ಸಂಘಟಕರಲ್ಲೊಬ್ಬ ಮುಂದಾಳಾಗಿ ದಾರಿ ತೋರುವವನಂತೆ ಸಾಗುತ್ತಿದ್ದರೆ, ಇನ್ನೊಬ್ಬಾಕೆ ಹಿಂದಾಳಾಗಿ ಎಲ್ಲರೂ ಮುಂದೆ ಸಾಗಿದುದನ್ನು ಖಾತ್ರಿಪಡಿಸಿಕೊಳ್ಳುತ್ತಿದ್ದರು. ಒಂದಿಷ್ಟು ದೂರ ನಡೆದು, ಸುಸ್ತಾದಲ್ಲಿ ಅಲ್ಲಲ್ಲಿ ಕುಳಿತು, ಹೊತ್ತು ತಂದಿದ್ದ ನೀರ ಕುಡಿದು, ಅವರಿವರು ತಂದಿದ್ದ ಚಾಕೊಲೇಟು ಕ್ಯಾಂಡಿಗಳನ್ನು ಮೆದ್ದು, ಇದ್ದ ಇಬ್ಬರು ಫೋಟೋಗ್ರಾಫರುಗಳಿಗೆ ಪೋಸುಕೊಟ್ಟು, ಇವೇ ಮಾಡುತ್ತಾ ಮೇಲೆ ಸಾಗಿದೆವು. ಅರ್ಧಕ್ಕಿಂತಲೂ ಹೆಚ್ಚು ಭಾಗ ಸುಲಭವಾಗಿ ಕಂಡಿದ್ದ ಆ ಬೆಟ್ಟದ ಮೇಲಿನ ನಡಿಗೆಯಲ್ಲಿ ಕಡೆ ಕಡೆಗೆ ಕಾಲು ಕಿತ್ತು ಕೈಗೆ ಬಂದಂತೆನಿಸುತ್ತಿತ್ತು. ಅದರ ಜೊತೆ ಜೊತೆಗೆ ಚುಚ್ಚಿ ನಿಲ್ಲುವ ಚುಂಗು (ಒಂದು ತರದ ಮುಳ್ಳು) ಬೇರೆ. ಒಂದಿಷ್ಟು ದೂರ ಬಿರಬಿರನೆ ಸಾಗಿ, ಶೂ ಮತ್ತು ಸಾಕ್ಸುಗಳಲ್ಲಿ ಹೊಕ್ಕಿ ಕುಳಿತ ಚುಂಗು ಬಿಡಿಸುತ್ತಾ, ಉಳಿದವರಿಗಾಗಿ ಕಾಯುತ್ತಾ ಕೊನೆಗೂ ೧೨.೩೦ ರ ಸುಮಾರಿಗೆ ತುತ್ತತುದಿ ಮುಟ್ಟಿದೆವು. ಬಿಸಿಲಿನ ಝಳಕ್ಕೆ ಬೆಟ್ಟದ ಹುಲ್ಲೆಲ್ಲಾ ಒಣಗತೊಡಗಿದ್ದರಿಂದ ಅಲ್ಲಿಯ ಸೊಬಗನ್ನು ವಿವರಿಸಲು ತೀರಾ ಕಠಿಣ ಪದಗಳ ಹುಡುಕಾಟದ ಅಗತ್ಯವಿಲ್ಲ.
