Wednesday, 24 December 2014

ಚೆನ್ನಗಿರಿ ಚಾರಣ -​ ಭಾಗ ೧

 ​      ೪.೪೫ಕ್ಕೆ ಅಲಾರಂ ತನ್ನ ರಾಗ ಶುರುಹಚ್ಚಿಕೊಂಡಾಗ ಅದನ್ನು ಸ್ನೂಜ್ ಮಾಡಿ ಪಕ್ಕಕ್ಕೆ ಹೊರಳಿ ಮಲಗಿದೆ. ೧೦ ನಿಮಿಷ ಬಿಟ್ಟು ಅದು ಮತ್ತೊಮ್ಮೆ ಅರಚಿಕೊಳ್ಳತೊಡಗಿದ ಮೇಲೆ ಎದ್ದು ಸ್ನಾನಕ್ಕೆ ನೀರು ಬಿಸಿಯಾಗಲಿಟ್ಟು ಬಂದೆ. ಮತ್ತೊಮ್ಮೆ ೫.೧೫ಕ್ಕೆ ಅಲಾರಂ ಸೆಟ್ ಮಾಡಿ ಮಲಗಿದೆ. ಮತ್ತೊಮ್ಮೆ ಅದು ಕೂಗಿಕೊಳ್ಳಲು ತುಂಬಾ ಹೊತ್ತಾಗಲಿಲ್ಲ. ಎದ್ದು ಕಾದಿದ್ದ ನೀರನ್ನು ಹೊತ್ತೊಯ್ದು ಸ್ನಾನಾದಿಗಳನ್ನು ಮುಗಿಸಿಕೊಂಡೆ. ಕುಡಿಯುವ ನೀರನ್ನು ಬಾಟಲಿಯೊಂದಕ್ಕೆ ತುಂಬಿಸಿಕೊಂಡು, ಎರಡು ದಿನದ ಹಿಂದೆಯಷ್ಟೇ ಒಗೆದಿಟ್ಟ ಆರು ವರ್ಷ ಹಳೆಯ ಹ್ಯಾಟು ಮತ್ತು ಒಂದು ಟವೆಲ್ ಎಲ್ಲವನ್ನೂ ಬ್ಯಾಗೊಂದರಲ್ಲಿ ಹಾಕಿಕೊಂಡು ಮೊಬೈಲಿನಲ್ಲಿ ಗಂಟೆ ನೋಡಿದಾಗ ೫.೪೫ ತೋರಿಸುತ್ತಿತ್ತು. ನನ್ನ ವಾಚಿಗೆ ಚಳಿ ಜೋರಾಗಿ ಅದು ಯಾವಾಗಿನ ವೇಗದಲ್ಲಿ ಓಡಲಾಗದೆ ಇನ್ನೂ ಮೂರೂವರೆ ತೋರಿಸುತ್ತಿತ್ತು. ಅದರ ಕಿವಿ ತಿರುಪಿ ಕೈಗೆ ಕಟ್ಟಿಕೊಳ್ಳುತ್ತಾ ಮನೆಯಿಂದ ಹೊರಬಿದ್ದೆ.

