾಗಂತ ಅವನನ್ನು ಧಿಕ್ಕರಿಸಿ ಮುನ್ನುಗ್ಗುವ ಧೈರ್ಯವೂ ಬರಲಿಲ್ಲ. ಸುಮ್ಮನೆ ತಲೆ ಮೇಲೆ ಕೈ ಹೊತ್ತು ಕುಳಿತೆ. ಆತ ಆ ಕುಡುಕರಲ್ಲೊಬ್ಬನ ಬಳಿ ಹೋಗಿ ನಗು ನಗುತ್ತಾ ಮಾತಾಡುತ್ತಿದ್ದ. 'ಇವನೂ ಕುಡುಕ, ಅವರೂ ಕುಡುಕರು. ಅವರವರಿಗೆ ಜೋಡಿ ಸರಿ ಇದೆ. ಮೂರ್ಖರ ನಾಡಲ್ಲಿ ಬುದ್ಧಿವಂತನೇ ಮೂರ್ಖ.' ಎಂದು ಮನಸ್ಸಲ್ಲೇ ಬುಸುಗುಡುತ್ತಾ, ಚೀಲ ಪೋರಕೆಗಳೆಲ್ಲವನ್ನೂ ಅಲ್ಲೇ ಬಿಟ್ಟು ಕುಡುಕರ ಗುಂಪಿನತ್ತ ನಡೆದೆ. ಅವರು ಮಾಡಿರಬಹುದಾದ ಅಧ್ವಾನವನ್ನು ಹೇಗಾದರೂ ಸರಿ ಆ ಅರಣ್ಯ ರಕ್ಷಕನಿಗೆ, ಅವನ ಅಧಿಕಾರಿಗೆ ಮನದಟ್ಟು ಮಾಡಿಸುವ ಹಠ ನನ್ನಲ್ಲಿ ಮೂಡಿತ್ತು.
ರಾತ್ರಿಯಿಂದ ಕುಡಿದು ಬಿದ್ದವರ ದಾಹ ತೀರಿತ್ತೇನೋ. ಅವರು ಹೊರಡಲನುವಾಗಿದ್ದರು. ಅವರಲ್ಲೊಬ್ಬ ನನ್ನ ಬಳಿ ಬಂದು "ಹಾಯ್" ಎನ್ನುತ್ತಾ ಕೈ ಚಾಚಿದ. ಒಲ್ಲದ ಮನಸ್ಸಿನಿಂದಲೇ ಕೈ ಮುಂದೆ ಚಾಚಿದೆ.
"ಕ್ಲೀನ್ ಅಪ್ ಆಕ್ಟಿವಿಟೀಸ್ ನಡೆಸ್ತಿದೀರ ?" ಅವನ ಪ್ರಶ್ನೆ ನನ್ನನ್ನೇ ಅಣಕವಾಡುವಂತಿತ್ತು. ಅಥವಾ ನಾನು ಹಾಗಂದುಕೊಂಡೆ.
"ಇಲ್ಲ, ಟ್ರೆಕ್ಕಿಂಗ್ ಮಾಡುವ ಮನಸ್ಸಾಯ್ತು, ಹಾಗೇ ಬಂದೆ." ನಾನು ಸುಳ್ಳಾಡುತ್ತಿದ್ದೇನೆಂದು ನನ್ನ ಕೊರಳಲ್ಲಿ ನೇತಾಡುತ್ತಿದ್ದ ಫಲಕ ಸಾರಿ ಹೇಳುತ್ತಿತ್ತು. ಅದು ನೆನಪಾದಾಗ ನನಗೇ ಪಿಚ್ಚೆನಿಸಿತ್ತು.
"ತುಂಬಾ ಒಳ್ಳೇ ಜಾಗ, ರಾತ್ರೀನೆ ಬಂದಿದ್ರೆ ಇನ್ನೂ ಚೆನ್ನಾಗಿತ್ತು." ಆತ ಮುಗುಳ್ನಗುತ್ತಾ ಹೇಳಿದ.