ಹನುಮಾನ್ ಮಂದಿರದ ನೆರಳಿನಲ್ಲಿ ಬಟ್ಟೆ ಬರೆಗಳಿಗೆ ಅಂಟಿಕೊಂಡಿದ್ದ ಮುಳ್ಳುಗಳನ್ನು ಬಿಡಿಸಿಕೊಳ್ಳುತ್ತಾ ದಣಿವಾರಿಸಿಕೊಂಡೆವು. ಒಬ್ಬೊಬ್ಬರೇ ತಾವು ತಂದ ತಿಂಡಿ ಪೊಟ್ಟಣಗಳನ್ನು ಬಿಚ್ಚತೊಡಗಿದರು. ಬಿಸ್ಕತ್ತು, ಚಿಪ್ಸ್ ಇವೇ ಮೊದಲಾದ ಕುರುಕುತಿಂಡಿಗಳನ್ನು ತಿಂದಾದ ಮೇಲೆ ಹೊತ್ತು ತಂದ ಬುತ್ತಿ ಬಿಚ್ಚಿ ಪಲಾವ್ ತಿಂದಾಯ್ತು. ಕಟ್ಟಿ ತಂದ ಕಾಗದ, ಪ್ಲಾಸ್ಟಿಕ್ಕುಗಳನ್ನು ಮುಂದೆಲ್ಲಾದರು ಕಸದ ತೊಟ್ಟಿ ಕಂಡಲ್ಲಿ ಅದಕ್ಕೆ ಸೇರಿಸೋಣವೆಂದು ಮತ್ತೆ ಬ್ಯಾಗಿಗೇ ತುರುಕಿಕೊಂಡೆವು. ಬೆಟ್ಟ ಹತ್ತಿ ದಣಿದುದಕ್ಕೋ, ಹೊಟ್ಟೆ ತುಂಬಿದುದಕ್ಕೋ ಹೆಚ್ಚಿನವರಿಗೆ ಅಲ್ಲೇ ನಿದ್ದೆ ಬರುವಂತಾದ್ದರಿಂದ ಯಾವುದೇ ಚಟುವಟಿಕೆಗಳು ಅಲ್ಲಿ ನಡೆಯಲಿಲ್ಲ. ಬೆಟ್ಟದ ತುದಿಯಲ್ಲೂ ಒಂದಿಷ್ಟು ಫೋಟೋಗ್ರಫಿ ಆಯ್ತು. ನಾನೂ ಒಬ್ಬ ರೂಪದರ್ಶಿಯಂತೆ ಪೋಸು ಕೊಟ್ಟೆ. ಬಳಿಕ ಅಲ್ಲೇ ಬೆಟ್ಟದ ಮೇಲೆ ಒಂದಿಷ್ಟು ಸುತ್ತಿ ಬಂದೆ. ನಾವು ಕುಳಿತಿದ್ದ ಗುಡಿಯ ಸಮೀಪದಲ್ಲಿಯೇ ಒಂದು ಸಣ್ಣ ಕೊಳವಿತ್ತು. ಅದರ ದಂಡೆಯಲ್ಲಿ ಒಂದು ಪುಟ್ಟ ಗುಡಿ. ಅದರ ಒಳಗೆ ಲಿಂಗರೂಪದಲ್ಲಿ ಶಿವನ ವಾಸ. ಮುಂಬಾಗಿಲ ಮೇಲಿದ್ದ ೧೯೩೭ ಎಂಬ ಸಂಖ್ಯೆ ನೋಡಿ ಆ ಗುಡಿಗೆ ೭೭ರ ಹರೆಯ ಎಂದುಕೊಂಡೆ. ಅಲ್ಲಿ ಇದ್ದ ಒಬ್ಬ ಹುಡುಗ ಎಲ್ಲಿಂದ ಬಂದಿದ್ದು, ಎಷ್ಟು ಜನ ಮೊದಲಾಗಿ ಒಂದಿಷ್ಟು ಪ್ರಶ್ನೆಗಳನ್ನು ಕೇಳಿದ. ಕೊನೆಗೆ ಸಮೀಪದಲ್ಲಿ ಇನ್ನೊಂದು ಮಾರುತಿ ಮಂದಿರ ಇದೆಯೆಂದೂ, ನೋಡಿ ಬನ್ನಿರೆಂದೂ ಹೇಳಿದ. ಅವನಿಂದ ಬೀಳ್ಕೊಂಡು ನಾನು ಮತ್ತೆ ತಂಡವನ್ನು ಸೇರಿಕೊಂಡೆ.