    ಏಳು ಗಂಟೆಯೊಳಗೆ ಮೆಜೆಸ್ಟಿಕ್ ತಲುಪಬೇಕಿದ್ದವ ಆರೂವರೆಗಿಂತಲೂ ಮುಂಚೆ ತಲುಪಿದೆ. ಬೆಳಿಗ್ಗೆ ಬೇಗ ಎದ್ದಿದ್ದಕ್ಕೆ ಹಸಿಯುತ್ತಿದ್ದ ಹೊಟ್ಟೆಗೆ ಎರಡು ಇಡ್ಲಿ ತಿನ್ನಿಸಿ KSRTC ಯ ಮೂರನೇ ಟರ್ಮಿನಲ್ ಹುಡುಕುತ್ತಾ ನಡೆದೆ. ಹೊತ್ತು ಕಳೆಯಲು ದಿನಪತ್ರಿಕೆ ಕೊಳ್ಳೋಣ ಎಂದು ಅಂಗಡಿಯೊಂದರ ಬಾಗಿಲಿಗೆ ಹೋದೆ. 'ನಾಲ್ಕು ರೂಪಾಯಿ ಚಿಲ್ಲರೆ ಬೇಕು ಸಾರ್' ಎಂದವನಿಗೆ 'ಚಿಲ್ಲರೆ ಇಲ್ಲ ಸರ್' ಎನ್ನುತ್ತಾ ಎತ್ತಿಕೊಂಡಿದ್ದ ಪೇಪರನ್ನು ಅದರ ಜಾಗದಲ್ಲಿರಿಸಿ ಹತ್ತು ರೂಪಾಯಿ ನೋಟನ್ನ ಜೇಬಿಗೆ ವಾಪಸ್ಸು ತುರುಕುತ್ತಾ ಮುಂದೆ ಹೋದೆ. ಮತ್ತೊಂದು ಅಂಗಡಿ ಬಳಿ ಹೋಗುತ್ತಿದ್ದಂತೆಯೇ 'ಏನು ಬೇಕ್ ಸಾರ್ ?' ಎಂದ ಅಂಗಡಿಯಾತ. ೧೦ ರೂಪಾಯಿ ಅವನ ಕೈಯಲ್ಲಿಟ್ಟು 'ಒಂದು ವಿಜಯವಾಣಿ' ಅಂದೆ. ೫ ರೂಪಾಯಿ ಪಾವಲಿಯ ಜೊತೆ, ನಮ್ಮ ದೇಶದ ಹೊಸ ಕರೆನ್ಸಿಯಾದ ಚಾಕೊಲೇಟನ್ನು ಆತ ಕೊಡುವಷ್ಟರಲ್ಲಿ ಒಂದು ಪೇಪರನ್ನು ನಾನು ಎತ್ತಿಕೊಂಡಿದ್ದೆ. ನಾಣ್ಯವನ್ನು ಕಿಸೆಗೆ ಸೇರಿಸಿ, ಚಾಕೊಲೇಟನ್ನು ಬಾಯಿಗೆ ಹಾಕಿಕೊಂಡವ ಅದರ ಕಾಗದವನ್ನು ಬ್ಯಾಗಿಗೆ ಹಾಕಿಕೊಂಡು ಮೂರನೇ ಟರ್ಮಿನಲಿನ ಮಾರ್ಗ ಹುಡುಕುತ್ತಾ ನಡೆದೆ.

    ಮೂರನೇ ಟರ್ಮಿನಲ್ ಏನೋ ಸಿಕ್ಕಿತು. ಆದರೆ ಟ್ರೆಕ್ಕಿಂಗಿಗೆ ಹೊರಟವರೆಲ್ಲರೂ ಭೇಟಿಯಾಗುವ ತಾವು ಎರಡನೇ ಟರ್ಮಿನಲ್ಲೋ ಅಥವಾ ಮೂರನೆಯದೋ ಎಂಬ ಅನುಮಾನ ಶುರುವಾಯ್ತು. ಈ ಅನುಮಾನವೂ ಸುಮ್ಮನೆ ಹುಟ್ಟಿಕೊಂಡಿದ್ದಲ್ಲ. ಟ್ರೆಕ್ಕಿಂಗಿನ ಸಂಘಟಕರು ಕಳಿಸಿದ್ದ ಈ-ಮೇಲ್ ನಲ್ಲಿ ಟರ್ಮಿನಲ್ ಮೂರು ಎಂದು ಸ್ಪಷ್ಟವಾಗಿ ಬರೆದಿದ್ದರೂ ಅವರು ಒದಗಿಸಿದ್ದ ಮಾರ್ಗ ನಕ್ಷೆ ಟರ್ಮಿನಲ್ ಎರಡನ್ನು ಸೂಚಿಸುತ್ತಿತ್ತು. ಅವರಲ್ಲಿ ಯಾರೊಬ್ಬರ ಮೊಬೈಲ್ ನಂಬರು ನನ್ನ ಬಳಿ ಇರದಿದ್ದುದರಿಂದ ಅವರು ಏಳು ಗಂಟೆಗೆ ಕರೆ ಮಾಡಿಯಾರೇ, ಇಲ್ಲವೇ ಎಂಬ ಆಲೋಚನೆ ಶುರುವಾಗಿತ್ತು. ಗಂಟೆ ಏಳಾಗಲು ಇನ್ನೂ ಸಮಯವಿದ್ದರಿಂದ ಯೋಚನೆಯನ್ನು ಕಡಿಮೆ ಮಾಡಿ, ಕ್ರೀಡಾ ಸುದ್ದಿಯಿಂದ ಶುರುಮಾಡಿ ಸ್ವಲ್ಪ ಪೇಪರ್ ಓದಿದೆ.  ನಂತರ ಪ್ಲಾಟ್-ಫಾರಮ್ಮಿನ ಮೇಲಿದ್ದ ಒಂದೊಂದೇ ಫಲಕಗಳತ್ತ ದೃಷ್ಟಿ ಹಾಯಿಸತೊಡಗಿದೆ. ಒಂದು ಫಲಕದ ಮೇಲೆ ಚಿಕ್ಕಬಳ್ಳಾಪುರ ಎಂದು ಬರೆದಿದ್ದು ಕಂಡಾಗ ಸ್ವಲ್ಪ ಸಮಾಧಾನವಾಯ್ತು. ಎಲ್ಲರೂ ಅಲ್ಲಿಗೇ ಬರುವರೆಂದು ನನಗೆ ನಾನೇ ಧೈರ್ಯ ಹೇಳಿಕೊಂಡು, ದಿನಪತ್ರಿಕೆಯ ಬೇರೆ ಪುಟಗಳತ್ತ ಕಣ್ಣು ಹಾಯಿಸಿದೆ.