'ಹಾಂ, ನೀವೇ ಕುಡಿತದ ಹುಚ್ಚಿನಲ್ಲಿ ರಾತ್ರಿಯಿಂದ ಬೆಳಿಗ್ಗೆಗೆ ಒಂದಿಷ್ಟು ಹಾಳುಗೆಡವಿದ್ದೀರಿ' ನಾನೂ ಮುಗುಳ್ನಗುತ್ತಾ, ಮನಸ್ಸಿನಲ್ಲೇ ಅವನಿಗೆ ಬೈದುಕೊಂಡೆ. ಆತ ನನಗೆ ವಿದಾಯ ಹೇಳಿ ಹೊರಡುವಷ್ಟರಲ್ಲಿ ಉಳಿದವರೂ ಅವನನ್ನು ಕೂಡಿಕೊಂಡರು. ಎಲ್ಲರೂ ಒಮ್ಮೆ ಕೈ ಎತ್ತಿ 'ಬೈ.. ಬೈ..' ಎಂದರು. ನಾನೂ ಕೈ ಎತ್ತಿದೆ. ಆತನೊಂದಿಗೆ ಕುಲುಕಿದ ಕೈಗೆ ಆಲ್ಕೋಹಾಲ್ ವಾಸನೆ ಬರುತ್ತಿತ್ತು. ಬೇಗನೇ ಕೈ ಇಳಿಸಿ ಆ ಅರಣ್ಯ ರಕ್ಷಕನತ್ತ ಧಾವಿಸಿದೆ. ಆತ ಮಿರಿಂಡಾ ಕುಡಿಯುತ್ತಾ, ಚಿಪ್ಸ್ ತಿನ್ನುತ್ತಾ ನಿಂತಿದ್ದ. ನಾನು ಓಡಿ ಹೋಗಿದ್ದೇಕೆಂದು ಅವನಿಗೆ ಅರಿವಾಗಿ ಬಿಟ್ಟಿತ್ತು. ಅವನೇ ಮಾತು ಶುರುಮಾಡಿಕೊಂಡ.
"ನೋಡಪ್ಪಾ, ನೀನಂದುಕೊಂಡಂತೆ ಅವರಲ್ಲಿ ಎಲ್ಲರೂ ಕುಡುಕರಲ್ಲ. ಏನೇನೋ ನೆಪಗಳನ್ನೊಡ್ಡಿ ಕುಡಿಯುವ ಮೂರು ಮಂದಿ ಅವರಲ್ಲಿದ್ದರೂ, ಉಳಿದಿಬ್ಬರು ಅವನ್ನು ಮೂಸಿಯೂ ನೋಡಿದವರಲ್ಲ. ಆದರೆ ಅದು ಅವರ ಸ್ನೇಹಕ್ಕೆ ಅಡ್ಡಿ ಆಗಲಿಲ್ಲ. ಕುಡುಕರೊಂದಿಗೆ ಸೇರಿ ನಾಳೆ ನಾವೆಲ್ಲಿ ಕೆಟ್ಟು ಹೋಗುತ್ತೇವೋ ಎಂದು ಎಲ್ಲರೂ ಬೆದರುತ್ತಿದ್ದರೆ, ಇವರು ಅವರೊಂದಿಗೆ ಬರುತ್ತಾರೆ. ಮೂರು ಜನ ಅಲ್ಕೋಹಾಲ್ ಕುಡಿಬೇಕಾದ್ರೆ ಇವ್ರು ಮಿರಿಂಡಾ, ಸ್ಲೈಸ್ ಕುಡೀತಾರೆ. ಉಳಿದವರ ಮೋಜುಮಸ್ತಿ ಮುಗಿದ ಮೇಲೆ ಇವರೇ ಅಷ್ಟೂ ಜಾಗವನ್ನು ಕ್ಲೀನ್ ಮಾಡ್ತಾರೆ. ತಾವು ಮಾಡಿದ ಕಸವನ್ನ ತಾವೇ ವಿಲೇವಾರಿ ಮಾಡ್ತಾರೆ, ಎಲ್ರೂ ಅಷ್ಟಷ್ಟು ಮಾಡಿದ್ರೆ ಈ ದೇಶ ಕೆಲವೇ ಸಮಾಜ ಸುಧಾರಕರ ಸೊತ್ತಾಗೋದು ಒಂದಿಷ್ಟು ಕಡಿಮೆ ಆಗಬಹುದು. ಬದಲಿಗೆ ಈ ದೇಶ ಪ್ರತಿಯೊಬ್ಬನಿಗೂ ಸ್ವಂತದ್ದಾದೀತು." ಆತ ಮತ್ತೂ ಮಾತು ಮುಂದುವರೆಸುತ್ತಿದ್ದ. ನಾನೊಮ್ಮೆ ಪಕ್ಕಕ್ಕೆ ತಿರುಗಿ ನೋಡಿದೆ. ಅಲ್ಲಿ ಯಾವುದೇ ಬಾಟಲಿಯ ಚೂರಾಗಲೀ, ಪ್ಲಾಸ್ಟಿಕ್-ಪೇಪರ್ ನ ಚೂರುಗಳಾಗಲೀ ಕಾಣಲಿಲ್ಲ.