ಅವರಾಗಲೇ ಕುಳಿತಲ್ಲಿಂದಲೇ ಗುಡಿಯನ್ನು ನೋಡುತ್ತಾ, ಅದರ ಪಾಳುಬಿದ್ದ ಅವಸ್ಥೆಯನ್ನು ತಮ್ಮದೇ ರೀತಿಯಲ್ಲಿ ವ್ಯಾಖ್ಯಾನಿಸುತ್ತಿದ್ದರು. ಅದಕ್ಕೆ ಅವರಿಟ್ಟ ಚಂದದ ಹೆಸರು 'ಭೂತದ ಬಂಗಲೆ'. ನಾನು ಇದ್ದ ವಿಷಯ ಅವರಿಗೆ ತಿಳಿಸಿದೆ. ಕೆಲವರು ‘ನಾವು ನಾಸ್ತಿಕರು, ಅದನ್ನು ನೋಡಬೇಕೆಂಬ ಆಸಕ್ತಿ ತಮಗಿಲ್ಲ’ ಎಂದರು. ಒಬ್ಬಾತನಿಗೆ ತನಗೆ ನೆರಳು ಕೊಟ್ಟ ಒಬ್ಬ ದೇವರೇ ಸಾಕಿತ್ತು. ಮತ್ತೊಂದಿಷ್ಟು ಮಂದಿ ಹೋಗಿ ಗುಡಿಯನ್ನು ನೋಡಿ ಬಂದರು. ಪಾಪ, ತಮಗೆ ನೆರಳು ಕೊಟ್ಟಿದ್ದು ಯಾರದೋ ನಂಬಿಕೆಯ ಮೇಲೆ ನಿಂತ ಒಂದು ಗುಡಿ ಎಂಬುದು ಆ ಹೊತ್ತಿನಲ್ಲಂತೂ ನಾಸ್ತಿಕರೆಂದು ಕರೆದುಕೊಂಡವರ ಅರಿವಿಗೆ ಬಂದಂತಿರಲಿಲ್ಲ. ಎಲ್ಲರೂ ಮರಳಿದೊಡನೆ ಮತ್ತೊಂದಿಷ್ಟು ಗ್ರೂಪ್ ಫೋಟೋಗಳೂ ಆದ ಮೇಲೆ ಹಿಂದೆ ಹೆಜ್ಜೆ ಹಾಕಿದೆವು. ಹತ್ತುವಾಗಕ್ಕಿಂತ ಇಳಿಯುವುದು ಸುಲಭವಾಗಿತ್ತು. ನಾವು ಮೂರ್ನಾಲ್ಕು ಮಂದಿ ವೇಗವಾಗಿ ಒಂದಿಷ್ಟು ದೂರ ನಡೆದು, ದಾರಿ ಕವಲೊಡೆಯುವಲ್ಲಿ ಉಳಿದವರಿಗಾಗಿ ಕಾಯುತ್ತಾ ಕೂರುತ್ತಿದ್ದೆವು. ಹತ್ತುವಾಗಲೇ ಕಾಲು ಉಳುಕಿಸಿಕೊಂಡ ಒಬ್ಬ ಮಿತ್ರರಿಗೆ ನೋವು ಸ್ವಲ್ಪ ಜೋರಾಗಿತ್ತು. ಜೊತೆಗೆ ಒಯ್ದಿದ್ದ ಪ್ರಾಥಮಿಕ ಚಿಕಿತ್ಸೆಯ ಕಿಟ್ ನಿಂದ ಸ್ಪ್ರೆ ಒಂದನ್ನು ಸಿಂಪಡಿಸಿ ನಡಿಗೆ ಮುಂದುವರಿಸಿದರು.