    ಏಳು ಗಂಟೆ ಕಳೆಯುವಷ್ಟರಲ್ಲಿ ಎಂಟ್ಹತ್ತು ಜನ ಒಂದೆಡೆ ಕಲೆತು ನಿಂತಿದ್ದು ಕಾಣಿಸಿತು. ಅತ್ತ ಹೋಗಿ ಒಬ್ಬರಲ್ಲಿ ಅದು ಚನ್ನಗಿರಿ(ಚೆನ್ನಗಿರಿ) ಟ್ರೆಕ್ ಹೋಗುವ ತಂಡವೇ ಎಂಬುದನ್ನು ಖಾತ್ರಿಪಡಿಸಿಕೊಂಡು, ಒಬ್ಬೊಬ್ಬರದೇ ಕೈಕುಲುಕುತ್ತಾ ಅವರ ಹೆಸರು ಕೇಳಿ, ನನ್ನದನ್ನೂ ಹೇಳಿಕೊಂಡೆ. ನನ್ನ ನಂತರ ಬಂದು ಸೇರಿದ ಮೂರ್ನಾಲ್ಕು ಮಂದಿಯೂ ಅದನ್ನೇ ಮಾಡಿದರು. ಆದರೂ ಎಲ್ಲ್ಲರ ಪರಿಚಯ ಎಲ್ಲರಿಗೂ ಅಷ್ಟಾಗಿ ಆಗಿರಲಿಲ್ಲ. ಯಾರು ಹೇಗೋ, ಏನೋ ಎಂಬ ಭಯವಿಲ್ಲದಿದ್ದರೂ ದಾಕ್ಷಿಣ್ಯದ ಕಾರಣ ಆಗ ಹೆಚ್ಚು ಮಾತುಕತೆಯಾಗಲಿಲ್ಲ. ಬರುವವರೆಲ್ಲರೂ ಜಮಾಯಿಸಿದ ನಂತರ ಬಸ್ಸು ಹತ್ತಿದೆವು. ತಮ್ಮ ತಮ್ಮ ಮಧ್ಯೆ ಮೊದಲಿನಿಂದ ಪರಿಚಯವಿದ್ದ ನಾಕು ಮಂದಿ ಹರಟೆ ಕೊಚ್ಚುತ್ತಾ ಕುಳಿತಿದ್ದರು. ಪಕ್ಕದಲ್ಲಿ ಕುಳಿತವರು ಒಂದೆರಡು ಮಾತನ್ನಾಡಿದ್ದಕ್ಕೆ ತಕ್ಕಷ್ಟು ಉತ್ತರ ಕೊಟ್ಟು ನಾನು ಸುಮ್ಮನಾಗುತ್ತಿದ್ದೆ. ಮೊದಲೇ ಆನ್-ಲೈನ್ ನಲ್ಲಿ ಓದಿದ್ದ ನೀತಿ ನಿಯಮಗಳನ್ನು ಅವರು ಮತ್ತೊಮ್ಮೆ ಹೇಳಿದಾಗ 'ನಂಗೆ ಗೊತ್ತು, ವೆಬ್ ಸೈಟ್ ನಲ್ಲಿ ನೋಡಿದ್ದೆ' ಎಂದೆನ್ನದೇ, ಅವರ ಮಾತಿಗೆ ಹ್ಞೂಗುಟ್ಟುತ್ತಿದ್ದೆ. ಸ್ವಲ್ಪ ಹೊತ್ತಿನಲ್ಲಿ ಅವರಿಗೂ ಬೇಜಾರಾಯ್ತೋ ಏನೋ, ಸುಮ್ಮನಾದರು. ನಾನು ಕಿಟಕಿಯಾಚೆ ನೋಡುತ್ತಾ ಕುಳಿತೆ.