"ಅವರಿಬ್ಬರು ಅಷ್ಟೆಲ್ಲಾ ಒಳ್ಳೆಯವರಿದ್ದೂ ತಮ್ಮ ಗೆಳೆಯರನ್ನು ಯಾಕೆ ಸರಿ ದಾರಿಗೆ ತರಲಿಲ್ಲ ಸಾರ್?" ನಾನು ಕೇಳಿದೆ.
"ನೋಡಪ್ಪಾ, ಮುಂದೊಂದು ದಿನ ತಾವು ಹೋಗುತ್ತಿರುವುದು ತಪ್ಪು ಎಂದು ತಿಳಿದಾಗ ಅವರೇ ಸರಿ ದಾರಿಗೆ ಬರ್ತಾರೆ. ಅಲ್ಲಿಯವರೆಗೆ ಕಾಯಬೇಕಷ್ಟೇ. ಜಗತ್ತಿಗೇ ಬುದ್ಧಿ ಹೇಳುವಷ್ಟು ದೊಡ್ಡವನಲ್ಲ ನಾನು. ಅಥವಾ ಯಾವುದೂ ಅರಿಯದ ದಡ್ದರೂ ಅಲ್ಲ ಜಗದ ಜನ. ನಾನು ನಡೆದಿದ್ದು ಸರಿ ನೀನು ನಡೆದಿದ್ದು ತಪ್ಪು ಎನ್ನುವುದು ನಮ್ಮ ನಮ್ಮ ಮೂರ್ಖತನವಾದೀತೇ ಹೊರತು ಹೆಚ್ಚೇನಿಲ್ಲ. ಅಸಲಿಗೆ ಜೀವನದಲ್ಲಿ ಸರಿ ಮತ್ತು ತಪ್ಪು ದಾರಿಗಳೆಂಬುದೇ ಇಲ್ಲ, ಭಿನ್ನ ದಾರಿಗಳಿವೆಯಷ್ಟೇ" ಎನ್ನುತ್ತಾ ಅರಣ್ಯ ರಕ್ಷಕ ಮಾತು ಮುಗಿಸಿದ.
'ಪರ್ಮಿಶನ್ ಇಲ್ಲದೆ ಕಸ ಹೊತ್ತೊಯ್ಯಲು ಬಿಡುವುದಿಲ್ಲ' ಎಂದಿದ್ದ ಅವನ ಮಾತು ನೆನಪಾಗಿ "ಆದರೂ ಆ ಕುಡುಕ್ ಮಕ್ಳು ಫಾರೆಸ್ಟ್ ಡಿಪಾರ್ಟ್ಮೆಂಟ್ ಪರ್ಮಿಶನ್ ಇಲ್ದೆ ಕಸ ತಗೊಂಡು ಹೋಗಿದ್ದು ತಪ್ಪು ಆಲ್ವಾ ಸಾರ್?" ಎಂದು ಕೇಳಿದೆ.
"ಅದು ನಿಂಗೇ ಅರ್ಥ ಆಗಬೇಕಪ್ಪ, ನಾನು ಅಷ್ಟೊಂದು ಬುದ್ಧಿವಂತನಲ್ಲ" ಎಂಬ ಉತ್ತರ ಬಂತು.
'ಪರ್ಮಿಶನ್ ಇಲ್ದೇ ಏನೂ ಹೊತ್ತೊಯ್ಬಾರ್ದು' ಎಂದು ನನ್ನಷ್ಟಕ್ಕೆ ನಾನೇ ಹೇಳಿಕೊಳ್ಳುತ್ತಾ ಕೊರಳಲ್ಲಿದ್ದ ಫಲಕವನ್ನು ಕಿತ್ತೊಗೆದೆ. ಫಲಕದ ಮೇಲಿದ್ದ ಗಾಂಧೀ ಹಾಗೂ ಮೋದಿ ನನ್ನನ್ನೇ ನೋಡಿ ನಕ್ಕಂತಾಯ್ತು. ತಿರುಗಿ ನೋಡದೆ ಬೆಟ್ಟದಿಂದ ಕೆಳಗೆ ಓಡೋಡಿ ಬಂದೆ.
No comments:
Post a Comment