ಸುಮಾರು ಅರ್ಧ ಭಾಗ ಇಳಿದ ಬಳಿಕ ಬಂಡೆಯೊಂದರ ನೆರಳಲ್ಲಿ ಕುಳಿತು ವಿಶ್ರಮಿಸಿಕೊಳ್ಳುತ್ತಿದ್ದಾಗ ಟ್ರೆಕ್ಕಿಂಗಿಗೆ ಬಂದಿದ್ದವರೆಲ್ಲರ ಹೆಸರು ಹೇಳಬೇಕೆನ್ನುವ ಒಂದು ಆಟ ಆಡಲಾಯ್ತು. ಆದಿತ್ಯ, ಹಿರೆನ್, ದೀಪ್ತಿ, ಸುಚೇತಾ, ಅಶ್ವಿನಿ, ಪ್ರಸಾದ್, ಪ್ರಶಾಂತ್, ಸುಮಿತ್, ಸಂಜಯ್, ಸತ್ಯಂ, ಬ್ರಜೇಶ್, ರಘು, ಆಶಿಶ್, ಸತೀಶ್, ಸುರೇಶ್, ದೀಪಕ್. ಆಟದ ನೆಪದಲ್ಲೊಮ್ಮೆ ನನ್ನದೂ ಸೇರಿ ಎಲ್ಲರ ಹೆಸರು ನೆನಪಲ್ಲುಳಿಯುವಂತಾಯ್ತು. ಮುಂದೆ ನಡೆಯುತ್ತಾ, ಮಧ್ಯೆ ಕೂತಲ್ಲಿ ಜೊತೆಗಿದ್ದವರ ಹಿಂದಿನ ಚಾರಣದ ಅನುಭವಗಳನ್ನು ಕೇಳುತ್ತಾ, ನಾನು ಹೋದವುಗಳ ಬಗ್ಗೆ ನುಡಿಯುತ್ತಾ ಉಳಿದ ದೂರ ಕ್ರಮಿಸಿ ಬೆಟ್ಟದ ಬುಡಕ್ಕೆ ಬರುವಾಗ ಬೆಳಿಗ್ಗೆ ನಮ್ಮನ್ನು ಬಿಡಲು ಬಂದಿದ್ದ ರಿಕ್ಷಾಗಳು ನಮ್ಮನ್ನು ವಾಪಸ್ಸು ಕರೆದೊಯ್ಯಲು ಕಾಯುತ್ತಾ ನಿಂತಿದ್ದವು.
ರಿಕ್ಷಾದಲ್ಲಿ ನಂದಿ ಕ್ರಾಸಿಗೆ ಬಂದು, ಹೇಗೂ ಬೆಂಗಳೂರಿಗೆ ಅರ್ಧ ಗಂಟೆಗೊಂದು ಬಸ್ಸು ಇದೆ ಎಂದು ಗೊತ್ತಿದ್ದರಿಂದ ಮೊದಲು ಟೀ ಕುಡಿಯಲು ಹೋದೆವು. ಸಂಘಟಕರು ಆಗಲೇ ಇಂದಿನ ಪ್ರವಾಸಾನುಭವದ ಮರುಮಾಹಿತಿ ಪಡೆಯಲು ಮೊದಲಾದರು. ಹೆಚ್ಚಿನವರು ಟ್ರೆಕ್ಕಿಂಗ್ ಚೆನ್ನಾಗಾಯ್ತು, ಸಂಘಟಕರು ಚೆನ್ನಾಗಿ ನಡೆಸಿಕೊಂಡು ಹೋದರು ಎನ್ನುವುದು ಬಿಟ್ಟು ಬೇರೇನೂ ಹೇಳಲಿಲ್ಲ. ಈ ವಿಷಯದಲ್ಲಿ ನಾನೂ ಹೊರತಲ್ಲ. ಒಂದಿಬ್ಬರಿಂದ ತಂಡದ ಪರಿಚಯ ಬಸ್ಸಿನಲ್ಲಿ ಹೊರಡುವ ಮೊದಲೇ ಮಾಡಿಸಬೇಕಿತ್ತು, ಏನಾದರೂ ಆಟಗಳನ್ನಾಡಿಸಬೇಕಿತ್ತು ಎಂಬ ಒಂದೆರಡು ಸಲಹೆಗಳು ಬಂದುವು. ಸಂಘಟಕರು ಅವನ್ನು ಮುಕ್ತವಾಗಿ ಸ್ವೀಕರಿಸಿದರು. ಒಂದಿಷ್ಟು ಹರಟೆ, ಮಾತು, ಕುಚೋದ್ಯಗಳಾದ ಮೇಲೆ ಟೀ ಅಂಗಡಿಯಿಂದ ಹೊರ ಬಿದ್ದು ಬಸ್ಸಿಗಾಗಿ ಕಾಯುತ್ತಾ ನಿಂತೆವು.