    ಹೊರಗಿನಿಂದ ಬೀಸುತ್ತಿದ್ದ ತಣ್ಣನೆ ಗಾಳಿ ನನಗೆ ಹಿತವಾಗಿತ್ತು. ಆದರೆ ಪಕ್ಕದಲ್ಲಿ ಕುಳಿತವರಿಗೆ ತೊಟ್ಟಿದ್ದ ಸ್ವೆಟರನ್ನೂ ದಾಟಿ ಚಳಿ ಮುಟ್ಟಿಸುತ್ತಿತ್ತು. ಹಾಗಾಗಿ ಅವರ ಕೋರಿಕೆಯ ಮೇರೆಗೆ ಕಿಟಕಿಯ ಬಹುಭಾಗಕ್ಕೆ ಗಾಜನ್ನೆಳೆದು, ಸ್ವಲ್ಪ ಮಾತ್ರ ಗಾಳಿ ಬರುವಂತೆ ತೆರೆದು ಕುಳಿತೆ. ರಸ್ತೆಯನ್ನು ಹಿಂದೆ ತಳ್ಳುತ್ತಾ ಬಸ್ಸು ಮುಂದೆ ಸಾಗುತ್ತಿತ್ತು. ನಗರದಿಂದ ಹೊರ ಸಾಗಿದ ಬಳಿಕ ಅಲ್ಲಲ್ಲಿ ಮುಸುಕು ತುಂಬಿದ ವಾತಾವರಣವು ಚೆನ್ನಾಗಿತ್ತು. ಇಂತಹುದೇ ದೃಶ್ಯಾವಳಿಯನ್ನು ಹಿಂದೆ ಮಾಥೆರಾನಿನಲ್ಲಿ ನೋಡಿದ್ದರಿಂದ ಅಷ್ಟೇನೂ ಅದ್ಭುತ ಎಂದೆನಿಸಲಿಲ್ಲ. ಅತ್ತ ಮಾಥೆರಾನಿನ ಜೊತೆಗೇ ಮುಂಬಯಿಯ ನೆನಪೂ ಒತ್ತಿ ಬಂತು. ಸುಮಾರು ಒಂದೂವರೆ ವರ್ಷದ ಹಿಂದೆ ಭಂಡಾರಧಾರ ಪ್ರವಾಸ ಹೋಗಿದ್ದು, ಒಂದೇ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರೂ ಒಡನಾಟ ಕಡಿಮೆಯಿದ್ದ ಅವರೊಂದಿಗೆ ಹೆಚ್ಚಿನ ಮಾತನಾಡದೆ ಟೆಂಪೋ ಟ್ರಾವೆಲ್ಲರಿನ ಹೊರಗೆ ತಲೆಹಾಕಿ  ಕುಳಿತಿದ್ದ ಆ ದಿನಕ್ಕೂ, ಪರಿಚಯವೇ ಇಲ್ಲದಿರೋ ೧೫ ಮಂದಿಯೊಡನೆ ಹೋಗುತ್ತಿರೋ ಈ ದಿನಕ್ಕೂ ಯಾವುದೇ ವ್ಯತ್ಯಾಸ ಇಲ್ಲ ಎಂದು ಅನ್ನಿಸಿದಾಗ ನನಗೇ ನಗು ಬಂತು. ಒಮ್ಮೆ ಎಲ್ಲರತ್ತ ಕಣ್ಣು ಹಾಯಿಸಿದೆ. ಕೆಲವರು ಸೀಟಿಗೊರಗಿದಲ್ಲಿಯೇ ನಿದ್ದೆ ಹೋಗಿದ್ದರೆ, ಇನ್ನೂ ಕೆಲವರು ಕಣ್ಣು ಬಿಟ್ಟುಕೊಂಡೇ ಎನೋ ಯೋಚಿಸುತ್ತಿದ್ದರು. ಮುಂದಿನ ಸೀಟಿನಿಂದ ಒಂದಿಷ್ಟು ಕಿಲಕಿಲ ಸದ್ದು ಕೇಳಿಸುತ್ತಿತ್ತು.