ತುಂಬಿ ಬಂದ ಒಂದು ಬಸ್ಸನ್ನು ಬಿಟ್ಟು, ಸ್ವಲ್ಪ ಮಟ್ಟಿಗೆ ಜಾಗವಿದ್ದ ಮುಂದಿನ ಬಸ್ಸನ್ನು ಹೊಕ್ಕಿ ಬೆಂಗಳೂರಿನೆಡೆ ಹೊರಟೆವು. ಅಲ್ಲಿಯವರೆಗೆ ಪ್ರತಿಯೊಂದಕ್ಕೂ ಸಂಘಟಕರೇ ದುಡ್ಡು ತೆತ್ತಿದ್ದರು. ಬಸ್ಸಿನಲ್ಲಿ ಅಷ್ಟೂ ಖರ್ಚನ್ನು ಲೆಕ್ಕ ಹಾಕಿ ತಲಾ ಖರ್ಚು ೨೩೦ ರುಪಾಯಿ ಸಂಗ್ರಹಿಸಿದ್ದು ಚೆನ್ನಗಿರಿ ಚಾರಣ ಮುಗಿಯಿತೆಂಬುದರ ಸೂಚಕವಾಗಿತ್ತು. ಮುಂದೆ ಯಲಹಂಕದಲ್ಲಿ ನಾಲ್ವರು ಮಿತ್ರರನ್ನು ಬೀಳ್ಕೊಂಡು ಬಸ್ಸು ಮುಂದೆ ಸಾಗಿತು. ೭ ಗಂಟೆಯ ಹೊತ್ತಿಗೆ ನಾವು ಮೆಜೆಸ್ಟಿಕ್ ತಲುಪಿದೆವು. ಆ ಒಂದು ದಿನ ಒಬ್ಬರಿಗೊಬ್ಬರು ಕಟ್ಟಿಕೊಟ್ಟ ಸಂತೋಷದ ಕ್ಷಣಗಳಿಗೆ ಒಬ್ಬರಿಗೊಬ್ಬರು ಧನ್ಯವಾದಗಳನ್ನರ್ಪಿಸುತ್ತಾ, ಸಾಧ್ಯವಾದರೆ ಮುಂದಿನ ಚಾರಣಗಳಲ್ಲಿ ಭೇಟಿಯಾಗೋಣ ಎನ್ನುವ ಆಶಯದೊಂದಿಗೆ ನಮ್ಮ ನಮ್ಮ ಮನೆಯ ದಾರಿ ಹಿಡಿದೆವು.
ಬಸ್ಸು ಇಳಿದು ಮನೆ ಕಡೆಗೆ ಹೆಜ್ಜೆ ಹಾಕುವಾಗ ಕಾಲ್ಚೀಲದೊಳಗೆ ಹುದುಗಿದ್ದ ಚುಂಗುಗಳು ಚುಚ್ಚಿ-ಚುಚ್ಚಿ ಇಡೀ ದಿನವನ್ನು ಮತ್ತೆ ಮತ್ತೆ ನೆನೆಸುತ್ತಿದ್ದವು. ಕೈ ಕಾಲುಗಳ ಮೇಲೆ ಕೆಂಪನೆಯ ಗುರುತು ಮಾಡಿದ್ದ ಆ ಮುಳ್ಳುಗಳ ನೆನಪುಗಳು ಮರೆಯುವ ಮುನ್ನ ನಿಮ್ಮೊಂದಿಗೆ ಹಂಚಿಕೊಳ್ಳುವುದು ಹೇಗೆ ಎಂದು ಯೋಚಿಸುತ್ತಾ ನಿದ್ದೆಗೆ ಜಾರಿದೆ.
(ಮುಗಿಯಿತು.)
No comments:
Post a Comment