    ೮.೪೫ರ ಸುಮಾರಿಗೆ ಚಿಕ್ಕಬಳ್ಳಾಪುರ ತಲುಪಿದ ನಾವು ಉಡುಪಿ ಹೋಟೆಲೊಂದರಲ್ಲಿ ಬೆಳಗಿನ ಉಪಾಹಾರ ಮುಗಿಸಿ, ಮಧ್ಯಾಹ್ನಕ್ಕೆಂದು ಪಲಾವನ್ನು ಬುತ್ತಿ ಕಟ್ಟಿಕೊಂಡೆವು. ಅಲ್ಲಿಂದ ಖಾಸಗಿ ಬಸ್ಸೊಂದರಲ್ಲಿ ಹೊರಟು ನಂದಿಗ್ರಾಮಕ್ಕೆ ಹೋಗಿ ಅಲ್ಲಿಂದ ರಿಕ್ಷಾ ಹಿಡಿದು ಬೆಟ್ಟದ ಬುಡಕ್ಕೆ ತಲುಪಿದಾಗ ಗಂಟೆ ೧೦ ಸರಿದಿತ್ತು. ಬೆಟ್ಟದ ಬುಡದಲ್ಲೊಮ್ಮೆ ವರ್ತುಲಾಕಾರದಲ್ಲಿ ನಿಂತು ಎಲ್ಲರೂ ತಮ್ಮ ತಮ್ಮ ಪರಿಚಯ ಹೇಳಿಕೊಂಡಿದ್ದಾಯ್ತು. ಕನಿಷ್ಟ ಪಕ್ಷ ದೇಶದ ಕಾಲುಭಾಗವನ್ನಾದರೂ ಪ್ರತಿನಿಧಿಸುವಷ್ಟು ರಾಜ್ಯಗಳ ಟ್ರೆಕ್ಕಿಗಳು ಒಂದಾಗಿದ್ದೆವು. ಗುಜರಾತ್, ಮಧ್ಯ ಪ್ರದೇಶ, ಮಹಾರಾಷ್ಟ್ರ, ಆಂಧ್ರ ಪ್ರದೇಶ, ತಮಿಳುನಾಡು, ಬಿಹಾರಗಳಿಂದ ಕೆಲಸಕ್ಕಾಗಿ ಇಲ್ಲಿ ಬಂದವರೂ, ಬಂದು ಇಲ್ಲಿಯವರೇ ಆಗಿ ನೆಲೆ ನಿಂದವರೂ ಇದ್ದರು. ಹೊರಗಿಂದ ಬಂದವರು ಕನ್ನಡ ಕಲಿಯೋಲ್ಲ ಅಂದವರು ಯಾರು ಸ್ವಾಮಿ, ಚಿಕ್ಕಂದಿನಲ್ಲಿಯೇ ಬಿಹಾರದಿಂದ ಬೆಂಗಳೂರಿಗೆ ಬಂದು, ಇಂದು ಮನೆಮಾತಾಗಿಯೂ ಕನ್ನಡವನ್ನೇ ಮಾತಾಡುವ ಆ ಹುಡುಗನನ್ನು ಕಾಣಬೇಕು ನೀವು. ಸಂಘಟಕರು ಮತ್ತೊಮ್ಮೆ ನಿಯಮಗಳನ್ನುಸುರಿಯಾದ ಮೇಲೆ ಚೆನ್ನಗಿರಿ ಬೆಟ್ಟ ಹತ್ತಲಾರಂಭಿಸಿದೆವು.




(ಮುಂದುವರಿಯುವುದು…)

1 comment:

  1. Nimma Bravanige tumba channagide..KP poornachandra Tejasvi avara kruthigalu nenapige baruttive..All the best ...:)..Tapan

    ReplyDelete